Homeಮುಖಪುಟವಿರೋಧಾಭಾಸಗಳ ಜಗತ್ತಿನಲ್ಲಿ ಧಿಕ್ಕರಿಸಬೇಕಿದೆ ಶ್ರೇಷ್ಠತೆಯ ವ್ಯಸನ : ನಟರಾಜು ವಿ.

ವಿರೋಧಾಭಾಸಗಳ ಜಗತ್ತಿನಲ್ಲಿ ಧಿಕ್ಕರಿಸಬೇಕಿದೆ ಶ್ರೇಷ್ಠತೆಯ ವ್ಯಸನ : ನಟರಾಜು ವಿ.

- Advertisement -
- Advertisement -

ಕನ್ನಡದ ಪ್ರತಿಭಾನ್ವಿತ ಪತ್ರಕರ್ತರು -ಅಂಕಣಕಾರರಲ್ಲೊಬ್ಬರಾದ ನಟರಾಜು.ವಿ ಅವರು ತಣ್ಣನೆಯ ಶೈಲಿಯಲ್ಲೇ ಕಟುಸತ್ಯಗಳನ್ನು ಬಿಡಿಸಿಡುವ ಬರಹಗಾರರು. ಸಾಮಾಜಿಕ ರಾಜಕೀಯ ವಿಶ್ಲೇಷಣೆ, ಸಮಕಾಲೀನ ವಿದ್ಯಮಾನಗಳ ಕುರಿತ ಅವರ ಅಂಕಣ ‘ಪಠ್ಯ – ಪ್ರಮಾಣ’ ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಟೈಮ್ಸ್ ಆಫ್ ಇಂಡಿಯಾ, ವಿಜಯನೆಕ್ಸ್ಟ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡಿದ ಅನುಭವವಿರುವ ಇವರು ‘ದಿ ಸ್ಟೇಟ್’ ನಲ್ಲಿ ಸೀನಿಯರ್ ಅಸಿಸ್ಟೆಂಟ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಟೆಕ್ ಕನ್ನಡ ವೆಬ್‍ಜಾಲದ ‘ತಂತ್ರ ತಾಂಡವ’ ಅಂಕಣದ ಜೊತೆಗೆ, ನಟರಾಜುರವರು ನ್ಯಾಯಪಥ ಪತ್ರಿಕೆಯಲ್ಲಿ ಪ್ರಮುಖ ವಿಶ್ಲೇಷಕ ಬರಹಗಳನ್ನು ಬರೆಯುತ್ತಿದ್ದಾರೆ.

ಈ ವಿಶೇಷ ಸಂಚಿಕೆಯನ್ನು ಕೈಯಲ್ಲಿ ಹಿಡಿದು ಕಣ್ಣಾಡಿಸುತ್ತಿರುವ ಈ ಹೊತ್ತಿನಲ್ಲಿ ಬಹುಶಃ ನಿಮಗೆ ಮೇಲುನೋಟಕ್ಕೇ ಸಮಕಾಲೀನ ಭಾರತೀಯ ಸಮಾಜ ಎದುರಿಸುತ್ತಿರುವ ಹತ್ತು ಹಲವು ತಲ್ಲಣಗಳು, ಪ್ರಜಾಪ್ರಭುತ್ವ, ಸಂವಿಧಾನಗಳಿಗೆ ಎದುರಾಗಿರುವ ಗಂಭೀರ ಸವಾಲುಗಳ ಕುರಿತಾದ ತೀವ್ರ ಕಾಳಜಿ ಈ ಬರಹಗಳಲ್ಲಿ ಕಾಣಬಹುದು. ಇದಾಗಲೇ ಜಾತಿವ್ಯವಸ್ಥೆಯಲ್ಲಿ ಸಿಲುಕಿ ಶತಶತಮಾನಗಳಿಂದ ಹೈರಾಣಾಗಿಹೋಗಿರುವ ಭಾರತೀಯ ಸಮಾಜದ ಸೂಕ್ಷ್ಮ ನೇಯ್ಗೆಗಳು ಇಂದು ಮೂಲಭೂತವಾದದ ತೀವ್ರ ಹೆಚ್ಚಳದೊಂದಿಗೆ ಮತ್ತೂ ಗಂಭೀರವಾಗಿ ಘಾಸಿಗೊಂಡಿವೆ. ನಮ್ಮ ಸುತ್ತಣ ಸಮಾಜದ ಆಲೋಚನೆಗಳನ್ನು ಮೂಲಭೂತವಾದವು ವ್ಯಾಪಿಸಿಕೊಳ್ಳುತ್ತಿರುವ ಪರಿ, ಪಡೆಯುತ್ತಿರುವ ರೂಪ, ಭಾಷೆ ಎಲ್ಲ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಬಹುತೇಕ ಲೇಖನಗಳು ವಿವಿಧ ಆಯಾಮಗಳಿಂದ ಈ ಸವಾಲುಗಳನ್ನು ಸಂಕೀರ್ಣವಾಗಿಯೂ, ಚಿಕಿತ್ಸಕವಾಗಿಯೂ ಎದುರುಗೊಂಡಿವೆ. ಪ್ರಸಕ್ತ ಲೇಖನ ಇದರಾಚೆಗಿನ ಕೆಲ ಸಂದಿಗ್ಧಗಳು, ಸವಾಲುಗಳ ಬಗ್ಗೆ ಗಮನ ಹರಿಸಲಿದೆ. ಆದರ್ಶ, ವಾಸ್ತವ, ಬೂಟಾಟಿಕೆ, ನೈತಿಕ ವಿರೋಧಾಭಾಸಗಳ ಗೋಜಲುಗಳ ಸುತ್ತಲಿನ ಚರ್ಚೆ ಈ ಲೇಖನದ ತಿರುಳು.

ಇಂದು ಸಾಮಾಜಿಕ ಕಾರ್ಯಕರ್ತರು, ಸಮಾಜಮುಖಿ ಚಿಂತಕರು, ಪ್ರಜ್ಞಾವಂತರು, ಪತ್ರಕರ್ತರೆಲ್ಲರನ್ನೂ ಒಂದಿಲ್ಲೊಂದು ಬಗೆಯಲ್ಲಿ ನೈತಿಕ ತಳಮಳಗಳು ಬಾಧಿಸುತ್ತಿವೆ. ಮೌಲ್ಯಗಳ ಹೆಸರಿನಲ್ಲಿ ತಾವು ಕಟ್ಟಿಕೊಂಡಿದ್ದ ಕೋಟೆ ಎಲ್ಲ ದಿಕ್ಕಿನಲ್ಲಿಯೂ ಕುಸಿದು ಬೀಳುತ್ತಿರುವುದು ಕಣ್ಣುಮುಚ್ಚಿದರೂ ಗೋಚರಿಸುತ್ತಿದೆ. ಈ ಸತ್ಯಕ್ಕೆ ಮುಖಾಮುಖಿಯಾಗುವುದೋ ಅಥವಾ ಕೋಟೆ ಕುಸಿದರೇನು ನಮ್ಮ ಸುತ್ತ ನಾವೇ ಒಂದು ಗೂಡು ಕಟ್ಟಿಕೊಂಡು ಚಿಟ್ಟೆಯಾಗಿ ಪರಿವರ್ತನೆ ಹೊಂದೋಣ, ಯಾರ ಜಪ್ತಿಗೂ ಸಿಗದೆ ಹಾರಿಬಿಡೋಣ ಎಂದು ರಮ್ಯವಾಗಿ ಉತ್ತರಿಸುವುದೋ ತಿಳಿಯುತ್ತಿಲ್ಲ. ನಾವು ನಿಂತಿರುವ ನೆಲದ ಮೇಲೆಯೇ ಸಂಶಯವೇಳುತ್ತಿರುವ ಈ ಹೊತ್ತಿನಲ್ಲಿ ತಲೆಯನ್ನು ನೆಲದಲ್ಲಿ ಹುದುಗಿಸಿಕೊಂಡು ಎಲ್ಲದಕ್ಕೂ ಕಣ್ಣುಮುಚ್ಚಿಕೊಂಡು ಬಿಡುವುದು ಸಂವೇದನಾಶೀಲರ ಆಯ್ಕೆಯೂ ಅಲ್ಲ.

