ಪ್ರಪಂಚದ ಹಸಿವನ್ನು ಹೋಗಲಾಡಿಸಲು ನಾರ್ಮನ್ ಬೋರ್ಲಾಗ್ ಮತ್ತು ಎಂ.ಎಸ್.ಸ್ವಾಮಿನಾಥನ್ ರಂತಹ ಕೃಷಿ ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಹಲವು ಸಂಶೋಧನೆಗಳ ಫಲವೆ ಹಸಿರು ಕ್ರಾಂತಿ. ಆ ಮೂಲಕ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿತು. ನಿರಂತರ ಏಕ ರೀತಿಯ ಹೈಬ್ರಿಡ್ ತಳಿಗಳ ಬೆಳೆ, ಅವೈಜ್ಞಾನಿಕ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮುಂತಾದ ಕಾರಣಗಳಿಂದಾಗಿ ಪಂಚಭೂತಗಳ ಮತ್ತು ಮನುಷ್ಯನ ಮೇಲೆ ನಕಾರಾತ್ಮಕ ಪರಿಣಾಮಗಳಾಗಿರುವ ಉದಾಹರಣೆಗಳಿವೆ. ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿಯೂ ಇದೇ ಪರಿಸ್ಥಿತಿ.
ವಾಸ್ತವದಲ್ಲಿ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳ ಮಧ್ಯೆ ಹೆಚ್ಚಿನ ವೈಜ್ಞಾನಿಕ ವ್ಯತ್ಯಾಸ ಕಂಡುಬರುವುದಿಲ್ಲ. ಆಧುನಿಕ ಕೃಷಿಯ ದುಷ್ಪರಿಣಾಮಗಳಿಂದ ದೂರ ಸರಿಯಲು ಹಲವಾರು ದೇಶಗಳು ತಮ್ಮ ಪಾರಂಪರಿಕ ಕೃಷಿ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಎಂಬ ಭಿನ್ನ ಹಾದಿಯಲ್ಲಿ ಸಾಗಿದವು. ಇಂತಹವರಲ್ಲಿ ನೈಸರ್ಗಿಕ ಕೃಷಿಯ ಪಿತಾಮಹ ಜಪಾನಿನ ಮಸನೋಬು ಪುಕುವೊಕ ಪ್ರಮುಖರು. ಇವರ 5 ಅಂಶಗಳ ಕೃಷಿಯಲ್ಲಿ ಉಳುಮೆ ಇಲ್ಲ, ಕೀಟನಾಶಕ, ರಸಗೊಬ್ಬರ ಬಳಕೆ, ಕಳೆ ನಿಯಂತ್ರಣ ಯಾವುದು ಇಲ್ಲ. ನಂತರ ಬಂದಂತಹ ಹಲವು ಪದ್ಧತಿಗಳಲ್ಲಿ ಮಹಾರಾಷ್ಟ್ರದ ಸುಭಾಷ್ ಪಾಳೇಕರ್‍ರವರ ಶೂನ್ಯ ಬಂಡವಾಳ ಕೃಷಿಯು ಒಂದು. ಇವರು ಬಿ.ಎಸ್ಸಿ ಕೃಷಿ ಪದವಿಯನ್ನು ಪಡೆದ ನಂತರ ತಮ್ಮ ಸ್ವಂತ ಭೂಮಿಯಲ್ಲಿ 1985ರಿಂದ 1995ವರೆಗು ಕೈಗೊಂಡ ಸಂಶೋಧನೆಯ ಫಲವಾಗಿ ತಮ್ಮ ಸ್ವಂತ ನೈಸರ್ಗಿಕ ಕೃಷಿಯ ಮಾದರಿಯನ್ನು ಕಂಡುಕೊಂಡರು.
ಪಾಳೇಕರ್ ಪ್ರಕಾರ ದೇಶಿಯ ನಾಟಿ ಮುದಿ ಹಸುವಿನ ಸಗಣಿ, ಗಂಜಲ ಮತ್ತು ಬೆಲ್ಲ, ಸುಣ್ಣ, ಮಣ್ಣು ಉಪಯೋಗಿಸಿಕೊಂಡು ಸಸ್ಯ ಬೆಳವಣಿಗೆಗಾಗಿ ಬೀಜಾಮೃತ, ಜೀವಾಮೃತ, ಹೊದಿಕೆ ಮತ್ತು ವಾಫಸ ಎಂಬ ಅಂಶಗಳನ್ನು ಪಾಲಿಸುಬೇಕು. ಸಸ್ಯ ರೋಗ ಮತ್ತು ಕೀಟ ಬಾದೆಗೆ ಅಗ್ನಿಅಸ್ತ್ರ, ನೀಮಾಸ್ತ್ರ ಮತ್ತು ಬ್ರಹ್ಮಾಸ್ತ್ರ ಎಂಬ ಕಷಾಯಗಳನ್ನು ಬಳಸಲು ಹೇಳಿದ್ದಾರೆ. ಇದಲ್ಲದೆ ಮಿಶ್ರ ಬೆಳೆ, ಅಂತರ ಬೆಳೆ ಮತ್ತು 5 ಲೇಯರ್ ಮಾಡೆಲ್‍ಗಳನ್ನು ಪ್ರಸ್ತಾಪಿಸಿದ್ದಾರೆ.
