Homeಅಂಕಣಗಳುದೇಶಭಕ್ತಿ, ರಾಷ್ಟ್ರೀಯತೆ ಎಂಬ ಸರಕುಗಳು... - ಎನ್.ಎಸ್. ಶಂಕರ್

ದೇಶಭಕ್ತಿ, ರಾಷ್ಟ್ರೀಯತೆ ಎಂಬ ಸರಕುಗಳು… – ಎನ್.ಎಸ್. ಶಂಕರ್

ಅತ್ತ ಯೋಗಿ ಆದಿತ್ಯನಾಥ್ ‘ಮೋದಿ ಸೇನೆ’ ಎನ್ನುತ್ತಾರೆ; ಇತ್ತ ಸ್ವತಃ ಮೋದಿ, ಭಯೋತ್ಪಾದಕರ ಮನೆಯೊಳಗೆ ನುಗ್ಗಿ ಹೊಡೆಯುತ್ತೇನೆ ಎಂದು ಗರ್ಜಿಸುತ್ತಾರೆ....

- Advertisement -
- Advertisement -

| ಎನ್.ಎಸ್. ಶಂಕರ್ |

ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗುವ ಎರಡು ದಿನಗಳ ಮೊದಲು ಸಿಎನ್ಎನ್- ನ್ಯೂಸ್ 18 ಚಾನಲ್ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಂದರ್ಶನ ಪ್ರಸಾರವಾಯಿತು. ಸಂದರ್ಶಕರು ಅಮಿತ್ ಶಾ ಕಟ್ಟಾ ಅಭಿಮಾನಿಯ ಹಾಗೆ ವರ್ತಿಸುತ್ತ ಬಿಜೆಪಿ ಪಾಲಿಗೆ ಚುನಾವಣೆಯ ಕೇಂದ್ರ ವಸ್ತು ವಿಷಯವೇನು ಎಂಬ ಪ್ರಶ್ನೆ ಎತ್ತಿದರು. ಆಗ ಅಮಿತ್ ಶಾ ‘ರಾಷ್ಟ್ರವಾದ (Nationalismism) ಮತ್ತು ಭಾರತದ ಆಂತರಿಕ ಭದ್ರತೆ- ಇವೇ ಈಗಿನ ಅತಿ ಮುಖ್ಯ ವಿಷಯಗಳು; ಈ ಚುನಾವಣೆಯಷ್ಟೇ ಅಲ್ಲ, ದೇಶದಲ್ಲಿ ಪ್ರತಿ ಚುನಾವಣೆಯನ್ನೂ ಇವೇ ವಿಷಯಗಳ ಆಧಾರದ ಮೇಲೆ ಎದುರಿಸಬೇಕು’ ಎಂದು ಅಣತಿಯಿತ್ತರು.

ಮತ್ತೆ ಮೂರ್ನಾಲ್ಕು ದಿನಕ್ಕೆ ಅದೇ ಚಾನಲ್, ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನವನ್ನೂ ಬಿತ್ತರಿಸಿತು. ಆಗ ಮೋದಿ ಕೂಡ ‘ರಾಷ್ಟ್ರವಾದವೇ ಈ ಚುನಾವಣೆಗಳ ಕೇಂದ್ರ ಕಾಳಜಿ’ ಎಂದು ಉಚ್ಚರಿಸಿದರು.

ಶಾ ಸಂದರ್ಶನ ಪ್ರಸಾರವಾದ ಮರುದಿನ, ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ವಿರೋಧಿ ನಾಯಕರೊಬ್ಬರು ಅದೇ ಚಾನಲ್ನಲ್ಲಿ ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಹಾಕುತ್ತ ಬಿಜೆಪಿಯ ಪಾಲಿನ ರಾಷ್ಟ್ರವಾದ (ಅಥವಾ ರಾಷ್ಟ್ರೀಯತಾವಾದ) ಎಂದರೇನು ಎಂಬ ಇನ್ನೂ ದೊಡ್ಡ ಪ್ರಶ್ನೆಯೆತ್ತಿದರು:

ಕಾಶ್ಮೀರದ ಕಠುವಾದಲ್ಲಿ 2018ರ ಜನವರಿಯಲ್ಲಿ ಎಂಟು ವರ್ಷದ ಎಳೆ ಹೆಣ್ಣುಮಗಳನ್ನು ದೇವಾಲಯದಲ್ಲಿ ಕೂಡಿಟ್ಟುಕೊಂಡು ಆ ಮಗುವಿಗೆ ಮದ್ದು ತಿನ್ನಿಸಿ ದಿನಗಟ್ಟಳೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಕಡೆಗೆ ಕೊಂದುಹಾಕಿದ ಪ್ರಕರಣದಲ್ಲಿ, ಬಂಧನಕ್ಕೊಳಗಾದ ಆರೋಪಿಗಳ ಬಿಡುಗಡೆಗಾಗಿ ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ ನಡೆಯಿತು; ಮಾತ್ರವಲ್ಲ ಆ ಪ್ರದರ್ಶನದಲ್ಲಿ ಇಬ್ಬರು ಬಿಜೆಪಿ ಮಂತ್ರಿಗಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಜೊತೆಗೂಡಿ ಹೆಜ್ಜೆ ಹಾಕಿದರು. ಇದು ಬಿಜೆಪಿಯ ರಾಷ್ಟ್ರೀಯತಾವಾದವೇ?

