Homeಮುಖಪುಟಮೋದಿ ಸರಕಾರದ ಒಂಬತ್ತು ವರ್ಷಗಳು: ಆರಿಸಿದ್ದೀರಿ, ಅಳುತ್ತಿದ್ದೀರಿ...

ಮೋದಿ ಸರಕಾರದ ಒಂಬತ್ತು ವರ್ಷಗಳು: ಆರಿಸಿದ್ದೀರಿ, ಅಳುತ್ತಿದ್ದೀರಿ…

ಸ್ವತಂತ್ರ ಭಾರತದ ಇತಿಹಾಸದಲ್ಲಿ 17ನೇ ಲೋಕಸಭೆಯು ಅತ್ಯಂತ ಕನಿಷ್ಠ ಅವಧಿಯ ಕಲಾಪ ನಡೆಸಿದೆ ಎನ್ನುವ ಕುಖ್ಯಾತಿಗೆ ಭಾಜನವಾಗಲಿದೆ. ಮೋದಿಯವರ ಅವಧಿಯಲ್ಲಿ ಪ್ರತಿ ವರ್ಷ ಸರಾಸರಿ 58 ದಿನಗಳ ಕಲಾಪ ನಡೆಸಲಾಗಿದೆ. 1952-72ರ ಅವಧಿಯಲ್ಲಿ ಪ್ರತಿ ವರ್ಷ 120 ದಿನಗಳ ಕಲಾಪ ನಡೆಸಲಾಗಿತ್ತು.

- Advertisement -
- Advertisement -

ಮನುಷ್ಯರ ಕುರಿತು ಹೇಳುವುದಾದರೆ ಅವರೇನು ಎನ್ನುವುದರ ಕುರಿತು ನನಗೆ ಆಸಕ್ತಿಯಿಲ್ಲ, ಅವರು ಯಾವ ರೀತಿ ರೂಪುಗೊಳ್ಳುತ್ತಾರೆ ಎನ್ನುವುದಷ್ಟೆ ಮುಖ್ಯ
– ಸಾರ್ತ್ರೆ

ಪೀಠಿಕೆ

2014ರಲ್ಲಿ ಮೋದಿಯವರು ಪ್ರಧಾನಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಾಗ ’ಅವರು ಇಂಡಿಯಾವನ್ನು ಬದಲಿಸುತ್ತಾರ? ಮನಮೋಹನ್ ಸಿಂಗ್ ಮಾಡಲಾಗದ್ದು ಇವರು ಮಾಡುತ್ತಾರ? ಇಂಡಿಯಾವನ್ನು ಸೂಪರ್‌ಪವರ್ ಮಾಡುತ್ತಾರ?’ ಎನ್ನುವ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ ಅತ್ಯಂತ ಮುಖ್ಯವಾದ ಮತ್ತು ಸೂಕ್ಷ್ಮವಾದ ವಿಚಾರವೇನೆಂದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಮೇಲಿನ ಪ್ರಶ್ನೆಗಳು ಸಂಪೂರ್ಣವಾಗಿ ವಿರೋಧಾತ್ಮಕವಾಗಿವೆ ಎಂಬುದು. ಆದರೆ ಈ ಮನಸ್ಥಿತಿಯಿಂದ ಹೊರಬರಲು ಅಸಮರ್ಥವಾಗಿರುವುದೇ ಇಂಡಿಯಾ ರಾಜಕೀಯದ ಒಂದು ಬಹುದೊಡ್ಡ ಬಿಕ್ಕಟ್ಟಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಜೆಗಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತ ಅವರನ್ನು ಪ್ರಭುತ್ವಕ್ಕೆ, ಆಡಳಿತಗಾರರಿಗೆ ಶರಣಾಗಿಸಲಾಗುತ್ತಿದೆ. ಈ ಅವಧಿಯಲ್ಲಿ ಮೋದಿಯವರ ವ್ಯಕ್ತಿತ್ವವನ್ನು ವೈಭವೀಕರಿಸಲಾಯಿತು. ಆದರೆ ನಾಯಕನನ್ನು ಈ ರೀತಿಯಾಗಿ ಉದ್ಧಾರಕನೆಂದು ಪರಿಭಾವಿಸುವುದು ಸರಿಯೇ ಎನ್ನುವ ಪ್ರಶ್ನೆಗಳನ್ನು ಮತ್ತೆಮತ್ತೆ ಕೇಳಿಕೊಳ್ಳಬೇಕು. ಸಂಸದೀಯ ವ್ಯವಸ್ಥೆಯನ್ನೆ ತಿರಸ್ಕರಿಸುವ ಪ್ರಧಾನಮಂತ್ರಿಯನ್ನು ಎರಡನೇ ಬಾರಿ ಆಯ್ಕೆ ಮಾಡುವ ದೇಶದ ಭವಿಷ್ಯವನ್ನು ನೀವೆ ಊಹಿಸಿ ಎನ್ನುವ ಉತ್ತರ ಇದಕ್ಕೆ ದೊರಕುತ್ತದೆ. ಅಂದರೆ ಮಾಡಿದ್ದುಣ್ಣೋ ಮಾರಾಯ, ಹಗಲು ಕಂಡ ಬಾವಿಗೆ ಇರುಳಿನಲ್ಲಿ ಬಿದ್ದಂತೆ ಎಂದರ್ಥ. ಎಂಟು ವರ್ಷಗಳ ಹಿಂದೆ ಸಮಾಜಶಾಸ್ತ್ರಜ್ಞ ಶಿವ ವಿಶ್ವನಾಥನ್ ಹೇಳಿದ ಮಾತನ್ನ ಈಗ ಅನ್ವಯಿಸಿ ಹೇಳುವುದಾದರೆ ಪ್ರಧಾನಮಂತ್ರಿ ಮೋದಿಯವರ ಒಂಬತ್ತು ವರ್ಷದ ಆಡಳಿತದ ಸಾಧನೆಯೆಂದರೆ ಅದು ಸ್ವತಃ ಮೋದಿಯ ಪುನಃಸೃಷ್ಟಿ, ಶೋಧನೆ ಮತ್ತು ಮಾರಾಟ. ಜೊತೆಗೆ 56 ಇಂಚಿನ ಎದೆ ಎನ್ನುವುದು ನಗೆಪಾಟಿಲಿಗೆ ಈಡಾದ ಪ್ರಹಸನ ನೋಡುವ ಭಾಗ್ಯವನ್ನು ಭಾರತೀಯರಿಗೆ ದೊರಕಿಸಿಕೊಟ್ಟ ಮೋದಿ ಮತ್ತು ಸಂಘಪರಿವಾರಕ್ಕೆ ಧನ್ಯವಾದಗಳನ್ನು ಹೇಳದೇಹೋದರೆ ತಪ್ಪಾಗುತ್ತದೆ.