ವಿಜ್ಞಾನದ ಇತಿಹಾಸವನ್ನು ಒಮ್ಮೆ ನೋಡೋಣ. ಆಂಟನಿ ವಾನ್ ಲೆವನ್ ಹಾಕ್ 16ನೇ ಶತಮಾನದಲ್ಲಿಯೇ ಸೂಕ್ಷ್ಮಾಣು ಜೀವಿಗಳನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ವೀಕ್ಷಿಸಿ ಪ್ರಪಂಚಕ್ಕೆ ಮತ್ತೊಂದು ಸೂಕ್ಷ್ಮ ಪ್ರಪಂಚವನ್ನು ತೋರಿಸಿ ಸೂಕ್ಷ್ಮಾಣು ಜೀವಶಾಸ್ತ್ರದ ಪಿತಾಮಹರಾಗಿದ್ದಾರೆ. ಅಂತೆಯೇ ಜೈವಿಕ ಸಾರಜನಕ ಸ್ಥಿರೀಕರಣವನ್ನು ವಿಜ್ಞಾನಿ ಬೆಜರಿಂಕೆ, ಮಣ್ಣು ಸೂಕ್ಷ್ಮಜೀವಶಾಸ್ತ್ರದ ಬಗ್ಗೆ ವಿಜ್ಞಾನಿ ವಿನೋಗ್ರಾಡ್ಸ್ಕಿ ಸಂಶೋಧನೆಯನ್ನು ಪ್ರತಿಪಾದಿಸಿ ದಶಕಗಳೆ ಕಳೆದಿವೆ. ಲೈಬಿಗ್ ಸಸ್ಯಕ್ಕೆ ಬೇಕಾಗಿರುವ ಪೋಷಕಾಂಶಗಳ ಬಗ್ಗೆ 18ನೇ ಶತಮಾನದಲ್ಲೆ ಸಂಶೋಧನೆ ಮಾಡಿ ಜಗತ್ತಿಗೆ ಸಾರಿದ ಮಣ್ಣು ರಸಾಯನಶಾಸ್ತ್ರದ ಪಿತಾಮಹ. ಹೀಗೆ ಅದೆಷ್ಟೋ ವಿಜ್ಞಾನಿಗಳು ತಮ್ಮ ಜೀವಮಾನವನ್ನು ಕೃಷಿ ಸಂಶೋಧನೆಗೆ ಶ್ರಮಿಸಿದ್ದಾರೆ.
ಕೃಷಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಹುದುಗುವಿಕೆ ಅಥವಾ ಜೈವಿಕ ಗೊಬ್ಬರಗಳ ಬಳಕೆ, ಬೀಜೋಪಚಾರ, ಹೊದಿಗೆ, ತೇವಾಂಶ, ಭೂಮಿಯ ಉಸಿರಾಟದ ಬಗ್ಗೆ ಮತ್ತು ಮಿಶ್ರ ಬೆಳೆ, ಅಂತರ ಬೆಳೆ, ಮಲ್ಟಿ ಸ್ಟೋರೀಡ್ ಬೆಳೆಯ ಬಗ್ಗೆ ಹಲವು ದಶಕಗಳಿಂದಲೂ ಪಾಠ ಮಾಡಲಾಗುತ್ತಿದೆ. ಆದರೆ ವಿಜ್ಞಾನವು ರೈತರ ಮಟ್ಟಕ್ಕೆ ತಲುಪಲಿಲ್ಲದ ಕಾರಣದಿಂದ ಕೃಷಿ ವಿಸ್ತರಣೆಯು ವೈಫಲ್ಯ ಅನುಭವಿಸಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು, ನೈಸರ್ಗಿಕ ಕೃಷಿಯ ನೆಪದಲ್ಲಿ ವಿಜ್ಞಾನವನ್ನೆ ಕದ್ದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ಕಚ್ಚಾ ನೈಸರ್ಗಿಕ ಕೃಷಿ ಪದ್ದತಿಗಳು ಯಾವ ಸಂಸ್ಥೆಯಿಂದ ಸಂಶೋಧನೆಗೆ ಒಳಪಟ್ಟಿತ್ತು? ಯಾರು ದೃಢೀಕರಣ ಮಾಡಿದರು? ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಲವಾರು ವರ್ಷಗಳ ಕಾಲ ಸಂಶೋಧನೆ ಮಾಡಿ ಪ್ರಬಂಧವನ್ನು ನೇಚರ್ ಮತ್ತು ಸ್ಪ್ರಿಂಜರ್ ವಿಜ್ಞಾನದ ಪತ್ರಿಕೆಗಳಲ್ಲಿ ಪ್ರಕಟಿಸಲು ಕಳುಹಿಸಿದರೆ, ಅದೆಷ್ಟೊ ಸಲ ಸಂಪಾದಕರು ಪ್ರಬಂಧವನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಹೀಗಿರುವಾಗ ಕೆಲವು ನೈಸರ್ಗಿಕ ಕೃಷಿಕರು ತಮ್ಮ ಪುಸ್ತಕಗಳಲ್ಲಿ ಕೃಷಿ ವಿಜ್ಞಾನವನ್ನು ತಮ್ಮ ಮನಸ್ಸೋ ಇಚ್ಚೆ ಅವೈಜ್ಞಾನಿಕವಾಗಿ ಪ್ರಸ್ತಾಪ ಮಾಡಿ ರೈತರಿಗೆ ಮಾರುತ್ತಿದ್ದಾರೆ. ಆದರೆ ಯಾವ ಸರ್ಕಾರವು ಸಂಶೋಧನಾ ದೃಢೀಕರಣವಿಲ್ಲದ ಇಂತಹ ಪುಸ್ತಕಗಳನ್ನು ಮುಟ್ಟುಗೋಲು ಹಾಕಲು ಪ್ರಯತ್ನಿಸುತ್ತಿಲ್ಲ.
ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಪಾಳೇಕರ್ ಕೃಷಿ ವಿಶ್ವವಿದ್ಯಾಲಯಗಳನ್ನು, ವಿಜ್ಞಾನಿಗಳನ್ನು ಮತ್ತು ಹಸಿರು ಕ್ರಾಂತಿಯನ್ನು ಮನಸೋ ಇಚ್ಚೆ ತಮ್ಮ ಪ್ರವಚನಗಳಲ್ಲಿ, ಲೇಖನಗಳಲ್ಲಿ ಖಂಡಿಸಿದ್ದಾರೆ. ಅವರ ವೆಬ್ ಸೈಟ್ ನ ಪುಟಗಳಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಿದೆ. ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳು ಮತ್ತು ಕೆಂದ್ರ ಸರ್ಕಾರ ಈ ಕೃಷಿ ಪದ್ದತಿಯನ್ನು ವೈಜ್ಞಾನಿಕವಾಗಿ ಪರೀಕ್ಷಿಸದೆ ಇದಕ್ಕೆ ಬಜೆಟ್ ಪ್ರಕಟಿಸಿವೆ. ಅನುಷ್ಠಾನಗೊಳಿಸಲು ವಿಜ್ಞಾನದ ಅಸ್ಮಿತೆಯ ವಿರುದ್ದವಾಗಿ ಕೃಷಿ ವಿಶ್ವವಿದ್ಯಾಲಯಗಳನ್ನು ಬಲವಂತವಾಗಿ ಬಳಸಿಕೊಳ್ಳುತ್ತಿವೆ. ತಾವು ಕಂಡರಿಯದ ವಿಜ್ಞಾನವನ್ನು ಪ್ರಚಾರ ಮಾಡಲು ಸರ್ಕಾರವೇ ಮುಂದಿರುವುದು ದುರಂತ.