ದಾದ್ರಿಯಲ್ಲಿ ಗೋಮಾಂಸ ಇಟ್ಟುಕೊಂಡಿದ್ದನೆಂಬ ಗಾಳಿಸುದ್ದಿ ಹಬ್ಬಿಸಿ ಮಹಮದ್ ಅಖ್ಲಾಕ್ ಎಂಬ ಅಮಾಯಕನನ್ನು ಹೊಡೆದು ಕೊಂದ ಆರೋಪಿಗಳಲ್ಲಿ ಒಬ್ಬ ಮೃತಪಟ್ಟಾಗ, ಆತನ ದೇಹದ ಮೇಲೆ ಕೇಂದ್ರದ ಬಿಜೆಪಿ ಮಂತ್ರಿಯೊಬ್ಬರು ರಾಷ್ಟ್ರಧ್ವಜ ಹೊದೆಸಿ ಗೌರವಿಸಿದರು. ಇದೇನಾ ಅವರ ರಾಷ್ಟ್ರೀಯತಾವಾದ?

ಕಾಶ್ಮೀರದಲ್ಲಿ, ಬಿಜೆಪಿ ಯಾವುದೇ ಹಿಂಜರಿಕೆಯಿಲ್ಲದೆ, ಸದಾ ಪ್ರತ್ಯೇಕತಾವಾದಿಗಳ ಪರ ನಿಲ್ಲುವ ಪಿಡಿಪಿ ಪಕ್ಷದ ಜೊತೆಗೂಡಿ ಸರ್ಕಾರ ರಚಿಸಿತು. ಇದೇನಾ ಇವರ ರಾಷ್ಟ್ರವಾದ?

ಗೋರಕ್ಷಣೆ ಹೆಸರಿನಲ್ಲಿ ಬಡಪಾಯಿ ಮುಸ್ಲಿಂ ರೈತರನ್ನು ಹೊಡೆದು ಸಾಯಿಸಿದವರನ್ನು ಸಂಘ ಪರಿವಾರದ ಒಬ್ಬ ಮುಂದಾಳು, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ರಂಥ ಕ್ರಾಂತಿಕಾರಿಗಳಿಗೆ ಹೋಲಿಸಿದರು. ಇವರ ರಾಷ್ಟ್ರವಾದ ಇದೇನಾ?….

ಇಂಥ ಸಾಲು ಸಾಲು ಪ್ರಶ್ನೆಗಳು….

ಇವರ ರಾಷ್ಟ್ರೀಯತಾವಾದ ಅಥವಾ ದೇಶಪ್ರೇಮಕ್ಕೆ ಇತ್ತೀಚೆಗೆ ಮತ್ತೂ ಒಂದು ಮಾದರಿ ಸಿಕ್ಕಿತು. ಕಮಲ ಹಾಸನ್ ‘ಈ ದೇಶದ ಮೊಟ್ಟಮೊದಲ ಭಯೋತ್ಪಾದಕ (ಅವರು ಬಳಸಿದ ಪದ ‘ತೀವ್ರಗಾಮಿ) ಒಬ್ಬ ಹಿಂದೂ ಆಗಿದ್ದ- ನಾಥೂರಾಂ ಗೋಡ್ಸೆ’ ಎಂಬ ಹೇಳಿಕೆ ಕೊಟ್ಟ ಕೂಡಲೇ ‘ಹಿಂದೂ ಎಂದಿಗೂ ಭಯೋತ್ಪಾದಕನಾಗಲಾರ’ ಎಂದು ಸಂಘ ಪರಿವಾರ ಮತ್ತು ಆ ಸಿದ್ಧಾಂತಕ್ಕೆ ಮನ ಸೋತ ಮುಗ್ಧರು ಹುಯಿಲೆಬ್ಬಿಸಿದರು. ಅದಕ್ಕೆ ತಕ್ಕಂತೆ ಮಾಧ್ಯಮಗಳು ಕೂಡ ಮಹಾತ್ಮನ ಹತ್ಯೆ ಹಿಂದಿನ ಭಯಾನಕ ದ್ವೇಷಪೂರಿತ ತಾತ್ವಿಕತೆ ಅಥವಾ ಮನುಕುಲದ ಮೇಲೆ ಆ ಕೃತ್ಯದಿಂದ ಉಂಟಾದ ಘನಘೋರ ಪರಿಣಾಮಗಳನ್ನು ಚರ್ಚೆ ಮಾಡಲಿಲ್ಲ; ಅದು ಬಿಟ್ಟು ‘ಗೋಡ್ಸೆಯನ್ನು ಭಯೋತ್ಪಾದಕ ಎಂದು ಕರೆಯಬಹುದೇ?’ ಎಂಬ ಪಟ್ಟಾಂಗಕ್ಕಿಳಿದರು! ಈಗ ಅಷ್ಟರ ಮೇಲೆ ಮಾಲೆಗಾಂವ್ ಸ್ಫೋಟ ಖ್ಯಾತಿಯ ಪ್ರಜ್ಞಾ ಸಿಂಗ್ ಠಾಕೂರ್ ‘ಗೋಡ್ಸೆ ಎಂದೆಂದಿಗೂ ಒಬ್ಬ ದೇಶಪ್ರೇಮಿಯೇ, ಆತನನ್ನು ಭಯೋತ್ಪಾದಕ ಎಂದು ಕರೆದವರಿಗೆ ಜನರೇ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ’ ಎನ್ನುತ್ತಿದ್ದಾರೆ! ಇದು ಇವರ ರಾಷ್ಟ್ರೀಯತೆ.

