ಈ ವರ್ಷದ (2025) ಅಕ್ಟೋಬರ್ 10 ರಿಂದ ನವೆಂಬರ್ 14ರ ನಡುವೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA-ನರೇಗಾ) ಯೋಜನೆಯ ಡೇಟಾಬೇಸ್‌ನಿಂದ ಸುಮಾರು 27 ಲಕ್ಷ ಕಾರ್ಮಿಕರನ್ನು ತೆಗೆದುಹಾಕಲಾಗಿದೆ. ಇದೇ ಅವಧಿಯಲ್ಲಿ 10.5 ಲಕ್ಷಕ್ಕೂ ಹೆಚ್ಚು ಹೊಸ ಹೆಸರುಗಳನ್ನು ಸೇರಿಸಲಾಗಿದೆ ಎಂದು ಎನ್‌ಜಿಒ ಒಂದರ ವಿಶ್ಲೇಷಣೆಯನ್ನು ಉಲ್ಲೇಖಿಸಿ ದಿ ಹಿಂದೂ ವರದಿ ಮಾಡಿದೆ.
ಕೇಂದ್ರ ಸರ್ಕಾರವು ಆನ್‌ಲೈನ್‌ನಲ್ಲಿ ಇ-ಕೆವೈಸಿ ಪರಿಶೀಲನೆಯನ್ನು ನಡೆಸಲು ಮುಂದಾಗುವುದರೊಂದಿಗೆ ಹೆಸರು ಅಳಿಸುವಿಕೆ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.
ಇ-ಕೆವೈಸಿ ಪ್ರಕ್ರಿಯೆಯಲ್ಲಿ ಮೇಲ್ವಿಚಾರಕರು ಪ್ರತಿಯೊಬ್ಬ ಕಾರ್ಮಿಕರ ಫೋಟೋ ಕ್ಲಿಕ್ ಮಾಡಿ ನರೇಗಾದ ಡಿಜಿಟಲ್ ಹಾಜರಾತಿ ಅಪ್ಲಿಕೇಶನ್, ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಿಸ್ಟಮ್‌ನಲ್ಲಿ ಅಪ್‌ಲೋಡ್ ಮಾಡಿ ಅವರ ಆಧಾರ್ ಡೇಟಾದೊಂದಿಗೆ ಹೊಂದಿಸಬೇಕಾಗುತ್ತದೆ.
ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ‘ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದು ಕಂಡುಕೊಂಡ ನಂತರ ಸರ್ಕಾರ ಇ-ಕೆವೈಸಿಯನ್ನು ಪರಿಚಯಿಸಿದೆ ಎಂದು ವರದಿಗಳು ಹೇಳಿವೆ.
ಹೋರಾಟಗಾರರು ಮತ್ತು ಶಿಕ್ಷಣ ತಜ್ಞರ ಒಕ್ಕೂಟವಾದ ಲಿಬ್ ಟೆಕ್, ಕಳೆದ ಆರು ತಿಂಗಳಲ್ಲಿ ಒಟ್ಟು 15 ಲಕ್ಷ ಕಾರ್ಮಿಕರ ಹೆಸರುಗಳನ್ನು ಅಳಿಸಲಾಗಿತ್ತು. ಆದರೆ, ಕಳೆದ ಒಂದು ತಿಂಗಳಲ್ಲಿ ಈ ಪ್ರಮಾಣ 27 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.
2025-26ರ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ, ಒಟ್ಟು 98.8 ಲಕ್ಷ ಕಾರ್ಮಿಕರನ್ನು ಯೋಜನೆಗೆ ಸೇರಿಸಲಾಗಿದೆ. ಇದೇ ಅವಧಿಯಲ್ಲಿ 15.2 ಲಕ್ಷ ಕಾರ್ಮಿಕರನ್ನು ತೆಗೆದುಹಾಕಲಾಗಿದೆ. ಹಾಗಾಗಿ, 6 ತಿಂಗಳಲ್ಲಿ ಯೋಜನೆಗೆ ಸೇರ್ಪಡೆಯಾದ ಕಾರ್ಮಿಕರ ಸಂಖ್ಯೆ 83.6 ಲಕ್ಷ ಆಗಿದೆ. ಈ ಸಂಖ್ಯೆ, ನವೆಂಬರ್ ಮಧ್ಯದ ವೇಳೆಗೆ 66.5 ಲಕ್ಷಕ್ಕೆ ಇಳಿದಿವೆ ಎಂದು ದಿ ಹಿಂದೂ ವರದಿ ವಿವರಿಸಿದೆ.
