ಇಂದು (ಜೂನ್ 22) ಎನ್‌ಸಿಪಿ ಪಕ್ಷದ ನಾಯಕ ಶರದ್‌ಪವಾರ್ ಅವರ ಮನೆಯಲ್ಲಿ ನಡೆಯುತ್ತಿರುವ ಸಭೆಯೊಂದಕ್ಕೆ ವಿಪರೀತ ಮಹತ್ವ ಬಂದಿದೆ. ಪವಾರ್ ಅವರು ಇಂತಹ ಸಭೆಯೊಂದನ್ನು ತಮ್ಮಂತೆ ತಾವೇ ಕರೆದಿದ್ದರೂ ಅದು ಚರ್ಚೆಗೆ ಗ್ರಾಸವಾಗುತ್ತಿತ್ತು; ಆದರೆ ಕಳೆದೆರಡು ವಾರಗಳಲ್ಲಿ ಪ್ರಶಾಂತ್ ಕಿಶೋರ್ ಶರದ್ ಪವಾರ್‌ರನ್ನು ಭೇಟಿ ಮಾಡಿರುವುದು ಮತ್ತು ಆ ನಂತರ ಈ ಸಭೆ ನಡೆಯುತ್ತಿರುವುದರಿಂದ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಶರದ್ ಪವಾರ್ ದೊಡ್ಡ ನಾಯಕರಾದರೂ, ಪ್ರಶಾಂತ್ ಕಿಶೋರ್‌ಗೆ ಏಕೆ ಇಷ್ಟೊಂದು ಮಹತ್ವ? 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪರವಾಗಿ ಮತ್ತು ಆ ನಂತರ ಸತತವಾಗಿ ಹಲವಾರು ರಾಜ್ಯಗಳ ನಾಯಕರ ಪರವಾಗಿ ಚುನಾವಣೆ ಗೆಲ್ಲಿಸಲು ಯಶಸ್ವಿಯಾಗಿ ಕೆಲಸ ಮಾಡಿದ ಚುನಾವಣಾ ಮ್ಯಾನೇಜ್‌ಮೆಂಟ್ ಪಟು ಪ್ರಶಾಂತ್ ಕಿಶೋರ್. ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯಾಗಿ ಪ್ರತಿಷ್ಠಾಪಿಸಿದ ಮೊದಲ ಚುನಾವಣೆಯೊಂದನ್ನು ಹೊರತುಪಡಿಸಿದರೆ ಇನ್ನೆಲ್ಲಾ ಚುನಾವಣೆಗಳಲ್ಲಿ ಅವರು ಕೆಲಸ ಮಾಡಿದ್ದು ಬಿಜೆಪಿಗೆ ವಿರುದ್ಧವಾಗಿ. ಎಲ್ಲಕ್ಕಿಂತ ಮುಖ್ಯವಾಗಿ ಈ ವರ್ಷದಲ್ಲಿ ನಡೆದ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿಯು ಭಾರೀ ಶಕ್ತಿಯೊಂದಿಗೆ ಚುನಾವಣಾ ಕಣಕ್ಕಿಳಿದಿತ್ತು. ಆದರೆ ಬಿಜೆಪಿಯು ಗೆಲ್ಲುವುದಿಲ್ಲವೆಂದಷ್ಟೇ ಅಲ್ಲದೇ, ಅದು ಮೂರಂಕಿ ಮುಟ್ಟಿದರೆ ತಾನು ರಾಜಕೀಯ ಸಹಾಯಕನಾಗಿ ಮಾಡುತ್ತಿರುವ ಈ ಕೆಲಸವನ್ನು ತೊರೆಯುತ್ತೇನೆಂದು ಪ್ರಶಾಂತ್ ಹೇಳಿದ್ದರು. ಫಲಿತಾಂಶ ಬಂದಾಗ ಬಿಜೆಪಿಯು ಮೂರಂಕಿಯ ಹತ್ತಿರಕ್ಕೆ ಬರಲಿಲ್ಲವಾದರೂ, ಪ್ರಶಾಂತ್ ತಾನಿನ್ನು ರಾಜಕೀಯ ಸಹಾಯಕನ ಕೆಲಸ ಮಾಡುವುದಿಲ್ಲವೆಂದು ಘೋಷಿಸಿದರು!
