Homeಎಲೆಮರೆಪೌರಕಾರ್ಮಿಕರನ್ನು ಪರಿಸರದ ಡಾಕ್ಟರುಗಳನ್ನಾಗಿಸಿದ ಶಿಕ್ಷಕ ನಾಗರಾಜ ಬಂಜಾರ

ಪೌರಕಾರ್ಮಿಕರನ್ನು ಪರಿಸರದ ಡಾಕ್ಟರುಗಳನ್ನಾಗಿಸಿದ ಶಿಕ್ಷಕ ನಾಗರಾಜ ಬಂಜಾರ

- Advertisement -
- Advertisement -

ಎಲೆಮರೆ- ಅರುಣ್‌ ಜೋಳದ ಕೂಡ್ಲಿಗಿ

ಕಳೆದ ಏಳೆಂಟು ವರ್ಷದಿಂದ ಕೊಟ್ಟೂರಿನಲ್ಲಿ ಸ್ವಯಂ ಆಸಕ್ತಿಯಿಂದ ದಿನಾಲು ಪೌರ ಕಾರ್ಮಿಕರ ಜತೆ ಕಸ ಎತ್ತುವ ಶಿಕ್ಷಕ ನಾಗರಾಜ ಬಗ್ಗೆ ಮಿತ್ರ ಸತೀಶ್ ಪಾಟೀಲ್ ಗಮನ ಸೆಳೆದಾಗ ಅಚ್ಚರಿಯಾಗಿತ್ತು. ಈಚೆಗೆ ಕೊಟ್ಟೂರಲ್ಲಿ ನಾಗರಾಜರನ್ನು ಭೇಟಿ ಮಾಡಿದೆ. ರಸ್ತೆ ಬದಿ ಮಾತನಾಡುತ್ತಾ ನಿಂತಾಗ, ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಪೌರ ಕಾರ್ಮಿಕರು ನಾಗರಾಜರನ್ನು ನೋಡಿ ಮುಖ ಅರಳಿಸಿ `ಮೇಷ್ಟರೇ’ ಎಂದು ಮಾತನಾಡಿಸಿದರು. ನಾಗರಾಜ ಕೂಡ ಅವರಲ್ಲೊಬ್ಬರ ಹಾಗೆ ಆತ್ಮೀಯವಾಗಿ ಮಾತಿಗಿಳಿದರು. ನನ್ನನ್ನು ನಾಗರಾಜ್ ಅವರಿಗೆ ಪರಿಚಯಿಸಿದಾಗ `ಈ ಮೇಷ್ಟ್ರು ನಮಗೆ ಶಕ್ತಿ ಇದ್ದಂಗೆ ಸರ್, ನಮ್ಮ ಕಷ್ಟಕ್ಕೆ ಅಕ್ಕಾರೆ, ನಾವ್ ಬ್ಯಾಡ ಅಂದ್ರೂ ನಮ್ ಜತೆ ಕೆಲಸ ಮಾಡ್ತಾರೆ, ನಮ್ಮನ್ನ ಮನ್ಷಾರು ಅಂತಾನೂ ನೋಡದೆ ಇರೋವಾಗ ಈ ಮೇಷ್ಟ್ರು ನಮಗೆ ಗೌರವಿಸ್ತಾರೆ’ ಎಂದು ನಾಗರಾಜ ಅವರ ಬಗ್ಗೆ ಅಭಿಮಾನದ ಮಾತನ್ನಾಡಿದರು. ಇದನ್ನು ನೋಡುತ್ತಿದ್ದಂತೆ ನಾಗರಾಜ ಹೇಗೆ ಪೌರಕಾರ್ಮಿಕರ ಮನಸ್ಸಲ್ಲಿ ಬೇರೂರಿದ್ದಾರೆ ಅನ್ನಿಸಿತು.

