Homeಮುಖಪುಟಎನ್‍ಡಿಎ ತೊರೆಯುವರೇ ನಿತೀಶ್ ಕುಮಾರ್? ಇಲ್ಲಿವೆ ಪೊಲಿಟಿಕಲ್ ಸಿಂಪ್ಟಮ್‍ಗಳು

ಎನ್‍ಡಿಎ ತೊರೆಯುವರೇ ನಿತೀಶ್ ಕುಮಾರ್? ಇಲ್ಲಿವೆ ಪೊಲಿಟಿಕಲ್ ಸಿಂಪ್ಟಮ್‍ಗಳು

ಪ್ರಗ್ಯಾರನ್ನು ಬಿಜೆಪಿ ಪಕ್ಷದಿಂದಲೇ ವಜಾ ಮಾಡಬೇಕು ಎಂದೇಳಿರುವುದು ಬಿಜೆಪಿ ಜೊತೆ ಸಂಘರ್ಷಕ್ಕೆ ತಯಾರಾಗಿರುವ ಸೂಚನೆಯನ್ನು ರವಾನಿಸುತ್ತಿದೆ

- Advertisement -
- Advertisement -

| ಗಿರೀಶ್ ತಾಳಿಕಟ್ಟೆ |

ಲೋಕಸಭಾ ಫಲಿತಾಂಶ ಹೊರಬೀಳಲು ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಉಳಿದಿವೆ. ನಿಜವಾದ ರಾಜಕಾರಣ ಗರಿಗೆದರುವ `ಗೋಲ್ಡನ್ ಅವರ್’ ಇದು. ಯಾಕೆಂದರೆ ಮತದಾರರನ್ನು ಓಲೈಸಲು ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸುತ್ತಾ, ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿದ್ದ ನಾಯಕರು ಅಧಿಕಾರಕ್ಕಾಗಿ `ಹಳೆಯದನೆಲ್ಲ ಮರೆತು(!) ಹೊಸ ಮಿತ್ರ’ರಿಗೆ ಹುಡುಕಾಟ ನಡೆಸುವ, ಹೊಂದಾಣಿಕೆ ಸಮೀಕರಣಗಳ ಗುಣಾಕಾರಕ್ಕಿಳಿಯುವ ತೆರೆಮರೆ ಕಸರತ್ತುಗಳ ಸುಗ್ಗಿ ಶುರುವಾಗುವುದೇ ಈ ಹಂತದಲ್ಲಿ. ಅದರಲ್ಲೂ ಎನ್‍ಡಿಎಗಾಗಲಿ, ಯುಪಿಎಗಾಗಲಿ ಸ್ಪಷ್ಟ ಬಹುಮತ ಸಿಗಲಾರದು ಎಂದೇ ಬಹಳಷ್ಟು ರಾಜಕೀಯ ಪರಿಣಿತರು ಭವಿಷ್ಯ ನುಡಿಯುತ್ತಿರುವ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳ ಐಕಾನ್‍ಗಳು ಚರ್ಚೆಯ ಮುನ್ನೆಲೆಗೆ ಬಂದು ನಿಲ್ಲುತ್ತಿದ್ದಾರೆ. ಹೀಗೆ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಮುನ್ನೆಲೆಗೆ ಬಂದಾಗಲೆಲ್ಲ ಕೇಳಿಬರುತ್ತಿದ್ದ ಒಂದು ಹೆಸರೆಂದರೆ ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್‍ರದ್ದು. ಆದರೆ ಈಗವರು ದೊಡ್ಡ ಗೊಂದಲದಲ್ಲಿರುವಂತೆ ಕಂಡುಬರುತ್ತಿದೆ. ಗೊಂದಲ ಎನ್ನುವುದಕ್ಕಿಂತ ದೊಡ್ಡ ಇಕ್ಕಟ್ಟು ಎನ್ನುವುದೇ ಸೂಕ್ತ. ವಿಪರ್ಯಾಸವೆಂದರೆ, ಅವರೇ ಸೃಷ್ಟಿಸಿಕೊಂಡ ಇಕ್ಕಟ್ಟು ಅದು.