ಇದರ ನಂತರ ನೀವೇನು ಮಾಡಲಿದ್ದೀರಿ ಎಂದು ಕೇಳಿದಾಗ ಸ್ಪಷ್ಟ ಉತ್ತರವನ್ನು ಆತ ಹೇಳದಿದ್ದರೂ, ಸಾಕಷ್ಟು ಮುಂಚೆಯೇ ಅದರ ಸೂಚನೆ ಕೊಟ್ಟಾಗಿತ್ತು. ’ನೀವು ಭಾವಿಸುತ್ತಿರುವುದಕ್ಕಿಂತಲೂ ಹೆಚ್ಚಿನ ಮಹತ್ವಾಕಾಂಕ್ಷಿ ನಾನು’ ಎಂಬುದೇ ಆ ಸೂಚನೆ. ಸ್ವತಃ ತಾನು ಮುಂದಿನ ಪ್ರಧಾನಿಯಾಗಲೇಬೇಕೆಂದು ಪ್ರಶಾಂತ್ ಕಿಶೋರ್ ಹಠ ತೊಟ್ಟಿರದಿರಬಹುದಾದರೂ, ಅಂತಹ ಸಂದರ್ಭ ಬಂದರೂ ಬರಬಹುದೆಂಬ ಲೆಕ್ಕಾಚಾರವೂ ಇರಬಹುದೇನೋ? ಏಕೆಂದರೆ ಪ್ರತಿಯೊಂದು ಚುನಾವಣೆಯ ಗೆಲುವಿನ ನಂತರವೂ ಆಯಾ ನಾಯಕರ ಅಥವಾ
ನಾಯಕಿಯ ಶಕ್ತಿಯೇ ಪ್ರಧಾನವೆಂದೂ ತಾನು ಅವರ ಪ್ರಚಾರ ಹಾಗೂ ತಂತ್ರವನ್ನು ಇನ್ನಷ್ಟು ಶಾರ್ಪ್ ಮಾಡುವ ಕೆಲಸವನ್ನಷ್ಟೇ ಮಾಡುತ್ತೇನೆಂದು ಹೇಳುವುದು ವಾಡಿಕೆ. ಅದನ್ನು ಕೇಳಿದಾಗ ಪ್ರಶಾಂತ್ ಕಿಶೋರ್‌ಗೆ ತಾನು ಜನನಾಯಕನಲ್ಲವೆಂದು ಗೊತ್ತು; ಈ ದೇಶದ ದೊಡ್ಡ ಜನನಾಯಕರ ಶಕ್ತಿಯೂ ಗೊತ್ತು ಎನಿಸುತ್ತದೆ.
ಆದರೆ ಇಷ್ಟೇ ವಾಸ್ತವವಲ್ಲ. 2014ರ ಚುನಾವಣೆಯಲ್ಲಿ ಗೆದ್ದ ನಂತರ ಹೊಸ ರೀತಿಯ ಆಡಳಿತವನ್ನು ನಡೆಸುವಲ್ಲಿ ತನಗೊಂದು ಸ್ಥಾನವನ್ನು ಮೋದಿ ಕಲ್ಪಿಸದಿದ್ದುದರಿಂದ ಅವರಿಂದ ತಾನು ಹೊರಬಿದ್ದೆ ಎಂದು ಹೇಳಿಕೊಳ್ಳುವ ಪ್ರಶಾಂತ್ ಕಿಶೋರ್ ಅದನ್ನು ವ್ಯಕ್ತಿಗತ ಜಿದ್ದಾಗಿ ತೆಗೆದುಕೊಂಡಿದ್ದಾರೆಯೇ ಎಂಬ ಸಂಶಯ ಬರುತ್ತದೆ. ಆದರೆ ಅಲ್ಲಿಂದ ಆಚೆಗೆ ಅವರೂ ಸಾಕಷ್ಟು ಪಾಠಗಳನ್ನು ಕಲಿತಿದ್ದಾರೆ. 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲುವಿನತ್ತ ತೆಗೆದುಕೊಂಡು ಹೋಗುವುದಿರಲಿ, ತೀವ್ರ ಸೋಲಿನಿಂದಲೂ ಬಚಾವು ಮಾಡಲಿಕ್ಕಾಗಲಿಲ್ಲ (ಇದಕ್ಕೆ ಕಾಂಗ್ರೆಸ್‌ನ ’ತಪ್ಪು’ಗಳೇ ಹೆಚ್ಚು ಕಾರಣವಿರಬಹುದು) ಎಂಬುದನ್ನು ಬಿಟ್ಟರೆ ಮಿಕ್ಕಂತೆ ಚುನಾವಣಾ ಗೆಲುವಿನ ಸರಮಾಲೆಯನ್ನೇ ಹೊಂದಿರುವ ಆತ ಚುನಾವಣೆಗಳ ನಾಡಿಮಿಡಿತ ಅರಿತಿರುವ ಆತ್ಮವಿಶ್ವಾಸವನ್ನು ಹೊಂದಿದ್ದಾರೆ.