ಯೋಜನೆಯ ಫಲಾನುಭವಿಗಳಲ್ಲಿ 6 ಲಕ್ಷ ಜನರು ಸಕ್ರಿಯ ಕೆಲಸಗಾರರಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಒಂದು ದಿನ ಕೆಲಸ ಮಾಡಿದವರು ಎಂದು ವಿಶ್ಲೇಷಣೆಯು ತಿಳಿಸಿದೆ ಎಂದು ವರದಿ ಹೇಳಿದೆ.
ಹೆಚ್ಚಿನ ಇ-ಕೆವೈಸಿ ಪೂರ್ಣಗೊಳಿಸಿರುವ ರಾಜ್ಯಗಳಲ್ಲಿ ಹೆಚ್ಚಿನ ಹೆಸರು ಅಳಿಸುವಿಕೆಗಳು ಕಂಡುಬಂದಿವೆ. ಆಂಧ್ರ ಪ್ರದೇಶದಲ್ಲಿ ಶೇಕಡ 78.4ರಷ್ಟು ಕಾರ್ಮಿಕರು ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ, ಅಲ್ಲಿ 15.92 ಲಕ್ಷ ಕಾರ್ಮಿಕರನ್ನು ಕೈ ಬಿಡಲಾಗಿದೆ. ತಮಿಳುನಾಡಿನಲ್ಲಿ ಶೇಕಡ 67.6ರಷ್ಟು ಇ-ಕೆವೈಸಿ ಪೂರ್ಣಗೊಂಡಿದೆ, ಅಲ್ಲಿ 30,529 ಕಾರ್ಮಿಕರ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಛತ್ತೀಸ್‌ಗಢದಲ್ಲಿ ಶೇಕಡ 66.6ರಷ್ಟು ಇ-ಕೆವೈಸಿ ಮಾಡಲಾಗಿದೆ, ಅಲ್ಲಿ 1.04 ಲಕ್ಷ ಕಾರ್ಮಿಕರ ಹೆಸರುಗಳನ್ನು ಅಳಿಸಲಾಗಿದೆ ಎಂದು ವರದಿ ಹೇಳಿದೆ.
“ನರೇಗಾ ಯೋಜನೆಯ ಜಾಬ್ ಕಾರ್ಡ್ ಅನ್ನು ಪ್ರತಿ ಐದು ವರ್ಷಕ್ಕೊಮ್ಮೆ ಕಡ್ಡಾಯವಾಗಿ ನವೀಕರಿಸಬೇಕು. ಯಾರ ಹೆಸರನ್ನಾದರೂ ಯೋಜನೆಯಿಂದ ತೆಗೆದುಹಾಕಬೇಕಾದರೆ (ಡಿಲೀಟ್ ಮಾಡಬೇಕಾದರೆ) ಇಷ್ಟ ಬಂದಂತೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಒಂದು ಸ್ಪಷ್ಟವಾದ ನಿಯಮಾವಳಿ (Standard Operating Procedure) ಅನುಸರಿಸಲೇ ಬೇಕು. ಈ ನಿಯಮದಲ್ಲಿ ಮೊದಲು ಯಾರ ಹೆಸರು ತೆಗೆಯಲಾಗುತ್ತಿದೆ ಎಂಬುದನ್ನು ಊರಿನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು, ಆ ವ್ಯಕ್ತಿಗೆ ಅದು ತಪ್ಪು ಎಂದಾದರೆ ದೂರು ಸಲ್ಲಿಸಲು ಸಾಕಷ್ಟು ಸಮಯ ಕೊಡಬೇಕು ಮತ್ತು ಅಂತಿಮವಾಗಿ ಗ್ರಾಮ ಸಭೆಯಲ್ಲಿ ಚರ್ಚೆ ಮಾಡಿ ಅದರ ಅನುಮೋದನೆ ಪಡೆದ ನಂತರ ಮಾತ್ರ ಹೆಸರು ತೆಗೆಯಲು ಅನುಮತಿ ಇರುತ್ತದೆ. ಹೀಗಾಗಿ ಎಲ್ಲವೂ ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯುತ್ತಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾಗಿ ‘ದಿ ಹಿಂದೂ’ ವರದಿ ಉಲ್ಲೇಖಿಸಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯ 2023ರ ಆರಂಭದಿಂದಲೇ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು (ಎಬಿಪಿಎಸ್) ಕಡ್ಡಾಯಗೊಳಿಸಿದೆ. ಈ ವ್ಯವಸ್ಥೆಯಲ್ಲಿ ಕಾರ್ಮಿಕರ ಆಧಾರ್ ಕಾರ್ಡ್ ಅನ್ನು ಅವರ ಹಣಕಾಸಿನ ವಿಳಾಸವಾಗಿ ನೇರವಾಗಿ ಲಿಂಕ್ ಮಾಡಲಾಗುತ್ತದೆ. ಕಾರ್ಮಿಕರ ವಿವರಗಳು ಆಧಾರ್, ಜಾಬ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಾದ್ಯಂತ ಹೊಂದಿಕೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ನಕಲಿ ಜಾಬ್ ಕಾರ್ಡ್‌ಗಳನ್ನು ತೆಗೆದುಹಾಕಲು ಈ ಕ್ರಮವನ್ನು ಪರಿಚಯಿಸಲಾಗಿದೆ. ಆದರೆ, ಇದರಿಂದ ಅನೇಕ ನಿಜವಾದ ಕಾರ್ಮಿಕರು ಯೋಜನೆಯಿಂದ ಹೊರ ಬಿದ್ದಿದ್ದಾರೆ ಎಂದು ವರದಿ ಹೇಳಿದೆ.
ಇ-ಕೆವೈಸಿ ಪ್ರಕ್ರಿಯೆಯಲ್ಲಿ ಸ್ವತಃ ನರೇಗಾ ಸದಸ್ಯರು ಪ್ರತಿಯೊಬ್ಬ ಕೆಲಸಗಾರನ ಫೋಟೋ ಕ್ಲಿಕ್ಕಿಸಿ ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (ಎನ್‌ಎಂಎಂಎಸ್) ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ನಂತರ ಅದು ಫೋಟೋಗಳನ್ನು ಆಧಾರ್ ದಾಖಲೆಗಳೊಂದಿಗೆ ಹೊಂದಿಸುತ್ತದೆ.
ಸಂಬಂಧವಿಲ್ಲದ ಅಥವಾ ಮರುಬಳಕೆಯ ಫೋಟೋಗಳು, ಲೈವ್ ಫೋಟೋಗಳ ಬದಲಿಗೆ ಫೋಟೋ-ಟು-ಫೋಟೋ ಅಪ್‌ಲೋಡ್‌ಗಳು, ಕಾರ್ಮಿಕರ ಎಣಿಕೆಗಳಲ್ಲಿ ಹೊಂದಾಣಿಕೆಯಾಗದಿರುವುದು ಮತ್ತು ಕೆಲಸದ ಸ್ಥಳಗಳಲ್ಲಿ ಲಿಂಗ ಸಂಯೋಜನೆಯಲ್ಲಿನ ವ್ಯತ್ಯಾಸಗಳು ಸೇರಿದಂತೆ ವ್ಯಾಪಕ ದುರುಪಯೋಗ ಕಂಡುಬಂದ ನಂತರ ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಲಿಬ್ ಟೆಕ್‌ನ ಹಿರಿಯ ಸಂಶೋಧಕ ಚಕ್ರಧರ್ ಬುದ್ಧ, ಆಧಾರ್ ಆಧಾರಿತ ನೇರ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿಯಾದಾಗಲೂ ಇದೇ ರೀತಿ ದೊಡ್ಡ ಪ್ರಮಾಣದಲ್ಲಿ ಜನರ ಹೆಸರುಗಳು ಅರ್ಹರಾದವರ ಪಟ್ಟಿಯಿಂದ ಕಣ್ಮರೆಯಾಗಿದ್ದವು. ಈಗಲೂ ಅದೇ ರೀತಿಯ ಪರಿಸ್ಥಿತಿ ಪುನರಾವರ್ತನೆಯಾಗುತ್ತಿದೆ ಎಂದು ಹೇಳಿದ್ದಾರೆ.