ಅವರ ಜೆಡಿಯು ಪಕ್ಷ ಹಾಲಿ ಎನ್‍ಡಿಎ ಮೈತ್ರಿಕೂಟದ ಸದಸ್ಯ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡೇ ಅವರೀಗ ಸದ್ಯ ಬಿಹಾರದ ಮುಖ್ಯಮಂತ್ರಿ ಹುದ್ದೆಯಲ್ಲಿರುವುದು. ಹಾಗಾಗಿ ಎನ್‍ಡಿಎ ಮೈತ್ರಿಕೂಟದ ಬಿಗ್‍ಬಾಸ್ `ಬಿಜೆಪಿ’ಯ ನಿಲುವುಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಅವರಿದ್ದಾರೆ. ಅಂದರೆ, ಎನ್‍ಡಿಎ `ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂದು ಘೋಷಿಸಿದಾಗ ಸ್ವತಃ ತಾನೇ ಪಿಎಂ ಆಗುವ ಕ್ಯಾಲಿಬರ್‍ನ ವ್ಯಕ್ತಿ ಎನ್ನುವ ಭಾವನೆ ಇದ್ದಾಗಲೂ ನಿತೀಶ್ ಕುಮಾರ್ ಅದಕ್ಕೆ ಸಮ್ಮತಿ ಸೂಚಿಸಬೇಕಾಗಿ ಬಂತು. 2014ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮೋದಿಯವರನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದಕ್ಕೆ ಮುನಿಸಿಕೊಂಡು ಎನ್‍ಡಿಎನಿಂದ ನಿತೀಶ್ ಹೊರಬಂದದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಪ್ರತಿರೋಧ ಒಡ್ಡಲು ನಿತೀಶ್‍ಗೆ ಸಾಧ್ಯವಾಗಲಿಲ್ಲ. 40 ಸ್ಥಾನಗಳ ಪೈಕಿ ಬಿಜೆಪಿ ಮೋದಿ ಅಲೆಯಲ್ಲಿ 22 ಸ್ಥಾನಗಳಲ್ಲಿ ಗೆದ್ದರೆ ನಿತೀಶ್ ಕೇವಲ ಎರಡು ಸ್ಥಾನಕ್ಕಷ್ಟೇ ಸುಸ್ತಾದರು. ನೆರೆಯ ಗುಜರಾತ್ ಸಿಎಂ ಆಗಿದ್ದಾಗಿನಿಂದಲೂ ಮೋದಿಯನ್ನು ವಿರೋಧಿಸಿಕೊಂಡೇ ಬಂದಿದ್ದ ನಿತೀಶ್ ಆ ಸೋಲನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಂಡರು. ಮೋದಿ ಅಲೆಗೆ ತಡೆಯೊಡ್ಡಬೇಕೆಂಬ ಏಕೈಕ ಕಾರಣಕ್ಕೆ ತನ್ನ ದೀರ್ಘಕಾಲದ ಎದುರಾಳಿ ಲಾಲು ಪ್ರಸಾದ್ ಯಾದವ್‍ರ ಆರ್‍ಜೆಡಿ ಸೇರಿದಂತೆ ಕಾಂಗ್ರೆಸ್ ಪಕ್ಷವನ್ನೂ ಒಳಗೊಂಡ `ಮಹಾಘಟಬಂಧನ್’ ಮೈತ್ರಿಕೂಟವನ್ನು ರಚಿಸಿಕೊಂಡು 2015ರಲ್ಲಿ ಎದುರಾದ ಬಿಹಾರ ವಿಧಾನಸಭಾ ಚುನಾವಣೆ ಎದುರಿಸಿದರು. ಅವರ ತಂತ್ರ ವಿಫಲವಾಗಲಿಲ್ಲ. ಒಟ್ಟು 243 ಸ್ಥಾನಗಳ ಪೈಕಿ ನಿತೀಶ್‍ರ ಮೈತ್ರಿಕೂಟ 178 ಸ್ಥಾನಗಳಲ್ಲಿ ಗೆದ್ದು ಅಧಿಕಾರ ದಕ್ಕಿಸಿಕೊಂಡರೆ, ಮೋದಿ ಭರ್ಜರಿ ಪ್ರಚಾರ ನಡೆಸಿದ ಹೊರತಾಗಿಯೂ ಎನ್‍ಡಿಎ ಮೈತ್ರಿಕೂಟ ಅಲ್ಲಿ ಗೆಲ್ಲಲು ಸಾಧ್ಯವಾದದ್ದು 58 ಕ್ಷೇತ್ರಗಳಲ್ಲಿ ಮಾತ್ರ. ಮೋದಿ ವಿಜಯದ ಅಲೆಯ ಉತ್ತುಂಗದಲ್ಲಿದ್ದ ಕಾಲ ಅದು. ಅಂತಹ ಸಮಯದಲ್ಲೇ ಮೋದಿಗೆ ಸೋಲಿನ ರುಚಿ ತೋರಿಸಿದ್ದ ನಿತೀಶ್ ರಾಷ್ಟ್ರ ನಾಯಕನಾಗುವ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಅದೇ ಕಾರಣಕ್ಕೆ, ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಅತಿಹೆಚ್ಚು (80) ಸ್ಥಾನಗಳನ್ನು ಜಯಿಸಿದ ಲಾಲು ಪ್ರಸಾದರ ಆರ್‍ಜೆಡಿ, ತನಗಿಂತ ಕಡಿಮೆ (71) ಸ್ಥಾನಗಳಲ್ಲಿ ಗೆದ್ದಿದ್ದ ಜೆಡಿಯುನ ನಿತೀಶ್ ಕುಮಾರ್‍ರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಂಡಿತ್ತು.