2019ರ ಚುನಾವಣೆಯ ನಂತರ ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಸೋಲಿಸಿಯೇ ತೀರುತ್ತೇನೆಂಬ ಶಪಥ ಮಾಡಿದ್ದ ಪ್ರಶಾಂತ್ ಕಿಶೋರ್ ಅದಕ್ಕಾಗಿ ಆಯ್ದ ಕೆಲವು ವ್ಯಕ್ತಿಗಳೊಂದಿಗೆ ರಹಸ್ಯ ಸಭೆಗಳನ್ನೂ ನಡೆಸಿದ್ದರು. ಯಾವ ಪಕ್ಷಕ್ಕೂ ಮೋದಿಯನ್ನು ಎದುರಿಸಿ ಗೆಲ್ಲುವ ಛಾತಿ ಇಲ್ಲವೆಂಬುದು ಅವರ ಅನಿಸಿಕೆಯಾಗಿತ್ತು. ಹಾಗಾಗಿ ಆ ಹೊತ್ತಿಗೆ ತಮ್ಮ ಐಪ್ಯಾಕ್‌ನ ಜೊತೆಗೆ ಒಡಂಬಡಿಕೆಗೆ ಕಾಯುತ್ತಿದ್ದ ಎಲ್ಲಾ ಪಕ್ಷಗಳಲ್ಲೂ ತನ್ನವರನ್ನು ಇಳಿಸಿ ನಂತರ ಎಲ್ಲಾ ಪಕ್ಷಗಳನ್ನೂ ಹೊರಗಿನಿಂದ ನಿಭಾಯಿಸುವ ಯೋಜನೆಯನ್ನು ಹೆಣೆದಿದ್ದರು! ಇದಕ್ಕೆ ಕಾರಣ ತನ್ನ ತವರು ರಾಜ್ಯದ ಅಧಿಕಾರಸ್ಥ ಪಕ್ಷ ಜೆಡಿಯು ಮೂಲಕ ದೊಡ್ಡದೇನನ್ನೋ ಸಾಧಿಸುವ ಯೋಜನೆಗೆ ಕಲ್ಲು ಬಿದ್ದಾಗಿತ್ತು. ಸಿಎಎ ಕುರಿತಂತೆ ಬಿಜೆಪಿಯ ನಿಲುವನ್ನು ಜೆಡಿಯುನಲ್ಲಿ ಖಚಿತವಾಗಿ ವಿರೋಧಿಸಿದ ಇಬ್ಬರಲ್ಲಿ ಅವರೂ ಒಬ್ಬರಾಗಿದ್ದರು. ಇನ್ನೊಬ್ಬರು ಪವನ್ ವರ್ಮಾ. ಭೂತಾನ್‌ನ ರಾಯಭಾರಿಯಾಗಿದ್ದ ಪವನ್ ವರ್ಮಾ ನಿತೀಶ್‌ರ ಜೊತೆಗೆ ಸೇರಿಕೊಂಡ ಮೊದಲ ’ತಂತ್ರ’ಜ್ಞ. ಅವರೇ ಪ್ರಶಾಂತ್ ಕಿಶೋರ್‌ರನ್ನು ನಿತೀಶ್ ಕುಮಾರ್ ಬಳಿಗೆ ಕರೆದುಕೊಂಡು ಹೋಗಿದ್ದು. ಸಿಎಎ (ಪೌರತ್ವ ಕಾಯ್ದೆ ತಿದ್ದುಪಡಿ)ಯನ್ನು ವಿರೋಧಿಸಿ ಜೆಡಿಯು ಪಕ್ಷವನ್ನು ಬಹಿರಂಗವಾಗಿ ಟೀಕಿಸಿದ ಇಬ್ಬರನ್ನೂ ಒಂದೇ ದಿನ (ಜನವರಿ 20, 2020) ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಹೊತ್ತಿನಲ್ಲೇ ತನ್ನ ಟಾರ್ಗೆಟ್ ನಿತೀಶ್ ಕುಮಾರ್ ಅಲ್ಲ, ಬದಲಿಗೆ ಮೋದಿ ಮತ್ತು ಅಮಿತ್‌ಶಾ ಎಂದು ತೀರ್ಮಾನಿಸಿ ತನ್ನದೇ ಸ್ವತಂತ್ರ ದಾರಿ ತುಳಿಯಲು ಪ್ರಶಾಂತ್ ಕಿಶೋರ್ ಮುಂದಾಗಿದ್ದರು.
