ಸೋಮಶೇಖರ್ ಚಲ್ಯ |

ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ ಅಹಂ ಇವಮ್ ನಾತಿಚರಾಮಿ, ಈ ಪದಗಳು ಭಾರತೀಯ ಸಮಾಜದಲ್ಲಿ ಹೆಣ್ಣಿನ ಮನಸ್ಸಿನಲ್ಲಿ ಎಂದೆಂದಿಗೂ ತಲ್ಲಣವನ್ನುಂಟು ಮಾಡುವಂತಹವು. ಹೆಣ್ಣು ದಾಂಪತ್ಯ ಜೀವನಕ್ಕೆ ಕಾಲಿರಿಸುವ ಗಳಿಗೆಯಿಂದ ಆಕೆ ಧರ್ಮ, ಹಣ, ಕಾಮ ಮತ್ತು ಮೋಕ್ಷದವರೆಗೂ ಆತ್ಮಾರ್ಥವಾಗಿ ತನ್ನ ಗಂಡನಿಗೆ ಅಧೀನಳು ಎಂದು ಈ ಸಾಲುಗಳು ಹೇಳುತ್ತವೆ. ಇದೆಲ್ಲದಕ್ಕೂ ಉತ್ತರ ಹುಡುಕುವ ಹಾಗೂ ಹೆಣ್ಣಿನ ಮನಸ್ಸಿನ ತೊಳಲಾಟವನ್ನು ಬಿಚ್ಚಿಡುವ ಪ್ರಯತ್ನವನ್ನು ನಾತಿಚರಾಮಿ ಚಿತ್ರ ತಂಡ ಮಾಡಿದೆ.
ಭಾರತದ ಸಂಸ್ಕøತಿ, ಸಂಪ್ರದಾಯ, ಕಟ್ಟುಪಾಡುಗಳೆಲ್ಲವೂ ನಾನಾರೀತಿಯಲ್ಲಿ ಹೆಣ್ಣಿನ ಮೇಲೆ ಹೇರಲ್ಪಟ್ಟಿವೆ. ಗಂಡಿಗಿರುವ ಸ್ವಾತಂತ್ರ್ಯ ಹೆಣ್ಣಿಗಿಲ್ಲ. ಹೆಣ್ಣು ಗಂಡಿನ ಗುಲಾಮಳಾಗಿಯೇ ಬದುಕಬೇಕು, ಇಂತಹ ಕಟ್ಟಲೆಗಳು ಮೀರಿ ಬದುಕ ಬಯಸುವ, ಪ್ರಯತ್ನಿಸುವ ಹೆಣ್ಣು ಸಮಾಜದಿಂದ ದೂಷಿಸಲ್ಪಡುತ್ತಾಳೆ. ಮಹಿಳೆ ತನ್ನ ಗಂಡನನ್ನು ಕಳೆದುಕೊಂಡರೆ ಆಕೆ ತನ್ನ ಉಳಿದ ಬದುಕನ್ನು ಆತನ ನೆನಪಿನಲ್ಲಿಯೇ ಒಂಟಿಯಾಗಿ ಕಳೆಯಬೇಕು, ಮತ್ತೊಂದು ಮದುವೆಯಾಗಬಾರದು. ಹೆಣ್ಣು ತಾನೆ ಒಂಟಿ ಜೀವನವನ್ನು ಆಯ್ಕೆ ಮಾಡಿಕೊಂಡರೆ ಸರಿ, ಅದರೆ ಅದೂ ಹೇರಲ್ಪಡುವ ವಿಚಾರವೇ. ವಿಧವೆ ತನ್ನ ಅಗತ್ಯಗಳನ್ನು ಹೇಳಿಕೊಳ್ಳುವಂತಿಲ್ಲ, ಹೇಳಿ ಪೂರೈಸಿಕೊಳ್ಳುವಂತಿಲ್ಲ. ಹಾಗೇನಾದರು ತನ್ನ ಆಸೆಗಳನ್ನು ಹೊರಹಾಕಿದರೆ ಆಕೆ ನಡತೆಗೆಟ್ಟವಳೆಂದು ಹಣೆಪಟ್ಟಿ ಕಟ್ಟಿಕೊಳ್ಳುತ್ತಾಳೆ.