ಆದರೆ ನಿತೀಶ್ ಅಂತಹ ಭರವಸೆ ಉಳಿಸಿಕೊಳ್ಳಲಿಲ್ಲ. ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್ (ಲಾಲು ಪ್ರಸಾದ್ ಮಗ) ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದದ್ದನ್ನು ಮತ್ತು ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯಗಳು ಲಾಲು ಪ್ರಸಾದ್ ಯಾದವ್ ಕುಟುಂಬದ ಮೇಲೆ ದಾಳಿ ನಡೆಸಿದ್ದನ್ನು ಕಾರಣವಾಗಿಟ್ಟುಕೊಂಡು 2017 ಜುಲೈ 5ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್ ಕುಮಾರ್ ಮಹಾಘಟಬಂಧನ್ ಮೈತ್ರಿಯನ್ನು ತುಂಡರಿಸಿದರು. ಅದಾದ ಕೆಲವೇ ಘಂಟೆಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಿತೀಶ್ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನಕ್ಕೆ ರೆಡಿಯಾದರು!

ಇದೆಲ್ಲ ಮುಗಿದುಹೋದ ಇತಿಹಾಸ. ಆದರೆ ಈ ಗತವೇ ನಿತೀಶ್ ಕುಮಾರ್‍ಗೆ ಒದಗಬಹುದಾಗಿದ್ದ ದೊಡ್ಡ ಅವಕಾಶಕ್ಕೆ ಅಡ್ಡಿಯಾಗಿ ಕೂತಿದೆ. ಕಳೆದ ಐದು ವರ್ಷದಲ್ಲಿ ತನ್ನ ಜನಪ್ರಿಯತೆ ಕಳೆದುಕೊಂಡಿರುವ ಮೋದಿ ಸರ್ಕಾರ ಈ ಸಲ ಬಹುಮತ ಗಳಿಸಿಕೊಳ್ಳಲು ಏದುಸಿರು ಬಿಡಬೇಕಾದ ಪರಿಸ್ಥಿತಿ ಇದೆ. ಮೋದಿಯ ಆಕ್ರಮಣಕಾರಿ ರಾಜನೀತಿಯಿಂದ ಬೇಸತ್ತಿರುವ ಇನ್ನುಳಿದ ರಾಜಕೀಯ ಪಕ್ಷಗಳು `ಪ್ರಜಾಪ್ರಭುತ್ವದ ಉಳಿವಿನ’ ಹೆಸರಿನಲ್ಲಿ ಒಗ್ಗೂಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಪ್ರಯತ್ನದಲ್ಲಿವೆ, ಮತ್ತು ದಿನದಿಂದ ದಿನಕ್ಕೆ ಆ ಪ್ರಯತ್ನಗಳು ಗಂಭೀರಗೊಳ್ಳುತ್ತಿವೆ.