ಹಾಗಾದರೆ ಈ ರಾಷ್ಟ್ರೀಯತೆ ಎಂಬ ಪದಾರ್ಥವಾದರೂ ಎಂಥದು? ಅದರ ಜೀವಾಳವೇನು?

ಬಿಜೆಪಿ ಆಗಾಗ ತನ್ನ ಈ ರಾಷ್ಟೀಯತಾವಾದ ಸಿದ್ಧಾಂತಕ್ಕೆ ಮತ್ತೊಂದು ಹೆಸರು ಕೊಡುತ್ತದೆ- ‘ದೇಶಭಕ್ತಿ’. ಆ ಪಕ್ಷದ ಬಾಯಿಂದಂತೂ ಈ ದೇಶಭಕ್ತಿ ಮತ್ತು ದೇಶದ್ರೋಹ ಎಂಬ ಶಬ್ದಗಳು ಸದಾ ಉದುರುತ್ತಲೇ ಇರುತ್ತವೆ; ಇನ್ನು ಚುನಾವಣಾ ಕಾಲದಲ್ಲಿ ಆ ಶಬ್ದಗಳ ಜಡಿಮಳೆಯೇ ಸುರಿಯುತ್ತದೆ!

ಅತ್ತ ಕಾಂಗ್ರೆಸ್ ಪಕ್ಷ ಒಂದು ಬಡ ಕುಟುಂಬಕ್ಕೆ ವರ್ಷಕ್ಕೆ 72 ಸಾವಿರ ರೂಪಾಯಿಗಳ ಕನಿಷ್ಠ ಆದಾಯ, ಕೃಷಿಗೆ ಪ್ರತ್ಯೇಕ ಬಜೆಟ್, ಉದ್ಯೋಗ ಸೃಷ್ಟಿ… ಮುಂತಾದ ಸಂಗತಿಗಳನ್ನು ಚುನಾವಣಾ ವಿಷಯಗಳಾಗಿ ಮುಂದಿಡುತ್ತಿದ್ದರೆ, ಬಿಜೆಪಿಗೆ ಈ ಬಾರಿ ಅವು ಯಾವುವೂ ಚುನಾವಣಾ ವಿಷಯಗಳೇ ಅಲ್ಲ. ಈ ಐದು ವರ್ಷಗಳಲ್ಲಿ ತನ್ನ ಸರ್ಕಾರದ ಸಾಧನೆಯೇನು, ಅಚ್ಛೇ ದಿನ್ ಕಥೆ ಏನಾಯಿತು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಏನಾಯಿತು, ಒಬ್ಬೊಬ್ಬರ ಖಾತೆಗೆ ಹದಿನೈದು ಲಕ್ಷ ರೂಪಾಯಿ, ರೈತರಿಗೆ ಯೋಗ್ಯ ಬೆಲೆ… ಈ ಯಾವ ‘ನೈಜ ಸವಾಲುಗಳ’ ಬಗ್ಗೆ ಎಲ್ಲೂ ಪ್ರಸ್ತಾಪವಿಲ್ಲ. ಅದೇ ದೇಶಭಕ್ತಿ, ದೇಶದ್ರೋಹ, ದೇಶದ ಭದ್ರತೆ, ಪಾಕಿಸ್ತಾನ, ಭಯೋತ್ಪಾದನೆ… ಅವನ್ನು ಬಿಟ್ಟರೆ ನೆಹರೂ, ರಾಜೀವ್, ರಾಹುಲ್ ಕುಟುಂಬದ ಮೇಲೆ ಗೂಬೆ ಕೂರಿಸುವುದು- ಇದಿಷ್ಟೇ ಮೋದಿಯವರ ಪ್ರಚಾರ ಸಾಮಗ್ರಿ.

ವರ್ಷದ 365 ದಿನವೂ ‘ರಾಷ್ಟ್ರಪ್ರೇಮ’ದ ಏಕೈಕ ‘ಓನರ್’ ತಾನೇ ಎಂಬಂತೆ ವರ್ತಿಸುವುದು ಬಿಜೆಪಿಯ ಅಚ್ಚುಮೆಚ್ಚಿನ ಶೋಕಿಯೇನೋ ಸರಿ. ಆದರೆ ಬಿಜೆಪಿಯ ‘ದೇಶಪ್ರೇಮ’ದ ನೈಜ ಅಸಹ್ಯಕರ ದೃಷ್ಟಾಂತಗಳನ್ನು ಎಲ್ಲರೂ ಕಂಡಿದ್ದೇವಲ್ಲ?