ನಾತಿಚರಾಮಿ ಚಿತ್ರದ ಮೂಲಕ ನಿರ್ದೇಶಕ ಮಂಸೋರೆ, ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಬದುಕುತ್ತಿರುವ ಗೌರಿ ಹಾಗೂ ವಿವಾಹವಾಗಿ ಐದು ವರ್ಷ ಕಳೆದರೂ ಹೊಂದಾಣಿಕೆಯಿಲ್ಲದ ಸುರೇಶನ ಸಂಸಾರವನ್ನು ಕಥೆಯಾಗಿ ಇಟ್ಟುಕೊಂಡು ಬದುಕಿನೊಳಗಿನ ತಲ್ಲಣಗಳು, ಸಮಸ್ಯೆ ಮತ್ತು ಸಂಬಂಧಗಳ ನಡುವಿನ ವೈರುಧ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಒಂದೆಡೆ ಮದುವೆಯಾಗಿ ಕೆಲ ವರ್ಷಗಳಲ್ಲೇ ಜೀವವೇ ಆಗಿದ್ದ ಗಂಡನನ್ನು ಕಳೆದುಕೊಂಡ ಗೌರಿಗೆ ಮತ್ತೊಂದು ಮದುವೆ ಮಾಡುವ ಅವಸರದಲ್ಲ್ಲಿರುವ ಗೌರಿಯ ತಂದೆತಾಯಿ, ಗಂಡನ ನೆನಪಲ್ಲೇ ಬದುಕ ಬಯಸುವ ಗೌರಿ. ಮತ್ತೊಂದೆಡೆ ಸಂಸಾರದಲ್ಲಿ ಹೊಂದಾಣಿಕೆ ಕಾಣದೆ, ತಮ್ಮ ದೈಹಿಕ ಸುಖದಿಂದಾಚೆಗಿನ ಬಯಕೆಗಳು, ಪ್ರೀತಿ-ಸಂಬಂಧಗಳ ಅನುಬಂಧವಿಲ್ಲದೆ ಪೇಚಾಡುವ ಯುವ ದಂಪತಿಗಳು ಬದುಕಿನ ವೈರುಧ್ಯಕ್ಕೆ ಮುಖಾಮುಖಿಯಾಗಿವೆ.
ಪ್ರೀತಿಸಿ ಮದುವೆಯಾದ ಗಂಡನನ್ನು ಮರೆಯಲಾಗದೇ ಆತ ಬದುಕಿದ್ದ ದಿನಗಳಲ್ಲಿದ್ದಂತೆಯೇ ತನ್ನ ಮನೆಯನ್ನೂ, ಮನವನ್ನೂ ಹೊಂದಿಸಿಕೊಂಡು ಒಂಟಿ ಬದುಕನ್ನು ಆತನ ಪ್ರೀತಿಯ ನೆನಪಿನಲ್ಲೇ ಮುಂದುವರೆಸುವ ಗೌರಿಗೆ ಮತ್ತೊಬ್ಬ ಗಂಡನೊಂದಿಗೆ ಬದುಕುವ ಮನಸ್ಸಿಲ್ಲ. ಆದರೆ ಆಕೆಯ ಮನಸ್ಸಿನ ತಳಮಳ ಅದರಾಚೆಗೆ ಅವಳನ್ನು ಕಾಡುತ್ತಿದೆ, ಅ ತಳಮಳಕ್ಕೆ ಕಾರಣ ಹುಡುವುದರಲ್ಲಿ ಆಕೆಯ ಒದ್ದಾಟ. ವಿಧವೆಯೆಂಬ ಕಾರಣಕ್ಕೆ ಅಡ್ವಾಂಟೇಜ್ ಪಡೆಯಲು ಯತ್ನಿಸುವ ಸಹೋದ್ಯೋಗಿಗಳ ಕಾಮಾಂಧ ಮನಸ್ಥಿತಿಯನ್ನು ಎದುರಿಸಿ ಬದುಕುವ ದಿನನಿತ್ಯದ ಪರಿತಾಪ.