ಭಾರತದ ಪ್ರಜಾಪ್ರಭುತ್ವವು ತನ್ನ ಬಾಲ್ಯಾವಸ್ಥೆಯಿಂದ ಬೆಳೆದು ಮಾಗಬೇಕಾದರೆ ಬಂಧುತ್ವ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಬಂಧುತ್ವವು ಕೇಂದ್ರಸ್ಥಾನವನ್ನು ಅಲಂಕರಿಸಬೇಕು. ಒಳಗೊಳ್ಳುವಿಕೆ ಮತ್ತು ಬಹುತ್ವ ಚಿಂತನೆಗಳನ್ನು ಈ ಬಂಧುತ್ವ ಒಳಗೊಂಡಿರಬೇಕು ಎಂದು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮತ್ತು ಸಂವಿಧಾನದ ಬಗ್ಗೆ ತಮ್ಮ ಬರಹಗಳಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಳೆದ 9 ವರ್ಷದ ಆಡಳಿತದಲ್ಲಿ ’ಬಹುಸಂಖ್ಯಾತವಾದ ತತ್ವದ ಪ್ರಚಾರ ಮತ್ತು ’ನ್ಯಾಯಾಂಗ’ ಹಾಗೂ ಶಾಸಕಾಂಗ’ಗಳ ಪ್ರಸ್ತುತತೆಯನ್ನೇ ಅಸಿಂಧುಗೊಳಿಸುವ ನೀತಿಗಳ ಮೂಲಕ ಇಂಡಿಯಾವನ್ನು ಕತ್ತಲ ದಾರಿಯಲ್ಲಿ ತಂದು ನಿಲ್ಲಿಸಿದ್ದಾರೆ. ಬಂಧುತ್ವ ಕಾಣೆಯಾಗಿ ಪ್ರತ್ಯೇಕತೆ ಮತ್ತು ತಾರತಮ್ಯ ಮೇಲುಗೈ ಸಾಧಿಸಿದೆ. ಸಂವಿಧಾನವನ್ನು ಅಪ್ರಸ್ತುತಗೊಳಿಸಲಾಗುತ್ತಿದೆ. ಅಂಬೇಡ್ಕರ್ ಅವರನ್ನು ತಮ್ಮ ಬ್ರಾಹ್ಮಣಶಾಹಿ ಸಿದ್ಧಾಂತದೊಳಗೆ ಜೀರ್ಣಿಸಿಕೊಳ್ಳಲು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ದಲಿತರ ಮೇಲೆ ಹೀನಾಯವಾದ ಜಾತಿ ದೌರ್ಜನ್ಯಗಳು ನಡೆದಿವೆ. ಆದರೆ ಆರೋಪಿಗಳು ಪ್ರಚ್ಛನ್ನವಾಗಿ ಅಡ್ಡಾಡುತ್ತಿರುವುದು ಮೋದಿ ಸರಕಾರದ ಸಾಧನೆ. ಎಂತಹ ವ್ಯಂಗ್ಯವೆಂದರೆ ದಲಿತರನ್ನು ಶೋಷಿಸುತ್ತಲೇ ’ನಾವು ನಿಮ್ಮ ರಕ್ಷಕರು’ ಎನ್ನುವ ಹುಸಿತನವನ್ನು ಬಿತ್ತುತ್ತಿದ್ದಾರೆ. ಇದರಲ್ಲಿ ಯಶಸ್ವಿಯಾಗಿದ್ದಾರೆಯೇ? ಉತ್ತರ ಹೌದು ಮತ್ತು ಇಲ್ಲ.

ಮೋದಿ ಆಡಳಿತದಲ್ಲಿ ಭಾರತವು ಸಂಸದೀಯ ಪ್ರಜಾಪ್ರಭುತ್ವದಿಂದ ಚುನಾವಣಾ ಸರ್ವಾಧಿಕಾರದೆಡೆಗೆ ಚಲಿಸುತ್ತಿದೆ. ಸಂಸತ್ತು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆ. ಈಗಿನ 17ನೆ ಲೋಕಸಭೆಯು ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ 230 ದಿನ ಕಲಾಪ ನಡೆಸಿದೆ. ಇನ್ನುಳಿದ ಒಂದು ವರ್ಷದ ಅವಧಿಯಲ್ಲಿ ಉಳಿದ 58 ದಿನಗಳನ್ನು ಪರಿಗಣಿಸಿದರೆ 2019-24ರ ಅವಧಿಯಲ್ಲಿ ಕೇವಲ 288 ದಿನಗಳ ಕಲಾಪ ನಡೆಸಿದಂತಾಗುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ 17ನೆ ಲೋಕಸಭೆಯು ಅತ್ಯಂತ ಕನಿಷ್ಠ ಅವಧಿಯ ಕಲಾಪ ನಡೆಸಿದೆ ಎನ್ನುವ ಕುಖ್ಯಾತಿಗೆ ಭಾಜನವಾಗಲಿದೆ. ತಮಾಷೆಯೆಂದರೆ 16ನೆ ಲೋಕಸಭೆಯು (2014-19) 331 ದಿನಗಳ ಕಾಲ ಕಾರ್ಯನಿರ್ವಹಿಸಿ ಈ ಕನಿಷ್ಠ ದಿನಗಳ ಕಲಾಪದ ಸ್ಪರ್ಧೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೋದಿಯವರ ಅವಧಿಯಲ್ಲಿ ಪ್ರತಿ ವರ್ಷ ಸರಾಸರಿ 58 ದಿನಗಳ ಕಲಾಪ ನಡೆಸಲಾಗಿದೆ. 1952-72ರ ಅವಧಿಯಲ್ಲಿ ಪ್ರತಿ ವರ್ಷ 120 ದಿನಗಳ ಕಲಾಪ ನಡೆಸಲಾಗಿತ್ತು. 17ನೆ ಲೋಕಸಭೆಯಲ್ಲಿ ಸರಾಸರಿ 34 ನಿಮಿಷದಲ್ಲಿ ಮತ್ತು ರಾಜ್ಯಸಭೆಯಲ್ಲಿ ಸರಾಸರಿ 46 ನಿಮಿಷದಲ್ಲಿ ಮಸೂದೆಗಳನ್ನು ಅನುಮೋದನೆ ಮಾಡಲಾಗಿದೆ. ವಿವಾದಾತ್ಮಕ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದಾರೆ. ಅನೇಕ ಮಸೂದೆಗಳನ್ನು ’ಮನಿ ಬಿಲ್’ ಎನ್ನುವ ಅಡ್ಡದಾರಿಯ ಮೂಲಕ ಕಾಯ್ದೆಯಾಗಿಸಿದ್ದಾರೆ. ಇಲ್ಲಿ ವಿರೋಧ ಪಕ್ಷಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಆಡಳಿತ ಪಕ್ಷದ ಅನೀತಿಗಳ ವಿರುದ್ಧ ಮಾತನಾಡುವ ಸಂಸದರ ಮೈಕ್‌ನ್ನು ನಿಶ್ಯಬ್ದಗೊಳಿಸಿದ ದುಷ್ಕೃತ್ಯಕ್ಕೂ ಈ 17ನೇ ಲೋಕಸಭೆ ಸಾಕ್ಷಿಯಾಗಿದೆ. ಸ್ಪೀಕರ್ ಆಡಳಿತ ಪಕ್ಷದ ಸಚೇತಕರಂತೆ ವರ್ತಿಸುವುದರ ಮೂಲಕ ಸಂಸತ್ತಿನ ಘನತೆಯನ್ನು ಹಾಳುಮಾಡಿದರು. ಇದರ ಮುಂದುವರಿದ ಭಾಗವಾಗಿ ಗುಲಾಮ ಮನಸ್ಥಿತಿಯ ಕೇಂದ್ರ ಮಂತ್ರಿಮಂಡಲವು ಈ ಬಿಕ್ಕಟ್ಟಿಗೆ ತನ್ನ ಕೊಡುಗೆಯನ್ನು ನೀಡಿದೆ. ಸಂಸದೀಯ ಪ್ರಜಾಪ್ರಭುತ್ವ ಎನ್ನುವುದು ಗೋಚರಿಸುತ್ತದೆಯೇ ಎನ್ನುವ ಪ್ರಶ್ನೆಗೆ ಬಿಜೆಪಿ ಬೆಂಬಲಿಗರು ಮತ್ತು ಬಹುಪಾಲು ಮಾಧ್ಯಮಗಳು ಆತ್ಮವಂಚನೆ ಇಲ್ಲದೆ ಉತ್ತರಿಸಬೇಕು ಎಂದು ನಿರೀಕ್ಷಿಸುವವರು ಮೂರ್ಖರಷ್ಟೆ.