ವಿಶ್ವವಿದ್ಯಾಲಯಗಳು ಸಾಮಾನ್ಯವಾಗಿ ಹೊಸ ತಳಿಗಳನ್ನು ಬಿಡುಗಡೆಗೊಳಿಸಲು ಪರೀಕ್ಷಿಸಬೇಕಾಗುವ ಅವಧಿ 8 ವರ್ಷ. ಒಂದು ಹೊಸ ಕೃಷಿ ಪದ್ದತಿಯ ಮಾದರಿಯನ್ನು ಪರೀಕ್ಷಿಸಲು ಕನಿಷ್ಠ 5 ವರ್ಷ ಬೇಕಾಗುತ್ತವೆ. ಆದರೆ ಆಂಧ್ರ ಪ್ರದೇಶ ಮತ್ತು ಕರ್ನಾಟಕ (ವಿಶ್ವವಿದ್ಯಾಲಯ) ನೇರವಾಗಿ ರೈತರ ಜಮೀನಿಗೆ ನೈಸರ್ಗಿಕ ಕೃಷಿ ಪದ್ದತಿಯನ್ನು ಕೊಂಡೊಯ್ದು, ಆಧುನಿಕ ಕೃಷಿಗೆ ಸಮನಾದ ಇಳುವರಿ ನೀಡುತ್ತದೆ ಎಂದು ತಿಳಿಸುತ್ತಿದ್ದಾರೆ. ಈ ಸುಳ್ಳಿನ ಮೂಲಕ 100 ವರ್ಷ ಇತಿಹಾಸ ಇರುವ ಭಾರತದ ಕೃಷಿ ವಿಶ್ವವಿದ್ಯಾಲಯಗಳ ಅಸ್ಮಿತೆಯನ್ನು ಹಾಳು ಮಾಡುತ್ತಿದ್ದಾರೆ.
ಆಂಧ್ರಪ್ರದೇಶ 2024 ಕ್ಕೆ ತನ್ನ ರಾಜ್ಯವನ್ನು ಸಂಪೂರ್ಣ ನೈಸರ್ಗಿಕ ಕೃಷಿ ರಾಜ್ಯವನ್ನಾಗಿಸಲು 16,452 ಕೋಟಿಯ ಬಡ್ಜೆಟ್‍ನ್ನು ಮೀಸಲಿಡಲು ಯೋಜಿಸಿದೆ. ಕರ್ನಾಟಕ ಸರ್ಕಾರ 50 ಕೋಟಿಯ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಿದೆ. ಇದೇ ಹಾದಿಯನ್ನು ಕೇರಳ, ಚತ್ತೀಸ್ ಘಡ, ಹಿಮಾಚಲ ಪ್ರದೇಶ ಸಹ ಅನುಸರಿಸಲು ನಿಂತಿವೆ.
2022 ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗಾಳಿ ಮಾತನ್ನು ಆಡಿರುವ ಕೇಂದ್ರ ಸರ್ಕಾರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ನಿರ್ಧಾರ ಕೈಗೊಂಡಿತು. ನೀತಿ ಆಯೋಗದ ಸದಸ್ಯರಾದ ಕೃಷಿ ಅರ್ಥಶಾಸ್ತ್ರಜ್ಞ ರಮೇಶ್ ಚಂದ್ ರವರು ಈ ಕೃಷಿ ಪದ್ದತಿಯನ್ನು ಸಂಶೋಧನೆಗೆ ಒಳಪಡಿಸಬೇಕೆಂದು ಹೇಳಿದರೆ, ಆಯೋಗದ ಉಪಾಧ್ಯಕ್ಷರಾದ ರವಿ ಕುಮಾರ ಸ್ವತಃ ಪಾಳೇಕರ್ ರವರನ್ನು ಭೇಟಿ ಮಾಡಿ, ಅವರ ಪದ್ದತಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿರುವುದು ದ್ವಂದ್ವನೀತಿಯಾಗಿದೆ.
ಇದೆಲ್ಲದರ ಮಧ್ಯೆ “ಸ್ವದೇಶಿ ಆಂದೋಲನ” ಮೂಲಕ ಕೆಲವು ಬಲಪಂಥೀಯ ಸಂಘ ಸಂಸ್ಥೆಗಳು, ಪಾಳೇಕರ್ ಪದ್ದತಿಯನ್ನು ತಾವೇ ವಿಜ್ಞಾನಿಗಳು ಅನ್ನುವ ಮಟ್ಟದಲ್ಲಿ ಪ್ರಚಾರ ನೀಡುತ್ತಿದ್ದಾರೆ. ಇವರಿಗೆ ನೈಸರ್ಗಿಕ ಕೃಷಿ ಮುಖ್ಯವಲ್ಲ. ಈ ಪದ್ದತಿಯಲ್ಲಿ ಬರುವ ವಯಸ್ಸಾದ ದೇಶಿ ಹಸುವನ್ನು ಉಳಿಸುವುದು ಅವರ ಧ್ಯೇಯ. ವಿಜ್ಞಾನವನ್ನೆ ತಮ್ಮ ಮೂಗಿನ ನೇರಕ್ಕೆ ಅರ್ಥೈಸಿ, ದೇಶಿ ಹಸುಗಳೆ ಶ್ರೇಷ್ಠ ಎಂಬ ವಾದವನ್ನು ಮುಂದಿಡುತ್ತಾ, ಕ್ಯಾನ್ಸರ್, ಏಡ್ಸ್ ಮತ್ತು ಕಾಮಾಲೆ ಮುಂತಾದ ಸರ್ವರೋಗಗಳಿಗು ದೇಶಿ ಹಸುವಿನ ಸಗಣೀ ಗಂಜಲವೆ ಮದ್ದು ಎಂದು ಪ್ರಚಾರ ನೀಡುತ್ತಿದ್ದಾರೆ. ಅಲ್ಲದೆ ಎಷ್ಟೇ ಪಾಪಗಳು ಮಾಡಿದ್ದರು ಸಹ ಸಗಣಿ ಮತ್ತು ಗಂಜಲವನ್ನು ಸೇವಿಸುವುದರ ಮೂಲಕ ಪ್ರಾಯಶ್ಚಿತ್ತ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಇದರ ಮುಂದುವರಿದ ಭಾಗವೆ ಹೋಮ ಫಾರ್ಮಿಂಗ್, ಸ್ಪಿರಿಚುವಲ್ ಫಾರ್ಪಿಂಗ್ ಆಗಿದೆ.