ಮದುವೆಯಾಗಿ ಗಂಡನೊಂದಿಗೆ ಪ್ರೀತಿಯಿಲ್ಲದ ಸಿಡುಕು ಮಾತಿನಿಂದ ಬೇಸತ್ತ ಸುರೇಶನ ಹೆಂಡತಿ ಗಂಡನ ಪ್ರೀತಿಯ ಅಪ್ಪುಗೆಗಾಗಿ, ಸಾಂಗತ್ಯದ ಭಾವನೆಯ ಮಾತುಗಳಿಗಾಗಿ ತವಕಿಸುತ್ತಾ ಕಾಯುವ ಹೆಣ್ಣು. ಹಳ್ಳಿ ಹುಡುಗಿಯನ್ನು ಮದುವೆಯಗಿಬಿಟ್ಟಿದ್ದೇನೆಂಬ ಕಾರಣಕ್ಕೆ ಅವಳನ್ನು ಕೀಳರಿಮೆಯಿಂದ ಕಸದಂತೆ ನೋಡುವ ಗಂಡ. ಈ ಎರಡು ವೈರುಧ್ಯಗಳು ಹೆಣ್ಣಿನ ಬದುಕಿನ ಒಟ್ಟು ಸಾರವನ್ನು ಬಿಂಬಿಸಿವೆ. ಆಕೆಯ ಪ್ರೀತಿಗೆ ಬೆಲೆಕೊಡದ ಗಂಡ ಆಕೆಯೊಂದಿಗೆ ದೈಹಿಕ ಸುಖವನ್ನು ಮಾತ್ರ ಪಡೆಯುತ್ತಾನೆ. ಆದರೆ ಪ್ರೀತಿಯ ಆಸರೆಯೇ ಇಲ್ಲದ ಆ ಸುಖ ಹೆಣ್ಣಿಗೆ ಅನಗತ್ಯ. ಇದೂ ಕೂಡ ಲೀಗಲ್ ದೌರ್ಜನ್ಯವೇ ಆಗಿದೆ. ಇಂದಿಗೂ ಎಷ್ಟೋ ಸಂಸಾರಗಳು ಇರುವುದೂ ಹೀಗೆಯೇ, ಈ ವ್ಯವಸ್ಥೆಯೊಳಗೆ ಹೇಳಿಕೊಳ್ಳಲಾಗುತ್ತಿಲ್ಲವಷ್ಟೇ. ‘ನನ್ನನ್ನೇನು ಟಿವಿ ಅಂದುಕೊಂಡಿದ್ದೀರಾ ಬೇಕಾದಾಗ ಆನ್ ಮಾಡಿ, ಬೇಡವಾದಾಗ ಆಫ್ ಮಾಡೋಕೆ’ ಎನ್ನುವ ಆ ಹೆಣ್ಣಿನ ಮಾತು ಈ ಸಮಾಜಕ್ಕೆ ಸವಾಲೊಡ್ಡಿದಂತೆ ತೋರುತ್ತದೆ.