ಅಷ್ಟಕ್ಕೂ, ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶಪ್ರೇಮಿಯಾಗಿಯೇ ಹುಟ್ಟುವುದು. ಹಾಗಿದ್ದರೂ ಈ ಸಂಘ ಪರಿವಾರ ಸಂಘಟನೆಗಳು ಮಾತೆತ್ತಿದರೆ ಗಂಟಲು ನರ ಹರಿದುಕೊಂಡು ಚೀರುತ್ತ ಅದೇಕೆ ದೇಶಪ್ರೇಮದ ಗುತ್ತಿಗೆ ಹಿಡಿಯಲು ಹೊರಡುತ್ತವೆ? ಚುನಾವಣಾ ಸಂತೆಯಲ್ಲಿ ಈ ರಾಷ್ಟ್ರೀಯತೆ, ಆಂತರಿಕ ಭದ್ರತೆ, ಭಯೋತ್ಪಾದನೆ, ಸೈನ್ಯದ ಸಾಧನೆಗಳು- ಇವೇ ಸರಕುಗಳನ್ನು ತಳ್ಳುಗಾಡಿಯ ಮೇಲೆ ಹೇರಿಕೊಂಡು ಕೂಗುತ್ತ ಅಲೆಯುತ್ತವೆ? ಸಾಮಾನ್ಯವಾಗಿ ಯುದ್ಧದ ಸಮಯದಲ್ಲಿ (ಅಥವಾ ನಮ್ಮ ದೇಶದಲ್ಲಿ ಭಾರತ- ಪಾಕ್ ಕ್ರಿಕೆಟ್ ಪಂದ್ಯದ ಸಮಯದಲ್ಲೂ!) ದೇಶಪ್ರೇಮ ಉಕ್ಕಿ ಹರಿಯವುದುಂಟು. ಈಗೇನು ದೇಶದಲ್ಲಿ ಯುದ್ಧಭೀತಿ ಎದುರಾಗಿದೆಯೇ? ಆಂತರಿಕ ಭದ್ರತೆಗೆ ದೊಡ್ಡ ಸವಾಲುಗಳು ಉಂಟಾಗಿವೆಯೇ? ಅಥವಾ ಗಡಿಯಲ್ಲಿ ಸಮರಶೀಲ ಪ್ರಕ್ಷೋಭೆಯೇನಾದರೂ ಉದ್ಭವವಾಗಿದೆಯೇ?

ಎಂಥದೂ ಇಲ್ಲ! ಕೊನೇ ಪಕ್ಷ ಭಾರತ ಪಾಕ್ ಕ್ರಿಕೆಟ್ ಪಂದ್ಯವೂ ಇಲ್ಲ!

ಮತ್ತೆ ಈ ಯುದ್ಧೋನ್ಮಾದದ ಹ್ಞೂಂಕಾರಕ್ಕೇನು ಅರ್ಥ? ಏನೂ ಇಲ್ಲ, ಇದು ಎಷ್ಟೆಂದರೂ ಭಾವೋದ್ವೇಗ ಉಕ್ಕಿಸಬಲ್ಲ ವಿಷಯವಾದ್ದರಿಂದ ಮತಯಾಚನೆ ಅರ್ಥಾತ್ ಅಧಿಕಾರದಾಹದ ಹೊರತು ಇದಕ್ಕೆ ಮತ್ತೇನೂ ಅರ್ಥವಿಲ್ಲ…! ವಿಪರ್ಯಾಸವೆಂದರೆ, ಪುಲ್ವಾಮದಲ್ಲಿ ಭಯೋತ್ಪಾದಕರು ಐವತ್ತು ಸಿಆರ್ಪಿಎಫ್ ಯೋಧರ ಬಲಿ ಪಡೆದಿದ್ದು, ಮೋದಿ ಸರ್ಕಾರದ ಭದ್ರತಾ ವೈಫಲ್ಯದ ಪ್ರಕರಣವೆಂದು ಯಾರೂ ಎತ್ತಿ ಹೇಳುವಂತೆಯೇ ಇಲ್ಲ; ಅಲ್ಲಿ ನೆರೆಯ ಶ್ರೀಲಂಕಾದಲ್ಲಿ ಭೀಕರ ಆತ್ಮಾಹುತಿ ದಾಳಿ ನಡೆದಾಗ ಅಲ್ಲಿನ ನೇತಾರರು ದೇಶದ ಕ್ಷಮೆ ಕೋರಿದರೆ, ನಮ್ಮವರು ಕ್ಷಮಾಯಾಚನೆ ಬಿಡಿ, ‘ಪುಲ್ವಾಮ ಹುತಾತ್ಮರ’ ಹೆಸರಿನಲ್ಲಿ ಮತಯಾಚನೆಗೆ ಕೈಯೊಡ್ಡಿದ್ದಾರೆ! ಭಾರತೀಯ ವಾಯುಪಡೆ, ಗಡಿ ನಿಯಂತ್ರಣ ರೇಖೆಯನ್ನು ಭೇದಿಸಿ ಪಾಕಿಸ್ತಾನದೊಳಕ್ಕೆ ನುಗ್ಗಿ ಹೋಗಿ ಬಾಲಾಕೋಟ್ ಮೇಲೆ ದಾಳಿ ಮಾಡಿ ನೂರಾರು ಉಗ್ರರ ಬಲಿ ಪಡೆಯಿತೆಂದು ಪ್ರಚಾರ ಮಾಡುತ್ತ ಎದೆಯುಬ್ಬಿಸುತ್ತಿದ್ದಾರೆ. ಹೋಗಲಿ ಎಂದರೆ, ಬಾಲಾಕೋಟ್ ದಾಳಿ ವಿಷಯದಲ್ಲಿ ಕೇಂದ್ರ ಮಂತ್ರಿಗಳೂ ಸೇರಿದಂತೆ ಒಬ್ಬೊಬ್ಬರೂ ತಲೆಗೊಂದೊಂದು ಕಥೆ ಹೇಳುತ್ತಿದ್ದರೂ ಅಲ್ಲಿ ನಿಜದ ಅಂಶವೆಷ್ಟೋ ಸುಳ್ಳೆಷ್ಟೋ ಅದನ್ನೂ ಕೇಳುವಂತಿಲ್ಲ. ಯಾಕೆಂದರೆ ‘ನಡೆದಿದ್ದೇನು, ವಿವರ ಕೊಡಿ’ ಎಂದು ಕೇಳಿದವರಿಗೆಲ್ಲ ‘ದೇಶದ್ರೋಹಿಗಳು, ಸೈನ್ಯಕ್ಕೆ ಅವಮಾನ ಮಾಡುತ್ತಿದ್ದಾರೆ’ ಎಂಬ ಹಣೆಪಟ್ಟಿ ಬೀಳುತ್ತಿದೆ. ಅಲ್ಲೂ ರಾಷ್ಟ್ರೀಯತೆಯ ಸೊಲ್ಲು! ಕಡೆಗೆ ಸುಷ್ಮಾ ಸ್ವರಾಜ್ ‘ಯಾವೊಬ್ಬ ಪಾಕಿಸ್ತಾನಿ ನಾಗರಿಕ/ ಸೈನಿಕರ ಕೂದಲೂ ಕೊಂಕಿಲ್ಲ; ದಾಳಿಗೆ ಆ ಉದ್ದೇಶವೇ ಇರಲಿಲ್ಲ’ ಎಂದೂ ಸ್ಪಷ್ಟನೆ ಕೊಟ್ಟಾದ ಮೇಲೆ ಏಳುವ ಪ್ರಶ್ನೆ- ‘ಹಾಗಾದರೆ ಅದುವರೆಗಿನ ಬಡಿವಾರಕ್ಕೆ ಏನು ಹೇಳಬೇಕು?’….

