Homeರಾಜಕೀಯನಾರಾಯಣ ಗುರು ಸ್ತಬ್ಧಚಿತ್ರ ನಿರಾಕರಣೆ: ದ.ಕ ದಲ್ಲಿ ಜ.26ರಂದು "ಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ"

ನಾರಾಯಣ ಗುರು ಸ್ತಬ್ಧಚಿತ್ರ ನಿರಾಕರಣೆ: ದ.ಕ ದಲ್ಲಿ ಜ.26ರಂದು “ಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ”

- Advertisement -
- Advertisement -

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನ ನಿರಾಕರಿಸಿ ತಿರಸ್ಕರಿಸಿರುವುದನ್ನು ಖಂಡಿಸಿ ಜ.26ರ ಗಣರಾಜ್ಯೋತ್ಸವ ದಿನದಂದು ಅವಿಭಜಿತ ದಕ್ಷಿಣ ಕನ್ನಡದ ಎಲ್ಲ ಬಿಲ್ಲವ ಸಂಘ-ಸಂಘಟನೆಗಳು ಮತ್ತು ಸಮಸ್ತ ಬಿಲ್ಲವ ಸಮಾಜದ ವತಿಯಿಂದ ಮಂಗಳೂರಲ್ಲಿ ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ ಆಯೋಜಿಸಲಾಗಿದೆಯೆಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್ ತಿಳಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ ನೇತೃತ್ವದಲ್ಲಿ ಈ ಜಾಥಾ ನಡೆಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ನಾರಾಯಣಗುರುಗಳ ಸ್ತಬ್ಧ ಚಿತ್ರದೊಂದಿಗೆ ಸಂಚರಿಸುವ ಸ್ಥಳೀಯ ಭಜನಾ ತಂಡಗಳು ಮತ್ತು ಬಿಲ್ಲವ ಸಂಘಟನೆಗಳು ಜ.26ರ ಸಂಜೆ 6ಕ್ಕೆ ಮಂಗಳೂರಿನ ಗೋಕರ್ಣನಾಥ ಕ್ಷೇತ್ರ ಬಂದು ಸೇರಲಿವೆ. ಅಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಲ್ಲಿ ಬಿಲ್ಲವ ಸಮುದಾಯದ ವತಿಯಿಂದ ಹೊರಡುವ ಗುರುಗಳ ಸ್ತಬ್ಧಚಿತ್ರ ಜಾಥಾ ಕಂಕನಾಡಿಯ ಗರೋಡಿ ಕ್ಷೇತ್ರದಿಂದ ಹೊರಟು ಲೇಡಿಹಿಲ್ ಮೂಲಕ ಕ್ಷೇತ್ರ ತಲುಪುತ್ತದೆ. ಕಾರ್ಕಳ, ಬೈಂದೂರು, ಉಡುಪಿ, ಪುತ್ತೂರು, ಮುಲ್ಕಿ, ಬಂಟ್ವಾಳದ ತಂಡಗಳು ಒಟ್ಟು ಸೇರಿಕೊಂಡು ಗೋಕರ್ಣನಾಥ ಕ್ಷೇತ್ರ ತಲುಪುತ್ತದೆಂದು ಪದ್ಮರಾಜ್ ತಿಳಿಸಿದ್ದಾರೆ.

ಕೇರಳ ಸರ್ಕಾರ ಕಳುಹಿಸದ್ದ ಸ್ತಬ್ಧ ಚಿತ್ರಗಳನ್ನು ಮಹಿಳಾ ಸಬಲಿಕರಣದ ಹಿನ್ನಲೆಯಲ್ಲಿ ಆಯ್ಕೆ ಸಮಿತಿ ಮೆಚ್ಚುಗೆ ಸೂಚಿಸಿತ್ತು. ಆದರೆ ಅದರಲ್ಲಿನ ನಾರಾಯಣ ಗುರುಗಳ ಪ್ರತಿಮೆ ತೆಗೆದು ಶಂಕರಾಚಾರ್ಯರ ಪ್ರತಿಮೆ ಸ್ಥಾಪಿಸುವಂತೆ ಹೇಳಿದ್ದು ನಾರಾಯಣ ಗುರುಗಳ ಅನುಯಾಯಿಗಳಾದ ತಮಗೆಲ್ಲ ನೋವು ತಂದಿದೆ. ಈ ಕುರಿತು ಗೋಕರ್ಣನಾಥ ದೇವಾಲಯದ ನವೀಕರಣದ ರೂವಾರಿ ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿಯವರಿಗೂ ಬೇಸರವಾಗಿದ್ದು ಇದರ ವಿರುದ್ದ ಧ್ವನಿಯೆತ್ತುವುದು ಅನಿವಾರ್ಯವೆಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆಯೆಂದು ಅವರು ತಿಳಿಸಿದ್ದಾರೆ.