ಆದರೆ ಈ ಸರ್ಕಾರ ಅವರ ಋಣ ತೀರಿಸಲೋ ಎಂಬಂತೆ ಇಂಡಿಯಾದ ಬಹುಪಾಲು ಮಾಧ್ಯಮಗಳು ಪುಂಖಾನುಪುಂಖವಾಗಿ ಮೋದಿ ಭಜನೆ ಮಾಡುತ್ತಿವೆ. ಕಳೆದ ಒಂಬತ್ತು ವರ್ಷಗಳಲ್ಲಿ ದೇಶದ ಪ್ರತಿಯೊಂದು ಸ್ಟುಡಿಯೋಗಳಲ್ಲಿ ಬಿಜೆಪಿ ವಕ್ತಾರರು, ಕೇಂದ್ರ ಮಂತ್ರಿಗಳ ದಂಡೇ ನೆರೆದಿರುವಂತೆ ವ್ಯವಸ್ಥಿತವಾಗಿ ಪ್ರಾಯೋಜಿಸಲಾಗಿತ್ತು. ಸಂಘ ಪರಿವಾರದೊಂದಿಗೆ ಕೈ ಜೋಡಿಸಿರುವ ಬಹುತೇಕ ಮಾಧ್ಯಮಗಳು ಒಳಗೊಂಡಂತೆ, ಸರ್ಕಾರದಿಂದ ಒಂಬತ್ತು ವರ್ಷಗಳ ಕಾಲ ಗೋಬೆಲ್ಸ್ ತಂತ್ರವನ್ನು ಬಳಸಿಕೊಂಡು ಸುಳ್ಳುಗಳನ್ನು ಪ್ರಚಾರ ಮಾಡಲಾಗುತ್ತಿದೆ. ಸುಳ್ಳುಗಳ ಭಾರವನ್ನು ಹೊತ್ತುಕೊಂಡ, ಅತಿರಂಜಿತ ಅಂಕಿಅಂಶಗಳನ್ನು ಉತ್ಪಾದಿಸಿ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. 56 ಇಂಚಿನ ಎದೆಯ ಸರ್ಕಾರ್ ’ಖುಷ್ ಹೋನೇ ಕೆ ಲಿಯೆ ಸಂಘ’ ಪರಿವಾರ ಬೆಂಬಲಿತ ಬಹುಪಾಲು ಮಾಧ್ಯಮಗಳು ಹಗಲಿರುಳು ಶ್ರಮಪಡುತ್ತಿದ್ದಾರೆ.

ಕಳೆದ ಒಂಬತ್ತು ವರ್ಷಗಳ ಮೋದಿ ಸರಕಾರದ ಸರ್ವಾಧಿಕಾರಿ ಆಡಳಿತವು ಸಂಘಪರಿವಾರದ ಮತಾಂಧತೆಗೆ ಹನಿಮೂನ್‌ನಂತಿದ್ದರೆ ಜನಸಾಮಾನ್ಯರು, ಮುಸ್ಲಿಂರು, ವಂಚಿತ ಸಮುದಾಯಗಳಿಗೆ ಯಾತನಾ ಶಿಬಿರದ ಅನುಭವವಾಗಿತ್ತು. ಆದರೆ ಬಹುಸಂಖ್ಯಾತವಾದದ ಈ ದುರಾಡಳಿತಕ್ಕೆ ಎಲ್ಲಿಯೂ ಶಿಕ್ಷೆಯಾಗಲಿಲ್ಲ ಎನ್ನುವ ಸಂಗತಿ ಮಾತ್ರ ನಮ್ಮ ಪ್ರಜಾಪ್ರಭುತ್ವದ ಮಿತಿಗಳನ್ನು ಸಾಬೀತುಪಡಿಸುತ್ತದೆ. ಮೋದಿ ಸರಕಾರದ ವೈಫಲ್ಯಗಳೇ ಅವರ ಸಾಧನೆಗಳೆಂದು ಪ್ರಚಾರ ಪಡೆದುಕೊಂಡಿರುವಂತಹ ವೈರುಧ್ಯಗಳ ಜಗತ್ತಿನಲ್ಲಿ ಬದುಕುತ್ತಿದ್ದೇವೆ. 2002-2014ರ ಆ ಹನ್ನೆರಡು ವರ್ಷಗಳ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ಆಡಳಿತದ ವಂಚನೆ, ಗುಜರಾತ್ ಮಾದರಿಯ ಮರೆಮೋಸ, 2002ರ ಗುಜರಾತ್ ಹತ್ಯಾಕಾಂಡವು 2014ರ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಆಯ್ಕೆಯಾಗುವುದಕ್ಕೆ ಮಾನದಂಡವಾಗಿ ಪರಿಗಣಿಸಲ್ಪಟ್ಟಿದ್ದನ್ನು ಹೇಗೆ ವಿಶ್ಲೇಷಿಸುವುದು? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಕೇವಲ ಜ್ಞಾನಯುಕ್ತ ಗುಂಪು ಮಾತ್ರವಲ್ಲ ಜೊತೆಗೆ ನ್ಯಾಯಪ್ರಜ್ಞೆಯುಳ್ಳ ಸಮುದಾಯವೂ ಹೌದು ಎನ್ನುವ ಸರ್ವಕಾಲಿಕ ಸತ್ಯದ ಸೋಲು ಪ್ರಜ್ಞಾವಂತರನ್ನು ಬೇತಾಳದಂತೆ ಕಾಡುತ್ತಲೇ ಇರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳದೆ ಮುಂದಣ ದಾರಿ ಗೋಚರಿಸುವುದಿಲ್ಲ.

ಮೋದಿ ಆಡಳಿತದಲ್ಲಿ ಧಾರ್ಮಿಕತೆ ಆಧರಿಸಿದ ರಾಷ್ಟ್ರೀಯವಾದ ಮತ್ತು ಅದರ ಭಾಗವಾಗಿರುವ ಬಹುಸಂಖ್ಯಾತವಾದವು ಪ್ರಜಾಪ್ರಭುತ್ವದ ಎಲ್ಲಾ ಆಶಯಗಳೊಂದಿಗೆ ಸಂಘರ್ಷ ನಡೆಸುತ್ತಿದೆ. ಇದು ಕೇವಲ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಮಾತ್ರವಲ್ಲ ತನ್ನ ಸಿದ್ಧಾಂತ ವಿರೋಧಿಗಳೆಲ್ಲರನ್ನೂ ಸದೆಬಡಿಯಲು ಮುನ್ನುಗ್ಗುತ್ತಿದೆ. ಮುಸ್ಲಿಮರ ವಿರುದ್ಧ ಶುರುವಾಗುವ ಈ ಅಸಹಿಷ್ಣುತೆ ಶೋಷಿತ ಸಮುದಾಯಗಳ ಮೇಲೆ ಹಲ್ಲೆ, ದೌರ್ಜನ್ಯಗಳನ್ನು ಶಾಶ್ವತಗೊಳಿಸುತ್ತಾ, ಸಾಮಾನ್ಯೀಕರಿಸುತ್ತಾ ಇದನ್ನು ವಿರೋಧಿಸುವ ಪ್ರಜ್ಞಾವಂತರನ್ನು ಒಳಗಿನ ಶತ್ರುಗಳನ್ನಾಗಿ ಸೃಷ್ಟಿಸುತ್ತಿದೆ. ಇಲ್ಲಿನ ಎಡಪಂಥೀಯರಿಗೆ, ಸಾಮಾಜಿಕ ಕಾರ್ಯಕರ್ತರಿಗೆ, ಮಾನವ ಹಕ್ಕುಗಳ ಹೋರಾಟಗಾರರಿಗೆ ನಗರ ನಕ್ಸಲರು, ದೇಶವಿರೋಧಿಗಳು, ತುಕ್ಡೆತುಕ್ಡೆ ಗ್ಯಾಂಗ್ ಅಂತೆಲ್ಲಾ ಹಣೆಪಟ್ಟಿ ಹಚ್ಚಲಾಗಿದೆ. ಇದು ’ದೇಶವೆಂದರೆ ಹಿಂದೂ ಸಮಾಜ’ವೆಂಬ ಸಿದ್ಧಾಂತವನ್ನು ಬಿತ್ತಿಬೆಳೆಸಲು ಮಾಡಿರುವ ಹುನ್ನಾರ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇನಿಲ್ಲ. ಇದು ಆರ್‌ಎಸ್‌ಎಸ್‌ನ ತೊಂಬತ್ತು ವರ್ಷಗಳ ಪರಿಶ್ರಮದ ಪರಿಣಾಮ ಎಂದರೆ ಅದು ದೇಶದ್ರೋಹವಂತೂ ಅಲ್ಲ.

