ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸತತ ಮೂರನೇ ದಿನವೂ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ (ಇಡಿ) ಸೂಚಿಸಿದೆ.
ಜೂನ್ 13 (ಸೋಮವಾರ) ರಿಂದ ಪ್ರಾರಂಭಾವಾಗಿರುವ ವಿಚಾರಣೆ ಇನ್ನು ನಡೆಯುತ್ತಿದ್ದು, ಸತತ ಮೂರನೇ ದಿನವೂ ತನಿಖೆಗೆ ಸಹಕರಿಸುವಂತೆ ಸೂಚಿಸಲಾಗಿದೆ. ಸೋಮವಾರ 10 ಗಂಟೆಗಳ ವಿಚಾರಣೆ, ಮಂಗಳವಾರ ಇಡೀ ದಿನ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದರು.
ದೇಶದ ಹಲವು ಭಾಗಗಳಲ್ಲಿ ಜಾರಿ ನಿರ್ದೇಶನಾಲಯದ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿಯ ಕಾಂಗ್ರೆಸ್ ಕಚೇರಿಯ ಹೊರಗಡೆ ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ಪಿಜ್ಜಾ ಡೆಲಿವರಿ ಯುವತಿಯ ಮೇಲೆ ನಾಲ್ವರು ಯುವತಿಯರಿಂದ ಅಮಾನವೀಯ ಹಲ್ಲೆ
ಪ್ರತಿಭಟನೆಗಳ ಬಗ್ಗೆ ಮಾತನಾಡಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, “ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಎಲ್ಲಿಯವರೆಗೆ ಪ್ರಶ್ನಿಸುತ್ತಿರುತ್ತದೋ ಅಲ್ಲಿಯವರೆಗೂ ಕಾಂಗ್ರೆಸ್ ಪ್ರತಿಭಟನೆಗಳು ಮುಂದುವರಿಯುತ್ತವೆ. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಇನ್ನೂ ಹೆಚ್ಚಾಗಬಹುದು” ಎಂದು ಹೇಳಿದ್ದಾರೆ.
ಇನ್ನು ಮಂಗಳವಾರ ಇಡೀ ದಿನ ಇಡಿ ವಿಚಾರನೆಯಲ್ಲಿದ್ದ ಕಾರಣ, ರಾಹುಲ್ ಗಾಂಧಿ ಆಸ್ಪತ್ರೆಯಲ್ಲಿರುವ ಸೋನಿಯಾ ಗಾಂಧೀಯವರನ್ನು ತಡರಾತ್ರಿಯಲ್ಲಿ ಹೋಗಿ ಭೇಟಿ ಮಾಡಿ ಆರೋಗ್ಯ ವಿಚಾರಣೆ ನಡೆಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವವನ್ನು ಹೊಂದಿರುವ ಯಂಗ್ ಇಂಡಿಯನ್‌ನಲ್ಲಿ ಹಣಕಾಸಿನ ಅಕ್ರಮಗಳು ನಡೆದಿವೆ ಎಂದು ತನಿಖೆ ನಡೆಸಲಾಗುತ್ತಿದೆ. 2013ರಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಖಾಸಗಿ ಕ್ರಿಮಿನಲ್ ದೂರಿನ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಪರಿಗಣಿಸಿದ ನಂತರ ಇ.ಡಿ.ಯು ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ನಿಬಂಧನೆಗಳ ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿದೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ:10 ಗಂಟೆಗೂ ಹೆಚ್ಚು ಕಾಲ ರಾಹುಲ್ ಗಾಂಧಿ ವಿಚಾರಣೆ