ಕೊಟ್ಟೂರು ಸಮೀಪದ ಬಯಲು ತುಂಬರಗುದ್ದಿಯ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ನಾಗರಾಜ್ ಬಂಜಾರ ಮೂಲತಃ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಅಡವಿ ಮಲ್ಲನಕೇರಿ ತಾಂಡಾದ ಮೇಘನಾಯಕ ಮತ್ತು ಲಕ್ಷ್ಮೀಬಾಯಿ ಅವರ ಮಗ. ಅಪ್ಪ ಮೇಘನಾಯಕ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಜವಾನರಾಗಿ ಕೆಲಸ ಮಾಡುತ್ತಲೆ ಕಾಲೇಜನ್ನು ಸ್ವಚ್ಛವಾಗಿಟ್ಟಿದ್ದರು, ಕಾಲೇಜಿನ ಪರಿಸರವನ್ನೂ ಹಸಿರಾಗಿಸಿದ್ದರು. ಮನೆಯಲ್ಲಿ ಸ್ವಚ್ಛತೆಯ ಪಾಠವೂ ನಡೆಯುತ್ತಿತ್ತು. ಅಪ್ಪನ ಮಾತುಗಳಿಗೆ ಅಷ್ಟೇನು ಕಿವಿಗೊಡದ ನಾಗರಾಜ ಪ್ರೌಢಶಾಲೆ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ತಂದೆ ಅನಾರೋಗ್ಯದಿಂದ ತೀರಿದ ಬಳಿಕ ಮಗನಿಗೆ ಅಪ್ಪನ ಸ್ವಚ್ಛತೆಯ ಅರಿವು ಕಾಡತೊಡಗಿತು. ಅಪ್ಪನ ಆಸೆಯನ್ನು ಆಚರಣೆಗೆ ತರುವ ಮೂಲಕ ಆತನನ್ನು ಗೌರವಿಸಬೇಕು ಎನ್ನುವ ಸಣ್ಣ ಆಲೋಚನೆ ಹೊಳೆಯಿತು.

ಈ ಆಲೋಚನೆ ಮನದೊಳಗೇ ಬೆಳೆದು ಬೆಟ್ಟವಾಯಿತು. ನಾವುಗಳೆ ಗಲೀಜು ಮಾಡುವುದನ್ನು ಪೌರಕಾರ್ಮಿಕರು ಎತ್ತುತ್ತಾರೆ. ಅವರ ಜತೆ ನಾನ್ಯಾಕೆ ಕೈಜೋಡಿಸಬಾರದು ಎನ್ನುವ ಆಲೋಚನೆ ಬಂದಿದೆ. ಹೀಗಾದಲ್ಲಿ ಮನೆಯಲ್ಲಿ ಹೆಂಡತಿ, ತಾಯಿ, ಹೊರಗಡೆ ಸ್ನೇಹಿತರು ಹೇಗೆ ನೋಡಬಹುದು? ಎಂಬ ಆತಂಕವೂ ಕಾಡಿದೆ. 2012 ರ ಒಂದು ದಿನ ಈ ಎಲ್ಲಾ ಭಯ ಆತಂಕ ಮುಜುಗರವನ್ನು ಸರಿಸಿ ಪೌರ ಕಾರ್ಮಿಕರ ಜತೆ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಂಡರು. ಪೌರಕಾರ್ಮಿಕರಿಗೆ ಭಯವಾಯಿತು, `ಸ್ವಾಮಿ ನೀವು ಮೇಷ್ಟ್ರು ನಿಮಗೆ ಸಮಾಜದಲ್ಲಿ ಗೌರವವಿದೆ, ನೀವ್ಯಾಕೆ ನಮ್ಮ ಕೀಳು ಕೆಲಸ ಮಾಡಿ ಮರ್ಯಾದೆ ಕಳಕೊಳ್ತೀರಿ’ ಎಂದರು. ನೋಡಿದ ಜನರು `ಯಾಕೆ ಮೇಷ್ಟ್ರೇ ಸ್ಕೂಲ್ ಬಿಟ್ಟು ಮುನ್ಸಿಪಾಲ್ಟಿಗೆ ಸೇರಿಕೊಂಡ್ರಾ’ ಎಂದು ಗೇಲಿ ಮಾಡಿದರು. `ನೌಕರಿ ಸಿಕ್ಕಾತಿ ಆರಾಮಾಗಿ ಇದ್ಕಂಡೋಗು ಯಾಕ ಹಿಂಗ್ ಮಾಡ್ತೀ’ ಅಂತ ತಾಯಿ ಪ್ರೀತಿಯಿಂದಲೆ ಗದರಿದ್ದರು. ಎದುರು ಹೇಳಲಾರದೆ ಹೆಂಡತಿ ಮುಸಿಮುಸಿ ಕೋಪಗೊಂಡಿದ್ದರು. ಇದೆಲ್ಲಕ್ಕೂ ನಾಗರಾಜ ಕಿವುಡಾಗಿ ತನ್ನ ಕಾರ್ಯವನ್ನು ಮುಂದುವರಿಸಿದರು. ಪೌರಕಾರ್ಮಿಕರೂ ಆಪ್ತರಾದರೂ, ವರ್ಷದಿಂದ ವರ್ಷಕ್ಕೆ ನಾಗರಾಜರ ಚಟುವಟಿಕೆ ಮುಂದುವರಿದಾಗ ಟೀಕೆಗಳೆಲ್ಲಾ ಪ್ರಶಂಸೆಗಳಾಗುವತ್ತ ಸಾಗಿದವು. ಇದೀಗ ಒಂದಿನ ಮನೇಲಿದ್ರೆ ಮಗಳು `ಅಪ್ಪಾ ಯಾಕೆ ಸ್ವಚ್ಛ ಭಾರತಕ್ಕೋಗಿಲ್ಲ’ ಎಂದು ಕೇಳುತ್ತಾಳೆ.