ಕಳೆದ ಒಂಬತ್ತು ವರ್ಷಗಳಲ್ಲಿ ಗಾಂಧಿ ಹಂತಕ, ಚಿತ್ಪಾವನ್ ಬ್ರಾಹ್ಮಣ ನಾತುರಾಮ್ ಗೋಡ್ಸೆಯ ವೈಭವೀಕರಣ, ಕೇಂದ್ರ ಶಿಕ್ಷಣ ಇಲಾಖೆಯ ಮತೀಯವಾದೀಕರಣ, ಚರ್ಚುಗಳ ಮೇಲೆ ದಾಳಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವ ಘರ್ ವಾಪಸಿ ಎನ್ನುವ ಮೂಲಭೂತವಾದಿ ಕಾರ್ಯಚಟುವಟಿಕೆಗಳು, ಲವ್ ಜಿಹಾದಿಯ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯಗಳಂತಹ (ಮುಸ್ಲಿಮರನ್ನು ಮದುವೆಯಾಗುತ್ತಾರೆ ಎನ್ನುವ ಕಾರಣಕ್ಕೆ) ಫ್ಯಾಸಿಸ್ಟ್ ಪ್ರವೃತ್ತಿಯ ವರ್ತನೆಗಳು, ದಲಿತರ ಮೇಲೆ ಹಲ್ಲೆ, ವಿಶ್ವವಿದ್ಯಾಲಯಗಳಲ್ಲಿ ಭಿನ್ನಮತ ವ್ಯಕ್ತಪಡಿಸುವ ವಿದ್ಯಾರ್ಥಿಗಳ ಮೇಲೆ ಸಂಘ ಪರಿವಾರದ ಪುಂಡರಿಂದ ಹಿಂಸಾತ್ಮಕ ದಾಳಿ, ರೋಹಿತ್ ವೇಮುಲ, ಪಾಯಲ್, ದರ್ಶನ್ ಸೋಳಂಕಿ ಹಾಗೂ ಇತರ ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ, ಸಾಮಾಜಿಕ ಕಾರ್ಯಕರ್ತರು, ಮಾನವ ಹಕ್ಕುಗಳ ಹೋರಾಟಗಾರರನ್ನು ಯುಎಪಿಎ ಅಡಿಯಲ್ಲಿ ಬಂಧನ, ಇನ್ನೂ ಹಲವಾರು ವಿದ್ಯಮಾನಗಳಿಂದ ಇಂಡಿಯಾದ ಸಾರ್ವಜನಿಕ ಬದುಕಿನ ಜೀವಪರವಾದ ಎಲ್ಲಾ ಸೆಲೆಗಳು ನಾಶಗೊಂಡಿದೆ. ಇದು ನಮ್ಮ ಪ್ರಜಾಪ್ರಭತ್ವದ ಟೊಳ್ಳುತನವನ್ನು ತೋರಿಸುತ್ತದೆ. ಈ ಟೊಳ್ಳುಗೊಂಡಂತಹ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ಸರ್ಕಾರವೆಂದರೆ ಒಬ್ಬ ವ್ಯಕ್ತಿ ಅನೇಕರ ಮೇಲೆ ಅಧಿಕಾರ ಚಲಾಯಿಸುವುದೆಂದೇ ಅರ್ಥ. ಈ ಜನತೆ ಒಕ್ಕೂಟದಲ್ಲಿ ಒಂದಾಗುವುದೆಂದರೆ ಈ ಒಗ್ಗಟ್ಟು ಸರ್ವಾಧಿಕಾರದ ಸ್ವರೂಪ ಪಡೆದುಕೊಳ್ಳುವುದೇ ಇಲ್ಲಿನ ಬಲು ದೊಡ್ಡ ವ್ಯಂಗ್ಯ. ನಾವು ಈ ವೈರುಧ್ಯಗಳು ಗೊತ್ತಿಲ್ಲವೆಂಬಂತೆ ಬೌದ್ಧಿಕ ಪಾರಾಯಣಗಳಲ್ಲಿ ಮುಳುಗಿದ್ದೇವೆ. ಇದೂ ಸಹ ದುರಂತ.

ವರ್ತಮಾನ ಸ್ಥಿತಿಗತಿ

ಪ್ರೊ. ಸ್ಟೆನ್ ವಿಡ್ಮಾಲಂ ಅವರು ಹೇಳಿದಂತೆ 2009-2014 ಕಾಲಘಟ್ಟದಲ್ಲಿಯೇ ಪ್ರಜಾಪ್ರಭುತ್ವದ ಕುಸಿತದ ಆರಂಭದ ಲಕ್ಷಣಗಳು ಶುರುವಾದವು. ಮೋದಿಯಂತಹ ಸರ್ವಾಧಿಕಾರಿ, ನಾರ್ಸಿಸ್ಟ್ ಮನಸ್ಥಿತಿಯ ರಾಜಕಾರಣಿಗೆ ಮತ್ತು ಆರ್‌ಎಸ್‌ಎಸ್‌ನಂತಹ ಬ್ರಾಹ್ಮಣಶಾಹಿ ಸಂಘಟನೆಗೆ ದೇಶವನ್ನ ನಿರ್ನಾಮಗೊಳಿಸಲು 2009-14 ಕಾಲದ ಯುಪಿಎ2 ಆಡಳಿತ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿತು. 2018ರ ಪ್ರಜಾಪ್ರಭುತ್ವದ ವೈವಿಧ್ಯತೆ (ವಿ-ಡೆಮ್)ನ ಯೋಜನೆಯ ಸಮೀಕ್ಷೆಯು 0-1 ಸೂಚ್ಯಂಕ ಕ್ರಮದಲ್ಲಿ 1947-2017ರವರೆಗಿನ ಎಪ್ಪತ್ತು ವರ್ಷಗಳ ಭಾರತದ ಲಿಬರಲ್ ಪ್ರಜಾಪ್ರಭುತ್ವದ ಕಥನವನ್ನ ವಿವರಿಸುತ್ತದೆ. ಮಾನವ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಕಾನೂನು ಪಾಲನೆ, ನ್ಯಾಯಾಂಗದ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಸ್ವಾತಂತ್ರ್ಯ ಮತ್ತು ಚುನಾವಣ ಪ್ರಜಾಪ್ರಭುತ್ವಗಳ ವಲಯಗಳಲ್ಲಿ ಲಿಬರಲ್ ಪ್ರಜಾಪ್ರಭುತ್ವದ ಸೂಚ್ಯಂಕವು 1950-60ರ ದಶಕಗಳಲ್ಲಿ 0.55 ಮಟ್ಟದಲ್ಲಿತ್ತು. ಆದರೆ 1977ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ 0.28 ಮಟ್ಟಕ್ಕೆ ಕುಸಿಯಿತು. ಮರಳಿ 1990-2001ರ ಅವಧಿಯಲ್ಲಿ 0.60 ಸೂಚ್ಯಂಕಕ್ಕೆ ಏರಿಕೆ ಕಂಡಿತು. ಆದರೆ ಮೋದಿ ಆಡಳಿತದ 2017ರ ಹೊತ್ತಿಗೆ ಮರಳಿ 0.40 ಸೂಚ್ಯಂಕಕ್ಕೆ ಕುಸಿದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಸೂಚ್ಯಂಕವು 2004ರಲ್ಲಿ 0.85 ಮಟ್ಟದಲ್ಲಿದ್ದರೆ 2017ರಲ್ಲಿ ಅದು 0.40 ಮಟ್ಟಕ್ಕೆ ಕುಸಿದಿದೆ. 2004ರಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸೂಚ್ಯಂಕವು 0.8 ಮಟ್ಟದಲ್ಲಿದ್ದರೆ 2017ಕ್ಕೆ 0.55 ಕ್ರಮಾಂಕಕ್ಕೆ ಕುಸಿದಿದೆ. ಧಾರ್ಮಿಕ ಸಂಘಟನೆಗಳ ಪ್ರಾತಿನಿಧ್ಯವನ್ನ ಕಾಪಾಡುವ ನಿಟ್ಟಿನಲ್ಲಿ 2004ರಲ್ಲಿ ಸೂಚ್ಯಂಕವು 0.9 ಮಟ್ಟದಲ್ಲಿದ್ದರೆ 2017ರ ಮೋದಿ ಆಡಳಿತದಲ್ಲಿ 0.65 ಸೂಚ್ಯಂಕಕ್ಕೆ ಕುಸಿದಿದೆ.