ತೆಲಂಗಾಣದ ಕೆಸಿಆರ್, ಆಂದ್ರದ ಚಂದ್ರಬಾಬು ನಾಯ್ಡು ಥರದ ನಾಯಕರೇ ರಾಷ್ಟ್ರ ರಾಜಕಾರಣದಲ್ಲಿ ಕದಲಾಡುತ್ತಿರುವ ಇಂಥಾ ಸಂದರ್ಭದಲ್ಲಿ, ಎನ್‍ಡಿಎಯಿಂದ ಹೊರಗಿದ್ದಿದ್ದರೆ ನಿತೀಶ್ ಕುಮಾರ್‍ಗೆ ಸಹಜವಾಗಿಯೇ ಮಹತ್ವದ ಪಾತ್ರ ಲಭಿಸುತ್ತಿತ್ತು. ಆದರೆ ಎನ್‍ಡಿಎ ಮೈತ್ರಿ ಅವರ ಕೈಕಟ್ಟಿ ಹಾಕಿದೆ. ಈಗಾಗಲೇ ಮೋದಿಯೇ ಮತ್ತೊಮ್ಮೆ ಪ್ರಧಾನಿ ಅಭ್ಯರ್ಥಿ ಎಂದು ಎನ್‍ಡಿಎ ಘೋಷಿಸಿರುವುದರಿಂದ, ಮೋದಿಯಲ್ಲದಿದ್ದರು ಗಡ್ಕರಿಯಂತ ನಾಯಕನನ್ನು ಸಂಘ ಪರಿವಾರ ಎರಡನೇ ಆಯ್ಕೆಯಾಗಿ ಸಿದ್ಧವಾಗಿಟ್ಟುಕೊಂಡಿರುವುದರಿಂದ ಎನ್‍ಡಿಎಯಲ್ಲೇ ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಹೆಸರು ಕೇಳಿ ಬರುವ ಸಾಧ್ಯತೆ ಇಲ್ಲ. ಈ ಎಲ್ಲಾ ಅಂಶಗಳು ಅರಿವು ಇರುವುದರಿಂದ ನಿತೀಶ್ ಕುಮಾರ್ ಎನ್‍ಡಿಎಯಿಂದ ಹೊರಬರುವ ತಯಾರಿಯಲ್ಲಿದ್ದಾರಾ? ಎಂಬ ಅನುಮಾನಗಳು ಕಾಡಲು ಶುರುವಾಗಿವೆ. ಇತ್ತೀಚೆಗಿನ ಅವರ ನಡವಳಿಕೆಗಳು, ಬಿಜೆಪಿಗೆ ಮುಜುಗರ ಉಂಟುಮಾಡುವಂತ ಅವರ ಹಾಗೂ ಅವರ ಪಕ್ಷದವರ ಹೇಳಿಕೆಗಳು ಇಂಥಾ ಅನುಮಾನವನ್ನು ದಟ್ಟವಾಗಿಸುತ್ತಿವೆ.

ಅಂತಹ ಅವರ ಲೇಟೆಸ್ಟ್ ಹೇಳಿಕೆಯಿಂದಲೇ ಶುರು ಮಾಡುವುದಾದರೆ, ಮಧ್ಯಪ್ರದೇಶದ ಭೋಪಾಲ್ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್‍ರನ್ನು `ಗೋಡ್ಸೆ ದೇಶಭಕ್ತ’ ಹೇಳಿಕೆಯ ಕಾರಣಕ್ಕೆ ಪಕ್ಷದಿಂದ ವಜಾ ಮಾಡಬೇಕು ಎಂಬ ನಿತೀಶ್‍ರ ಮಾತು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಯಾಕೆಂದರೆ, ಮಲೆಗಾಂವ್ ಸ್ಫೋಟದ ಆರೋಪ ಹೊತ್ತು ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಪ್ರಗ್ಯಾ ಸಿಂಗ್‍ರನ್ನು ಬಿಜೆಪಿ ಕಣಕ್ಕಿಳಿಸಿದ್ದೇ ತನ್ನ ಬಹುಸಂಖ್ಯಾತ ಕೋಮುವಾದ ರಾಜಕಾರಣದ ಪ್ರತೀಕವಾಗಿ. ಹಾಗಾಗಿ ಅವರ ಅತಿರೇಕದ ಹೇಳಿಕೆಗಳಿಗೆ ಪ್ರಧಾನಿ, ಬಿಜೆಪಿ ಅಧ್ಯಕ್ಷರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರೂ ಆ ಪಕ್ಷದ ಸಿದ್ಧಾಂತ ಒಳಗೊಳಗೇ ಬೆಂಬಲಿಸುವ ಸಾಧ್ಯತೆಯೇ ಹೆಚ್ಚು. ಬಿಜೆಪಿ ಮೊದಲಿನಿಂದಲೂ ಇಂಥಾ ಟ್ರಯಲ್ ಅಂಡ್ ಎರರ್ ಪ್ರಯೋಗಗಳನ್ನು ಮಾಡಿಕೊಂಡೇ ಬಂದಿದೆ. ಅಂಬೇಡ್ಕರ್, ಗಾಂಧಿ ಮತ್ತು ಸಂವಿಧಾನವನ್ನು ಅವಮಾನಿಸುವವರಿಗೆ ಪರೋಕ್ಷವಾಗಿ ಬೆಂಬಲಿಸುತ್ತಾ, ಉನ್ನತ ಹುದ್ದೆಗಳನ್ನು ನೀಡುತ್ತಾ ಬಹಿರಂಗವಾಗಿ ಅವರ ಹೇಳಿಕೆ, ಕೃತ್ಯಗಳನ್ನು `ವೈಯಕ್ತೀಕರಣ’ಗೊಳಿಸಿ ಸಮಾಜದ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡುತ್ತದೆ. ಹಾಗಾಗಿ ಬಿಜೆಪಿ ವಲಯದಲ್ಲಿ ಪ್ರಗ್ಯಾ ಹೇಳಿಕೆಗೆ ಬಹಿರಂಗವಾಗಿ ಗೋಚರವಾಗುತ್ತಿರುವ ಖಂಡನೆಗಳು, ಆಂತರ್ಯದಲ್ಲಿ ಬೆಂಬಲಗಳಾಗಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಇದು ನಿತೀಶ್ ಕುಮಾರ್‍ಗೂ ಗೊತ್ತಿಲ್ಲದ ಸತ್ಯವೇನಲ್ಲ. ಹಾಗಿದ್ದೂ ಅವರು ಪ್ರಗ್ಯಾರನ್ನು ಬಿಜೆಪಿ ಪಕ್ಷದಿಂದಲೇ ವಜಾ ಮಾಡಬೇಕು ಎಂದೇಳಿರುವುದು ಬಿಜೆಪಿ ಜೊತೆ ಸಂಘರ್ಷಕ್ಕೆ ತಯಾರಾಗಿರುವ ಸೂಚನೆಯನ್ನು ರವಾನಿಸುತ್ತಿದೆ. ಅತಂತ್ರ ಲೋಕಸಭಾ ಸಾಧ್ಯತೆಯ ಮೇ 23ರ ಫಲಿತಾಂಶದ ಸನಿಹದಲ್ಲಿ ಹೊರಬಿದ್ದಿರುವ ಅವರ ಹೇಳಿಕೆ ಈ ಅರ್ಥಕ್ಕೇ ಹೆಚ್ಚು ಆಪ್ಯಾಯವೆನಿಸುತ್ತದೆ.

