Homeಮುಖಪುಟಟ್ರಂಪಣ್ಣನ ಜೊತೆ ಎರಡು ಲಕ್ಷ ಕೋಟಿಯ ಹೆಲಿಕ್ಯಾಪ್ಟರ್ ಒಪ್ಪಂದಕ್ಕೆ ಚರ್ಚೆ ಇಲ್ಲದೇ ಮೋದಿ ಸಹಿ ಮಾಡಿದರೆ?

ಟ್ರಂಪಣ್ಣನ ಜೊತೆ ಎರಡು ಲಕ್ಷ ಕೋಟಿಯ ಹೆಲಿಕ್ಯಾಪ್ಟರ್ ಒಪ್ಪಂದಕ್ಕೆ ಚರ್ಚೆ ಇಲ್ಲದೇ ಮೋದಿ ಸಹಿ ಮಾಡಿದರೆ?

- Advertisement -
- Advertisement -

ವಿಶ್ವದ ಅತಿ ದೊಡ್ಡ ಮಿಲಿಟರಿಯ ಮಹಾ ದಂಡನಾಯಕ ಎಂದೇ ಹೆಸರಾಗಿರೋ ಅಮೆರಿಕಾ ಅಧ್ಯಕ್ಷ ಡೊನಾಲ್ಡ ಟ್ರಂಪ ಅವರು ಭಾರತಕ್ಕೆ ಭೇಟಿ ಕೊಟ್ಟಾರ. ಆ ದೇಶದ 244 ವರ್ಷ ಹಾಗೂ ನಮ್ಮ ದೇಶದ 73ನೇ ವರ್ಷದ ಸ್ವತಂತ್ರ ಅಸ್ತಿತ್ವದಲ್ಲಿ ಕೇವಲ ಏಳು ಜನ ಅಮೆರಿಕಾ ಅಧ್ಯಕ್ಷರು ಭರತ ವರ್ಷಕ್ಕೆ ಭೇಟಿ ಕೊಟ್ಟಾರ ಅನ್ನೋದು ವಿಶೇಷ.

ಆದರ ವಿಶ್ವದ ಅತಿದೊಡ್ಡ ವಾಣಿಜ್ಯ ಉದ್ದಿಮೆಗಳನ್ನು ಹುಟ್ಟಿಸಿರುವ ದೇಶನೂ ಅಮೆರಿಕಾನ. ಅವರು ಹಂಗ ಬರಂಗಿಲ್ಲ. ತಮಗ ಲಾಭ ಇದ್ದರ ಅಷ್ಟ ಬರತಾರ. ಅದರಾಗ ಡಾನ್ ಡೋನಾಲ್ಡ್ ಅವರು ತಮ್ಮ ಮಗಳು, ಅಳಿಯ ಸೇರಿದಂಗ ಒಂದು ದೊಡ್ಡ ಹಿಂಡನ್ನ ಕರಕೊಂಡ ಬಂದಾರ. ಇಷ್ಟೆಲ್ಲಾ ಇರಬೇಕಾರ ಅವರಿಗೆ ಏನು ಲಾಭ ಇರಬಹುದು?

ನನ್ನ ಸ್ವಾಗತಕ್ಕ 60 ಲಕ್ಷದಿಂದ ಒಂದು ಕೋಟಿ ಜನಾ ಬರತಾರ ಅಂತ ಹೇಳಿ ಪ್ರಧಾನಿ ಮೋದಿ ಅವರು ನನಗ ಹೇಳ್ಯಾರ ಅಂತ ಟ್ರಂಪ ಅವರು ತಮ್ಮ ಜನಸಭೆಯೊಳಗ ಹೇಳಿಕೊಂಡಾರ. ನೀವು ಅದೀರಿ ನೋಡ್ರಿ, ಬರೇ 50 ಸಾವಿರ ಜನ ಬಂದರ ಭಾಳ ಬಂದಾರ ಅಂತ ಚಪ್ಪಾಳಿ ತಟ್ಟಿ ಕುಣೀತೀರಿ ಅಂತ ತಮ್ಮ ಬೆಂಬಲಿಗರಿಗೆ ಛೇಡಿಸಿ ಬಿಟ್ಟಾರ. ಆದರ ಅಹಮದಾಬಾದಿನ್ಯಾಗ ಅವರ ಸ್ವಾಗತಕ್ಕ ಮೊಟೆರಾದ ಸರದಾರ ಪಟೇಲ ಸ್ಟೇಡಿಯಂದಾಗ ಒಂದು ಲಕ್ಷ ಜನಾ ಸೇರಿದ್ದರು ಅಂತ ವಾಷಿಂಗಟನ್ ಪೋಸ್ಟ ವರದಿ ಮಾಡೇದ. ಬಹುಶಃ ಮೋದಿ ಅವರು ನಾವು ಹೊಸದಾಗಿ ಕಟ್ಟಿದ ಗೋಡೆಯ ಹಿಂದಿನ ಸ್ಲಂದಾಗ 60 ಲಕ್ಷ ಜನಾ ಇರತಾರ ಅಂತ ಹೇಳಿದ್ದರೇನೋ. ಟ್ರಂಪ ಅವರು ಗೋಡೆ ಅಂದಕೂಡಲೇ ಖುಷಿಯಾಗಿ ಬಿಟ್ಟಾರ. ಅವರಿಗೆ ತಾವು ಕಟ್ಟದೇ ಉಳಿದಿರುವ ಮೆಕ್ಸಿಕೋ ಗೋಡೆ ನೆನಪಾಗಿರಬೇಕು.