ಒಬ್ಬ ವಿಧವೆ ತನ್ನ ಅವಶ್ಯಕತೆಗಳನ್ನು, ನೋವು ಸಂಕಟಗಳನ್ನು ವ್ಯಕ್ತಪಡಿಸಿದರೆ ಆಗುವ ಕಷ್ಟಗಳನ್ನು ಈ ಚಿತ್ರ ತೆರೆದಿಡುವುದರ ಜೊತೆಗೆ ಆಕೆ ಇನ್ನುಳಿದ ಬದುಕಿನ ಪಯಣದಲ್ಲಿ ತನ್ನ ಕಷ್ಟಗಳನ್ನು ಯಾರಿಗೆ ಹೇಳಿಕೊಳ್ಳಬೇಕು, ಯಾರಿಂದ ಸಹಾಯ ಪಡೆಯಬೇಕು, ಆಕೆಯ ನೋವಿಗೆ ಸ್ಪಂದಿಸುವವರಾರು, ಆಕೆಯ ಅಗತ್ಯಗಳನ್ನು ಪೂರೈಸುವವರಾರು ಎಂಬ ನೂರಾರು ಪ್ರಶ್ನೆಗಳನ್ನು ಮುಂದಿಡುತ್ತದೆ. ಗಂಡು ತನ್ನ ಬಯಕೆಗಳನ್ನು ತೀರಿಸಿಕೊಳ್ಳಲು ಮುಂದಾಗುವ ರೀತಿಯಲ್ಲಿ ಹೆಣ್ಣಿಗೆ ಸಾಧ್ಯವಿಲ್ಲ.
ಸ್ನೇಹಿತರ ಒತ್ತಾಯದ ಮೇರೆಗೆ ಆಪ್ತ ಸಮಾಲೋಚನೆ ಪಡೆಯುವ ಗೌರಿಗೆ ತನಗೆ ಬೇಕಿರುವುದೇನು ಎಂಬುದರ ಅರಿವಾಗುತ್ತದೆ. ಆದರೆ ತನ್ನ ಗಂಡನನ್ನು ಮರೆಯಲಾಗದ ಸಂದರ್ಭದಲ್ಲಿ ಆಕಸ್ಮಿಕವಾಗಿ ಪರಿಚಯವಾಗುವ ಸುರೇಶ ಅಗತ್ಯವೆನಿಸುತ್ತಾನೆ. ತನ್ನ ಬಯಕೆಯನ್ನು ಹೇಳಿಕೊಂಡ ಕ್ಷಣವೇ ಪ್ರತಿಕ್ರಿಯೆಯಾಗಿ ಬರುವ ಮಾತು ‘ನೀನು ಒಳ್ಳೆ ಸಂಸ್ಕಾರವುಳ್ಳ ಮನೆತನದಿಂದ ಬಂದ ಹೆಣ್ಣು ಅಂದುಕೊಂಡಿದ್ದೆ ಆದರೆ ನೀನು ಛೀ’ ಎಂಬುದು. ಇಲ್ಲಿ ಆಕೆ ಬಲವಂತವನ್ನೇನು ಮಾಡಿಲ್ಲ, ಆಕೆಯ ಬಯಕೆಯನ್ನಷ್ಟೇ ಹೇಳಿಕೊಂಡಿದ್ದಾಳೆ. ಅಷ್ಟಕ್ಕೇ ಅವಳ ಸಂಸ್ಕಾರ, ಸಂಸ್ಕøತಿ, ಮನೆತನವೆಲ್ಲವೂ ಕೀಳಾಗಿಹೋಗುತ್ತವೆ. ‘ನಮ್ ದೇಹದ ಬಯಕೆನಾ ಡೈರೆಕ್ಟ್ ಆಗಿ, ಇನ್‍ಡೈರೆಕ್ಟ್ ಆಗಿ ಎಷ್ಟೇ ಸೂಕ್ಷ್ಮವಾಗಿ ಹೇಳಿದ್ರು ನಾವ್ ಚೀಪ್ ಆಗ್ತಿವಿ ಅಲ್ವಾ?’ ಎನ್ನುವ ಡೈಲಾಗ್ ಸಮಾಜದ ಅಂತಃಸಾಕ್ಷಿಯನ್ನೂ, ನಮ್ಮ ಮನಃಸಾಕ್ಷಿಯನ್ನೂ ಪ್ರಶ್ನಿಸುತ್ತದೆ.