ಇದನ್ನೂ ಓದಿ: ಒರಿಸ್ಸಾ ರೈಲು ದುರಂತಕ್ಕೆ ಮೋದಿ ಸರ್ಕಾರ ಹೊಣೆಯಲ್ಲವೇ?

ಐರಿಶ್ ಸಂಸ್ಥೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜರ್ಮನ್ ಸಂಸ್ಥೆ ಹಂಗರ್ ಹಿಲ್ಟ್ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ 2022ನೇ ಸಾಲಿನ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 121 ದೇಶಗಳ ಪಟ್ಟಿಯಲ್ಲಿ ಭಾರತ 107ನೆ ಸ್ಥಾನಕ್ಕೆ ಕುಸಿತ ಕಂಡಿದೆ. 2021ರಲ್ಲಿ 116 ದೇಶಗಳ ಪೈಕಿ ಭಾರತ 101ನೆ ಸ್ಥಾನದಲ್ಲಿತ್ತು. ಒಂದು ವರ್ಷದ ಅವಧಿಯಲ್ಲಿ 6 ಸ್ಥಾನಗಳ ಕುಸಿತ ಕಂಡಿದೆ. ಜನಸಂಖ್ಯೆಯಲ್ಲಿನ ಅಪೌಷ್ಠಿಕತೆಯು 2014ರಲ್ಲಿ ಶೇ.14.8ರಿಂದ 2022ಕ್ಕೆ ಶೇ.16.3 ಏರಿಕೆಯಾಗಿದೆ ಮತ್ತು ಐದು ವರ್ಷದೊಳಗಿನ ಮಕ್ಕಳ ಕ್ಷೀಣಿಸುವಿಕೆಯ ಪ್ರಮಾಣವು 2014ರಲ್ಲಿ ಶೇ.15.1ರಿಂದ 2022ರಲ್ಲಿ ಶೇ.19.3ಕ್ಕೆ ಏರಿಕೆಯಾಗಿದೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2022ರ ಸಾಲಿನ ವಿಶ್ವ ಸಂತೋಷ ಸೂಚ್ಯಂಕ ವರದಿಯಲ್ಲಿ 146 ದೇಶಗಳ ಪಟ್ಟಿಯಲ್ಲಿ ಭಾರತವು 136ನೇ ಸ್ಥಾನದಲ್ಲಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ನಂತರ 2015ರಲ್ಲಿ ಭಾರತವು 117ನೇ ಸ್ಥಾನದಲ್ಲಿತ್ತು. ನಾಲ್ಕು ವರ್ಷಗಳ ನಂತರ 133ನೇ ಸ್ಥಾನಕ್ಕೆ ಕುಸಿಯಿತು. ಎಂಟು ವರ್ಷಗಳ ನಂತರ 29 ಸ್ಥಾನ ಕುಸಿತವಾಗಿದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 180 ದೇಶಗಳ ಪಟ್ಟಿಯಲ್ಲಿ 150ನೇ ಸ್ಥಾನದಲ್ಲಿದೆ. ಕಳೆದ ವರ್ಷ 142ನೆ ಸ್ಥಾನದಲ್ಲಿತ್ತು. ಒಂದು ವರ್ಷದಲ್ಲಿ 8 ಸ್ಥಾನ ಕುಸಿತವಾಗಿದೆ. ವಿ-ಡೆಮ್ ವರದಿಯ ಪ್ರಕಾರ 2023ರ ಸಾಲಿನ ಸಮೀಕ್ಷೆಯಲ್ಲಿ ಚುನಾವಣಾ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವು 108ನೇ ಸ್ಥಾನದಲ್ಲಿದೆ. ಲಿಬರಲ್ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿ ಭಾರತವು 96ನೇ ಶ್ರೇಯಾಂಕ ಪಡೆದಿದೆ. ಇದು ಕೆಳಮಟ್ಟದ ಪ್ರಜಾಪ್ರಭುತ್ವದ ದೇಶಗಳ ಪಟ್ಟಿಯಲ್ಲಿ ಬರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತವು ಅತ್ಯಂತ ಕೆಟ್ಟ ನಿರಂಕುಶ ಪ್ರಭುತ್ವಗಳಲ್ಲಿ ಒಂದಾಗಿದೆ ಎಂದು ವಿ-ಡೆಮ್ ವರದಿ ಹೇಳುತ್ತದೆ.

ಈ ಎಲ್ಲ ಸಮೀಕ್ಷೆಗಳು ಮೋದಿ ಆಡಳಿತದ ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಜಾಪ್ರಭುತ್ವವು ಹಂತಹಂತವಾಗಿ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತ ಬಂದಿರುವುದನ್ನ ಸೂಚಿಸುತ್ತವೆ. ಆದರೆ ಈ ಮೌಲ್ಯಮಾಪನವೂ ಸಹ ಇಲ್ಲಿನ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸುತ್ತಿಲ್ಲ ಎನ್ನುವ ವಾಸ್ತವ ಸಂಗತಿಯ ಕಾರಣಕ್ಕೆ ಮೋದಿ ಮತ್ತು ಬಿಜೆಪಿ ಮಗುಳ್ನಗೆ ಬೀರುತ್ತಲೇ ಇದ್ದಾರೆ.

ಮೋದಿ ಪ್ರಧಾನಮಂತ್ರಿಯಾದ ನಂತರ ಅವರ ಗುಜರಾತ್ ಮುಖ್ಯಮಂತ್ರಿ ಕಾಲದ ಎಲ್ಲಾ ವಿವಾದಗಳನ್ನು ಮತ್ತು ನಿರಂಕುಶ ಅಧಿಪತ್ಯವನ್ನು ನೆನೆಸಿಕೊಂಡು ಪ್ರಜ್ಞಾವಂತರು ಆತಂಕಿತರಾಗಿದ್ದರು. ಆದರೆ ಅದು ಉತ್ಪ್ರೇಕ್ಷೆಯಲ್ಲ ಎನ್ನುವಂತೆ ಸಾಹೇಬ್ 2016ರಲ್ಲಿ ಏಕಪಕ್ಷೀಯವಾಗಿ ’ನೋಟು ಅಮಾನ್ಯೀಕರಣ’ವನ್ನು ಜಾರಿಗೊಳಿಸಿ ಇಡೀ ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದರು. ಇಲ್ಲಿ ಪ್ರಜಾಪ್ರಭುತ್ವವೇ ಅಣಕಗೊಂಡಿದ್ದು ಒಂದೆಡೆಯಾದರೆ ಅದರ ದುಷ್ಪರಿಣಾಮದಿಂದ ಉಂಟಾದ ನಿರುದ್ಯೋಗ ಮತ್ತು ಆರ್ಥಿಕ ಹಿಂಜರಿತದಿಂದ ಈ ದೇಶ ಇನ್ನೂ ಚೇತರಿಸಿಕೊಂಡಿಲ್ಲ. ರಫೇಲ್ ರಕ್ಷಣಾ ಖರೀದಿ ಹಗರಣದ ವಿವಾದ, ಕೋವಿಡ್ ಕಾಯಿಲೆಯನ್ನು ಸಮರ್ಥವಾಗಿ ನಿರ್ವಹಿಸಲು ವಿಫಲಗೊಂಡಿದ್ದು ಮುಂತಾದ ವೈಫಲ್ಯಗಳು ಮೋದಿ ಇಮೇಜ್ ವೃದ್ಧಿಸಲು ಸಹಕಾರಿಯಾಗಿದ್ದು ಮತ್ತೆಮತ್ತೆ ಕಾಡುತ್ತದೆ. ಭಾರತದ ಗಡಿಭಾಗದಲ್ಲಿ ಚೀನಾ ದೇಶದ ಅತಿಕ್ರಮಣದ ಆರೋಪಗಳಿಗೆ ’ಮೋದಿ ತಪ್ಪನ್ನು ಮಾಡುವುದಿಲ್ಲ’ ಎನ್ನುವ ನಿರೂಪಣೆ ಹೇಗೆ ಸಾರ್ವತ್ರಿಕವಾಗಿ ಪ್ರಚಾರ ಪಡೆಯಿತು ಎನ್ನುವುದರ ಕುರಿತು ಸಂಶೋಧನೆಯ ಅಗತ್ಯವಿಲ್ಲ. ಅದು ಅಂಗೈ ಹುಣ್ಣು.

ಮೋದಿ ಸರಕಾರದ ಒಂಬತ್ತು ವರ್ಷಗಳ ಆಡಳಿತದಲ್ಲಿ ನ್ಯಾಯಾಂಗ ವ್ಯವಸ್ಥೆಯು ಬಹುಮುಖ್ಯ ಬಲಿಪಶುವಾಗಿದೆ. 2018ರಲ್ಲಿ ಸುಪ್ರೀಂಕೋರ್ಟ್‌ನ ಐವರು ಹಿರಿಯ ನ್ಯಾಯಮೂರ್ತಿಗಳ ಪೈಕಿ ನಾಲ್ವರು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರಕಾರದ ಹಸ್ತಕ್ಷೇಪ ಮತ್ತು ಆಗಿನ ಮುಖ್ಯ ನ್ಯಾಯಮೂರ್ತಿಗಳ ಕಾರ್ಯವೈಖರಿ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಆ ಪತ್ರಿಕಾಗೋಷ್ಠಿಯ ಭಾಗವಾಗಿದ್ದ ರಂಜನ್ ಗೊಗೋಯ್ ನಂತರ ಕೇಂದ್ರ ಸರಕಾರದ ಪ್ರಭಾವಕ್ಕೆ ಒಳಗಾಗಿ ತೀರ್ಪು ಕೊಟ್ಟರು ಎನ್ನುವ ಆಪಾದನೆಗೆ ಒಳಗಾಗಬೇಕಾಯಿತು. 2018ರಲ್ಲಿ ’ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಹಕ್ಕಿದೆ’ ಎಂದ ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪನ್ನು ಜಾರಿಗೊಳಿಸಲು ಮುಂದಾದ ಅಲ್ಲಿನ ಕಮ್ಯುನಿಸ್ಟ್ ಸರಕಾರಕ್ಕೆ ಆಗಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿಮ್ಮ ಸರಕಾರವನ್ನು ಉರುಳಿಸುತ್ತೇವೆ ಎಂದು ಸಾರ್ವಜನಿಕವಾಗಿ ಧಮ್ಕಿ ಹಾಕಿದರು. ಬಿಜೆಪಿ ಪಕ್ಷವು ಸುಪ್ರೀಂಕೋರ್ಟ ನಿರ್ಧಾರದ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ, ಹಿಂಸಾಚಾರ ನಡೆಸಿತು. ಆದರೆ ಈ ಪ್ರಕರಣವು ಎಲ್ಲಿಯೂ ನ್ಯಾಯಾಂಗನಿಂದನೆ ಎಂದು ದಾಖಲಾಗಲಿಲ್ಲ. ನಂತರ ಅಯೋಧ್ಯೆ, ರಫೇಲ್, ಯುಎಪಿಎ, ಚುನಾವಣಾ ಬಾಂಡ್ ಮುಂತಾದ ಪ್ರಕರಣಗಳಲ್ಲಿ ತೀರ್ಪುಗಳು ಬಿಜೆಪಿ ಪರವಾಗಿ ಬಂದಿರುವುದು ಕಾಕತಾಳೀಯವಂತೂ ಅಲ್ಲ. ಇದೆಲ್ಲದರ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸುಪ್ರೀಂಕೋರ್ಟನ್ನು ಬಿಜೆಪಿ ಪಕ್ಷದ ಜಾರಿ ನಿರ್ದೇಶನಾಲಯದ ಮಟ್ಟಕ್ಕೆ ಇಳಿಸಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ನ್ಯಾಯಾಂಗ ವಿಚಾರಣೆಯ ವೇಳೆ ಕೇಂದ್ರ ಸರಕಾರವು ಮುಚ್ಚಿದ ಲಕೋಟೆಯ ಮೂಲಕ ದಾಖಲೆಗಳನ್ನು ಸಲ್ಲಿಸುವಂತಹ ಕೆಟ್ಟ ಪರಂಪರೆಯನ್ನು ಹುಟ್ಟುಹಾಕಲಾಯಿತು. ಈ ಅನೈತಿಕತೆಗೆ ಹಿಂದಿನ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ರಂಜನ್ ಗೋಗೊಯ್, ಶರದ್ ಬೊಬ್ಡೆ ಅವರ ಕೊಡುಗೆಯೂ ಇದೆ. ಆದರೆ ನಂತರ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ರಮಣ, ಲಲಿತ್ ಮತ್ತು ಈಗಿನ ಚಂದ್ರಚೂಡ್ ಅವರು ತಮ್ಮದೇ ಇತಿಮಿತಿಯಲ್ಲಿ ನ್ಯಾಯಾಂಗದ ಘನತೆ ಮತ್ತು ಗೌರವವನ್ನು ಮರಳಿ ತರಲು ಶ್ರಮಿಸಿದ್ದಾರೆ ಎನ್ನುವದು ಸಹ ಸತ್ಯ.

ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸಂಸ್ಥೆಗಳೆಂದು ಕರೆಯಲ್ಪಡುವ ಮಾಹಿತಿ ಆಯೋಗ, ವಿಜಿಲೆನ್ಸ್ ಆಯೋಗ, ಚುನಾವಣಾ ಆಯೋಗ, ಮಾನವ ಹಕ್ಕುಗಳ ಆಯೋಗ, ಸಿಎಜಿ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ, ಅಲ್ಪಸಂಖ್ಯಾತರ ಆಯೋಗ, ಮಹಿಳಾ ಆಯೋಗ ಮುಂತಾದವುಗಳು ದುರ್ಬಲ, ನಿಷ್ಟ್ರಯೋಜಕ ಸಂಸ್ಥೆಗಳಾಗಿವೆ. ಈ ಎಲ್ಲಾ ’ಸಂವಿಧಾನದ ಕಾವಲು ಸಂಸ್ಥೆ’ಗಳನ್ನು ಮೋದಿ ನೇತೃತ್ವದ ಬಿಜೆಪಿ ಸರಕಾರವು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ.

2019ರಲ್ಲಿ ಮೋದಿ ಸರಕಾರವು ಎರಡನೇ ಅವಧಿಗೆ ಆಯ್ಕೆಯಾದ ತಕ್ಷಣ ಜಮ್ಮು ಮತ್ತು ಕಾಶ್ಮೀರದ ಸರಕಾರವನ್ನು ಪದಚ್ಯುತಗೊಳಿಸಿ ಆ ರಾಜ್ಯವನ್ನು ಕೇಂದ್ರಾಡಳಿತಕ್ಕೆ ಒಳಪಡಿಸಿತು. ದೇಶದ ಭದ್ರತೆಯ ನೆಪವೊಡ್ಡಿ ಈ ಸಂವಿಧಾನ ವಿರೋಧಿ ಕೃತ್ಯವೆಸಗಿದ ಕೇಂದ್ರ ಸರಕಾರವು ಚುನಾಯಿತ ಸರಕಾರದೊಂದಿಗೆ ಸಮಾಲೋಚನೆಯನ್ನು ನಡೆಸಲಿಲ್ಲ. ಏಕಪಕ್ಷೀಯವಾಗಿ ಕಲಂ 370ನ್ನು ನಿಷೇಧಿಸಿತು. ಮೋದಿ ಸರಕಾರದ ಗೃಹ ಮಂತ್ರಿ ಅಮಿತ್ ಶಾ ರಾಜ್ಯಗಳೊಂದಿಗೆ ಚರ್ಚಿಸದೆ ತಮ್ಮ ರಾಜಕೀಯ ಲಾಭಕ್ಕಾಗಿ ’ಸಿಎಎ’ ಎನ್ನುವ ಕರಾಳ ಶಾಸನವನ್ನು ಜಾರಿಗೊಳಿಸಿದರು.