ನಾಗರಾಜ್ ಪೌರಕಾರ್ಮಿಕರ ಜತೆ ಕಸ ಎತ್ತುವುದಷ್ಟಕ್ಕೆ ಸೀಮಿತವಾಗಲಿಲ್ಲ, ನಿಧಾನಕ್ಕೆ ಪೌರ ಕಾರ್ಮಿಕರ ಸಮಸ್ಯೆಗಳಿಗೆ ನೆರವಾಗತೊಡಗಿದರು. ಸಂಘಸಂಸ್ಥೆಗಳಿಂದಲೂ ಅವರಿಗೆ ಸಹಾಯ ಸಿಗುವಂತೆಯೂ, ಅವರ ಕಾರ್ಯಕ್ರಮಗಳಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುವಂತೆಯೂ ಮಾಡಿದರು. ಹೀಗೆ ನಿರಂತರ ಒಡನಾಟದಿಂದ ಪೌರ ಕಾರ್ಮಿಕರಲ್ಲಿ ಕೆಲವು ಬದಲಾವಣೆ ತರುವಲ್ಲಿಯೂ ಯಶಸ್ವಿಯಾದರು.

ಮೊದಮೊದಲು ಆರೋಗ್ಯದ ಬಗ್ಗೆ ಅಷ್ಟೇನು ಕಾಳಜಿ ಇಲ್ಲದವರು ಈಗೀಗ ಕಾಳಜಿ ವಹಿಸತೊಡಗಿದ್ದಾರೆ. ಜನರು ಮೊದಲು ಪೌರಕಾರ್ಮಿಕರನ್ನು ಹೆಸರಿಡಿದು ಕರೆಯುತ್ತಿರಲಿಲ್ಲ. ಈಗ ಅವರನ್ನು ಹೆಸರಿಡಿದು ಮಾತಾಡಿಸುವ ಮಟ್ಟಿಗೆ, ಅವರು ಮಾಡಿದ ಕೆಲಸ ನೋಡಿ ಥ್ಯಾಂಕ್ಸ್ ಹೇಳುವ ಮಟ್ಟಿಗೆ ಜನರಲ್ಲಿ ಬದಲಾವಣೆ ಬಂದಿದೆ. ಮುಖ್ಯವಾಗಿ ಪೌರಕಾರ್ಮಿಕರನ್ನು ಸಂಘಟಿಸುವ, ಅವರ ಹಕ್ಕುಗಳಿಗಾಗಿ ಹೋರಾಟ ಮಾಡುವ, ಅವರಿಗಾಗುವ ಅನ್ಯಾಯಗಳ ವಿರುದ್ಧ ಪ್ರತಿಭಟಿಸುವ ಬಗೆಗೆ ನಾಗರಾಜ್ ಪೌರಕಾರ್ಮಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ.