ಇದು ಹೀಗಾಯಿತಾ? ಅತ್ತ ಪ್ರಧಾನಿ ಮೋದಿಯವರು ಎದೆಯುಬ್ಬಿಸಿ, ‘ಬಾಲಾಕೋಟ್ ದಾಳಿ- ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿ ಭಾರತೀಯ ಪಡೆಗಳು ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದ ಒಳಗೆ ನುಗ್ಗಿದ ಪ್ರಸಂಗ’ ಎಂಬ ಹಸಿ ಸುಳ್ಳನ್ನು ಬೇರೆ ಬಿತ್ತರಿಸುತ್ತಿದ್ದಾರೆ! 1965ರ ಭಾರತ ಪಾಕ್ ಯುದ್ಧದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಲಾಲ್ ಬಹಾದೂರ್ ಶಾಸ್ತ್ರಿಯವರ ನಿರ್ದೇಶನದ ಮೇರೆಗೆ ಭಾರತೀಯ ಸೇನೆಗಳು ಗಡಿ ದಾಟುವುದಷ್ಟೇ ಅಲ್ಲ, ಲಾಹೋರ್ ಅಂಚಿನವರೆಗೆ ಹೋಗಿ ಫಿರಂಗಿಗಳನ್ನು ನಿಲ್ಲಿಸಿಕೊಂಡಿದ್ದು ಅವರಿಗೆ ಗೊತ್ತೇ ಇಲ್ಲವೇ…?!

ದೇಶದಲ್ಲಿ ಆಹಾರ ಸ್ವಾವಲಂಬನೆಗೆ ದಾರಿಯಾದ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದೂ ಅದೇ ವರ್ಷದಲ್ಲಿ. ಈ ಹಿನ್ನೆಲೆಯಲ್ಲಿಯೇ ಶಾಸ್ತ್ರಿಯವರು ದೇಶಕ್ಕೆ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ನೀಡಿದ್ದು.)

ಅತ್ತ ಯೋಗಿ ಆದಿತ್ಯನಾಥ್ ‘ಮೋದಿ ಸೇನೆ’ ಎನ್ನುತ್ತಾರೆ; ಇತ್ತ ಸ್ವತಃ ಮೋದಿ, ಭಯೋತ್ಪಾದಕರ ಮನೆಯೊಳಗೆ ನುಗ್ಗಿ ಹೊಡೆಯುತ್ತೇನೆ ಎಂದು ಗರ್ಜಿಸುತ್ತಾರೆ….

ಅಂತೂ ಇದು ಇವರ ರಾಷ್ಟ್ರೀಯತೆ.