’ಕೃಷಿ ವಲಯ’ವು ರಾಜ್ಯದ ಪಟ್ಟಿಯಲ್ಲಿ ಬರುತ್ತದೆ. ಮೋದಿ ಸರಕಾರವು ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಖಾಸಗಿಯವರಿಗೆ ಅವಕಾಶ ಮತ್ತು ಗುತ್ತಿಗೆ ಬೇಸಾಯ ಸಂಬಂಧಿಸಿದಂತೆ ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿತು. ಈ ಮಸೂದೆಗಳನ್ನು ರೂಪಿಸುವಾಗ ಇದರ ಹಕ್ಕುದಾರರಾದ ದೇಶದ 29 ರಾಜ್ಯ, 9 ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಏಕಪಕ್ಷೀಯವಾಗಿ ಹೇರಲ್ಪಟ್ಟ ಈ ಮಸೂದೆಗಳನ್ನು ರಾಜ್ಯ ಸರಕಾರಗಳು ಯಥಾವತ್ತಾಗಿ ವಿಧಾನಮಂಡಲಗಳಲ್ಲಿ ಮಂಡಿಸಿದವು (ಕೇರಳ, ಪಂಜಾಬ್, ರಾಜಸ್ಥಾನ ಸರಕಾರಗಳನ್ನು ಹೊರತುಪಡಿಸಿ). ನಂತರ ರೈತರ ತೀವ್ರ ಪ್ರತಿಭಟನೆಗಳ ಮೂಲಕ ಆ ಮೂರು ಮಸೂದೆಗಳನ್ನು ಹಿಂತೆಗೆದುಕೊಳ್ಳಲಾಯಿತು.

ಇದೇ ಮಾದರಿಯಲ್ಲಿ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಆದರೆ ಮೋದಿ ಸರಕಾರವು ’ರಾಷ್ಟ್ರೀಯ ಶಿಕ್ಷಣ ನೀತಿ 2020’ಯನ್ನು ಸಂಸತ್‌ನಲ್ಲಿ ಚರ್ಚಿಸಲಿಲ್ಲ ಮತ್ತು ಅದನ್ನು ಅನುಷ್ಠಾನಗೊಳಿಸಲು ಮುಂದಾದ ರಾಜ್ಯಗಳು ತಮ್ಮ ವಿಧಾನಮಂಡಲಗಳಲ್ಲಿಯೂ ಚರ್ಚಿಸಲಿಲ್ಲ. ಕೇಂದ್ರ ಕ್ಯಾಬಿನೆಟ್‌ನಲ್ಲಿ ಅನುಮೋದನೆ ಮಾಡಿ ಏಕಪಕ್ಷೀಯವಾಗಿ ಇದನ್ನು ಜಾರಿಗೊಳಿಸುತ್ತೇವೆ ಎಂದು ಬಿಜೆಪಿ ಪಕ್ಷದ ಮಂತ್ರಿಗಳು ಹೇಳಿಕೆ ಕೊಡುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಯುಜಿಸಿ ಸಹ ಸಂವಿಧಾನ ನೀತಿಸಂಹಿತೆಗಳನ್ನು ನಿರ್ಲಕ್ಷಿಸಿ, ರಾಜ್ಯ ಸರಕಾರಗಳನ್ನು ಪರಿಗಣಿಸದೆ ನೇರವಾಗಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಪತ್ರವನ್ನು ಬರೆದು ’ಎನ್‌ಇಪಿ 2020’ ಜಾರಿ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಆದೇಶ ಕೊಡುತ್ತದೆ. ಎಲ್ಲಕ್ಕಿಂತಲೂ ಆತಂಕದ ಸಂಗತಿಯೆಂದರೆ ಮೋದಿಯವರ ಆಡಳಿತದಲ್ಲಿ ಚುನಾಯಿತ ರಾಜ್ಯ ಸರಕಾರಗಳು ಸಹ ತಮ್ಮ ಸಂವಿಧಾನಬದ್ದ ಹಕ್ಕನ್ನು ರಕ್ಷಿಸಿಕೊಳ್ಳಲು ವಿಫಲಗೊಂಡಿವೆ. ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸುವ ಭರದಲ್ಲಿರುವ ಮೋದಿ ಸರಕಾರವು ಆ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಗೊಳಿಸುತ್ತಿದೆ.

ನಾವು ನಡೆಯುವ ದಾರಿ

ಪೋಲೆಂಡ್‌ನ ಮಾರ್ಕ್ಸಿಸ್ಟ್ ಚಿಂತಕ Leszek Kołakowski ’ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಮಾನವಶಾಸ್ತ್ರದ (anthropological) ಅಡಿಪಾಯವಿದೆ. ಇದು ನಾವೆಲ್ಲ ಒಪ್ಪಿಕೊಳ್ಳುವಂತಹ ತತ್ವವಾಗಿದೆ. ಇದನ್ನ ಕೇವಲ ’ಸಾಬೀತು’ ಎನ್ನುವ ಶಬ್ದದ ಮೂಲಕ ಸಾಬೀತಾಗಿದೆ ಅಥವಾ ಸಾಬೀತಾಗಿಲ್ಲ ಎಂದು ಹೇಳಲು ಸಾದ್ಯವಿಲ್ಲ. ನಿರಂಕುಶ ಪ್ರಭುತ್ವ ಮತ್ತು ಅಧಿಕಾರಶಾಹೀಕರಣದ ಜಂಟಿ ಒತ್ತಡದಿಂದ ಸ್ವಾತಂತ್ರ್ಯವನ್ನ ಧ್ವಂಸಗೊಳಿಸಲು ಸಾಧ್ಯವಿಲ್ಲ. ಮನುಷ್ಯನಾಗುವುದರಲ್ಲೇ ಆ ವೈಯುಕ್ತಿಕ ಸ್ವಾತಂತ್ರ್ಯವು ಬೇರುಬಿಟ್ಟಿದೆ’ ಎಂದು ಬರೆಯುತ್ತಾನೆ. ಆದರೆ ಮೋದಿ-ಆರ್‌ಎಸ್‌ಎಸ್‌ನ ನಿರಂಕುಶ ಆಡಳಿತದ ಕಾರಣಕ್ಕೆ ಆತಂಕದಲ್ಲಿ ಬದುಕುತ್ತ, ಬಹಿರಂಗವಾಗಿ ಸ್ವಾತಂತ್ರ್ಯವಿದೆ ಎಂದು ಭಾವಿಸಿದರೆ ನಾವು ಮನುಷ್ಯತ್ವದ ಸಂವೇದನೆ ಕಳೆದುಕೊಂಡಿದ್ದೇವೆ ಎಂದರ್ಥ. Leszek ಮತ್ತೊಂದು ಸಂದರ್ಭದಲ್ಲಿ ಹೇಳಿದಂತೆ ’ಸಮಾಜದ ಮನಸ್ಸು, ಮಿದುಳನ್ನ ಗೊಡ್ಡು (sterilization) ಮಾಡಲಾಗಿದೆ’.

