ಕಳೆದ ಕೆಲ ದಿನಗಳಿಂದ ವಿಮಾನಗಳಿಗೆ ಸತತವಾಗಿ ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಗೊಂಡಿಯಾ ಮೂಲದ 35 ವರ್ಷದ ಜಗದೀಶ್ ಉಯ್ಕಿ ಎಂಬಾತ ನಕಲಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿರುವುದಾಗಿ ನಾಗ್ಪುರ ನಗರ ಪೊಲೀಸ್‌ನ ವಿಶೇಷ ವಿಭಾಗ ಗುರುತಿಸಿದೆ. ಈತ ಭಯೋತ್ಪಾದನೆ ಕುರಿತ ಪುಸ್ತಕದ ಲೇಖಕನಾಗಿದ್ದು, 2021ರಲ್ಲಿ ಪ್ರಕರಣವೊಂದರಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸುತ್ತಿರುವುದು ಪೊಲೀಸರಿಗೆ ಗೊತ್ತಾದ ಬಳಿಕ ಜಗದೀಶ್ ಉಯ್ಕಿ ತಲೆಮರೆಸಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಉಪ ಪೊಲೀಸ್ ಆಯುಕ್ತೆ (ಡಿಸಿಪಿ) ಶ್ವೇತಾ ಖೇಡ್ಕರ್ ನೇತೃತ್ವದ ತಂಡವು ತನಿಖೆ ನಡೆಸಿ ಜಗದೀಶ್ ಉಯ್ಕಿ ಇ-ಮೇಲ್ ಕಳುಹಿಸಿತ್ತಿರುವ ವಿಷಯವನ್ನು ಬಯಲಿಗೆಳೆದಿದೆ.
ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ), ರೈಲ್ವೆ ಸಚಿವರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿಗಳ ಕಚೇರಿ, ವಿಮಾನಯಾನ ಕಚೇರಿಗಳು, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಉಯ್ಕಿ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಗೆ ಗೊತ್ತಿರುವ ಗೌಪ್ಯ ಟೆರರ್ ಕೋಡ್ ಬಗ್ಗೆ ಹೇಳಿಕೊಳ್ಳಲು ಅವಕಾಶ ನೀಡದಿದ್ದರೆ ಪ್ರತಿಭಟಿಸುವುದಾಗಿ ಸೋಮವಾರ ಉಯ್ಕಿಯಿಂದ ಇ-ಮೇಲ್ ಒಂದು ಬಂದ ಬಳಿಕ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರ ಮನೆ ಬಳಿ ನಾಗ್ಪುರ ಪೊಲೀಸರು ಭದ್ರತೆ ಹೆಚ್ಚಿಸಿದ್ದರು.
ಭಯೋತ್ಪಾದಕ ಬೆದರಿಕೆಗಳ ಬಗ್ಗೆ ತನಗಿರುವ ವಿಷಯದ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲು ಅವಕಾಶ ಮಾಡಿಕೊಡುವಂತೆಯೂ ಜಗದೀಶ್ ಉಯ್ಕಿ ಬೇಡಿಕೆ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 21 ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಇ-ಮೇಲ್ ಕಳುಹಿಸಿದ್ದ ಉಯ್ಕಿ, ಅದನ್ನು ಡಿಜಿಪಿ ಮತ್ತು ಆರ್‌ಪಿಎಫ್‌ಗೆ ಫಾರ್ವರ್ಡ್ ಮಾಡಿದ್ದ. ಈ ಕಾರಣಕ್ಕೆ ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಉಯ್ಕಿಯನ್ನು ಶೀಘ್ರದಲ್ಲೇ ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸು ಹೇಳಿದ್ದಾರೆ.
ಅಕ್ಟೋಬರ್ 28 ರವರೆಗೆ 15 ದಿನಗಳಲ್ಲಿ, ಭಾರತೀಯ ಸಂಸ್ಥೆಗಳ 410 ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ನಕಲಿ ಬಾಂಬ್ ಬೆದರಿಕೆಗಳು ಬಂದಿವೆ. ಹೆಚ್ಚಿನ ಬೆದರಿಕೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಾಕಲಾಗಿತ್ತು. ಸೋಮವಾರ 60ಕ್ಕೂ ಹೆಚ್ಚು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು.
ಇದನ್ನೂ ಓದಿ : ಪತ್ರಕರ್ತ ಮಹೇಶ್ ಲಾಂಗಾ ವಿರುದ್ಧ ಎಫ್‌ಐಆರ್ : ಮಾಧ್ಯಮ ಒಕ್ಕೂಟಗಳಿಂದ ಖಂಡನೆ