ಈ ಆಂದೋಲನದಲ್ಲಿ ಬಹಳಷ್ಟು ಜನ ನೈಸರ್ಗಿಕ ಕೃಷಿ ಮಾಡುತ್ತಿಲ್ಲ. ಆದರೂ ತಮ್ಮನ್ನು ತಾವು ನೈಸರ್ಗಿಕ ಕೃಷಿಕರೆಂದು ಘೋಷಿಸಿಕೊಂಡಿರುತ್ತಾರೆ. ವೈದಿಕ ಧರ್ಮದ ಆಧಾರವಾಗಿಯೇ ಕೃಷಿ ಪದ್ದತಿಯನ್ನು ರೂಪಿಸಿದ್ದೇನೆ, ಇಲ್ಲಿ ದೇಶಿಯ ಹಸುವೆ ಶ್ರೇಷ್ಠ ಎಂಬ ವಾದವನ್ನು ಪಾಳೇಕರ ಪುಸ್ತಕದಲ್ಲಿ ಕಂಡುಬರುತ್ತದೆ. (ಪಾಳೇಕರ ಪುಸ್ತಕ ಕನ್ನಡದಲ್ಲಿ ನಾಟಿ ಹಸು, ಒಂದು ಕಲ್ಪವೃಕ್ಷ ಕೃಷಿ ಸಂಸ್ಕೃತಿ). ಜರ್ಮನಿಯ “ಹಿಡೆಲ್ಬರ್ಗ್ ವಿಶ್ವವಿದ್ಯಾಲಯದ” ವಿಜ್ಞಾನಿಗಳ ತಂಡದ ಮುಖ್ಯಸ್ಥ ದಕ್ಷಿಣ ಭಾರತದಲ್ಲಿ ಹಮ್ಮಿಕೊಂಡ ತಮ್ಮ ಸಂಶೋಧನೆಯನ್ನು 2018 ರಲ್ಲಿ “ಜರ್ನಲ್ ಆಫ್ ಪೊಲಿಟಿಕಲ್ ಎಕಾನಮಿಯಲ್ಲಿ” ಪ್ರಕಟಿಸಿ, ಪಾಳೇಕರ್ ಪದ್ದತಿಯು ಬಲಪಂಥೀಯ ವಾದವನ್ನು ಮತ್ತು ಕೃಷಿ ವಿಜ್ಞಾನವನ್ನು ಕದ್ದಿರುವುದನ್ನು ದಾಖಲಿಸಿದ್ದಾರೆ.
ಫುಕುವೊಕ ಕೃಷಿಯಲ್ಲಿ ಕಾಣದ ದೇಶಿ ಹಸು, ಪಾಳೇಕರ್ ವೈದಿಕ ಕೃಷಿಯಲ್ಲಿ ಕಾಣಸಿಗುತ್ತದೆ. ಕೊರಿಯ, ಯೂರೋಪ್, ಅಮೇರಿಕಾ ನೈಸರ್ಗಿಕ ಕೃಷಿಯಲ್ಲಿ ಕಾಣದ ನಾಟಿ ಹಸು, ಭಾರತದಲ್ಲಿ ಏಕೆ? ಈ ಕೃಷಿಯಲ್ಲಿ ಹಸು ಬೇಕು ಅಂದಾಗ ಇದು ನೈಸರ್ಗಿಕ ಕೃಷಿ ಆಗಲು ಸಾಧ್ಯವೆ?