ಆದರೆ ಬಹುಬೇಗ ತನ್ನ ಮೊದಲಿನ ಟ್ರ್ಯಾಕ್‌ಗೆ ಇಳಿದ ಅವರು ಅಂತಹ ’ಸಾಹಸ’ಕ್ಕೆ ಕೈ ಹಾಕದೇ, ಹಣ, ತೋಳ್ಬಲ ಹಾಗೂ ಚುನಾವಣಾ ಯಂತ್ರಾಂಗವನ್ನು ಹೊಂದಿರುವ ಪಕ್ಷಗಳ ಮುಖಾಂತರವೇ ಕೆಲಸ ಮಾಡುವ ನಿಟ್ಟಿನಲ್ಲಿ ತೊಡಗಿಕೊಂಡರು. ಇದುವರೆಗೆ ಹೊಸದೊಂದು ಪಕ್ಷವನ್ನಾಗಲೀ, ಹೊಸದೊಂದು ಸೈದ್ಧಾಂತಿಕ
ಜೊತೆಗಾರಿಕೆಯನ್ನಾಗಲೀ ಹುಟ್ಟು ಹಾಕದ ಪ್ರಶಾಂತ್ ಆಯಾ ರಾಜ್ಯಗಳ ಬಲಾಢ್ಯ ಪಕ್ಷದ ಜೊತೆಗೇ ಕೆಲಸ ಮಾಡಿದ್ದಾರೆ. ಆದರೆ ಅವರ ಮಹತ್ವ ಹೆಚ್ಚಾಗಿದ್ದು, ಅತ್ಯಂತ ಬಲಶಾಲಿ ಚುನಾವಣಾ ಯಂತ್ರಾಂಗ, ಅಧಿಕಾರ ಹಾಗೂ ಹಣಬಲ ಹೊಂದಿರುವ ನರೇಂದ್ರ ಮೋದಿ ಮತ್ತು ಅಮಿತ್‌ಶಾರ ನೇತೃತ್ವದ ಬಿಜೆಪಿ ವಿರುದ್ಧ ಗೆಲುವು ಸಾಧಿಸಲು ಪಕ್ಷಗಳಿಗೆ ನೆರವು ನೀಡಿದ್ದರಿಂದ. ಅದಾದರೂ ಬೇಕೇಬೇಕೆಂದು ಉಳಿದ ಪಕ್ಷಗಳು ಭಾವಿಸಲು ಕಾರಣಗಳಿವೆ. ಬಿಜೆಪಿಗೆ 2014ರ ನಂತರ 2019ರಲ್ಲಿ ಇನ್ನೂ ದೊಡ್ಡ ಗೆಲುವು ಸಿಕ್ಕಿತು. ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಾದರೂ ಒಂದು ಮಟ್ಟಿಗೆ ಹೋರಾಡುವ ಬಿಜೆಪಿಯೇತರ ಪಕ್ಷಗಳು ಲೋಕಸಭೆಯಲ್ಲಿ ಭೀಕರವಾಗಿ ಸೋತಿವೆ. ಹಾಗಾಗಿ ಈಗ ಅಖಿಲ ಭಾರತ ಮಟ್ಟದಲ್ಲಿ ಪ್ರಶಾಂತ್ ಕಿಶೋರ್ ಜೊತೆಗೂಡಿದರೆ ’ಅಜೇಯ’ರಾಗಿರುವ ಮೋದಿ-ಶಾರನ್ನು ಸೋಲಿಸಬಹುದೆಂದು ಭಾವಿಸಿವೆ. ಹೀಗಾಗಿ ಪ್ರಶಾಂತ್ ಕಿಶೋರ್ ಮತ್ತು ಶರದ್‌ಪವಾರ್ ಭೇಟಿ ಹಾಗೂ ನಂತರದ ಸಭೆಗೆ ಮಹತ್ವ ಒದಗಿ ಬಂದಿದೆ.