ಇದಕ್ಕಿಂತಲೂ ಮೇ 9ರಂದು ಬಿಹಾರ ರಾಜಕಾರಣದಲ್ಲಿ ನಡೆದ ಘಟನೆಯೊಂದು ಹೆಚ್ಚು ಇಂಟರೆಸ್ಟಿಂಗ್ ಆಗಿದೆ. ಅವತ್ತು ಜೆಡಿಯುನ ಹಾಲಿ ಎಂಎಲ್‍ಸಿ, ಮಾಜಿ ರಾಜ್ಯಸಭಾ ಸದಸ್ಯರೂ ಆದ ಗುಲಾಂ ರಸೂಲ್ ಬಲ್ಯಾವಿಯವರು ಒಂದು ಹೇಳಿಕೆ ನೀಡಿದ್ದರು. “ಹೇಗೂ ಈ ಸಲ ಕೇಂದ್ರದಲ್ಲಿ ಎನ್‍ಡಿಎ ಬಹುಮತ ಪಡೆಯುವುದಿಲ್ಲವಾದ್ದರಿಂದ, ನಿತೀಶ್ ಕುಮಾರ್‍ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಎನ್‍ಡಿಎ ಪ್ರೊಜೆಕ್ಟ್ ಮಾಡಲಿ” ಎಂಬ ಅವರ ಮಾತು ಬಿಹಾರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, “ಎನ್‍ಡಿಎ (ಬಿಜೆಪಿ, ಜೆಡಿಯು) ಬಿಹಾರದಲ್ಲಿ ನಿತೀಶ್ ಕುಮಾರ್‍ರ ವರ್ಚಸ್ಸಿನಿಂದಲೇ ಎಲ್ಲಾ 40 ಕ್ಷೇತ್ರಗಳಲ್ಲಿ ಜಯಗಳಿಸಲಿದೆ” ಎಂಬುದನ್ನೂ ಅವರು ಹೇಳಿದ್ದರು. ಸಹಜವಾಗಿಯೇ ಬಿಜೆಪಿ ಈ ಹೇಳಿಕೆಯನ್ನು ಖಂಡಿಸಿತ್ತಾದರು ಜೆಡಿಯುನ ಯಾವೊಬ್ಬ ನಾಯಕರೂ ಅದನ್ನು ಖಂಡಿಸುವ ಗೋಜಿಗೇ ಹೋಗದೆ ಪರೋಕ್ಷ ಬೆಂಬಲ ತೋರ್ಪಡಿಸಿದರು. ಇನ್ನೂ ಎರಡು ಹಂತದ ಚುನಾವಣೆ ಬಾಕಿ ಇರುವಾಗಲೇ ಎನ್‍ಡಿಎ ಭಾಗವಾಗಿರುವ ಪಕ್ಷದ ಸದಸ್ಯನೇ ಸೋಲಿನ ಹೇಳಿಕೆ ಕೊಟ್ಟಿದ್ದರ ವಿರುದ್ಧ ಬಿಜೆಪಿ ಪ್ರತಿರೋಧ ಹೆಚ್ಚಾದ ನಂತರವಷ್ಟೇ ಜೆಡಿಯು ರಾಜ್ಯಾಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್ ಅವರು ಮಧ್ಯಪ್ರವೇಶ ಮಾಡಿದರು. ಆಗಲೂ ಅವರು ಬಲ್ಯಾವಿಯವರ ಹೇಳಿಕೆಯನ್ನು ಅಲ್ಲಗಳೆಯಲಿಲ್ಲ, ಬದಲಿಗೆ ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೆ ಎಂದೇಳಿ ಕೈತೊಳೆದುಕೊಂಡರು.