`ಬೀದಿನಾಟಕದ ತಂಡ ಮಾಡ್ಕೊಂಡು ಪ್ರತೀ ಗ್ರಾಮಪಂಚಾಯ್ತಿಯಲ್ಲಿ ಬೀದಿ ನಾಟಕ ಮಾಡ್ತಿದ್ವಿ. ಮುಂದೆ ಪೌರ ಕಾರ್ಮಿಕರ ಕಲ್ಯಾಣ ನಿಧಿ ಅಂತ ಮಾಡಿ, ಹೊರಗಿನವರಿಗಿಂತ ಪೌರ ಕಾರ್ಮಿಕರನ್ನೇ ತರಬೇತಿಗೊಳಿಸಿ ಬೀದಿ ನಾಟಕ ಮಾಡಿಸಬೇಕು ಅಂತ ಪ್ಲಾನ್ ಇದೆ ಸರ್’ ಎಂದು ಮುಂದಿನ ಚಟುವಟಿಕೆ ಬಗ್ಗೆ ನಾಗರಾಜ್ ಹೇಳುತ್ತಾರೆ. ದೇಹದ ಆರೋಗ್ಯ ಕಾಪಾಡುವ ಡಾಕ್ಟರ್ ಹತ್ರ ಹೋದಾಗ ನಮಗೆ ಎಷ್ಟೇ ಸುಸ್ತಾಗಿರಲಿ ಎದ್ದು ಅವರಿಗೆ ಗೌರವಿಸುತ್ತೇವೆ. ಹಾಗೆ ನಮ್ಮ ಸುತ್ತಮುತ್ತಣ ಪರಿಸರದ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ಬಂದಾಗಲೂ ಎದ್ದು ಅವರಿಗೆ ಗೌರವ ತೋರಿಸಬೇಕು. ಡಾಕ್ಟರ್ ರೋಗ ಬಂದಾಗ ವಾಸಿ ಮಾಡ್ತಾರೆ, ಪೌರ ಕಾರ್ಮಿಕರು ರೋಗ ಬರದಂತೆ ಪರಿಸರವನ್ನ ಸ್ವಚ್ಛ ಮಾಡ್ತಾರೆ, ಹಾಗಾಗಿ ಅವರನ್ನು ಪರಿಸರದ ಡಾಕ್ಟರ್ ಎಂದು ಗೌರವಿಸಬೇಕು ಎನ್ನುವುದು ನಾಗರಾಜರ ತಿಳಿವು.

ಹಿಂದೆ ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್ ಅವರು ನಾಗರಾಜ್ ಅವರ ಕೆಲಸಗಳನ್ನು ಗಮನಿಸಿ ಜಾಗೃತಿ ಮೂಡಿಸಲು ಒಂದು ಸೈಕಲ್ ಕೊಡಿಸಿದ್ದರು. ಅದನ್ನು `ಜಾಗೃತಿ ವಾಹನ’ದ ಹಾಗೆ ಬಳಸುತ್ತಿದ್ದಾರೆ. ಶಾಲಾಮಕ್ಕಳಿಂದ ಹಳ್ಳಿಗಳಲ್ಲಿ ಪರಿಸರ ಜಾಗೃತಿಯ ಬೀದಿ ನಾಟಕ ಮಾಡಿಸಿದ್ದಾರೆ. ಬಿಡುವಿದ್ದಾಗ ಶನಿವಾರ ಭಾನುವಾರ ಹಳ್ಳಿಗಳಿಗೆ ಹೋಗಿ ಹಾಡು ಕತೆ ನಾಟಕಗಳ ಮೂಲಕ ಪರಿಸರದ ಜಾಗೃತಿ ಮೂಡಿಸುತ್ತಿದ್ದಾರೆ.

ನಿಧಾನವಾಗಿ ನನ್ನ ಜತೆ ಕೆಲಸ ಮಾಡೋಕು ಒಂದಷ್ಟು ಜನ ಆಸಕ್ತಿ ತೋರಿದರು. ಇಂಥವರೆಲ್ಲಾ ಸೇರಿ 34 ಜನರ `ಹಸಿರು ಹೊನಲು’ ತಂಡ ರಚನೆಯಾಗಿದೆ. ಈ ತಂಡದಿಂದ ಹತ್ತು ಪಾರ್ಕುಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಗಿಡ ನೆಡುವ ಜತೆ, ಆಯಾ ಗಿಡಗಳನ್ನು ಬೆಳೆಸಲು ಒಂದು ಗಿಡಕ್ಕೆ ಇಬ್ಬರಂತೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ. 2016 ರಲ್ಲಿ ನೇಕಾರ ಕಾಲನಿಯಲ್ಲಿ ಜಾಲಿಮರಗಳಿದ್ದ ಪಾರ್ಕನ್ನು ಈಗ ಉದ್ಯಾನವನ ಮಾಡಿದ್ದೀವಿ. ಇದೀಗ 70 ಮರಗಳು, 30 ಆಯುರ್ವೇದಿಕ್ ಸಸ್ಯಗಳಿವೆ. ಇದೀಗ ಅದು ಔಷಧೀಯ ಉದ್ಯಾನವನ. ಪ್ರತಿ ತಿಂಗಳೂ ಒಂದೊಂದು ಕಷಾಯ ಕೊಡ್ತೀವಿ’ ಎಂದು ನಾಗರಾಜ ಈಚಿನ ಚಟುವಟಿಕೆಯ ಬಗ್ಗೆ ವಿವರಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...