ಇನ್ನು ಶರದ್‌ಪವಾರ್‌ರೇ ಈ ಸಭೆಯ ಕೇಂದ್ರಬಿಂದುವಾಗಿರುವುದಕ್ಕೂ ವಿಶೇಷ ಕಾರಣವಿದೆ. ಕಾಂಗ್ರೆಸ್‌ನಲ್ಲಿ ರಾಜೀವ್‌ಗಾಂಧಿ ಹತ್ಯೆಯ ನಂತರ ಪಿ.ವಿ.ನರಸಿಂಹರಾವ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪ್ರಧಾನಿಯಾದಾಗ ಅವರಿಗೆ ಸೆಡ್ಡು ಹೊಡೆದು ನಿಂತವರು ಮೂವರು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಅರ್ಜುನ್ ಸಿಂಗ್, ರಾಜಸ್ತಾನದ ನಾಯಕ ರಾಜೇಶ್ ಪೈಲಟ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಪ್ರಭಾವಿ ನಾಯಕರಾಗಿದ್ದ ಶರದ್‌ಪವಾರ್. ಆ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರೀಯ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆದಾಗ ಈ ಮೂವರೂ ತಮ್ಮ ಸ್ವಂತ ಶಕ್ತಿಯ ಮೇಲೆ ಆಯ್ಕೆಯಾಗಿದ್ದರು. ಒಬ್ಬ ಮಹಿಳೆಯಾಗಲೀ, ದಲಿತ ಸಮುದಾಯಕ್ಕೆ ಸೇರಿದ ಒಬ್ಬರಾಗಲೀ ಆಯ್ಕೆಯಾಗದ ಕಾರಣ ಹೇಳಿ ಪಿವಿಎನ್ ಎಲ್ಲರಿಂದ ರಾಜೀನಾಮೆ ಪಡೆದುಬಿಟ್ಟರು. ನಂತರ ಪವಾರ್ ಹಾಗೂ ಸಿಂಗ್‌ರನ್ನು ಸಿಡಬ್ಲ್ಯುಸಿಗೆ ತೆಗೆದುಕೊಂಡರಾದರೂ, ಪವಾರ್ ಭಿನ್ನಮತೀಯರಾಗಿಯೇ ಉಳಿದರು. ಪಿವಿಎನ್ ನಂತರ ಒಂದು ಸಣ್ಣ ಅವಧಿಗೆ ಸೀತಾರಾಂ ಕೇಸರಿ ಅಧ್ಯಕ್ಷರಾಗಿದ್ದಾಗ ಸಹಿಸಿಕೊಂಡಿದ್ದ ಪವಾರ್, ಸೋನಿಯಾಗಾಂಧಿಯವರನ್ನು ಅಧ್ಯಕ್ಷಗಾದಿಗೆ ತಂದಾಗ ಸಿಡಿದೆದ್ದರು. ಸೋನಿಯಾರ ವಿದೇಶೀ ಮೂಲವನ್ನು ಎತ್ತಿ, ಹೀಗಳೆದು ’ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ’ವನ್ನು ಮಾಜಿ ಲೋಕಸಭಾ ಸ್ಪೀಕರ್ ಪಿ.ಎ.ಸಂಗ್ಮಾರೊಡಗೂಡಿ ಸ್ಥಾಪಿಸಿದ್ದರು.
ಈ ಪ್ರಮಾಣದಲ್ಲಿ ಸೋನಿಯಾರ ವಿರುದ್ಧ ಕಿಡಿಕಾರಿದ್ದ ಪವಾರ್ ನಂತರದ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಯಾರಿಗೂ ಬಹುಮತ ಬಾರದಿದ್ದಾಗ ಕಾಂಗ್ರೆಸ್ ಜೊತೆಗೇ ಅಧಿಕಾರ ಹಂಚಿಕೊಂಡರು. ಕಾಂಗ್ರೆಸ್ಸಿಗೇ ಸಿಎಂ ಪಟ್ಟ ಬಿಟ್ಟುಕೊಟ್ಟು ಕೇಂದ್ರದಲ್ಲಿ ಸತತವಾಗಿ ಕೃಷಿ ಸಚಿವರಾದರು. ಮಹಾರಾಷ್ಟ್ರದ ಸಕ್ಕರೆ ಲಾಬಿಯ ದೊಡ್ಡ ಫಲಾನುಭವಿ ಪವಾರ್ ಕೃಷಿ ಸಚಿವರಾಗಿದ್ದಾಗಲೇ ದೇಶದಲ್ಲಿ ರೈತರ ಆತ್ಮಹತ್ಯೆಗಳು ಲಕ್ಷಗಳ ಗಡಿ ದಾಟಿದವು. ಬಹುದೊಡ್ಡ ಶ್ರೀಮಂತ ರಾಜ್ಯದ, ಶ್ರೀಮಂತ ಉದ್ಯಮಿಗಳ, ಕ್ರಿಕೆಟ್ ಪಟುಗಳ ಸಖ್ಯ ಹೊಂದಿರುವ ಬಹುದೊಡ್ಡ ಶ್ರೀಮಂತ ರಾಜಕಾರಣಿಯೂ ಆದ ಪವಾರ್ ಬಿಜೆಪಿಯ ಜೊತೆಗೆ ಸೇರಲಿಲ್ಲವಾದರೂ, ಹಿಂದುತ್ವ ರಾಜಕಾರಣವನ್ನೇ ಪ್ರತಿಪಾದಿಸುವ ಎದುರಾಳಿ ಶಿವಸೇನೆ ಹಾಗೂ ಬಿಜೆಪಿಯ ಜೊತೆಗೆ ಅಂತಹ ದೊಡ್ಡ ಶತ್ರುತ್ವವನ್ನೂ ಕಟ್ಟಿಕೊಂಡಿಲ್ಲ.