ಹೋಗಲಿ. ಬಿಜೆಪಿಯು ರಾಷ್ಟ್ರೀಯತೆ, ಭಯೋತ್ಪಾದನೆ ಮುಂತಾದ ಮಂತ್ರಗಳನ್ನು ಹೀಗೆ ಒಂದೇ ಸಮ ಉಸಿರುಗಟ್ಟಿ ಜಪಿಸುವುದೇಕೆ? ಈ ಏರು ಗಂಟಲಿನ ಅರಚಾಟದ ಹಿಂದೆ ಯಾವುದೋ ಸುಪ್ತ ಅಳುಕು, ಯಾವುದೋ ಪಾಪಪ್ರಜ್ಞೆಯ ನೆರಳಿದೆಯೇ?…

ಇದೊಂದು ಕೌತುಕಮಯ ಪ್ರಶ್ನೆ. ಮತ್ತು ಇದಕ್ಕೆ ಉತ್ತರ ಸರಳವಾಗಿದೆ.

ನಮ್ಮ ದೇಶ ಗಳಿಸಿದ ಸ್ವಾತಂತ್ರ್ಯದ ಹಿಂದೆ ಅಸೀಮ ತ್ಯಾಗ ಬಲಿದಾನದ ಕಥೆಗಳಿವೆ. ಕೋಟ್ಯಂತರ ಸ್ವಾತಂತ್ರ್ಯ ಪ್ರೇಮಿಗಳು,- ಸಾಮಾನ್ಯರಲ್ಲಿ ಸಾಮಾನ್ಯರಾದ ಜನರು- ತಮ್ಮ ತನು ಮನ ಸರ್ವಸ್ವವನ್ನೂ ಪಣಕ್ಕಿಟ್ಟು ಬ್ರಿಟಿಷರ ತುಪಾಕಿಗೆ ಎದೆಯೊಡ್ಡಿ ದಶಕಗಳ ಕಾಲ ನಡೆಸಿದ ಹೋರಾಟದ ಫಲವಿದು. ಈ ಸಂಗ್ರಾಮದಲ್ಲಿ ಬಿಜೆಪಿಯ ಪೂರ್ವಜರಾದ ಆರೆಸ್ಸೆಸ್ ಆಗಲಿ, ಇತರೆ ಹಿಂದೂತ್ವದ ಸಂಘಟನೆಗಳಾಗಲೀ, ಎಂದೂ ಅಪ್ಪಿ ತಪ್ಪಿಯೂ ಪಾಲ್ಗೊಳ್ಳಲಿಲ್ಲ.

ಹಿಂದೂತ್ವದ ತಾತ್ವಿಕ ಮುಖಂಡರಾದ ಸಾವರ್ಕರ್ ಅಂಡಮಾನ್ ಜೈಲಿನಿಂದ ಬ್ರಿಟಿಷರಿಗೆ ಒಂದಾದ ಮೇಲೊಂದು ತಪ್ಪೊಪ್ಪಿಗೆ ಪತ್ರ ಬರೆದು ಸೆರೆವಾಸದಿಂದ ಹೊರಬಂದವರು. ಬಂದ ಮೇಲೆ ಬಿಡುಗಡೆಯ ಷರತ್ತುಗಳಿಗೆ ಅನುಗುಣವಾಗಿ ಕಡೆಯವರೆಗೂ ಬ್ರಿಟಿಷರಿಗೆ ನಿಷ್ಠವಾಗಿದ್ದವರು. ಈ ಹೇಡಿ ಕೆಲಸವನ್ನು ಮರೆಸಲೆಂದೇ ಅವರಿಗೆ ‘ವೀರ’ ಸಾವರ್ಕರ್ ಎಂಬ ಬಿರುದು! ಗಾಂಧಿ ಹತ್ಯೆ ಸಂಚಿನಲ್ಲಿ ಪಾಲ್ಗೊಂಡ ಅವರ ಆಳೆತ್ತರದ ಭಾವಚಿತ್ರಕ್ಕೆ (ಲೋಕಸಭೆಯಲ್ಲಿ) ಸ್ವತಃ ಗಾಂಧೀಜಿ ಭಾವಚಿತ್ರದ ಎದುರಿನ ಜಾಗ! ಸಾವರ್ಕರ್ ಆಗಲೀ, ಆರೆಸ್ಸೆಸ್ಸಿನ ಹೆಡಗೆವಾರ್, ಗುರೂಜಿ ಗೋಲ್ವಾಲ್ಕರ್- ಇವರೆಲ್ಲರೂ ‘ನಮ್ಮ ಶತ್ರುಗಳು ಬ್ರಿಟಿಷರಲ್ಲ. ಅವರ ವಿರುದ್ಧ ಹೋರಾಡಲು ಭಾರತೀಯರು ತಮ್ಮ ಶಕ್ತಿ ವಿನಿಯೋಗಿಸಬಾರದು. ನಮ್ಮ ಶತ್ರುಗಳೆಂದರೆ- ದೇಶದೊಳಗಿನ ಅಲ್ಪಸಂಖ್ಯಾತರು’ ಎಂದು ಬಾಯಿ ಬಿಟ್ಟು ಮತ್ತೆ ಮತ್ತೆ ವಿಸ್ತಾರವಾಗಿ ಬರೆದರು, ಬೋಧಿಸಿದರು, ಪ್ರಚಾರ ಮಾಡಿದರು. 1930 ಮತ್ತು 40ರ ದಶಕಗಳಲ್ಲಂತೂ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಸಂಘಟನೆಗಳು ಸಾರಾಸಗಟಾಗಿ ಸ್ವಾತಂತ್ರ್ಯ ಚಳವಳಿಗೆ ವಿರುದ್ಧವಾಗಿ, ಬ್ರಿಟಿಷರಿಗೆ ಮತ್ತೂ ನಿಕಟವಾಗಿ ಬೆಂಗಾವಲಾಗಿ ನಿಂತವು. ಸಂಗ್ರಾಮದಲ್ಲಿ ಧುಮುಕಲು ಚಡಪಡಿಸಿದ ಎಳೆಯರಿಗೆ ಸಂಘ ಪರಿವಾರದ ಹಿರಿಯರು ‘ಮುಂಬರುವ ನೈಜ ಸಮರಕ್ಕೆ’ (ಅಂದರೆ ಅಲ್ಪಸಂಖ್ಯಾತರ ವಿರುದ್ಧ) ತಮ್ಮ ಚೈತನ್ಯವನ್ನು ಮುಡಿಪಾಗಿಡುವಂತೆ ಬೋಧಿಸಿದರು!

ಚಲೇಜಾವ್ ಆಂದೋಲನ ಸಂದರ್ಭದ ಕೇಂದ್ರ ಗೃಹ ಇಲಾಖೆ ಟಿಪ್ಪಣಿಯೊಂದು ‘1942ರ ಸಮಯದಲ್ಲಿ ನಡೆದ ಸಂಘದ ಸಭೆಗಳಲ್ಲಿ ಮುಖಂಡರು ಕಾಂಗ್ರೆಸ್ ಸಂಗ್ರಾಮದಿಂದ ದೂರ ಉಳಿಯುವಂತೆ ತಾಕೀತು ಮಾಡುತ್ತಿದ್ದರು’ ಎಂದು ದಾಖಲಿಸಿದೆ. ಬಾಂಬೆ ಗೃಹ ಕಾರ್ಯದರ್ಶಿ ಎಚ್.ವಿ.ಆರ್. ಅಯ್ಯಂಗಾರ್ ಕೂಡ 1944ರ ಫೆಬ್ರವರಿ 16ರಂದು ಸರ್ಕಾರಕ್ಕೆ ಕೊಟ್ಟ ವರದಿಯಲ್ಲಿ ‘ಸಂಘ ಅತ್ಯಂತ ಜಾಗರೂಕವಾಗಿ ಕಾನೂನಿನ ಪರಿಧಿಯಲ್ಲೇ ಉಳಿದುಕೊಂಡಿದೆ; 1942ರ ಕ್ಷೋಭೆಯಲ್ಲಿ ಯಾವ ಬಗೆಯಲ್ಲೂ ಭಾಗವಹಿಸಲೇ ಇಲ್ಲ’ ಎಂದು ಬರೆದರು.

ಅಷ್ಟೇಕೆ, ಗೋಲ್ವಲ್ಕರ್- ಬ್ರಿಟಿಷ್ ವಿರೋಧಿ ರಾಷ್ಟ್ರೀಯತಾವಾದವನ್ನು ‘ಪ್ರತಿಗಾಮಿ’ ಎಂದೇ ಬಣ್ಣಿಸಿದರು (ತಮ್ಮ ‘ಬಂಚ್ ಆಫ್ ಥಾಟ್ಸ್’ನಲ್ಲಿ):

‘ಭೌಗೋಳಿಕ ರಾಷ್ಟ್ರೀಯತೆಯ ಕಲ್ಪನೆಯು ನಿಜವಾದ ಹಿಂದೂ ರಾಷ್ಟ್ರೀಯತೆಗೆ ಕಂಟಕಕಾರಿಯಾಗಿದೆ. ಹಾಗಾಗಿ ‘ಸ್ವಾತಂತ್ರ್ಯ ಚಳವಳಿ’ ಎಂಬುದು ಕೇವಲ ಬ್ರಿಟಿಷ್ ವಿರೋಧಿ ಆಂದೋಲನವಾಗಿಬಿಟ್ಟಿದೆ. ಬ್ರಿಟಿಷ್ ವಿರೋಧವನ್ನೇ ದೇಶಭಕ್ತಿ ಮತ್ತು ರಾಷ್ಟ್ರೀಯತಾವಾದ ಎಂದು ಬಿಂಬಿಸಲಾಗುತ್ತಿದೆ. ಈ ಪ್ರತಿಗಾಮಿ ದೃಷ್ಟಿಕೋನವು ಒಟ್ಟಾರೆಯಾಗಿ ಇಡೀ ಸ್ವಾತಂತ್ರ್ಯ ಸಂಗ್ರಾಮ, ಅದರ ನೇತಾರರು ಮತ್ತು ಜನಸಾಮಾನ್ಯರ ಮೇಲೆ ಅನಾಹುತಕಾರಿ ಪರಿಣಾಮಗಳನ್ನು ಬೀರಿದೆ…’

