Homeಅಂತರಾಷ್ಟ್ರೀಯನರೇಂದ್ರ ಮೋದಿಯವರ 'ಹೌಡಿ ಮೋದಿ' ಗೆ ರಾಹುಲ್ ಗಾಂಧಿಯ 'ಹೌಡಿ ಎಕಾನಮಿ' ತಿರುಗೇಟು..

ನರೇಂದ್ರ ಮೋದಿಯವರ ‘ಹೌಡಿ ಮೋದಿ’ ಗೆ ರಾಹುಲ್ ಗಾಂಧಿಯ ‘ಹೌಡಿ ಎಕಾನಮಿ’ ತಿರುಗೇಟು..

- Advertisement -
- Advertisement -

ನಿನ್ನೆ ಬೆಳಿಗ್ಗೆ ಟ್ವಿಟ್ಟರ್ ನಲ್ಲಿ ಹೌಡಿ ಮೋದಿ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು. ‘ಹೌಡಿ ಮೋದಿ’ ಹೆಸರಿನಲ್ಲಿ ದೊಡ್ಡ ಕಾರ್ಯಕ್ರಮವೊಂದು ಸೆಪ್ಟಂಬರ್ 22 ರಂದು ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆಯಲಿದ್ದು ಅಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಸಹ ಅತಿಥಿಗಳಾಗಿ ಭಾಗವಹಿಸಲಿದ್ದು ಸಾಕಷ್ಟು ಪ್ರಚಾರ ಪಡೆದಿತ್ತು.

ಒಂದು ಕಾಲದಲ್ಲಿ ಗುಜರಾತ್ ನರಮೇಧಕ್ಕೆ ಕಾರಣಕ್ಕೆ ನರೇಂದ್ರ ಮೋದಿಯವರಿಗೆ ಅಮೆರಿಕಾ ವೀಸಾ ನಿರಾಕರಿಸಿತ್ತು. ಅಂತಹ ಅಮೆರಿಕವೇ ಇಂದು ನರೇಂದ್ರ ಮೋದಿಯವರನ್ನು ಸ್ವಾಗತಿಸಿ ಕಾರ್ಯಕ್ರಮ ನಡೆಸುತ್ತಿದ್ದರಿಂದ ಸಹಜವಾಗಿ ಮೋದಿ ಅಭಿಮಾನಿಗಳಲ್ಲಿ ಉತ್ಸಾಹ ತಾರಕಕ್ಕೇರಿ ಟ್ವಿಟ್ಟರ್ ನಲ್ಲಿ ಹೌಡಿ ಮೋದಿ ಟ್ರೆಂಡ್ ಮಾಡಿದ್ದರು.

ಹೌಡಿ ಮೋದಿ ಎಂದರೆ, ಹೇಗಿದ್ದೀರಿ ಮೋದಿ? ಹೌದಾ ಮೋದಿ ಎಂಬರ್ಥ ಬರುತ್ತದೆ. ಆ ಹೆಸರಿನ ಕಾರ್ಯಕ್ರಮಕ್ಕೆ ರಂಗ ಸಜ್ಜಾಗಿದ್ದು ಸುಮಾರು 50 ಸಾವಿರ ಭಾರತೀಯರು ಭಾಗವಹಿಸುತ್ತಾರೆ ಎಂದು ಎಲ್ಲಾ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಮೊನ್ನೆ ನರೇಂದ್ರಮೋದಿಯವರ ಜನ್ಮದಿನಕ್ಕೆ ಶುಭಕೋರಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ ಮೋದಿಯವರ ಈ ಹೌಡಿ ಮೋದಿ ಕಾರ್ಯಕ್ರಮವನ್ನು ಟೀಕಿಸಿ ಹೌಡಿ ಎಕಾನಮಿ ಎಂದು ಟ್ವೀಟ್ ಮಾಡಿದ್ದರು. ಹೌಡಿ ಎಕಾನಮಿ ಡೂಯಿಂಗ್ ಮಿಸ್ಟರ್ ಮೋದಿ ಅಂದರೆ ಕುಸಿದಿರುವ ಆರ್ಥಿಕತೆ ಬಗ್ಗೆ ಏನು ಹೇಳುತ್ತೀರಿ ಮೋದಿ? ಎಂದು ಪ್ರಶ್ನಸಿದ್ದರೆ. ಅದಕ್ಕೆ ತಾವೇ ಉತ್ತರವನ್ನು ಸಹ ಕೊಟ್ಟು ‘ನೋಡಿದರೆ ಇದು ತುಂಬಾ ಒಳ್ಳೆಯದು ಅಲ್ಲ ಅನ್ನಿಸುತ್ತಿದೆ’ ಎಂದಿದ್ದರು. ಆ ಮೂಲಕ ಈ ರೀತಿಯ ದೊಡ್ಡ ಆಡಂಬರದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ದೇಶದ ಆರ್ಥಿಕ ಬಿಕ್ಕಟ್ಟನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ಮುಂದುವರಿದು ಬ್ಲೂಮ್ ಬರ್ಗ್ ನ ಆರ್ಥಿಕ ವರದಿಯೊಂದನ್ನು ಲಗತ್ತಿಸಿದ್ದಾರೆ. ಅದರಲ್ಲಿ ಕಳೆದ ಜೂನ್ ತಿಂಗಳಿನಿಂದ 4.5 ಬಿಲಿಯನ್ ಡಾಲರ್ ಭಾರತೀಯ ಷೇರುಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಲಾಗಿದೆ. ಇದಕ್ಕೆ ಕುಸಿಯುತ್ತಿರುವ ಭಾರತೀಯ ಆರ್ಥಿಕತೆಯ ಭಯವೇ ಕಾರಣವಾಗಿದೆ ಎಂದು ವರದಿ ಮಾಡಿದೆ.

ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು, ಹೂಡಿಕೆದಾರರ ವಿಶ್ವಾಸವು ಅಲುಗಾಡಿದೆ ಆದರೆ ಮೋದಿ ಸರ್ಕಾರ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ ಎಂದಿದ್ದಾರೆ.

“ಭಾರತದ ಆರ್ಥಿಕತೆಯನ್ನು ‘5 ಟ್ರಿಲಿಯನ್’ ಡಾಲರ್ ಗೆ ಏರಿಸುತ್ತೇವೆ ಎಂದು ಪ್ರತಿದಿನ ಹೇಳುವ ಮೂಲಕ ಅಥವಾ ಮಾಧ್ಯಮಗಳ ಮುಖಪುಟದಲ್ಲಿ ಬರುವಂತೆ ಮಾಡುವ ಮೂಲಕ ಆರ್ಥಿಕತೆಯನ್ನು ಸರಿಪಡಿಸಲು ಬರುವುದಿಲ್ಲ. ಹಾಗೆಯೇ ವಿದೇಶದಲ್ಲಿ ದೊಡ್ಡ ಈವೆಂಟ್‌ಗಳನ್ನು ಪ್ರಾಯೋಜಿಸುವುದರಿಂದ ಭಾರತಕ್ಕೆ ಹೂಡಿಕೆದಾರರು ಬರುವುದಿಲ್ಲ” ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಒಂದು ಕಡೆ ಮೋದಿ ಸರ್ಕಾರ ಆರ್ಥಿಕ ಸೂಚಕಗಳ ಮಧ್ಯೆ ಎಲ್ಲವೂ ಸರಿಯಿಂದೆ ಎಂದು ತೋರಿಸಲು ಪ್ರಯತ್ನಿಸಿದರೆ, ಇನ್ನೊಂದು ಕಡೆ ಆರ್ಥಿಕ ಹಿಂಜರಿತದ ಬಗ್ಗೆ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ತನ್ನ ಆಕ್ರಮಣವನ್ನು ಮುಂದುವರಿಸಿದೆ.

ಕಾಂಗ್ರೆಸ್ ನಾಯಕರು ಉಲ್ಲೇಖಿಸಿರುವ ಬ್ಲೂಮ್‌ಬರ್ಗ್ ವರದಿಯಲ್ಲಿ, “ನರೇಂದ್ರ ಮೋದಿ ಪ್ರಧಾನಿಯಾಗುವ ಒಂದು ವರ್ಷದ ಮೊದಲು, 2013 ರ ಆರಂಭದಿಂದ ದೇಶದ ಆರ್ಥಿಕ ಬೆಳವಣಿಗೆಯು ಐದು ತ್ರೈಮಾಸಿಕಗಳವರೆಗೆ ದುರ್ಬಲ ಮಟ್ಟಕ್ಕೆ ಇಳಿದಿದೆ. ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇ5ರಷ್ಟು ನಿಧಾನಗತಿಯ ಬೆಳವಣಿಗೆಯು ಎಷ್ಟು ನೋವಿನಿಂದ ಕೂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಕಾರುಗಳ ಮಾರಾಟವು ದಾಖಲೆಯ ವೇಗದಲ್ಲಿ ಮುಳುಗುತ್ತಿದೆ. ಬಂಡವಾಳ ಹೂಡಿಕೆ ಕುಸಿದಿದೆ. ನಿರುದ್ಯೋಗ ದರವು 45 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿದೆ ಮತ್ತು ರಾಷ್ಟ್ರದ ಬ್ಯಾಂಕಿಂಗ್ ವ್ಯವಸ್ಥೆಯು ಕೆಟ್ಟ ಪರಿಸ್ಥಿತಿಯಲ್ಲಿದೆ. ಸೋಮವಾರದ ತೈಲ ಬೆಲೆ ಏರಿಕೆಯು ಮತ್ತೊಂದು ಹೊಡೆತ ನೀಡಲಿದೆ ಎಂಬ ವಿವರಗಳಿವೆ.

ಹಾಗಾಗಿ ನಿನ್ನೆವರೆಗೂ ಹೌಡಿ ಮೋದಿ ಟ್ರೆಂಡ್ ಮಾಡಿದ್ದರೆ, ಅದಕ್ಕೆ ವಿರುದ್ಧವಾಗಿ ಹೌಡಿ ಎಕಾನಮಿ ಸಹ ಟ್ರೆಂಡ್ ಆಗಲಿಕ್ಕೆ ಶುರುವಾಗಿದೆ. ಈ ಟ್ವಿಟ್ಟರ್ ವಾರ್ ಸೆಪ್ಟಂಬರ್ 22ರವರೆಗೂ ಮುಂದುವರೆಯಲಿದೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...