ಈಗ 80 ವರ್ಷ ವಯಸ್ಸಾಗಿರುವ ಪವಾರ್ ನಡೆಯಲು ಹಾಗೂ ಮೆಟ್ಟಿಲು ಹತ್ತಲು ಆಗಾಗ ಬೇರೆಯವರ ನೆರವು ಪಡೆದುಕೊಳ್ಳುತ್ತಾರೆ. ಒಮ್ಮೆ ಪಾರ್ಶ್ವವಾಯುವಿಗೂ ಗುರಿಯಾಗಿರುವ ಅವರು ಈಗ ಪ್ರಧಾನಿ ಹುದ್ದೆಯ ಕನಸು ಮುಗಿದ ಅಧ್ಯಾಯ ಎಂದೂ ಘೋಷಿಸಿಯಾಗಿದೆ. ದೇಶಾದ್ಯಂತ ಬಿಜೆಪಿಯೇತರ ಪಕ್ಷಗಳ ನೇತಾರರ ಜೊತೆಗೆ ಸಖ್ಯ ಹೊಂದಿರುವ ಅವರು ಪ್ರಧಾನಿಯಾಗದ, ಆದರೆ ಕಿಂಗ್‌ಮೇಕರ್ ಆಗಬಲ್ಲ ವ್ಯಕ್ತಿಯಾಗಿ ಪ್ರಶಾಂತ್ ಕಿಶೋರ್‌ಗೆ
ತೋರಿರಬಹುದು. ಅಸಾಧ್ಯ ಮೈತ್ರಿಯಾದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿಯ, ಮಹಾ ವಿಕಾಸ್ ಅಗಾಧಿಯನ್ನು ಮಹಾರಾಷ್ಟ್ರದಲ್ಲಿ ನಿರ್ವಹಿಸುತ್ತಿರುವ ಅವರು, ಅಸಾಧ್ಯವೆಂಬಂತೆ ತೋರುತ್ತಿರುವ ಬಿಜೆಪಿಯೇತರ ಮೈತ್ರಿಕೂಟದ ಮುಖ್ಯಸ್ಥರಾಗುವ ಸಾಧ್ಯತೆ ಹೊಂದಿದ್ದಾರೆ.

ಆದರೆ ಅಂತಹದೊಂದು ಮೈತ್ರಿಗೆ ದೊಡ್ಡ ತೊಡಕು ಕಾಂಗ್ರೆಸ್ ಆಗಿದೆ. ಬಿಜೆಪಿ ವಿರೋಧಿ ಪಕ್ಷಗಳಲ್ಲಿ ಹಲವು ಕಾಂಗ್ರೆಸ್‌ಗೂ ವಿರೋಧಿಯೇ. ಜೊತೆಗೆ ದಿನೇ ದಿನೇ ಶಕ್ತಿ ಕಳೆದುಕೊಳ್ಳುತ್ತಿರುವ ಮತ್ತು ನಾಯಕತ್ವದ ಬಿಕ್ಕಟ್ಟನ್ನೇ ಬಗೆಹರಿಸಿಕೊಳ್ಳಲಾಗದ ಕಾಂಗ್ರೆಸ್ ದೊಡ್ಡಣ್ಣನ ಧಿಮಾಕು ಮಾತ್ರ ತೋರುತ್ತದೆ ಎಂಬುದು ಉಳಿದವರ ಸಿಟ್ಟು. ಹೀಗಾಗಿ ಮೊದಲಿಗೆ ಕಾಂಗ್ರೆಸ್ಸೇತರ ಬಿಜೆಪಿ ವಿರೋಧಿ ಮೈತ್ರಿಯನ್ನು ಸಾಧಿಸುವುದು ಪ್ರಥಮ ಹೆಜ್ಜೆಯೆಂದು ಪ್ರಶಾಂತ್ ಹಾಗೂ ಪವಾರ್ ಇಬ್ಬರೂ ಭಾವಿಸಿದ್ದರೆ ಅದು ಸಹಜವಾಗಿದೆ.
