ಪಂಜಾಬ್ ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿರುವುದು ಹಳೆಯ ಸುದ್ದಿ. ಆದರೆ, ಕ್ರಿಕೆಟಿಗ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಇದೀಗ ಎಎಪಿ ಪಾಲಾಗಲಿದ್ದಾರೆ ಎಂಬುದು ಹೊಸ ಸುದ್ದಿ. ಹೌದು..! ಕಳೆದ ಹಲವು ದಿನಗಳಿಂದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆಗೆ ವೈಮನಸ್ಸು ಹೊಂದಿದ್ದ ಸಿಧು ಕೊನೆಗೂ ಆಮ್ ಆದ್ಮಿ ಪಾರ್ಟಿಯ ಪಾಲಾಗಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸಿಧುಗೆ ಆದರದ ಸ್ವಾಗತ ನೀಡಿರುವುದು ಈ ಎಲ್ಲಾ ಗುಮಾನಿಗೆ ಕಾರಣವಾಗಿದೆ.
ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ ಸಿಧು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ, ಬಿಜೆಪಿಯಲ್ಲಿ ಸರಿಯಾದ ಸ್ಥಾನಮಾನ ಸಿಗದಿದ್ದ ಕಾರಣ ಅವರು ಬಿಜೆಪಿ ತ್ಯಜಿಸಿ 2017ರ ವಿಧಾನಸಭಾ ಚುನಾವಣೆ ಸಂದರ್ಭದ್ಲಲಿ ಕಾಂಗ್ರೆಸ್ ಪಾಲಾಗಿದ್ದರು. ಅಸಲಿಗೆ ಅವರು ಕಾಂಗ್ರೆಸ್ ಸೇರುವ ಮುನ್ನವೇ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಈ ಸಂಬಂಧ ನವಜೋತ್ ಸಿಂಗ್ ಸಿಧು ಜೊತೆಗೆ ಚುನಾವಣಾ ತಂತ್ರಗಾರ ನಿಪುಣ ಪ್ರಶಾಂತ್ ಕಿಶೋರ್ ಮಾತುಕತೆಯನ್ನೂ ನಡೆಸಿದ್ದರು.
ಆದರೆ, ಈ ಮಾತುಕತೆ ಫಲಪ್ರದವಾಗಲಿಲ್ಲ. ಹೀಗಾಗಿ ಸಿಧು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಲ್ಲದೆ, 2017ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಿಎಂ ಅಮರಿಂದರ್ ಸಿಂಗ್ ಅವರ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದರು. ಆದರೆ, ದಿನ ಕಳೆದಂತೆ ಸಿಎಂ ಅಮರಿಂದರ್ ಸಿಂಗ್ ಹಾಗೂ ಸಿಧು ನಡುವಿನ ಭಿನ್ನಾಭಿಪ್ರಾಯ ಬೆಳೆಯುತ್ತಲೇ ಇತ್ತು. ಈ ಕುರಿತು ಸಿಧು ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಗೆ ಹಲವು ಬಾರಿ ದೂರು ನೀಡಿದ್ದರು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.
ಹೀಗಾಗಿ ಕೊನೆಗೂ ಸಿಧು ಕಾಂಗ್ರೆಸ್ ತೊರೆಯಲಿರುವುದು ಖಚಿತ ಎನ್ನಲಾಗುತ್ತಿದೆ. ಅಲ್ಲದೆ, ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಬಲವಾದ ಮತ್ತೊಂದು ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ರಾಷ್ಟ್ರ ರಾಜಕಾರಣದಲ್ಲಿ ಪ್ರಸ್ತುತ ಸದ್ದು ಮಾಡುತ್ತಿದೆ.
ಇದಕ್ಕೆ ಇಂಬು ನೀಡುವಂತೆ ದೆಹಲಿಯ ಎಎಪಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, “ಕ್ರಿಕೆಟಿಗ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಎಎಪಿ ಸೇರಲು ಸಮ್ಮಿತಿ ಸೂಚಿಸಿದರೆ ಅವರನ್ನು ಸಂತೋಷದಿಂದ ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು” ಎಂಬ ಹೇಳಿಕೆ ಹಲವಾರು ಗುಮಾನಿಗಳಿಗೆ ಕಾರಣವಾಗಿದೆ. ಆದರೆ, ದೆಹಲಿ ಮೂಲಗಳ ಪ್ರಕಾರ ಸಿಧು ಎಎಪಿ ಸೇರ್ಪಡೆ ಖಚಿತ ಎನ್ನಲಾಗುತ್ತಿದೆ.
2017ರಲ್ಲಿ ನಡೆದ ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವಲ್ಲಿ ಸಫಲವಾಗಿತ್ತು. ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದಿತ್ತು. 117 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಎಎಪಿ 20, ಎಸ್ಎಡಿ 15, ಬಿಜೆಪಿ 3 ಹಾಗೂ ಲೋಕ ಇನ್ಸಾಫ್ ಪಾರ್ಟಿ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಚುನಾವಣೆಯಲ್ಲಿ ರಾಜಕೀಯ ತಂತ್ರಗಾರ ನಿಪುಣ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು ಎಂಬುದು ಉಲ್ಲೇಖಾರ್ಹ.
ಓದಿ: ಸತತ ವೈಫಲ್ಯಗಳ ನಡುವೆಯೂ ಮೋದಿ ಭಾರೀ ಜನ ಬೆಂಬಲ ಹೊಂದಿರುವುದು ಹೀಗೆ…