ಕಪ್ಪುಬಿಳುಪು ಇವೆರಡನ್ನು ಮಾತ್ರವೇ ಗುರುತಿಸಲು, ಬೇರ್ಪಡಿಸಲಷ್ಟೇ ಕಲಿತಿರುವವರಿಗೆ ಜಗವೆಲ್ಲಾ ಕಂದು ಬಣ್ಣದಲ್ಲೇ ಇರುವಾಗ ಅದನ್ನು ಹೇಗೆ ವರ್ಗೀಕರಿಸುವುದು ತಿಳಿಯದಾಗಿದೆ. ಮಾಧ್ಯಮವೂ ಸೇರಿದಂತೆ ಇಂದು ಎಲ್ಲ ಉದ್ಯಮಗಳೂ ಬಂಡವಾಳಶಾಹಿಗಳ ಹಿಡಿತದಲ್ಲಿವೆ. ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರ, ಅಧಿಕಾರಸ್ಥರ ಸಹಾಯ, ಸಹಕಾರಗಳನ್ನು ಅವಲಂಬಿಸಿವೆ. ಈ ಅವಲಂಬನೆ ಕೆಲವೆಡೆ ಅಲ್ಪವೇ ಇರಬಹುದು ಮತ್ತೆ ಹಲವೆಡೆ ಅವಕಾಶವಾದಿತನ, ವಶೀಲಿಬಾಜಿಗಾಗಿಯೇ ಈ ಉದ್ಯಮಗಳು ಆರಂಭವಾಗಿಯೂ ಇರಬಹುದು.

ಮೌಲ್ಯಗಳೆನ್ನುವುದು ಇಂದು ತುಲನಾತ್ಮಕವಾಗಿ ನೋಡಬಹುದಾದ ವಿಷಯವಾಗಿದೆಯೇ ಹೊರತು ಪಾವಿತ್ರ್ಯದ ವಿಷಯವಾಗಿ ಉಳಿದಿಲ್ಲ. ಅವರಿಗಿಂತ ಇವರು ಉತ್ತಮ, ಆ ಸಂಸ್ಥೆಗಿಂತ ಈ ಸಂಸ್ಥೆ ಉತ್ತಮ ಎನ್ನಬಹುದೇ ಹೊರತು ಪರಮಪವಿತ್ರವೂ, ಅಗ್ನಿದಿವ್ಯವೂ ಆದ ಸಾಂಸ್ಥಿಕ ರಚನೆಗಳು ಸಾರ್ವಜನಿಕವಾಗಿ ಕಾಣೆಯಾಗಿವೆ. ಇದಕ್ಕೆ ಸರ್ಕಾರಿ, ಖಾಸಗಿ ಎನ್ನುವ ಭೇದಭಾವವಿಲ್ಲ. ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ತಾನು ದುಡಿದು ತಿಂದಿರುವುದಾಗಿ ಯಾರೇ ಹೇಳಿದರೂ ಆ ದುಡಿಮೆಯನ್ನು ಬಳಸಿಕೊಂಡ ಸಂಸ್ಥೆಗಳು ಸಂಬಳಕ್ಕಾಗಿ ತೆತ್ತ ಹಣದ ಹರಿವು ಎಲ್ಲಿಯದು, ಆ ಸಂಸ್ಥೆಗಳ ವ್ಯಾವಹಾರಿಕ ಚೌಕಟ್ಟಿನ ಸ್ವರೂಪವೇನು ಎನ್ನುವುದನ್ನು ಅರಿತರೆ ಭ್ರಷ್ಟತೆ ಎನ್ನುವುದು ನಮ್ಮೆಲ್ಲರನ್ನೂ ಒಂದಿಲ್ಲೊಂದು ಹಂತದಲ್ಲಿ ತಾಕಿಯೂ ಅರಿವಿಗೇ ಬಾರದೆ ಉಳಿದಿರುವುದು ಗಮನಕ್ಕೆ ಬರುತ್ತದೆ.