ಆದರೆ ಎನ್‍ಡಿಎ ಒಳಗೇ ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆ ತುಂಬಾ ಕಮ್ಮಿ. ಯಾಕೆಂದರೆ ಒಟ್ಟು 40 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ, ಜೆಡಿಯು ತಲಾ 17 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಇನ್ನುಳಿದ 6 ಕ್ಷೇತ್ರಗಳನ್ನು ಮತ್ತೊಂದು ಮಿತ್ರಪಕ್ಷವಾದ ಎಲ್‍ಜೆಪಿಗೆ ಬಿಟ್ಟುಕೊಡಲಾಗಿದೆ. ನೆನಪಿರಲಿ, ಕಳೆದ ಸಲ ಬಿಜೆಪಿ ಗೆದ್ದಿದ್ದು 22 ಸ್ಥಾನಗಳಲ್ಲಿ ಅವುಗಳಲ್ಲಿ 5 ಸ್ಥಾನಗಳನ್ನು ನಿತೀಶ್‍ಗೆ ಬಿಟ್ಟುಕೊಟ್ಟು ಸಮಬಲದಲ್ಲಿ ಚುನಾವಣೆ ಎದುರಿಸುತ್ತಿವೆ. ಬಲ್ಯಾವಿ ಹೇಳುವ ಸಾಧ್ಯತೆ ಕ್ಷೀಣವಾಗಿಯಾದರು ಘಟಿಸಬೇಕೆಂದರೆ ಬಿಹಾರದಲ್ಲಿ ನಿತೀಶ್‍ರ ಜೆಡಿಯು ಕಡೇಪಕ್ಷ ಬಿಜೆಪಿ ಗೆಲ್ಲುವ ಸ್ಥಾನಗಳಿಗಿಂತ ಒಂದೆರಡು ಸ್ಥಾನಗಳನ್ನಾದರು ಹೆಚ್ಚು ಗೆಲ್ಲಬೇಕು. ಐದು ವರ್ಷಗಳ ನೀರಸ ಆಡಳಿತದಿಂದ ಬಿಜೆಪಿ ಒಂದಷ್ಟು ಸ್ಥಾನಗಳನ್ನು ಇಲ್ಲಿ ಕಳೆದುಕೊಳ್ಳುವ ಸಾಧ್ಯತೆ ಇದೆಯಾದರು, ಜೆಡಿಯು ಆ ಕಡಿಮೆ ಸ್ಥಾನಗಳಿಗಿಂತ ಹೆಚ್ಚು ಸೀಟು ಗೆಲ್ಲುವ ಸಾಮಥ್ರ್ಯ ಉಳಿಸಿಕೊಂಡಿಲ್ಲ. ಪದೇಪದೇ ಮೈತ್ರಿ ಬದಲಾಯಿಸಿಕೊಂಡು `ಪಲ್ಟಿ ಕುಮಾರ್’ ಎಂಬ ಅಪಖ್ಯಾತಿಗೆ ಈಡಾಗಿರುವ ನಿತೀಶ್‍ರಿಗೆ ಬಿಜೆಪಿ ಮೈತ್ರಿಯೇ ದೊಡ್ಡ ಕಂಟಕವಾಗಿದೆ. ಯಾಕೆಂದರೆ ಬಿಹಾರದ ಸೋಶಿಯಲ್ ಇಂಜಿನಿಯರಿಂಗ್ ಅನ್ನು ನೋಡಿದಾಗ ಇಲ್ಲಿ ನಿತೀಶ್ ಕುಮಾರ್ ಪ್ರತಿನಿಧಿಸುವ ಕುರ್ಮಿ ಸಮುದಾಯ ಇಲ್ಲಿ ಕೇವಲ 2% ಮತದಾರರನ್ನಷ್ಟೇ ಹೊಂದಿದೆ. ಇಲ್ಲಿ ಬಹುಸಂಖ್ಯಾತರಾಗಿರುವ ಯಾದವ್‍ರು ಲಾಲೂ ಅವರ ಆರ್‍ಜೆಡಿ ಜೊತೆಗಿದ್ದರೆ, ಇನ್ನುಳಿದ ಮೇಲ್ಜಾತಿಗಳಾದ ಬ್ರಾಹ್ಮಣ, ರಜಪೂತರು, ಭೂಮಿಹಾರ, ಕಾಯಸ್ತಾ ಸಮುದಾಯಗಳು ಬಿಜೆಪಿ ಜೊತೆಗೆ ನಿಲ್ಲುತ್ತವೆ. 2%ನಷ್ಟಿರುವ ತನ್ನ ಕುರ್ಮಿ ಸಮುದಾಯವನ್ನಷ್ಟೇ ನಂಬಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದರಿತ ನಿತೀಶ್ ಇಲ್ಲಿ ಮೂರು `ಎಂ’ಗಳ ಹೊಸ ಸಮೀಕರಣ ಕಟ್ಟಿದ್ದರು; ಅಲ್ಪಸಂಖ್ಯಾತರು (Minoritie), ಅತಿ ಹಿಂದುಳಿದ ಜಾತಿಗಳು (Most backward class), ಮತ್ತು ಮಹಾದಲಿತರು (ದಲಿತರಲ್ಲೇ ಬಡವರು). ಈ ಕೆಮಿಸ್ಟ್ರಿಯ ಮತಪ್ರಮಾಣ ಶೇ.50ಕ್ಕೂ ಹೆಚ್ಚು. ಆದ್ದರಿಂದಲೇ ನಗಣ್ಯ ಸಮುದಾಯದ ನಿತೀಶ್ ಕುಮಾರ್ ಬಿಹಾರದಲ್ಲಿ ಬಲಾಢ್ಯ ನಾಯಕನಾಗಲು ಸಾಧ್ಯವಾದದ್ದು. ಬಿಜೆಪಿ ಜೊತೆ ಸಖ್ಯ ಹೊಂದಿದ್ದರು ಮುಸ್ಲಿಮರು, ದಲಿತರು, ಹಿಂದುಳಿದವರ ಪರವಾಗಿ ಕೋಮುಗಲಭೆಗಳಿಲ್ಲದ, ಜಾತಿ ಹಲ್ಲೆಗಳಿಲ್ಲದ ಆಡಳಿತ ನೀಡುತ್ತಾ ಆ ಸಮುದಾಯಗಳ ವಿಶ್ವಾಸ ಸಂಪಾದಿಸಿಕೊಂಡಿದ್ದರು. ಭಾಗಲ್ಪುರ್ ಗಲಭೆಯ ಪ್ರಕರಣವನ್ನು ಮತ್ತೆ ತನಿಖೆಗೊಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಿದ್ದಲ್ಲದೆ, ಗಲಭೆಯಲ್ಲಿ ಹತ್ಯೆಯಾದ, ಕಾಣೆಯಾದ ವ್ಯಕ್ತಿಗಳ ಮಕ್ಕಳಿಗೆ ಶಾಶ್ವತವಾಗಿ ಮಾಸಿಕ ರೂ.2,500 ಪಿಂಚಣಿ ಘೋಷಿಸಿದ್ದು ಇವೆಲ್ಲ ನಿತೀಶ್‍ರ ಕೆಮಿಸ್ಟ್ರಿಯನ್ನು ದಟ್ಟವಾಗಿಸುತ್ತಾ ಬಂದಿದ್ದವು.

ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರು, ದಲಿತರ ಮೇಲಿನ ಹಲ್ಲೆಗಳು ಹೆಚ್ಚಾಗಿದ್ದು ಅವರನ್ನು ಅಪರಾಧೀಕರಣಗೊಳಿಸುವ ಯತ್ನಗಳೂ ಜೋರಾಗಿರುವುದರಿಂದ ಆ ಸಮುದಾಯಗಳು ಹಿಂದೆಂದಿಗಿಂತಲೂ ಹೆಚ್ಚು ಬಿಜೆಪಿ ವಿರುದ್ಧ ಸೆಟೆದು ನಿಂತಿವೆ. ನಿತೀಶ್ ಕುಮಾರ್‍ರ `ಕೋಮು-ವಿರೋಧಿ’ ಬಣ್ಣವೂ ಮತ ಸೆಳೆಯುವ ತಾಕತ್ತು ಉಳಿಸಿಕೊಂಡಿಲ್ಲ. ಹಾಗಾಗಿ ನಿತೀಶ್‍ರ ಜೆಡಿಯು ಹೆಚ್ಚು ಸೀಟು ಗೆಲ್ಲುವ ಸಾಧ್ಯತೆ ಇಲ್ಲ. ಬಿಹಾರದಲ್ಲೇ ಬಿಜೆಪಿಗಿಂತಲೂ ಕಡಿಮೆ ಸ್ಥಾನ ಗೆಲ್ಲಲಿರುವ ಸ್ಥಿತಿಯಲ್ಲಿರುವುದು ಗೊತ್ತಿದ್ದೂ ಬಲ್ಯಾವಿಯವರು ಅಂತಹ ಹೇಳಿಕೆ ಕೊಡುತ್ತಾರೆ ಮತ್ತು ಅದನ್ನು ಕಠಿಣವಾಗಿ ಖಂಡಿಸುವ ಯತ್ನ ಜೆಡಿಯುನಿಂದ ಕಾಣಬರುವುದಿಲ್ಲ ಎನ್ನುವುದು, ನಿತೀಶ್ ಎನ್‍ಡಿಎ ಮೈತ್ರಿಕೂಟದಿಂದ ಹೊರನಡೆಯಲು ಸಿದ್ಧಗೊಂಡಿರುವ ಸೂಚನೆ ಕೊಡುತ್ತಿರುವಂತಿದೆ.

