ಕೊರೊನಾ ಸಂಕಷ್ಟದ ಸಮಯದಲ್ಲಿ ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶ ಪರೀಕ್ಷೆ NEET ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪರೀಕ್ಷೆ JEE ಯನ್ನು ಮುಂದೂಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಸೇರಿ ಹಲವು ಮಂದಿ ಆಗ್ರಹಿಸಿದ್ದರು. ಆದರೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಾತ್ರ ಪರೀಕ್ಷೆ ನಡೆಸಿಯೇ ಸಿದ್ದ ಎಂದು ಘಂಟಾಘೋಷವಾಗಿ ತಿಳಿಸಿದೆ.
ಪಕ್ಷದಲ್ಲಿ ಉಂಟಾದ ಭಿನ್ನಮತದ ಕಾವಿನಿಂದ ಹೊರ ಬಂದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜೊತೆ ಸೇರಿ ಇಂದು ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜ್ಯಗಳ ಹಣಕಾಸು ಸ್ಥಿತಿಗತಿ ಜೊತೆಗೆ ನೀಟ್, ಜೆಇಇ ಮತ್ತು ಜಿಎಸ್‌ಟಿ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಜೊತೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರಭಲ ಹೋರಾಟಕ್ಕೆ ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವುದು ಕೂಡ ಇದರ ಉದ್ದೇಶವಾಗಿದೆ.
ಇನ್ನು ಈ ಸಮಯದಲ್ಲಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸರಿಯಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರಿಗೆ 2 ಬಾರಿ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಪರೀಕ್ಷೆ ಮುಂದೂಡುವುದನ್ನು ನಿರಾಕರಿಸಿರುವ ಸರ್ಕಾರ ಸಂಪೂರ್ಣ ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದಿದೆ.
ಇತ್ತ ಪ್ರತಿಪಕ್ಷಗಳಲ್ಲಿ ಕೇಂದ್ರದ ವಿರುದ್ಧದ ಹೋರಾಟಕ್ಕೆ, ಪ್ರಮುಖ ವಿಚಾರಗಳ ಚರ್ಚೆಗೆ ಒಮ್ಮತದ ಅಭಿಪ್ರಾಯ ಕೂಡ ಇಲ್ಲ ಎಂಬುದು ಇಂದಿನ ಸಭೆಯಿಂದ ತಿಳಿಯುತ್ತಿದೆ. ಕಾಂಗ್ರೆಸ್ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿರೋ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಕೂಡ ಇಂದಿನ ಸಭೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.
ನೀಟ್ ಮತ್ತು ಜೆಇಇ ಪರೀಕ್ಷೆ ಮುಂದೂಡುವಂತೆ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್, ನಟ ಸೋನು ಸೂದ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 13ಕ್ಕೆ ನೀಟ್ ಪರೀಕ್ಷೆ ಮತ್ತು ಸೆಪ್ಟೆಂಬರ್ 1ರಿಂದ 6ರವರೆಗೆ ಜೆಇಇ ಪರೀಕ್ಷೆಗಳು ನಡೆಯಲಿವೆ. ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಜೆಇಇ ಪರೀಕ್ಷಾ ಕೇಂದ್ರಗಳನ್ನು 570 ರಿಂದ 660ಕ್ಕೆ ಏರಿಸಲಾಗಿದೆ. ನೀಟ್ ಪರೀಕ್ಷಾ ಕೇಂದ್ರಗಳನ್ನು 2,546ರಿಂದ 3,843ಕ್ಕೆ ಹೆಚ್ಚಿಸಲಾಗಿದೆ. ಕೊಠಡಿಗಳಲ್ಲಿ 24 ಪರೀಕ್ಷಾರ್ಥಿಗಳ ಬದಲಾಗಿ 12 ಮಂದಿ ಇರಲಿದ್ದಾರೆ ಎಂದು NTA ತಿಳಿಸಿದೆ. ಈ ಬಾರಿ ದೇಶಾದ್ಯಂತ 8.58 ಲಕ್ಷ ಜೆಇಇ ಅಭ್ಯರ್ಥಿಗಳು ಮತ್ತು 15.97 ಲಕ್ಷ ನೀಟ್ ಪರೀಕ್ಷಾರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ.
ಇದನ್ನೂ ಓದಿ: NEET, JEE ಪರೀಕ್ಷೆಗಳನ್ನು ಮುಂದೂಡಿ: ನಟ ಸೋನು ಸೂದ್ ಆಗ್ರಹ