ಇನ್ನ ಭಾರತ ಭೇಟಿಯ ಬಂದ ಕಾರಣ ಅಂತೂ ಅವರು ಹೇಳೇಬಿಟ್ಟಾರ. ಅವರಿಗೆ 2.15 ಲಕ್ಷ ಕೋಟಿಯ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕ ನಾವು ಸಹಿ ಹಾಕೇವಿ ಅಂತ ಜಂಟೀ ಘೋಷಣೆ ಸಮಯದಾಗ ಟ್ರಂಪಣ್ಣಾರು ಹೇಳಿದರು. ಆವಾಗ ನಮ್ಮ ಪ್ರಧಾನಿ ಅವರು ಸುಮ್ಮನೇ ಇದ್ದರು. ಇಷ್ಟು ದೊಡ್ಡ ಒಪ್ಪಂದ ಭಾರತದ ಸಂಸತ್ತಿನಾಗ ಚರ್ಚೆ ಆಗೇದೋ ಇಲ್ಲೋ, ಯಾಕಾಗಿಲ್ಲಾ? ಆಗೋಕಿಂತಾ ಮೊದಲಿಗೆ ಆ ಅಧ್ಯಕ್ಷರು ಈ ಘೋಷಣೆ ಮಾಡಿರ‍್ಯಾಕ? ಹೋಗಲಿ, ಆ ಎರಡು ಲಕ್ಷ ಕೋಟಿ ರೂಪಾಯಿ ನಮಗ ಬರೋಹಂಗ ಇದ್ದರ ನಾವು ಸುಮ್ಮನೇ ಇರಬಹುದಾಗಿತ್ತು. ಆದರೆ ಅದು ನಾವು ಕೊಡಬೇಕಾದ ದಮ್ಮಡಿ. ಹಂಗಿದ್ದರ ನಮ್ಮ ಪ್ರತಿನಿಧಿಗಳು ಅದನ್ನ ಒಪ್ಪಿದಮ್ಯಾಲೆ ಅದರ ಘೋಷಣೆ ಆಗಬೇಕಿತ್ತು ಆಗಿಲ್ಲ. ಇದು ಒಂದು.

A pair of US Navy Sikorsky MH-60R Seahawks, NE 700 166541 and NE 712 166556 of HSM-77 ‘Sabrehawks’, cruise over the Pacific Ocean

ಭಾರತದ ಪ್ರಧಾನಿಗೂ ಅಮೆರಿಕಾದ ಅಧ್ಯಕ್ಷನಿಗೂ ಕೆಲವು ಮೂಲಭೂತ ವ್ಯತ್ಯಾಸ ಅವ. ಅವರಂಗ ಇವರಿಗೆ ಇರಲಿಕ್ಕೆ ಆಗಂಗಿಲ್ಲ. ಅಲ್ಲೆ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಅಧಿಕಾರಗಳು ಪ್ರತ್ಯೇಕ. ಹೀಗಾಗಿ ಅಧ್ಯಕ್ಷರು ಏನರ ನಿರ್ಧಾರ ತೊಗೊಂಡು ಹಿಂದಾಗಡೆ ಅಲ್ಲಿನ ಶಾಸಕಾಂಗದ ಒಪ್ಪಿಗೆ ತೊಗೋಬಹುದು. ತೊಗೊಳ್ಳಲಾರದನೂ ಇರಬಹುದು. ನಮ್ಮಲ್ಲಿ ಹಂಗಿಲ್ಲ. ಪ್ರತಿ ಒಂದು ರುಪಾಯಿ ಖರ್ಚಾಗಬೇಕಾದರೂ ಸಹ ಶಾಸಕಾಂಗದ ಒಪ್ಪಿಗೆ ಬೇಕು. ಅದು ಸರಿಯಾಗಿ ಬಳಕೆ ಆಗೇದ ಅಂತ ಶಾಸಕಾಂಗಕ್ಕ ಅನ್ನಿಸಬೇಕು. ಇದು ಟ್ರಂಪಣ್ಣ ಅವರಿಗೆ ಗೊತ್ತಿಲ್ಲ. ನಮ್ಮವರು ಅವರಿಗೆ ಗೊತ್ತು ಮಾಡಿಕೊಡಲಿಕ್ಕೆ ಹೋಗಿಲ್ಲ. ಇದು ಎರಡನೆದು.