ಮಾರುಕಟ್ಟೆ ಎನ್ನುವುದು ಸರ್ವವ್ಯಾಪಿಯಾಗಿರುವ ಈ ಯುಗದಲ್ಲಿ ಅರ್ಥವ್ಯವಸ್ಥೆಯ ಸ್ವರೂಪ ಸಂಕೀರ್ಣವೂ, ಪರಸ್ಪರ ವ್ಯಾಪಕವಾಗಿ ಅವಲಂಬಿತವೂ ಆಗಿರುವಂಥದ್ದು. ಮಾರುಕಟ್ಟೆ ಆಧರಿತ ಜೀವನ ವಿಧಾನದ ಈ ದಿನಗಳಲ್ಲಿ ಹಣವೆನ್ನುವುದು ಎಲ್ಲರ ಬದುಕಿನ ಕೇಂದ್ರದಲ್ಲಿದೆ. ಇದಕ್ಕೆ ನಗರ ಹಾಗೂ ಗ್ರಾಮೀಣ ಎನ್ನುವ ವ್ಯತ್ಯಾಸಗಳಿಲ್ಲ, ಪ್ರಮಾಣದಲ್ಲಿ ಕೊಂಚಮಟ್ಟಿಗಿನ ಅಂತರವಿರಬಹುದು ಅಷ್ಟೇ. ಹೀಗೆ ಹಣದ ಹರಿವು ಮತ್ತು ಅದರ ಅವಲಂಬನೆಗಳು ಹೆಚ್ಚಾದಂತೆಲ್ಲಾ ವ್ಯವಸ್ಥೆಯಲ್ಲಿ ಕಪ್ಪುಬಿಳುಪು ಎನ್ನುವ ವರ್ಗೀಕರಣವೇ ಕ್ರಮೇಣ ಅಪ್ರಸ್ತುತವೂ, ಗೊಂದಲಮಯವೂ ಆಗತೊಡಗುತ್ತದೆ. ಹಣದ ಮೌಲ್ಯವು ಪೂರ್ವನಿರ್ಧರಿತವಾಗಿದ್ದು ಅದು ತನ್ನ ಮೌಲ್ಯವನ್ನು ತನ್ನನ್ನು ಗಳಿಸಿದ, ದುಡಿದ ಮಾರ್ಗದಿಂದಾಗಿ ಪಡೆಯುವುದಿಲ್ಲ. ಶ್ರಮಿಕರು, ಜ್ಞಾನಿಗಳು, ಪ್ರತಿಭಾವಂತರು, ವಯೋವೃದ್ಧರು, ವಿಶೇಷಚೇತನರು ಕಷ್ಟಪಟ್ಟು ದುಡಿದ ಹಣಕ್ಕೂ, ಭ್ರಷ್ಟವೂ, ಅನೈತಿಕವೂ, ವಾಮಮಾರ್ಗದಿಂದಲೂ ಗಳಿಸಿದ ಹಣಕ್ಕೂ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಇದು ಆಧುನಿಕ ಅರ್ಥವ್ಯವಸ್ಥೆಯಲ್ಲಿನ ದೊಡ್ಡ ನ್ಯೂನತೆ. ಹಣವೆನ್ನುವುದು ಗುಣಗ್ರಾಹಿಯಾಗಿಲ್ಲ. ಜಾತಿ, ಧರ್ಮ, ಜನಾಂಗ, ಬಣ್ಣಗಳ ಆಧಾರದಲ್ಲಿ ಶ್ರೇಷ್ಠತೆಯ ವ್ಯಸನ ಮೆರೆಯುವ ನಮ್ಮ ನಾಗರಿಕತೆಗಳು, ಇದಕ್ಕೆ ಬದಲಾಗಿ ಮೌಲ್ಯ, ನೈತಿಕತೆಯ ಹೆಸರಿನಲ್ಲಿ ಶ್ರೇಷ್ಠತೆಯ ವ್ಯಸನ ಬೆಳೆಸಿಕೊಂಡಿದ್ದರೆ ಹಣಕ್ಕೆ ಗುಣಗ್ರಾಹಿಯಾಗುವ ಅಗತ್ಯ ಖಂಡಿತ ಬರುತ್ತಿತ್ತು. ಆದರೆ, ವಾಸ್ತವ ಹಾಗಿಲ್ಲ. ಹಣ ಇಂದು ನಮ್ಮೆಲ್ಲರ ಬದುಕಿನ ಕೇಂದ್ರದಲ್ಲಿದೆ, ನಮ್ಮೆಲ್ಲರ ಜೀವನಾವಶ್ಯಕತೆಗಳನ್ನು, ಬದುಕು, ಭವಿಷ್ಯವನ್ನು ನಿರ್ಧರಿಸುವ ಪ್ರಖರ ಮಾಧ್ಯಮವಾಗಿದೆ. ಹೀಗೆ ನಮ್ಮೆಲ್ಲರ ಬದುಕನ್ನು ನಿಯಂತ್ರಿಸುವ, ನಿರ್ಧರಿಸುವ ಹಣಕ್ಕೆ ನ್ಯಾಯನೀತಿಯ ಪರಿವೆಯೇ ಇಲ್ಲ! ಗುಣಕ್ಕೆ, ಮೌಲ್ಯಗಳಿಗೆ ಕುರುಡಾಗಿರುವ ಇಂತಹ ಹಣವನ್ನು ಕೇಂದ್ರದಲ್ಲಿರಿಸಿಕೊಂಡೇ ನವ ನಾಗರಿಕತೆಗಳು ಅಸ್ತಿತ್ವ ಕಟ್ಟಿಕೊಂಡಿವೆ. ದೇಶ, ಮಾರುಕಟ್ಟೆಗಳು ಉಸಿರಾಡುತ್ತಿವೆ. ಇಂದು ಇಡೀ ಜಾಗತಿಕ ಅರ್ಥವ್ಯವಸ್ಥೆಯವೆನ್ನುವುದು ಹೃದಯಹೀನವೂ, ಅಮಾನವೀಯವೂ ಆಗಿ ಪರಿವರ್ತಿತವಾಗಲು ಈ ಲೋಪವೇ ಕಾರಣ. ಈ ಸಂಕೀರ್ಣತೆಗಳನ್ನು ಅರಿಯದೆ ಭ್ರಷ್ಟಾಚಾರದ ಬಗ್ಗೆ ತೆಳುಗ್ರಹಿಕೆಯಲ್ಲಿ ಮಾತನಾಡುವುದು ಯಾವತ್ತೂ ಅಪಾಯಕಾರಿ.

ಇಷ್ಟೆಲ್ಲಾ ಹೇಳಲು ಕಾರಣ, ಇಂದು ಮಾನವೀಯ, ಜನಪರ, ಜನಮುಖಿ ಚಿಂತನೆಗಳುಳ್ಳವರಲ್ಲಿ ಯಾವ ವಿಚಾರಗಳಲ್ಲಿ ಒಮ್ಮತ ಮೂಡಬೇಕಿತ್ತೋ ಅದು ಸಾಧ್ಯವಾಗದೆ ಹೋಗಿರುವುದರಿಂದಾಗಿ. ಬಹುತೇಕ ಸಂದರ್ಭಗಳಲ್ಲಿ ಹಣದ ವಿಚಾರದಲ್ಲಿ ಕೆಲವೊಂದು ಸೀಮಿತ ಕಲ್ಪನೆಗಳಿಂದ ನಾವು ವ್ಯವಹರಿಸುವುದು ಇದಕ್ಕೆಲ್ಲಾ ಕಾರಣವಾಗುತ್ತದೆ. ಇಂದು ಸಮಾಜದ ಕೇಂದ್ರಕ್ಕೆ ಮತ್ತೆ ಮಾನವೀಯ ಮೌಲ್ಯಗಳನ್ನು ತರಬೇಕೆಂದರೆ ಗುಣಗ್ರಾಹಿಯಾಗಿಲ್ಲದ ಹಣದ ವಿಚಾರವಾಗಿ ಅತಿ ಎನಿಸುವಷ್ಟು ಪ್ರಾಮಾಣಿಕವಾಗಿಯೂ, ಕಟುವಾಗಿಯೂ ವರ್ತಿಸುವಂತೆ ಮಾಡಿರುವ ಸ್ಥಾಪಿತ ಮೌಲ್ಯಗಳ ಬಗ್ಗೆಯೇ ನಾವು ಸಂಶಯವನ್ನಿರಿಸಿಕೊಳ್ಳಬೇಕಿದೆ. ಈ ವಿಚಾರದಲ್ಲಿ ನಮ್ಮ ಚಿಂತನೆಗಳು ಹೆಚ್ಚು ಉದಾರವಾಗಬೇಕಿದೆ. ಉತ್ತಮ ಉದ್ದೇಶಗಳು, ಕೆಲಸಕ್ಕಾಗಿ ಹಣ ಹಾಗೂ ಶ್ರಮವನ್ನು ಹೇಗೆ ಒಗ್ಗೂಡಬೇಕು ಎನ್ನುವ ವಿಚಾರದಲ್ಲಿ ಶ್ರೇಷ್ಠತೆಯ ವ್ಯಸನಗಳಿಂದ ನಾವಿಂದು ಹೊರಬರಬೇಕಿದೆ. ಉತ್ತಮ ಉದ್ದೇಶ, ದೂರದರ್ಶಿತ್ವ, ಸಮತೆಯಲ್ಲಿ ನಂಬಿಕೆಯಿಟ್ಟವರನ್ನು ಅಧಿಕಾರದ ಕೇಂದ್ರಕ್ಕೆ ತರಲು ಲಾಬಿ ಮಾಡುವುದು, ಉತ್ತಮ ಧ್ಯೇಯೋದ್ದೇಶಗಳ ಸಾಕಾರಕ್ಕಾಗಿ ಸಂಪನ್ಮೂಲ ಸಂಗ್ರಹದ ವಿಚಾರದಲ್ಲಿ ಅವಾಸ್ತವವೂ, ಅಪ್ರಾಯೋಗಿಕವೂ ಆಗಿರದೆ ಸಮಾಜಕಂಟಕವಲ್ಲದ ಮಾರ್ಗಗಳ ಬಗ್ಗೆ ಪುನರ್ ಪರಿಶೀಲಿಸುವುದು ಇಂದಿನ ಅಗತ್ಯವಾಗಿದೆ. ಒಳಿತನ್ನು ಕೆಟ್ಟದ್ದರಿಂದ ಗೆಲ್ಲಿಸಲು ಸಾಧ್ಯವಿಲ್ಲ ಎನ್ನುವುದು ದಿಟ. ಹಾಗೆಂದು, ಒಳಿತನ್ನು ಒಳಿತಿನಿಂದಲೇ ಸೋಲಿಸಬಾರದು ಕೂಡ. ವಿಚಾರಶೀಲರಿಗೆ ಇವೆರಡರ ನಡುವೆ ಸಮತೋಲನ ಸಾಧಿಸುವುದು ಕಷ್ಟವಾಗಲಾರದು.

ಒಳಿತಿನ ಬೇರುಗಳು ಸಮಾಜದಲ್ಲಿ ಆಳವಾಗಬೇಕೆಂದರೆ, ಮೊದಲು ಉತ್ತಮರ ಪರವಾಗಿ ಪ್ರಜ್ಞಾವಂತರೆಲ್ಲರೂ ಸಕಾರಾತ್ಮಕವಾಗಿ ಲಾಬಿ ಮಾಡಬೇಕಿದೆ. ಸಜ್ಜನರ ಒಳ್ಳೆಯತನಕ್ಕೆ ಪ್ರಾಮಾಣಿಕತೆಯ ಬೇಡಿ, ಸಲಾಕೆಗಳನ್ನು ಹಾಕಿ, ವಸ್ತುನಿಷ್ಠತೆಯ ಲಕ್ಷ್ಮಣರೇಖೆಯನ್ನೆಳೆದು ಪಂಜರದಲ್ಲಿರಿಸಿ ಆ ಮೂಲಕ ಅಧಿಕಾರ ಕೇಂದ್ರಗಳಿಗೆ, ಆಯಕಟ್ಟಿನ ಸ್ಥಳಗಳಿಗೆ ಒತ್ತರಿಸಿಕೊಳ್ಳುವ ದುಷ್ಟರು, ಧನದಾಹಿಗಳು, ಅಯೋಗ್ಯರನ್ನು ದೂರವಿರಿಸಬೇಕಿದೆ. ಉತ್ತಮರು, ಪ್ರತಿಭಾವಂತರು, ಮಾನವೀಯ ಮೌಲ್ಯಗಳುಳ್ಳವರನ್ನು ಅಧಿಕಾರ ಹಾಗೂ ಸಂಪನ್ಮೂಲಗಳಿರುವೆಡೆ ಕೂರಿಸಿ ರಚನಾತ್ಮಕ ಹಾಗೂ ಮಾನವೀಯ ಕೆಲಸಗಳಿಗೆ ಹೆಚ್ಚೆಚ್ಚು ಶಕ್ತಿ, ಸಂಪನ್ಮೂಲಗಳನ್ನು ಹರಿಸಬೇಕಿದೆ. ಇದು ಸಾಧ್ಯವಾಗಬೇಕೆಂದರೆ ನಾವುಗಳು ಅವಾಸ್ತವ ನೆಲೆಗಳಲ್ಲಿ ರೂಢಿಸಿಕೊಂಡಿರುವ ಶ್ರೇಷ್ಠತೆಯ ವ್ಯಸನವನ್ನು ಬದಿಗಿರಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...