ಮೂವತ್ತರ ದಶಕದಲ್ಲಿ ಹಿಟ್ಲರ್‌ನನ್ನು ಆಯ್ಕೆ ಮಾಡಿದ ಜರ್ಮನಿ ಮತ್ತು 2023ರಲ್ಲಿ ಸರ್ವಾಧಿಕಾರಿ ಎರ್ಡೋಗನ್‌ನನ್ನು ಮತ್ತೊಮ್ಮೆ ಆಯ್ಕೆ ಮಾಡಿದ ಟರ್ಕಿ ದೇಶದ ಜನತೆಯೊಂದಿಗೆ ನಮ್ಮ ನಾಗರಿಕ ಸಮಾಜದ ಸಾಮ್ಯತೆ ಇದೆ ಎನ್ನುವ ಅಭಿಮತವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಒಂಬತ್ತು ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ’ನಾಗರಿಕ ಸಮಾಜ’ದ ಮೌನ ಮತ್ತು ಉತ್ತರದಾಯಿತ್ವ ಮತ್ತೆಮತ್ತೆ ಚರ್ಚೆಗೊಳಗಾಗುತ್ತಿದೆ. ಇಲ್ಲಿನ ಬಹುಸಂಖ್ಯಾತರ ಕನಿಷ್ಠ ಸಾಮಾನ್ಯ ತಿಳಿವಳಿಕೆಯನ್ನು ಹೈಜಾಕ್ ಮಾಡಿ ಮೆದುಳು ಮತ್ತು ಮನಸ್ಸುಗಳನ್ನು ವಿಷಪೂರಿತಗೊಳಿಸಿದ್ದು, ಇಡೀ ಸಮಾಜವನ್ನೇ ದ್ವೇಷಯುಕ್ತಗೊಳಿಸಿದ ಪ್ರಕ್ರಿಯೆ ನಮ್ಮ ಕಣ್ಣ ಮುಂದೆಯೇ ನಡೆದ ವಿದ್ಯಾಮಾನವಲ್ಲವೆ ಎನ್ನುವ ವಾಸ್ತವ ಪ್ರಜ್ಞಾವಂತರ ಆತ್ಮಸಾಕ್ಷಿಯನ್ನು ಕೆಣಕುತ್ತಿದೆ. ಒಂಬತ್ತು ನಾಜಿಗಳ ಜೊತೆಗೆ ನೀನೊಬ್ಬ ಭಿನ್ನಮತೀಯ ಮೌನವಾಗಿ ಕುಳಿತಿದ್ದರೆ ನೀನು ಸಹ ಹತ್ಯಾಕಾಂಡದ ಪಾಲುದಾರ ಎನ್ನುವ ನೀತಿ ಪ್ರಸ್ತುತ ಸಂದರ್ಭದಲ್ಲಿ ನಮಗೆಲ್ಲರಿಗೂ ಅನ್ವಯಿಸುತ್ತದೆ. ಇಲ್ಲಿನ ಪ್ರಜ್ಞಾವಂತರ ನೈತಿಕ ಮತ್ತು ನ್ಯಾಯವಂತಿಕೆಯ ಪ್ರಶ್ನೆ ಚರ್ಚಾರ್ಹವಾಗಿದೆ. ಇಂದಿನ ಪರಿಸ್ಥಿತಿಗೆ ಮಾರಿಕೊಂಡ ಬಹುತೇಕ ಮಾಧ್ಯಮಗಳನ್ನು ದೂಷಿಸುತ್ತೇವೆಯಾದರೂ ಸಹ ನಮ್ಮೊಳಗೆ ನಾವು ನೋಡಿಕೊಳ್ಳಲು ಯಾಕೆ ಹಿಂಜರಿಯುತ್ತಿದ್ದೇವೆ ಎನ್ನುವ ಪ್ರಶ್ನೆಗೆ ಉತ್ತರಿಸುವವರು ಯಾರು?

ನಾವು ಪ್ರಗತಿಪರ ಟೋಪಿ ಧರಿಸಿ ಸಿದ್ಧಾಂತಗಳ ಮಂತ್ರ ಜಪಿಸುತ್ತ, ಪ್ರಜಾಪ್ರಭುತ್ವದ ಕುರಿತು ವೇದಿಕೆಗಳ ಮೂಲಕ ಎಗ್ಗಿಲ್ಲದೆ ಭಾಷಣ ಬಿಗಿಯುತ್ತಾ ತಿರುಗಾಡುತ್ತಿರಬಹುದು. ಆದರೆ ಈ ಒಂಬತ್ತು ವರ್ಷಗಳ ಸರ್ವಾಧಿಕಾರದ ಬಲಿಪಶುಗಳ ಪ್ರಶ್ನಾತ್ಮಕ ಚಿಕಿತ್ಸಕ ನೋಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಿವಿಧ ಜಾತಿಗಳು, ವರ್ಗಗಳು, ಜನಾಂಗೀಯ ಭಿನ್ನತೆಯಂತಹ ಸಂಕೀರ್ಣತೆಯನ್ನು ಗ್ರಹಿಸಲು ಅಗತ್ಯವಾದ ಆರ್ಗ್ಯಾನಿಕ್ ಸಂಬಂಧವನ್ನು ನಿರ್ಲಕ್ಷಿಸಿದ ಕಾರಣಕ್ಕೆ ಇಂದಿನ ಭಾರತದ ಪ್ರಜಾಪ್ರಭುತ್ವವು ಮಾರಣಾಂತಿಕವಾಗಿ ಗಾಯಗೊಂಡಿದೆ.

1930ರ ತನ್ನ ಕಾಲಘಟ್ಟದ ಕುರಿತು ಇಟಾಲಿಯನ್ ಚಿಂತಕ ಗ್ರಾಂಶಿ ವೈಶಿಶ್ಟ್ಯಪೂರ್ಣವಾಗಿ ಹೇಳಿದ್ದಾನೆ: “ಫ್ಯಾಸಿಸಂನ ಏಳಿಗೆ – ಹಳೆಯ ಜಗತ್ತು ತೀರಿಕೊಂಡು ಹೊಸದು ಇನ್ನೂ ಹುಟ್ಟಿರದ ಕಾಲದಲ್ಲಿ ಆ ಜಗತ್ತು ವ್ಯಾಧಿಗ್ರಸ್ತ ಕುರುಹುಗಳ ಸಮೂಹದಿಂದ ಸುತ್ತುವರಿಯಲ್ಪಟ್ಟಿರುತ್ತದೆ. ಜನಾಂಗ ದ್ವೇಷ, ಧಾರ್ಮಿಕ ಹಗೆತನ ಮತ್ತು ಹಿಂಸೆ ಆ ಕುರುಹುಗಳು”. ಭಾರತ ಇಂದು ಇಂತಹ ಕುರುಹುಗಳ ಕಾಯಿಲೆಯಿಂದ ನರಳುತ್ತಿದೆ. ಹಳೆ ಜಗತ್ತು ಸಾಯುತ್ತಿದೆ. ಹೊಸ ಜಗತ್ತು ಕಟ್ಟುವ ಜವಾಬ್ದಾರಿ ಇಲ್ಲಿನ ಪ್ರಜ್ಞಾವಂತರ ಮೇಲಿದೆ. ಆದರೆ ತಯಾರಿದ್ದೇವೆಯೇ ಎನ್ನುವುದೇ ಮುಖ್ಯ ಪ್ರಶ್ನೆ.

ಇದಕ್ಕೆ ಇತ್ತೀಚಿನ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ದಯನೀಯ ಸೋಲಿನಲ್ಲಿ, ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ವಿಫಲವಾಗಿರುವುದರಲ್ಲಿ ಉತ್ತರಗಳಿವೆ. ಅದರೆ ಇದು ಒಂದು ಭಾಗ ಮಾತ್ರ. ನಿಜವಾದ ಪ್ರಜಾಪ್ರಭುತ್ವಕ್ಕಾಗಿ, ಸಂವಿಧಾನದ ರಕ್ಷಣೆಗಾಗಿ ಚುನಾವಣಾ ರಾಜಕಾರಣದಾಚೆಗೆ ಗಮನ ಹರಿಸಬೇಕಾಗಿದೆ. ವ್ಯವಸ್ಥೆಯ ಆಳದಲ್ಲಿ ಬೇರು ಬಿಟ್ಟ, ವಿಸ್ತಾರವಾಗಿ ವ್ಯಾಪಿಸಿಕೊಂಡಿರುವ ಆರ್‌ಎಸ್‌ಎಸ್ ಸಿದ್ಧಾಂತವನ್ನು ಕಿತ್ತೊಗೆಯಲು ದೀರ್ಘಕಾಲೀನ ಕಾರ್ಯಯೋಜನೆಗಳ ಕುರಿತು ಯೋಚಿಸಬೇಕಾಗಿದೆ. ಕಾರ್ಯಪ್ರವೃತ್ತರಾಗಬೇಕಾಗಿದೆ.

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...