ತನ್ನ ಸಂಗಾತಿಯ ಬಯಕೆಯೇನೆಂಬುದನ್ನು ಅರಿಯುವುದರಲ್ಲಿ ವಿಫಲನಾಗಿದ್ದ, ತನ್ನ ಹೆಂಡತಿಗೆ ಪ್ರೀತಿ ಕೊಡಲಾಗದ ಸುರೇಶ, ಗೌರಿಯ ಬಯಕೆಯನ್ನು ಪೂರೈಸುತ್ತಾನೆಯಾದರೂ, ‘ಹೆಂಗಸ್ರೂ ಕೂಡ ಮನುಷ್ಯರು ಅನ್ನೋದ ಅರ್ಥ ಮಾಡ್ಕೋಳಿ’ ಎಂದು ತನ್ನ ಪತ್ನಿ ಹೇಳಿದ್ದ ಮಾತಿಗೆ ಪುರುಷಾಧಿಪತ್ಯವೇ ಮೈವೆತ್ತಂತೆ ವರ್ತಿಸಿದ್ದ ಸುರೇಶನಿಗೆ ಆ ಮಾತು ನಿಜವಾಗಿಯೂ ಅರ್ಥವಾಗುವುದು ಗೌರಿಯ ಸಾಂಗತ್ಯ, ಸಂಬಂಧ ಮತ್ತು ಆಕೆಯ ನೋವಿನ ಪರಿಯಾಪದಿಂದ. ತನ್ನ ಬಾಳಸಂಗಾತಿ ಪ್ರೀತಿಯ ತವಕವನ್ನು ಅರಿತು ಬದಲಾಗುತ್ತಾನೆ. ತನ್ನ ಹೆಂಡತಿಯ ಪ್ರೀತಿಯನ್ನು ಅರಿತು ಆಕೆಯೊಂದಿಗೆ ಹೊಸ ಪ್ರೀತಿಯ ಬದುಕಿಗೇ ಮುಂದಾಗುತ್ತಾನೆ. ಗೌರಿ ತನ್ನ ದೈಹಿಕ ಬಯಕೆ ಪೂರೈಕೆಯಾದ ನಂತರ ಆಕೆಯೂ ಬದಲಾಗುತ್ತಾಳೆ, ಆದರೆ ಈ ಬದಲಾವಣೆ ಒಳ್ಳೆಯ ಪರಿಣಾಮಕಾರಿಯಾದ್ದಲ್ಲ, ಅದು ಕಾಮಕ್ಕೆ ಶರಣಾದಂತೆ ಕಾಣುತ್ತದೆ. ಗೌರಿ ಮನೆಯಲ್ಲಿ ಗಂಡನ ನೆನಪುಗಳನ್ನು ಹಾಗೆಯೇ ಉಳಿಸಿಕೊಂಡಿದ್ದ ಆಕೆ ಆ ನೆನಪುಗಳನ್ನು ನೆನಪಿಸದಂತೆ ವಾತಾವರಣವನ್ನೇ ಬದಲಾಯಿಸುತ್ತಾಳೆ. ಅಂದರೆ ದೈಹಿಕ ಬಯಕೆ ಪ್ರೀತಿಯನ್ನು ಮರೆಮಾಚುತ್ತದೆಯೇ? ಅಥವಾ ಕಾಮ ಎಂಬುದು ಪ್ರೀತಿಯನ್ನೂ ಮೀರಿದ್ದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಕಾಮಕ್ಕಾಗಿ ಪ್ರೀತಿ ನಶಿಸಬಾರದು, ಎಲ್ಲವನ್ನೂ ಮೀರಿ ಬೆಳೆಯುವುದು ಪ್ರೀತಿ. ಅಂತಹ ಪ್ರೀತಿ ಕಾಮಕ್ಕೆ ಶರಣಾಗಬಾರದು. ಅದಷ್ಟೇ ಅಲ್ಲದೆ ಇಂತಹ ಬದಲಾವಣೆಗಳನ್ನೇ ಗುರಿಮಾಡಿ ಕೆಲವು ಮನಸ್ಥಿತಿಗಳು ಹೆಣ್ಣು ಅಗತ್ಯಕ್ಕೆ ತಕ್ಕಂತೆ ಬದಲಾಗಿಬಿಡುತ್ತಾಳೆ ಎಂದು ಬಿಂಬಿಸಿಬಿಡುವ ಅಪಾಯವೂ ಇದೆ.