ಆಧಾರ್-ಲಿಂಕ್ಡ್ ತಂತ್ರಜ್ಞಾನವನ್ನು ಪರಿಚಯಿಸಿದಾಗಲೆಲ್ಲಾ (ಅದು ಆಗ ಎಬಿಪಿಎಸ್ ಆಗಿರಲಿ ಅಥವಾ ಈಗ ಇ-ಕೆವೈಸಿ ಆಗಿರಲಿ) ಪರಿಶೀಲನೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದ್ದರೂ, ನಿಜವಾದ ಕೆಲಸಗಾರರಿಗೆ ಹೊಸ ಅಡೆತಡೆಗಳನ್ನು ಸೃಷ್ಟಿಸುತ್ತದೆ ಮತ್ತು ದೊಡ್ಡ ಪ್ರಮಾಣದ ಹೊರಗಿಡುವಿಕೆಗೆ ಕಾರಣವಾಗುತ್ತದೆ. ಅಳಿಸುವಿಕೆಗಳಲ್ಲಿನ ಈ ಹೆಚ್ಚಳವು ಕಾರ್ಮಿಕರ ಮೇಲೆ ಅವುಗಳ ಪರಿಣಾಮವನ್ನು ಮೌಲ್ಯಮಾಪನ ಮಾಡದೆ ಹೊಸ ತಂತ್ರಜ್ಞಾನಗಳನ್ನು ವಿವೇಚನೆಯಿಲ್ಲದೆ ಪರಿಚಯಿಸಬಾರದು ಎಂದು ತೋರಿಸುತ್ತದೆ” ಎಂದು ಚಕ್ರಧರ್ ಬುದ್ಧ ಅಭಿಪ್ರಾಯಪಟ್ಟಿದ್ದಾರೆ.
ದಿ ಹಿಂದೂ ಪತ್ರಿಕೆಯ ಹಿರಿಯ ಉಪ ಸಂಪಾದಕಿ ಶೋಭನಾ ಕೆ. ನಾಯರ್ ಅವರು ನರೇಗಾ ವಿಷಯದಲ್ಲಿ ಕೇಂದ್ರ ಸರ್ಕಾರದ ಹೇಳಿಕೆಯನ್ನು ಟೀಕಿಸಿದ್ದಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಯೋಜನೆಯಿಂದ ಲಕ್ಷಾಂತರ ಜನರ ಹೆಸರುಗಳನ್ನು ಅಳಿಸಿಹಾಕುತ್ತಿರುವುದಕ್ಕೂ ಮತ್ತು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿರುವ ಇ-ಕೆವೈಸಿ ಅಭಿಯಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಔಪಚಾರಿಕವಾಗಿ ಹೇಳಿಕೊಳ್ಳುತ್ತಿದೆ. ಆದರೆ, ನಿಜವಾದ ಕಾರಣ ಬೇರೆಯೇ ಇದೆ. ನರೇಗಾ ಕಾರ್ಮಿಕರ ಡಿಜಿಟಲ್ ಹಾಜರಾತಿ ವ್ಯವಸ್ಥೆ ಸಂಪೂರ್ಣ ವಿಫಲಗೊಂಡಿದ್ದರಿಂದ ಸರ್ಕಾರವು ತ್ವರಿತವಾಗಿ ಇ-ಕೆವೈಸಿ ಅಭಿಯಾನ ಆರಂಭಿಸಿದೆ. ಜೊತೆಗೆ, ಎಲ್ಲಾ ಜಾಬ್ ಕಾರ್ಡ್‌ಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯಗೊಳಿಸಿರುವುದರಿಂದಲೂ ಈ ಇ-ಕೆವೈಸಿ ಕಾರ್ಯಾಚರಣೆಯನ್ನು ಒತ್ತಾಯಪೂರ್ವಕವಾಗಿ ಮುಂದುವರಿಸಲಾಗುತ್ತಿದೆ. ಆದ್ದರಿಂದ ಸರ್ಕಾರದ ಅಧಿಕೃತ ಹೇಳಿಕೆಯೇ ತಪ್ಪು ಮಾಹಿತಿಯಾಗಿದ್ದು, ಡಿಜಿಟಲ್ ವ್ಯವಸ್ಥೆಯ ವೈಫಲ್ಯ ಮತ್ತು ಆಧಾರ್‌ನೊಂದಿಗೆ ಕಡ್ಡಾಯ ಸಂಯೋಜನೆಯೇ ಈ ಹೆಸರು ಅಳಿಸುವಿಕೆಗೆ ನೇರ ಕಾರಣ ಎಂಬುದು ಶೋಭನಾ ನಾಯರ್ ಅವರ ವಾದವಾಗಿದೆ.