ಪ್ರಪಂಚದ ಹಸಿವಿಗೆ, ಉತ್ಕೃಷ್ಠ ಪೌಷ್ಠಿಕತೆಗೆ ಬೇಕಿರುವ ಹಾಲನ್ನು ನೀಡಿದ್ದು ಹೆಚ್ ಎಫ್, ಜೆರ್ಸಿ ಹಸುವೆ ಅಲ್ಲವೆ. ಸೂಕ್ಷ್ಮಾಣುಜೀವಿಗಳು ಈ ಹಸುಗಳಲ್ಲಿ ದೇಶಿ ಹಸುವಿಗಿಂತ ಕಮ್ಮಿ ಇರುವುದು ಇವರ ವಾದ. ಇದಕ್ಕೆ ವೈಜ್ಞಾನಿಕ ಆಧಾರ ಎಲ್ಲಿದೆ? ಕೊಟ್ಟಿಗೆಯಲ್ಲಿ ಮೇವು ತಿನ್ನುವಂತಹ, ಹಾಲಿನ ಉತ್ಪಾದನೆಗೆ ಸೃಷ್ಟಿಸಿದಂತಹ ಹಸುವನ್ನು ಬಯಲಿನಲ್ಲಿ ಮೇಯುವ ಕಡಿಮೆ ಹಾಲು ನೀಡುವ ದೇಶಿ ಹಸುವಿನ ಜೊತೆ ಹೋಲಿಕೆ ಮಾಡಲಾಗುತ್ತಿದೆ. ಇದರಲ್ಲಿ ಕಮ್ಮಿ ಸೂಕ್ಷ್ಮಾಣುಜೀವಿಗಳಿದ್ದರೆ ದೇಶಿ ಹಸುವಿನ 10 ಕೆಜಿ ಸಗಣೀ ಹಾಕುವ ಕಡೆ ಹೆಚ್ ಎಫ್, ಜೆರ್ಸಿ ಹಸುವಿನಿಂದ 20 ಕೆಜಿ ಹಾಕಬಹುದಲ್ಲವೆ ಎಂಬುದು ಕೆಲವು ರೈತರ ವಾದ? ಭೂಮಿಯ ಎಲ್ಲಾ ಜೀವಿಗಳು ವಿಕಾಸಕ್ಕೆ ಒಳಪಟ್ಟಿರುವುದು ಸತ್ಯ. ವಾಸ್ತವದಲ್ಲಿ ಕ್ರಿಸ್ತ ಪೂರ್ವದಿಂದಲೂ ಬೆಳೆದು ಬಂದಿರುವ ಹಸುಗಳು ಯೂರೋಪ್‍ಗೆ ದೇಶಿ ಹಸುಗಳಾಗಿವೆ.
“ಅಂತರಾಷ್ಟ್ರೀಯ ಒಣ ಪ್ರದೇಶದ ಬೆಳೆ ಸಂಶೋಧನಾ ಸಂಸ್ಥೆಯ” ನಿರ್ದೇಶಕರಾದ “ಪೀಟರ್ ಕಾರ್ಬೆರಿ” ರವರು ಪಾಳೇಕರ್ ಪದ್ದತಿಯು ಅವೈಜ್ಞಾನಿಕವಾಗಿದ್ದು, ಕಡಿಮೆ ಇಳುವರಿಯನ್ನು ನೀಡುತ್ತದೆ ಆದ್ದರಿಂದ ಸಂಶೋಧನೆಗೆ ಒಳಪಡಿಸಿ ನಿರ್ಧಾರ ಕೈಗೊಳ್ಳಲು ಹೇಳಿದ್ದಾರೆ.
ಅಮೇರಿಕಾದ “ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಜೈವಿಕ ತಳಿ ಶಾಸ್ತ್ರದ” ನಿರ್ದೇಶಕರಾಗಿದ್ದ ವಿಜ್ಞಾನಿ ಮಾರ್ಟಿನ್ ಜೆ ಕ್ರಿಸ್ಪೆಲ್ಸ್ ಅಮೇರಿಕಾದ ನ್ಯಾಷನಲ್ ಅಕಾಡೆಮಿ ಆಪ್ ಸೈನ್ಸ್ ನ ಸದಸ್ಯರಾಗಿಯು ಕೆಲಸ ನಿರ್ವಹಿಸಿದ್ದಾರೆ. ಇವರ ಪ್ರಕಾರ ನೈಸರ್ಗಿಕ ಕೃಷಿ ಎಂಬುದೇ ಇಲ್ಲ. ಏಕೆಂದರೆ 10 ಸಾವಿರ ವರ್ಷ ಇತಿಹಾಸವಿರುವ ಕೃಷಿ, ಮನುಷ್ಯನ ಮೂಲಕ, ಬೆಳೆಗಳು, ಬೀಜಗಳು ಖಂಡದಿಂದ ಮತ್ತೊಂದು ಖಂಡಕ್ಕೆ ಸಾಗಿವೆ. ಹಾಗಾಗಿ ಎಲ್ಲಾ ಬೀಜಗಳು ತಮ್ಮ ಜೀನ್ಸ್ ನಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಬಂದಿವೆ ಎಂದಿದ್ದಾರೆ.