ಟ್ರಂಪ ಅವರು ಭಾರತದ ಪೇಟೆಂಟ ಕಾಯಿದೆಯ ಬದಲಾವಣೆಗೆ ಒತ್ತಾಯಿಸಲಿಕ್ಕೆ, ಔಷಧ, ಕೃಷಿ ಹಾಗೂ ಕುಕ್ಕುಟ ಉದ್ಯಮಕ್ಕ ಸಂಬಂಧಪಟ್ಟ ಒಪ್ಪಂದಗಳನ್ನ ಮಾಡಲಿಕ್ಕೆ ಬರಲಿಕ್ಕೆ ಹತ್ಯಾರ. ಇದು ಹಿಡನ ಅಜಂಡಾ ಅಂತ ಕೆಲವು ಸರಕಾರದ ವಿರೋಧಿಗಳು ಹೇಳ್ಯಾರ. ಜಗತ್ತಿನೊಳಗ ಉತ್ಪನ್ನ ಪೇಟೆಂಟು ಇದ್ದರ ಭಾರತದಾಗ ಪ್ರಕ್ರಿಯೆ ಪೇಟೆಂಟು ಅದ. ಇದು ಇಂದಿರಾ ಗಾಂಧಿ ಕಾಲದಿಂದ ಅದ. ಇದರ ಪ್ರಕಾರ ಒಂದು ಔಷಧಿ ತಯಾರು ಮಾಡೋ ಒಂದು ವಿಧಾನ ಮಾತ್ರ ಪೇಟೆಂಟು ಮಾಡಬಹುದು. ಬೇರೆಯವರು ಅದೇ ಔಷಧಿ ಉಳಿದ ವಿಧಾನದಿಂದ ಮಾಡಬಹುದು. ಇದರಿಂದ ಬಡವರಿಗೆ ಕಮ್ಮಿ ಖರ್ಚಿನಾಗ ಔಷಧಿ ಸಿಗತಾವ. ಆದರ ಬ್ಯಾರೆ ದೇಶದಾಗ ಒಂದು ಔಷಧಿನ ಪೇಟೆಂಟು ಮಾಡಬಹುದು. ಅದನ್ನ ನೀವ ಹೆಂಗರ ಮಾಡರಿ, ಮೊದಲ ಅದನ್ನ ತಯಾರಿಸಿದ ಕಂಪನಿಗೆನ ರೊಕ್ಕ ಹೊಗತಾವ. ಟ್ರಂಪ ಸಾಹೇಬರು ಈ ಕಾನೂನನ್ನ ಭಾರತದಾಗ ತರಬೇಕು ಅಂತ ವಿಚಾರ ಇಟಗೊಂಡಾರ. ಅವರನ್ನ ಆರಾಧಿಸುವ ನಮ್ಮನ್ನಾಳುವವರು ಅವರ ಮಾತಿಗೆ ಹೂಂ ಅಂದರ ಆಶ್ಚರ್ಯ ಇಲ್ಲ.

ಇನ್ನ ಅಮೆರಿಕದ ಕೃಷಿ ಹಾಗೂ ಚಿಕನ್, ಮೊಟ್ಟೆ ಮುಂತಾದವನ್ನ ನಮ್ಮಲ್ಲೆ ಮುಕ್ತ ಆಮದು ಮಾಡಲಿಕ್ಕೆ ಅವಕಾಶ ಕೊಟ್ಟರ ನಮ್ಮ ರೈತರ ಗತಿ ಹೇಳಬ್ಯಾಡ್ರಿ. ಮೊದಲೇ ಸ್ವರ್ಗದ ಹಾದಿ ಹಿಡದಿರೋ ನಮ್ಮ ರೈತರು ಅಲ್ಲಿಗೆ ಹೋಗಲಿಕ್ಕೆ ಬುಲೆಟ ಟ್ರೇನು ಬುಕ್ಕ ಮಾಡತಾರ. ತನ್ನ ರೈತರಿಗೆ 63 ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ಕೊಡೋ ಅಮೇರಿಕಾ ಸರಕಾರ ನಾವು ನಮ್ಮ ರೈತರಿಗೆ ಯಾವುದೇ ಸಬ್ಸಿಡಿ ಕೊಡಬಾರದು ಅಂತ ಬದನೇಕಾಯಿ ಪುರಾಣ ಹೇಳತದ. ನಮ್ಮವರು ಬದನೇಕಾಯಿ ಭಾಷಣ ಅಂತ ಹೇಳಿ ಅದನ್ನ ತಿನ್ನೋದು ಬಿಟ್ಟು ಉಪವಾಸ ಬೀಳತಾರ.

