ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿಯು ಕರ್ನಾಟಕ ಚುನಾವಣೆಗೆ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಒಬಿಸಿ –32, ಎಸ್‌ಸಿ –30, ಎಸ್‌ಟಿ– 16, 09 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಮದ್ದೂರಿನಲ್ಲಿ ಎಸ್.ಪಿ ಸ್ವಾಮಿ, ಮಳವಳ್ಳಿ ಪ.ಜಾ ಮೀಸಲು ಕ್ಷೇತ್ರಕ್ಕೆ ಮುನಿರಾಜು, ಮಂಡ್ಯಕ್ಕೆ ಅಶೋಕ್ ಜಯರಾಮ್, ಶ್ರೀರಂಗಪಟ್ಟಣಕ್ಕೆ ಸಚ್ಚಿದಾನಂದ, ಕೆ.ಆರ್ ಪೇಟೆಗೆ ನಾರಾಯಣಗೌಡ, ಮೇಲುಕೋಟೆಗೆ ಡಾ.ಇಂದ್ರೇಶ್ ಕುಮಾರ್ ಮತ್ತು ನಾಗಮಂಗಲಕ್ಕೆ ಸುಧಾ ಶಿವರಾಮ್‌ರವರಿಗೆ ಟಿಕೆಟ್ ನೀಡಲಾಗಿದೆ.
ನಾಗಮಂಗಲ ಬಿಜೆಪಿ ಟಿಕೆಟ್‌ಗಾಗಿ ಫೈಟರ್ ರವಿ ಮತ್ತು ಜೆಡಿಎಸ್‌ನಿಂದ ಉಚ್ಛಾಟನೆಗೊಂಡು ಇತ್ತೀಚಿಗೆ ಬಿಜೆಪಿ ಸೇರಿದ ಎಲ್.ಆರ್ ಶಿವರಾಮೇಗೌಡ ಪೈಪೋಟಿ ನಡೆಸಿದ್ದರು. ಆದರೆ ಅವರಿಬ್ಬರನ್ನೂ ಬಿಟ್ಟು ಅಚ್ಚರಿಯ ನಡೆಯಲ್ಲಿ ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡರವರಿಗೆ ಬಿಜೆಪಿ ಟಿಕೆಟ್ ಲಭಿಸಿದೆ.
ತುರುವೇಕೆರೆ ಕ್ಷೇತ್ರದಿಂದ ಎರಡು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಎಚ್ ರಾಮಕೃಷ್ಣಯ್ಯನವರ ಪುತ್ರಿಯಾದ ಸುಧಾ ಶಿವರಾಮೇಗೌಡರು ಸದ್ಯ ನಾಗಮಂಗಲದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಎಲ್.ಆರ್ ಶಿವರಾಮೇಗೌಡರು ಕಳೆದ ವರ್ಷ ಜಿ.ಮಾದೇಗೌಡರ ವಿರುದ್ಧ ಹಗುರವಾಗಿ ಮಾತನಾಡಿದ ಕಾರಣದಿಂದ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಅವರು ಕಳೆದ ವಾರದಲ್ಲಿ ಬಿಜೆಪಿ ಸೇರಿದ್ದರು. ಅವರೇ ಅಭ್ಯರ್ಥಿ ಎನ್ನಲಾಗುತ್ತಿತ್ತು. ಆದರೆ ಅವರು ತಮ್ಮ ಪತ್ನಿಗೆ ಟಿಕೆಟ್ ತಂದಿದ್ದಾರೆ.
ಇದನ್ನೂ ಓದಿ; 189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ; ಸಂಪೂರ್ಣ ವಿವರ ಇಲ್ಲಿದೆ