ನಾರಾಯಣ ಗುರುಗಳದು ಸಂಘರ್ಷ ರಹಿತ ಶಾಂತಿಯುತ ಕ್ರಾಂತಿ. ಹಾಗಾಗಿ ನಾವು ಸಹ ಈ ಪ್ರತಿಭಟನೆ ಯಾವುದೇ ಘೋಷಣೆ ಕೂಗದೆ ಶಾಂತಿಯುತವಾಗಿ ಮಾಡುತ್ತೇವೆ. ನಾರಾಯಣ ಗುರುಗಳು ಒಂದೇ ಮತ ಒಂದೇ ದೇವರೆಂಬ ಸಂದೇಶ ನೀಡಿರುವಂತವರು. ಆದರೆ ಈ ಸಮಾಜದಲ್ಲಿ ಈಗಲು ಅಸಮಾನತೆಯಿದೆ,  ಹಿಂದುಳಿದಿರುವವರನ್ನು ತುಳಿಯುವ ಕೆಲಸ ಈಗಲೂ ಆಗುತ್ತಿದೆ. ನಾರಾಯಣಗುರುಗಳಿಂದ ಸ್ಥಾಪಿಸಲಾದ ಗೋಕರ್ಣನಾಥ ಕ್ಷೇತ್ರದಲ್ಲಿ ಅವರ ಸಂದೇಶ-ತತ್ವಾದರ್ಶ ಅಕ್ಷರಶಃ ಪಾಲಿಸುವ ಕಾರ್ಯ ಆಗುತ್ತಲೇ ಇದೆ. ಮಾಜಿ ಸಚಿವ ಜನಾರ್ಧನ ಪೂಜಾರಿಯವರು ನಾರಾಯಣಗುರುಗಳ ತತ್ವ ಪಾಲಿಸಲು ಹಗಲಿರುಳು ದುಡಿದ್ದಾರೆ. ಇಲ್ಲಿ ಹಿಂದುಳಿದ ವರ್ಗದ ಅರ್ಚಕರೆ ಇದ್ದಾರೆ. ಮಹಿಳೆಯರ ಪಾದ ಪೂಜೆ ಮಾಡಲಾಗಿತ್ತು. ದಲಿತ ಅರ್ಚಕರನ್ನು ನೇಮಿಸಲಾಗಿತ್ತು. ಮುಂದಿನ ಜನಾಂಗಕ್ಕೂ ನಾರಾಯಣ ಗುರುಗಳ ತತ್ವ ಮತ್ತು ಸಂದೇಶ ತಲುಪಬೇಕೆಂಬುದು ನಮ್ಮ ಆಶಯವೆಂದು ಪದ್ಮರಾಜ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿದ್ದ ನಾರಾಯಣಗುರು ವಿಚಾರವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ “ಜಾಥಾ ಮೌನವಾಗಿ ನಡೆಯಲಿದೆ. ನಾರಾಯಣಗುರುಗಳು ಶಾಂತಿ ಸಂಕೇತವಾಗಿ ನೀಡಿದ ಹಳದಿ ಪತಾಕೆ ಮತ್ತು ಶಾಲು ಬಿಟ್ಟರೆ ಬೇರೆ ಯಾವ ಬಣ್ಣದ ಬಾವುಟ ಶಾಲಿಗೆ ಜಾಥಾದಲ್ಲಿ ಅವಕಾಶವಿಲ್ಲ. ಗುರುಗಳ ತತ್ವದ ಪ್ರಕಾರ ಎಲ್ಲ ಜಾತಿ, ಮತ, ಧರ್ಮ, ಪಕ್ಷ, ಪಂಥದ ಜಾಥಾ ಇದಾಗಲಿದ್ದು 100ಕ್ಕೂ ಹೆಚ್ಚು ನಾರಾಯಣ ಗುರುಗಳ ಸ್ತಬ್ದ ಚಿತ್ರ ಭಾಗವಹಿಸುವ ನಿರೀಕ್ಷೆಯಿದೆ” ಎಂದಿದ್ದಾರೆ.


ಇದನ್ನೂ ಓದಿ: ಮೋದಿ ಸರ್ಕಾರದಿಂದ ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ: ಗಣರಾಜ್ಯೋತ್ಸವದಂದು ಕರಾವಳಿಯ ಪ್ರತಿ ತಾಲೂಕಿನಲ್ಲಿ ಟ್ಯಾಬ್ಲೊ ಮೆರವಣಿಗೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...