ಈ ಹಿಂದೆಯೂ 2017ರಲ್ಲಿ ಮಹಾಘಟಬಂಧನ್ ಜೊತೆಗಿನ ಮೈತ್ರಿ ಮುರಿದುಕೊಳ್ಳುವ ಮೊದಲು ನಿತೀಶ್ ಕುಮಾರ್, ಆರ್‍ಜೆಡಿ ಮತ್ತು ಲಾಲು ಕುಟುಂಬದ ವಿರುದ್ಧ ತಮ್ಮ ಪಕ್ಷದ ನಾಯಕರಿಂದ ಇಂಥಾ ಹೇಳಿಕೆಗಳನ್ನು ಹೇಳಿಸಿ, ಒಂದು ಚರ್ಚೆ ಹುಟ್ಟಿಕೊಳ್ಳುವಂತೆ ನೋಡಿಕೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಅಂದಹಾಗೆ, ಏಪ್ರಿಲ್ 25ರಂದು ಬಿಹಾರದ ದಭಾರ್ಂಗದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮೋದಿ `ವಂದೇ ಮಾತರಂ’ ಮತ್ತು `ಭಾರತ್ ಮಾತಾಕಿ’ ಘೋಷಣೆಗಳನ್ನು ಕೂಗಿದಾಗ ಅದೇ ವೇದಿಕೆಯಲ್ಲಿದ್ದ ನಿತೀಶ್ ಕುಮಾರ್ ತುಂಬಾ ಗೊಂದಲಕ್ಕೀಡಾದಂತೆ ನೀರಸವಾಗಿ ಪ್ರತಿಕ್ರಿಯಿಸಿದ ವೀಡಿಯೊ ವೈರಲ್ ಆಗಿದ್ದನ್ನು ನೀವೆಲ್ಲ ಗಮನಿಸಿರಬಹುದು. ಆಗಲೇ ನಿತೀಶ್ ಎನ್‍ಡಿಎ ಒಳಗೆ ತುಂಬಾ ಇಕ್ಕಟ್ಟಿನ ವಾತಾವರಣದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಅದು ಇನ್ನಷ್ಟು ಸ್ಪಷ್ಟವಾಗುತ್ತಿದೆ.

ವಿಡಿಯೋ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read