ಮುಂದೆ ಇವೆಲ್ಲಾ ಏನು ರೂಪ ಪಡೆದುಕೊಳ್ಳಬಹುದೆಂದು ಯಾರಿಗೂ ಸ್ಪಷ್ಟವಿರದಿದ್ದರೂ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲು ಶುರು ಮಾಡಲಾಗುತ್ತಿದೆ.ಇದಕ್ಕೆ ’ವೇದಿಕೆ’ಯನ್ನೊದಗಿಸುತ್ತಿರುವುದು ಇಬ್ಬರು ಮಾಜಿ ಬಿಜೆಪಿ ನಾಯಕರು (ಯಶವಂತ್ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ) 2018ರಲ್ಲಿ ಸ್ಥಾಪಿಸಿದ್ದ ’ರಾಷ್ಟ್ರೀಯ ವೇದಿಕೆ’. ಆ ಹೆಸರಿನಲ್ಲಿ ಕೆಲವು ರಾಜಕೀಯ ನಾಯಕರು ಮತ್ತು ನಾಗರಿಕ ಸಮಾಜದ ಕೆಲವು ಗಣ್ಯರು ಸೇರಿ ಮಾಡಿಕೊಳ್ಳುತ್ತಿರುವ ಈ ಸಭೆಯೇ ಇನ್ನೇನನ್ನಾದರೂ ಕಟ್ಟುತ್ತದೋ ಇಲ್ಲವೋ ಗೊತ್ತಿಲ್ಲ; ಆದರೆ 2024ರ ಲೋಕಸಭಾ ಚುನಾವಣೆಗೆ ನಡೆಯುತ್ತಿರುವ ತಯಾರಿಗಳಲ್ಲಿ ಇದೊಂದು ಎಂಬುದರಲ್ಲಿ ಸಂಶಯವಿಲ್ಲ. ಇದರ ಫಲಾಫಲಗಳನ್ನು ಈಗಲೇ ಊಹಿಸುವುದು ಕಷ್ಟ. ಅದರಲ್ಲೂ ವಿರೋಧ ಪಕ್ಷಗಳ ಮೇಲೆ ಮುಗಿಬೀಳಲು ಎಲ್ಲಾ ರೀತಿಯ ಅನೈತಿಕ ಹಾಗೂ ಅಸಂವಿಧಾನಿಕ ದಾರಿಗಳನ್ನು ತುಳಿಯುವಲ್ಲಿ ನಿಷ್ಣಾತರಾಗಿರುವ ಮೋದಿ-ಶಾ ಜೋಡಿಯೂ ಸುಮ್ಮನಿರದ ಸಂದರ್ಭದಲ್ಲಿ ಏನಾಗಬಹುದು ಎಂಬುದನ್ನು ಮುಂದಿನ ಮೂರು ವರ್ಷಗಳು ತೋರಲಿವೆ.
ಪ್ರಶಾಂತ್ ಕಿಶೋರ್ – ಹಳೆಯ ರಾಜಕಾರಣಕ್ಕೆ ಮ್ಯಾನೇಜ್‌ಮೆಂಟ್‌ನ ಬೆಸುಗೆ
2012ರಲ್ಲಿ ಗುಜರಾತ್ ರಾಜ್ಯ ಸರ್ಕಾರದ ಜೊತೆಗೆ ಕೆಲಸ ಮಾಡಲು ಶುರು ಮಾಡಿ ನರೇಂದ್ರ ಮೋದಿಗೆ ಹತ್ತಿರವಾದ ಪ್ರಶಾಂತ್ ಕಿಶೋರ್, ತನ್ನ ಮ್ಯಾನೇಜ್‌ಮೆಂಟ್ ಕೌಶಲ ಮತ್ತು ಜನರ ನಾಡಿಮಿಡಿತದ ಗ್ರಹಿಕೆ ಹಾಗೂ ಅದನ್ನು ಬದಲಿಸಲು ಬೇಕಾದ ಪ್ರೊಪಗಾಂಡಾ ನೈಪುಣ್ಯದ ಕಾರಣಕ್ಕೆ ಚುನಾವಣೆಯಲ್ಲೂ ನಿಯೋಜಿಸಲ್ಪಟ್ಟರು. ಅಲ್ಲಿಂದ ಅವರು ಮುಂದೆ ಸಾಗಿದ್ದು ಮತ್ತು ಐಪ್ಯಾಕ್ ಸ್ಥಾಪಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.