ಪತ್ರಿಕಾ ವರದಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್, “ಗ್ರಾಮೀಣ ಬಡವರಿಗೆ ಕಾನೂನಿನ ಮೂಲಕವೇ ಖಾತರಿಯಾಗಿ ಸಿಕ್ಕಿರುವ ಉದ್ಯೋಗದ ಹಕ್ಕನ್ನು (ಕನಿಷ್ಠ 100 ದಿನಗಳ ಕೆಲಸದ ಗ್ಯಾರಂಟಿ) ಈ ರೀತಿ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕಿತ್ತುಕೊಳ್ಳುವುದು ಸರ್ಕಾರದ ಉದ್ದೇಶಪೂರ್ವಕ ಯೋಜನೆ” ಎಂದು ಟೀಕಿಸಿದ್ದಾರೆ.
“ಮತ್ತೊಂದು ದಿನ, ಗ್ರಾಮೀಣ ಬಡವರಿಗೆ ಕಾನೂನಿನ ಮೂಲಕವೇ ಖಾತರಿಯಾಗಿ ಸಿಕ್ಕಿರುವ ಉದ್ಯೋಗದ ಹಕ್ಕನ್ನು ನಿರಾಕರಿಸುವ ಮತ್ತೊಂದು ಪ್ರಯತ್ನ” ಎಂದು ಜೈರಾಮ್ ರಮೇಶ್ ಬರೆದುಕೊಂಡಿದ್ದಾರೆ.
“ಇ-ಕೆವೈಸಿ ಜಾರಿ ಮತ್ತು ಕಾರ್ಮಿಕರ ಹೆಸರುಗಳ ಸಾಮೂಹಿಕ ಅಳಿಸುವಿಕೆ ಸಂಬಂಧವಿದೆ. ಇದು ‘ಪಾರದರ್ಶಕತೆಯ ಸೋಗಿನಲ್ಲಿ ಪರಿಚಯಿಸಲಾದ ಆಧಾರ್ ಆಧಾರಿತ ಡಿಜಿಟಲ್ ಪ್ರಕ್ರಿಯೆಗಳ ಮೂಲಕ ನರೇಗಾವನ್ನು ಕೊನೆಗೊಳಿಸುವ ವ್ಯವಸ್ಥಿತ ಪ್ರಯತ್ನದ’ ಭಾಗವಾಗಿದೆ” ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (ಎನ್‌ಎಂಎಂಎಸ್) ಅಪ್ಲಿಕೇಶನ್ ಮತ್ತು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್) ನಂತಹ ಹಿಂದಿನ ಕ್ರಮಗಳು ಈಗಾಗಲೇ ಅಂದಾಜು 2 ಕೋಟಿ ಕಾರ್ಮಿಕರು ತಮ್ಮ ಕಾನೂನುಬದ್ಧ ಕೆಲಸದ ಹಕ್ಕು ಮತ್ತು ಸಕಾಲಿಕ ಪಾವತಿಯನ್ನು ಪಡೆದುಕೊಳ್ಳುವುದನ್ನು ತಡೆಯುತ್ತಿವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ನರೇಗಾ ಬಜೆಟ್‌ನಲ್ಲಿ ಗಣನೀಯ ಹೆಚ್ಚಳ, ಸಕಾಲಿಕ ವೇತನ ಪಾವತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ನೈಜ ಆದಾಯದ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ದಿನಕ್ಕೆ ರೂ. 400 ಕನಿಷ್ಠ ವೇತನ, ಭವಿಷ್ಯದ ವೇತನ ದರಗಳನ್ನು ನಿರ್ಧರಿಸಲು ಸ್ಥಾಯಿ ಸಮಿತಿ ರಚನೆ ಮತ್ತು ಎಬಿಪಿಎಸ್, ಎನ್‌ಎಂಎಂಎಸ್ ಮತ್ತು ಇ-ಕೆವೈಸಿನಂತಹ ಕಾರ್ಮಿಕರನ್ನು ಹೊರಗಿಡುವ ತಂತ್ರಜ್ಞಾನಗಳ ಕಡ್ಡಾಯ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂಬುದು ಕಾಂಗ್ರೆಸ್‌ನ ಒತ್ತಾಯವಾಗಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.

ಲಿಬ್ ಟೆಕ್ ಭಾರತದ ಮಾಹಿತಿ ಹಕ್ಕು ಆಂದೋಲನದಿಂದ ಪ್ರೇರಿತವಾದ ಒಂದು ಸಾಮೂಹಿಕ ಸಂಸ್ಥೆಯಾಗಿದ್ದು, ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದೆ.