ಎರಡನೇ ವಿಶ್ವಯುದ್ಧ ಆರಂಭವಾದಾಗ ಭಾರತೀಯರ ಒಪ್ಪಿಗೆ ಪಡೆಯದೆ ಅವರನ್ನು ಯುದ್ಧಕ್ಕೆ ನೂಕಿದ ಬ್ರಿಟಿಷ್ ನೀತಿಯನ್ನು ಪ್ರತಿಭಟಿಸಿ ಕಾಂಗ್ರೆಸ್ ನಾಯಕರು ಪ್ರಾಂತೀಯ ಸರ್ಕಾರಗಳಿಗೆ ರಾಜೀನಾಮೆ ನೀಡಿ ಹೊರಬರುತ್ತಿದ್ದರೆ, ಹಿಂದೂ ಮಹಾಸಭಾ ಮುಖಂಡರು ಆ ಜಾಗಗಳನ್ನು ತುಂಬತೊಡಗಿದರು. ಸಾವರ್ಕರರಂತೂ ಬ್ರಿಟಿಷರ ಯುದ್ಧ ಪ್ರಯತ್ನಗಳಲ್ಲಿ ಕೈ ಜೋಡಿಸುವಂತೆ ಹಿಂದೂಗಳಿಗೆ ಬಹಿರಂಗ ಕರೆ ಕೊಟ್ಟರು. ಇನ್ನು ಹಿಂದೂ ಮಹಾಸಭಾ ಮುಖಂಡರು, ಮುಸ್ಲಿಂ ಲೀಗ್ ಜೊತೆಗೂಡಿ ಬ್ರಿಟಿಷ್ ಸಂಸ್ಥಾನದಿಂದ ತಮ್ಮ ಕಡೆಗೆ ಬೀಳುವ ರೊಟ್ಟಿ ತುಣುಕುಗಳನ್ನು ಆರಿಸಿಕೊಳ್ಳತೊಡಗಿದರು. 42ರ ಮಹಾಸಂಗ್ರಾಮದ ಸಮಯದಲ್ಲೇ ಬಂಗಾಳದ ಫಜಲ್ ಉಲ್ ಹಕ್ ನೇತೃತ್ವದ ಸರ್ಕಾರದಲ್ಲಿ ಹಿಂದೂ ಮಹಾಸಭಾದ ಎಸ್.ಪಿ. ಮುಖರ್ಜಿ ಮಂತ್ರಿಯಾಗಿದ್ದರು…

ಇನ್ನು ‘ಕವಿಹೃದಯದ ಅಜಾತಶತ್ರು, ಭಾರತರತ್ನ’ ಅಟಲ ಬಿಹಾರಿ ವಾಜಪೇಯಿ ಕೂಡ ತಮ್ಮ 16ನೇ ವಯಸ್ಸಿನಲ್ಲಿ ತವರು ಪ್ರಾಂತ್ಯವಾದ ಗ್ವಾಲಿಯರ್ನ ಬಾಂತೆವಾಡದಲ್ಲಿ ‘ಅಕಸ್ಮಾತ್ತಾಗಿ’ ಮೆರವಣಿಗೆಯಲ್ಲಿ ಭಾಗವಹಿಸಿ ಅಷ್ಟೇ ಅಕಸ್ಮಾತ್ತಾಗಿ ಬಂಧನಕ್ಕೊಳಗಾದಾಗ- ಆ ಮೆರವಣಿಗೆಗೂ ತಮಗೂ ಸಂಬಂಧವಿಲ್ಲವೆಂದು ಬರೆದು ಕೊಟ್ಟು ಬಿಡುಗಡೆ ಹೊಂದಿದರು. (1942). ಅಷ್ಟೇ ಅಲ್ಲ, ಆ ಮೆರವಣಿಗೆಯನ್ನು ಆಯೋಜಿಸಿದವರ ಹೆಸರು ಕೊಟ್ಟು ಆ ಮುಂದಾಳುಗಳಿಗೆ ಶಿಕ್ಷೆಯಾಗಲೂ ಕಾರಣರಾದರು…!

ಸಂಘ ಪರಿವಾರದ ಇತಿಹಾಸ ಇಂಥದ್ದು. ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ನಡವಳಿಕೆ- ನೇರಾನೇರ ‘ದೇಶದ್ರೋಹ’ದ್ದು. ಇಂಥ ದೇಶದ್ರೋಹದ ಪಾಪದ ಭಾರ ಹೊತ್ತವರು, ಈಗ ತನ್ನದು ಮಾತ್ರ ದೇಶಭಕ್ತಿ; ಉಳಿದೆಲ್ಲರದೂ ದೇಶದ್ರೋಹ ಎಂದು ಒರಲುತ್ತಿರುವುದು, ಹೆಗಲು ಮುಟ್ಟಿ ನೋಡಿಕೊಳ್ಳುವ ಕುಂಬಳಕಾಯಿ ಕಳ್ಳನ ವರಸೆಯಂತಿದೆ. ತನ್ನ ಕಳ್ಳತನ ಮರೆಸಲು, ಮಿಕ್ಕೆಲ್ಲರನ್ನೂ ಕಳ್ಳರೆಂದು ಕರೆಯುವ ಅಸಲಿ ಕಳ್ಳರ ವೈಖರಿಯಿದು!…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....