ಆದರೆ, ಇವರು ಪ್ರಜಾಪ್ರಭುತ್ವದ ಯಾವ ಮೌಲ್ಯಗಳನ್ನು (ತನ್ನ ಟ್ವಿಟ್ಟರ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿರುವ ’ಜನರ ವಿವೇಕದ ಕುರಿತ ನಂಬುಗೆ’ಯನ್ನು ಹೊರತುಪಡಿಸಿ) ಪ್ರತಿಪಾದಿಸುತ್ತಾರೆ ಎಂಬುದನ್ನು ನೋಡಿದರೆ ಅಂತಹ ಘನತೆಯುಳ್ಳ ಸಂಗತಿಗಳೇನೂ ಕಾಣುವುದಿಲ್ಲ. ದೇಶದ ಅತ್ಯಂತ ಭ್ರಷ್ಟ, ಸರ್ವಾಧಿಕಾರಿ ಹಾಗೂ ಕ್ರಿಮಿನಲ್ ನಾಯಕರುಗಳ ಜೊತೆಗೆ ಅವರು ಕೆಲಸ ಮಾಡಿದ್ದಾರೆ. ಅವರುಗಳನ್ನು ಗೆಲ್ಲಿಸಲು ತಮ್ಮ ನೈಪುಣ್ಯವನ್ನು ಧಾರೆಯೆರೆದಿದ್ದಾರೆ. ಹಾಲಿ ಚಾಲ್ತಿಯಲ್ಲಿರುವ ದುಷ್ಟ ರಾಜಕಾರಣದ ಹಲವು ಸಂಗತಿಗಳನ್ನು ಬದಲಿಸುವ ಯಾವ ಪ್ರಯತ್ನವೂ ಅದರಲ್ಲಿ ಕಂಡುಬಂದಿಲ್ಲ.
ಆದರೆ ಹೊಸ ತಂತ್ರಜ್ಞಾನ, ಮ್ಯಾನೇಜ್‌ಮೆಂಟ್ ಕೌಶಲ್ಯ, ಜನರ ಮನೋಭಾವವನ್ನು ಮ್ಯಾನಿಪ್ಯುಲೇಟ್ ಮಾಡುವ ಮೆಸೇಜಿಂಗ್ ಬಳಸಿ ಈಗಾಗಲೇ ಬಲಾಢ್ಯ ನೆಟ್‌ವರ್ಕ್ ಹಾಗೂ ಯಂತ್ರಾಂಗವನ್ನು ಹೊಂದಿರುವವರೊಂದಿಗೆ ಕೆಲಸ ಮಾಡಿರುವುದು ಅವರ ಇದುವರೆಗಿನ ಟ್ರ್ಯಾಕ್ ರೆಕಾರ್ಡ್ ಆಗಿದೆ. ದೇಶದ ಪ್ರಜಾತಂತ್ರವನ್ನು, ಆರ್ಥಿಕತೆಯನ್ನು ಇನ್ನಿಲ್ಲದಷ್ಟು ಹಾಳುಗೆಡವಿರುವ ಮೋದಿಯನ್ನು ಸೋಲಿಸುವ ಯಾರೇ ಆದರೂ ಸರಿ ಎಂದು ಭಾವಿಸಿರುವವರಿಗೆ ಈ ಹೊತ್ತು ಪ್ರಶಾಂತ್ ಕಿಶೋರ್ ಆಶಾಕಿರಣವಾಗಿಯೂ ತೋರುತ್ತಿರಬಹುದು. ಆದರೆ ಮೋದಿ ಸಾಧಿಸಲಾಗದ್ದನ್ನು ಸಾಧಿಸುವ ಶಕ್ತಿಯಾಗಿ ಈತ ದೇಶದ ದೊಡ್ಡ ಕಾರ್ಪೊರೆಟ್‌ಗಳಿಗೂ ಕಾಣುವ ಸಾಧ್ಯತೆಯಿದೆ. ಯಾವ ಸಾಧ್ಯತೆ ಎಷ್ಟು ಎಂಬುದನ್ನು ಹೇಗೂ ಮುಂದಿನ ವರ್ಷಗಳು ಬಿಚ್ಚಿಡಲಿವೆ.


