ಅಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರು ಹಿಂದುತ್ವವಾದಿ ಯತಿ ನರಸಿಂಗಾನಂದ್ ದ್ವೇಷದ ಭಾಷಣದ ಕುರಿತು ಎಫ್‌ಐಆರ್ ದಾಖಲಿಸುವ ಬದಲು ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಯಾಕೆ ಟ್ವೀಟ್ ಮಾಡಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಕೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ. ಜುಬೇರ್ ಅವರು ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತೋರಿಸುತ್ತವೆ ಎಂದು ನ್ಯಾಯಾಲಯ ಅವರನ್ನು ಮೌಖಿಕವಾಗಿ ಟೀಕಿಸಿದೆ. ನರಸಿಂಗಾನಂದ್ ವಿರುದ್ಧ
ನರಸಿಂಗಾನಂದ್ ವಿರುದ್ಧದ ಪೋಸ್ಟ್‌ಗಾಗಿ ದಾಖಲಾಗಿರುವ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ಜುಬೇರ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ರಾಮ್ ಮನೋಹರ್ ನಾರಾಯಣ ಮಿಶ್ರಾ ಅವರ ಪೀಠವು ನಡೆಸುತ್ತಿದೆ. “ಈ ವ್ಯಕ್ತಿ [ನರಸಿಂಗಾನಂದ್] ತಮಾಷೆಯಾಗಿ ವರ್ತಿಸುತ್ತಿದ್ದರೆ, ಪೊಲೀಸರ ಬಳಿ ಹೋಗುವ ಬದಲು, ನೀವು ಕೂಡಾ ಅವರಿಗಿಂತ ಹೆಚ್ಚು ತಮಾಷೆಯಾಗಿ ವರ್ತಿಸುತ್ತೀರಾ?” ಎಂದು ನ್ಯಾಯಾಲಯ ಜುಬೇರ್ ಅವರನ್ನು ಮೌಖಿಕವಾಗಿ ಕೇಳಿದೆ. ಅವರ ಮಾತು, ಮುಖ ನಿಮಗೆ ಇಷ್ಟವಾಗದಿದ್ದರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತಮ್ಮ ಕಕ್ಷಿದಾರರು ಭಾಷಣದ ಬಗ್ಗೆ ಪೋಸ್ಟ್ ಮಾಡುವ ಮೂಲಕ ತಮ್ಮ ವಾಕ್ ಸ್ವಾತಂತ್ರ್ಯವನ್ನು ಚಲಾಯಿಸುತ್ತಿದ್ದಾರೆ ಎಂದು ಜುಬೇರ್ ಅವರ ವಕೀಲರು ವಾದಿಸಿದ್ದಾರೆ. ಈ ವಿಷಯದ ಬಗ್ಗೆ ಹಲವಾರು ಇತರ ಸುದ್ದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿವೆ ಎಂದು ಕೂಡಾ ಅವರು ಹೇಳಿದ್ದಾರೆ.
ನರಸಿಂಗಾನಂದ್ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಜುಬೇರ್ ವಿರುದ್ಧ ಅಕ್ಟೋಬರ್ 7 ರಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ದಾಸ್ನಾ ದೇವಿ ದೇವಸ್ಥಾನದ ಅರ್ಚಕರಾಗಿರುವ ನರಸಿಂಗಾನಂದ್ ಅವರು ಸೆಪ್ಟೆಂಬರ್ 29 ರಂದು ಧರ್ಮೋಪದೇಶದ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನು ವಿರೋಧಿಸಿ ದೇಶದ ಹಲವಾರು ನಗರಗಳಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು.
ಅಕ್ಟೋಬರ್ 3 ರಂದು, ಜುಬೈರ್ ಅವರು ಎಕ್ಸ್‌ನಲ್ಲಿ ಅವರ ಭಾಷಣದ ವೀಡಿಯೊವನ್ನು ಹಂಚಿಕೊಂಡಿದ್ದರು ಮತ್ತು ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ನರಸಿಂಗಾನಂದ್ ಅವರು ಈ ಹಿಂದೆ ಕೂಡಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷಪೂರಿತ ಭಾಷಣ ಮಾಡಿದ್ದರು. ಜೊತೆಗೆ ಅವರ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ಕೂಡ ದಾಖಲಿಸಲಾಗಿದೆ.
ಜುಬೇರ್ ವಿರುದ್ಧ ಎಫ್‌ಐಆರ್ ದಾಖಲಾದ ನಂತರ, ಅವರು ಬಂಧನದಿಂದ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ, ನ್ಯಾಯಾಲಯವು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ರ ಅಡಿಯಲ್ಲಿ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಅಪರಾಧಕ್ಕಾಗಿ ಜುಬೇರ್ ವಿರುದ್ಧದ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.
ಅಕ್ಟೋಬರ್‌ನಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಈ ಅಪರಾಧಗಳನ್ನು ಸೇರಿಸಲಾಗಿದೆ ಎಂದು ನವೆಂಬರ್ 27 ರಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಪತ್ರಿಕಾ ಸಂಸ್ಥೆಗಳು ಎಫ್‌ಐಆರ್‌ನಲ್ಲಿ ಸೆಕ್ಷನ್ 152 ಅನ್ನು ಸೇರಿಸಿರುವುದನ್ನು ಟೀಕಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಗ್ರಹಿಸುವ ನಿಬಂಧನೆಯ ದುರುಪಯೋಗ ಎಂದು ಕರೆದಿದೆ. ಪ್ರಕರಣವನ್ನು ನ್ಯಾಯಾಲಯವು ಡಿಸೆಂಬರ್ 20 ರಂದು ಹೆಚ್ಚಿನ ವಿಚಾರಣೆಗೆ ಪಟ್ಟಿ ಮಾಡಿದೆ.
ಇದನ್ನೂ ಓದಿ: ಕಿಚ್ಚು ಹಚ್ಚಿದ ಅಮಿತ್ ಶಾ ಹೇಳಿಕೆ | ಸಂಸತ್ ಬಳಿ ಭಾರೀ ಪ್ರತಿಭಟನೆ ; ಇಂಡಿಯಾ-ಬಿಜೆಪಿ ಮುಖಾಮುಖಿ