ಇನ್ನು ವಿದೇಶಿ ಅತಿಥಿಗಳು ಭಾರತಕ್ಕ ಬಂದಾಗ ರಾಷ್ಟ್ರಪತಿ ಭವನದಾಗ ಊಟಕ್ಕ ನೀಡತಾರ. ಆಗ ಎಲ್ಲಾ ಪ್ರಮುಖ ನಾಯಕರನ್ನ ಕರೀತಾರ. ಯಾವ್ಯಾವ ಪುಣ್ಯಾತ್ಮರನ್ನ ಕರದರು ಅಂತ ನೀವು ನಾಳೆ ಯಾರರ ಸೆಲೆಬ್ರಿಟಿಗಳ ಸೆಲ್ಫೀಗಳಿಂದ ಗೊತ್ತಾಗತದ. ಅದಕ್ಕ ಏನೂ ತಲಿ ಕೆಡಿಸಿಕೋಬ್ಯಾಡ್ರಿ.

ಆದರ ಇದು ಈ ಪವಿತ್ರ ಪ್ರಜಾಸತ್ತೆಯೊಳಗ ಇದು ದಶಕಗಳಿಂದ ನಡಕೊಂಡ ಬಂದ ಸತ್ಸಂಪ್ರದಾಯ. ಇದರ ಮುಖ್ಯ ಉದ್ದೇಶ ಏನಪಾ ಅಂದರ ದೇಶ ಅನ್ನೋದು ಸರಕಾರಕ್ಕಿಂತ ದೊಡ್ಡದು. ರಾಷ್ಟ್ರಪತಿ ಭವನದಾಗ ಆಡಳಿತ ಪಕ್ಷ- ವಿರೋಧ ಪಕ್ಷ ಎರಡೂ ಕೂಡಿ ಇರತಾವ. ದೇಶದ ಮುನ್ನಡೆಗೆ ಎರಡೂ ಕಾರಣ ಆಗತಾವ ಅನ್ನೋದನ್ನ ವಿದೇಶಿ ಅತಿಥಿಗಳಿಗೆ ತೋರಿಸಿಕೊಡಲಿಕ್ಕೆ ಇದೊಂದು ಅವಕಾಶ. ಆದರ ಈ ಸಾರೆ ಈ ಔತಣಕೂಟಕ್ಕ ವಿರೋಧ ಪಕ್ಷದವರನ್ನ ಕರೆಯುವಾಗ ಪಕ್ಷಪಾತ ಆಗೇದ ಅಂತ ಹೇಳಿ ಕಾಂಗ್ರೆಸ್ ನಾಯಕ ಅಧೀರ ರಂಜನ ಚೌಧರಿ ಆರೋಪಿಸಿದರು. ಕಾಂಗ್ರೆಸನ ಹಿರಿಯ ನಾಯಕರಾದ ಸೊನಿಯಾ ಗಾಂಧಿ, ರಾಹುಲ ಗಾಂಧಿ ಹಾಗೂ ಚೌಧರಿ ಮುಂತಾದವರು ಹೋಗಿಲ್ಲ.

ನಮ್ಮ ವಿರೋಧ ಪಕ್ಷಗಳು ಅವರ ಭೇಟಿಗೆ ಹೋಗಲಾರದನ್ನ ನೋಡಿ ಟ್ರಂಪ ಅವರು ಖುಷಿಯಾಗಬಹುದು. ಯಾಕಂದರ ಅವರು ತಮ್ಮ ದೇಶದೊಳಗ ತಮ್ಮ ವಿರೋಧ ಪಕ್ಷಗಳನ್ನೂ ಹಿಂಗ ನಡಸಿಕೊಂಡಾರ. ಅದಕ್ಕ ಇರಬೇಕು ಅವರು ಭಾರತದ ಪ್ರಧಾನಿ ನನ್ನ ಅತ್ಯಂತ ಆತ್ಮೀಯ ಸ್ನೇಹಿತ ಅಂತ ಅನ್ನೋದು. ʻನಾ ಮಾಡಬೇಕಂದಿದ್ದೆಲ್ಲಾ ಅವರು ಮಾಡತಾರ ಅಂತ,ʼ ಅಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...