ಇಡೀ ಸಿನಿಮಾ ಒಂಟಿ ಹೆಣ್ಣಿನ ಬದುಕು ಮತ್ತು ದೈಹಿಕ ಬಯಕೆಯ ಮೇಲೆಯೇ ಸಾಗುತ್ತದೆ. ಅದರಾಚೆಗೂ ಗಮನಿಸಬೇಕಾದ ಹಲವಾರು ವಿಚಾರಗಳು ಅದರೊಳಗಿವೆ. ಹೆಣ್ಣುತನ, ಕನ್ಯೆಯೆಂದು ಹೆಣ್ಣಿನ ಮೇಲೆ ಹೇರಲ್ಪಟ್ಟಿರುವ ಶೀಲವೆಂಬ ಹೆಮ್ಮರವನ್ನು ಎದುರಿಸುವ ಪ್ರಯತ್ನ ಈ ಚಿತ್ರದ್ದು. ಜೊತೆಗೆ ಹೆಣ್ಣು ಬಯಸುವ ಪ್ರೀತಿ, ಅಭಿವ್ಯಕ್ತಿ, ತಾನು ಕೆಲಸ ಮಾಡುವ ಸ್ಥಳಗಳಲ್ಲಿನ ಭದ್ರತೆ, ಒಂಟಿ ಹೆಣ್ಣಿಗೆ ಸಮಾಜದಲ್ಲಿ ಸಿಗುವ ಸ್ಥಾನಮಾನ, ವಿವಾಹ, ಸಂಬಂಧಗಳು, ಬದ್ಧತೆ ಹಾಗೂ ಹೆಣ್ಣಿಗೂ ಗಂಡಿನಂತೆಯೇ ಆಸೆ, ಆಕಾಂಕ್ಷೆ, ಆಲೋಚನೆಗಳಿವೆ ಎಂಬುದನ್ನು ಗುರುತಿಸಲೇಬೇಕು. ಕೆಲವು ದೃಶ್ಯಗಳ ಅಗತ್ಯವಿಲ್ಲದಿದ್ದರೂ ಗೌರಿ, ಸುರೇಶ, ಆತನ ಹೆಂಡತಿ. ಈ ಮೂರು ಪಾತ್ರಗಳು ಹೆಣ್ಣಿನ ಮನಸ್ಸಿನೊಳಗಿನ ತೊಳಲಾಟವನ್ನು ಈ ಚಿತ್ರದಲ್ಲಿ ಬಿಚ್ಚಿಟ್ಟಿವೆ. ಇಂದಿನ ಸಮಾಜಕ್ಕೆ ಅವಶ್ಯಕವಾದ ಸಿನಿಮಾ ನಾತಿಚರಾಮಿ. ಈ ಚಿತ್ರದ ಸೋಲು ಗೆಲುವು ನಿಂತಿರುವುದು ಬಾಕ್ಸ್ ಆಫೀಸಿನ ಕಲೆಕ್ಷನ್ ಮೇಲಲ್ಲ. ಸಿನಿಮಾ ನೋಡಿದ ಪ್ರತಿ ಗಂಡಸಿನ ಆತ್ಮವಿಮರ್ಶೆಯ ಮೇಲೆ…..

LEAVE A REPLY

Please enter your comment!
Please enter your name here