“ಸಂಯುಕ್ತ ರಾಷ್ಟ್ರ ಆಹಾರ ಮತ್ತು ಕೃಷಿ ಸಂಘಟನೆಯ” ಪ್ರಕಾರ ಯಾವ ಕೃಷಿಯಲ್ಲಿ ಬಂಡವಾಳವನ್ನು ಹೂಡುತ್ತೆವೆಯೊ ಅಥವಾ ಹೊರಗಿನ ಸಂಪನ್ಮೂಲಗಳನ್ನು ಬಳಸಿ ಕೃಷಿ ಮಾಡುತ್ತೆವೆಯೊ ಅದು ಶೂನ್ಯ ಬಂಡವಾಳ ಅಲ್ಲ. ಆರ್ಥಶಾಸ್ತ್ರದ ಪ್ರಕಾರ ಉಳುವ ಭೂಮಿ, ಬಿತ್ತುವ ಬೀಜ, ಬೆಳೆಯುವ ರೈತನ ಕೂಲಿಯವರೆಗು ಪ್ರತಿಯೊಂದಕ್ಕು ಒಂದು ಬೆಲೆ ಇರುತ್ತದೆ. ಆ ನಿಟ್ಟಿನಲ್ಲಿ ಪಾಳೇಕರ್ ಅವರು ಶೂನ್ಯಬಂಡವಾಳ ನೈಸರ್ಗಿಕ ಕೃಷಿ ಎಂದು ಹೆಸರಿಸಿರುವುದು ತಪ್ಪು. ಆದ್ದರಿಂದ ಈಗ ಅವರು “ಶುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ” ಎಂದು ಸಾರುತ್ತಿದ್ದಾರೆ. ಆದರೂ ಸರ್ಕಾರಗಳು ತಮ್ಮ ಶೂನ್ಯ ಬಂಡವಾಳದ ವಾದವನ್ನು ಮುಂದುವರೆಸಿವೆ. ಈ ವಿಷಯದಲ್ಲಿ ಪ್ರಶ್ನಿಸಿದ ಕೃಷಿ ವಿಶ್ವವಿದ್ಯಾಲಯಗಳ ಬಾಯನ್ನು ಮುಚ್ಚಿಸಲಾಯಿತು.
ಮುಂಬೈನ “ಸಮಾಜ ವಿಜ್ಞಾನ ಟಾಟಾ ಸಂಸ್ಥೆಯ” ಅಭಿವೃದ್ದಿಶೀಲ ಆರ್ಥಿಕತೆಗಳ ಅಧ್ಯಯನ ಕೇಂದ್ರದ ಪ್ರೊಫೆಸರ್ ಆರ್. ರಾಮ್ ಕುಮಾರ್ ರವರ ಪ್ರಕಾರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯು ತರ್ಕವಿಲ್ಲದ ಅವೈಜ್ಞಾನಿಕ ಪದ್ದತಿಯಾಗಿದ್ದು, ರೈತರ ಬಿಕ್ಕಟ್ಟನ್ನು ಅಧಿಕಗೊಳಿಸುವುದು. ಆದ್ದರಿಂದ ಸೂಕ್ತ ಸಂಶೋಧನೆ ಕೈಗೊಳ್ಳಬೇಕು ಎಂದಿದ್ದಾರೆ. “ಎಂ ಎಸ್ ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ” ಆರ್ಥಿಕ ತಜ್ಞ ಮತ್ತು ಪ್ರೊಫೆಸರ್ ವೆಂಕಟೇಶ್ ಆತ್ರೇಯರವರು ದೇಶದ ಎಲ್ಲಾ ಹವಾಮಾನ ವಲಯಗಳಲ್ಲಿ, ಎಲ್ಲಾ ರೀತಿಯ ಮಣ್ಣಿನಲ್ಲಿ ಈ ಪದ್ದತಿಯನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಿಂದ ಎಲ್ಲಾ ತೊಂದರೆಗಳು ನಿವಾರಣೆಯಾಗುವುದಾದರೆ, ರೈತರ ಆತ್ಮಹತ್ಯೆ ನಿಲ್ಲುವುದಾದರೆ, ರೈತ ಸಂಘಗಳು ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಲು ಹೋರಾಟ ಮಾಡುವುದೇಕೆ? ಬೆಂಬಲ ಬೆಲೆ ಯಾರಿಗಾಗಿ, ಸಾಲ ಮನ್ನಾ ಯಾರಿಗಾಗಿ? ಮಾರ್ಕೆಟ್ ತೊಂದರೆಗಳು, ಕೋಲ್ಡ್ ಸ್ಟೋರೇಜ್ ಯಾರಿಗಾಗಿ, ಕೃಷಿ ಇಲಾಖೆಯ ನೂರಾರು ಯೋಜನೆಗಳು, ಸಬ್ಸಿಡಿ ಏಕೆ? ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೇ?
ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪಿ.ಸಾಯಿನಾಥ್ ದಿ ಹಿಂದೂ ಪತ್ರಿಕೆಯ ಮೂಲಕ ವಿದರ್ಭ ರೈತರ ಆತ್ಮಹತ್ಯೆಗಳ ವರದಿಯನ್ನು ಬಿಚ್ಚಿಟ್ಟಿದ್ದರು. ರಾಷ್ತ್ರೀಯ ಅಪರಾಧ ದಾಖಲೆಯ ಸಂಸ್ಥೆಯ ಪ್ರಕಾರ 2010 ರಿಂದ 2014 ರ ವರೆಗೆ ದೇಶದಲ್ಲಿಯೇ ಅತ್ಯಧಿಕ ರೈತರ ಆತ್ಮಹತ್ಯೆಗಳು(8009) ವಿಧರ್ಭ ಪ್ರಾಂತ್ಯದಿಂದ ಕಂಡುಬಂದಿವೆ. ಅಲ್ಲಿಂದ ನಂತರ 2018ರವರೆಗು ವಾರ್ಷಿಕ ಕನಿಷ್ಠ 2000 ರೈತರ ಆತ್ಮಹತ್ಯೆಗಳು ನಡೆದಿವೆ. ಆದ ಕಾರಣ 2006 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಿಧರ್ಭಕ್ಕೆ ಆಗಮಿಸಿ ಪರಿಸ್ಥಿತಿ ಮನಗಂಡು 3750 ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರ ಸರ್ಕಾರದಿಂದ ಘೋಷಿಸಿದ್ದರು. ಮಹಾರಾಷ್ಟ್ರದ ಸರ್ಕಾರ 2018ರಲ್ಲಿ ವಿಧರ್ಭಕ್ಕೆ 21,222 ಕೋಟಿ ಅನುದಾನದ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸಿತ್ತು. ಇಂದಿಗೂ ರೈತರ ಆತ್ಮಹತ್ಯೆಗಳು ಮುಗಿಯದ ಅಧ್ಯಾಯ. ವಿಧರ್ಭದಿಂದ ಬಂದಂತಹ ಪಾಳೇಕರ್ ರನ್ನು ಮಹಾರಾಷ್ಟ್ರದ ರೈತರೆ ಅನುಸರಿಸುತ್ತಿಲ್ಲ. ಆದರೆ ಹಲವು ರೈತರು ಅನುಸರಿಸಿ ಕೈಸುಟ್ಟುಕೊಂಡಿರುವುದು ಪ್ರಶ್ನಾರ್ಹವಲ್ಲವೇ?
ಆದ್ದರಿಂದ ಕೃಷಿಕರು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಹಸಿರು ಕ್ರಾಂತಿಯನ್ನು ಟೀಕಿಸುವುದನ್ನು ನಿಲ್ಲಿಸಿ. ಪ್ರಕೃತಿಯ ಮತ್ತು ಕೃಷಿಯ ಸಮಸ್ಯೆಗಳಿಗಾಗಿ “ಸಂಶೋಧನೆ ಮೂಲಕ ನೈಸರ್ಗಿಕ ಕೃಷಿಯನ್ನು” ಪರೀಕ್ಷಿಸಿ ಮುಂದಿನ ಹೆಜ್ಜೆಯನ್ನು ಇಡಲು ನಿರ್ಧರಿಸಬೇಕಿದೆ…



You should visit couple of natural farmers places before writing this article. Baseless article without witnessing the reality.
8310587694 – Santhosh