ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಏ.10) ತಿರಸ್ಕರಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ livelaw.in ವರದಿ ಮಾಡಿದೆ.
ಸಿ ಗೀತಾ ಎಂಬವರು ಮುಂಬರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತಂಗರೈ ಮತ್ತು ಬರಗೂರ್ ವಿಧಾನಸಭಾ ಕ್ಷೇತ್ರಗಳಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದರು.
ಚುನಾವಣಾ ಆಯೋಗವು ಅರ್ಜಿಯನ್ನು ‘ತುಂಬಾ ತಡವಾಗಿ ಸಲ್ಲಿಸಲಾಗಿದೆ’ ಎಂದು ಹೇಳಿದ ನಂತರ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರಿದ್ದ ಪೀಠವು ಈ ವಿಷಯವನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದೆ ಎಂದು ವರದಿ ಹೇಳಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಭಾಗವಾಗಿ ತಮಿಳುನಾಡಿನ ಅಂತಿಮ ಮತದಾರರ ಪಟ್ಟಿಯಿಂದ 74 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗ ಫೆಬ್ರವರಿ 23ರಂದು ತಿಳಿಸಿದೆ. ಎಸ್‌ಐಆರ್ ಬಳಿಕ, ಅಂತಿಮ ಪಟ್ಟಿಯಲ್ಲಿ ರಾಜ್ಯದಲ್ಲಿ 5.6 ಕೋಟಿ ಮತದಾರರಿದ್ದಾರೆ ಎಂದು ತೋರಿಸಲಾಗಿದೆ.
2025ರ ಅಕ್ಟೋಬರ್ 27 ರಂದು ಮತದಾರರ ಪಟ್ಟಿ ಪರಿಷ್ಕರಣೆ ಆರಂಭಗೊಳ್ಳುವ ಮೊದಲು ತಮಿಳುನಾಡಿನಲ್ಲಿ 6.4 ಕೋಟಿ ಮತದಾರರಿದ್ದರು. ಎಸ್‌ಐಆರ್ ಬಳಿಕ ಡಿಸೆಂಬರ್‌ನಲ್ಲಿ ಕರಡು ಪಟ್ಟಿ ಪ್ರಕಟಿಸಿದಾಗ, 97.3 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಗಿತ್ತು.
ಚುನಾವಣಾ ಆಯೋಗದ ಪ್ರಕಾರ, ಜನವರಿ 30 ರಂದು ಕೊನೆಗೊಂಡ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ 27.5 ಲಕ್ಷ ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ. ಈ ಹಂತದಲ್ಲಿ ಒಟ್ಟು 4.2 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ.
ಏಪ್ರಿಲ್ 2ರಂದು ನಾಮಪತ್ರ ಸಲ್ಲಿಸಲು ಮುಂದಾದಾಗ ತನ್ನ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಗೊತ್ತಾಗಿರುವುದಾಗಿ ಗೀತಾ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು ಎಂದು ಲೈವ್ ಲಾ ವರದಿ ಮಾಡಿದೆ.
ಗೀತಾ ಅವರ ವಕೀಲ ಗೋಪಾಲ್ ಶಂಕರನಾರಾಯಣನ್, ಗೀತಾ ಅವರ ಹೆಸರು 2007ರಿಂದ ಮತದಾರರ ಪಟ್ಟಿಯಲ್ಲಿತ್ತು. ಅರ್ಹತೆಯ ಪುರಾವೆಯಾಗಿ ಅವರು ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್ ಅನ್ನು ಹೊಂದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಮತದಾರರ ಪಟ್ಟಿಯಿಂದ ಗೀತಾ ಅವರ ಹೆಸರನ್ನು ಅಳಿಸಿರುವುದು ನ್ಯಾಯಸಮ್ಮತವಲ್ಲ ಎಂದು ಶಂಕರನಾರಾಯಣನ್ ಹೇಳಿದ್ದರು. ಆದರೂ, ಚುನಾವಣಾ ಆಯೋಗ ತಡವಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ವಾದಿಸಿದೆ.
“ಪಾಸ್‌ಪೋರ್ಟ್ ಪೌರತ್ವಕ್ಕೆ ಪುರಾವೆಯಾಗಿದೆ. ಪಾಸ್‌ಪೋರ್ಟ್ ಹೊಂದಿರುವ ಪ್ರತಿಯೊಬ್ಬರನ್ನು ನೀವು ಸ್ವಯಂಚಾಲಿತವಾಗಿ ಸೇರಿಸಬೇಕು. ನನಗೆ ಒಂದೇ ಒಂದು ಸೂಚನೆ ಕೂಡ ಬಂದಿಲ್ಲ. ನನ್ನ ನಾಮನಿರ್ದೇಶನವನ್ನು ಮರೆತುಬಿಡಿ, ಕನಿಷ್ಠ ನನ್ನ ಮತದಾನದ ಹಕ್ಕು ಅಲ್ಲಿರಬೇಕೆಂದು ನಾನು ಹೇಳುತ್ತಿದ್ದೇನೆ” ಎಂದು ಗೀತಾ ಅವರ ಪರ ವಕೀಲ ಹೇಳಿದ್ದಾರೆ.
ಮತದಾರರ ಪಟ್ಟಿಗೆ ಸೇರಿಸಲು ತಮ್ಮ ಮನವಿಯನ್ನು ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್‌ನ ಏಪ್ರಿಲ್ 7ರ ಆದೇಶವನ್ನು ಪ್ರಶ್ನಿಸಿ ಗೀತಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಸಮಯದೊಳಗೆ ಅರ್ಜಿದಾರರು ತಮ್ಮ ಆಕ್ಷೇಪಣೆಯನ್ನು ಸಲ್ಲಿಸಿಲ್ಲ ಎಂದು ಚುನಾವಣಾ ಆಯೋಗ ಹೈಕೋರ್ಟ್‌ಗೆ ಹೇಳಿತ್ತು ಎಂದು livelaw.in ವರದಿ ತಿಳಿಸಿದೆ.
ಚುನಾವಣಾ ಆಯೋಗದ ವಾದ ಆಲಿಸಿದ ಹೈಕೋರ್ಟ್, ಗೀತಾ ಅವರು ಚುನಾವಣಾ ಆಯೋಗ ನಿಗದಿಪಡಿಸಿದ ಸಮಯದೊಳಗೆ ತಮ್ಮ ಆಕ್ಷೇಪಣೆ ಅಥವಾ ಮನವಿ ಸಲ್ಲಿಸಬೇಕಿತ್ತು ಎಂದು ಹೇಳಿರುವುದಾಗಿ ವರದಿ ವಿವರಿಸಿದೆ.


