Homeಮುಖಪುಟಫೇಸ್‌ಬುಕ್-ಬಿಜೆಪಿ ಸಖ್ಯದ ವಾಲ್ ಸ್ಟ್ರೀಟ್ ವರದಿ: ವಿಚಾರಣೆ ಆರಂಭಿಸಿದ ದೆಹಲಿ ಅಸೆಂಬ್ಲಿ

ಫೇಸ್‌ಬುಕ್-ಬಿಜೆಪಿ ಸಖ್ಯದ ವಾಲ್ ಸ್ಟ್ರೀಟ್ ವರದಿ: ವಿಚಾರಣೆ ಆರಂಭಿಸಿದ ದೆಹಲಿ ಅಸೆಂಬ್ಲಿ

ಸಮಿತಿಯು, ಪತ್ರಕರ್ತ ಮತ್ತು ಲೇಖಕ ಪರಂಜೋಯ್ ಗುಹಾ ಠಾಕೂರ್ತಾ ಮತ್ತು ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ನಿಖಿಲ್ ಪಹ್ವಾ ಅವರ ಹೇಳಿಕೆಗಳನ್ನು ತೆಗೆದುಕೊಂಡು, ಅದನ್ನು "ತಜ್ಞರ ಸಾಕ್ಷಿಗಳು" ಎಂದು ಪರಿಗಣಿಸಿದೆ.

- Advertisement -
- Advertisement -

ಅಮೇರಿಕಾದ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದ ‘ಭಾರತದಲ್ಲಿ ಫೇಸ್‌ಬುಕ್ ಬಿಜೆಪಿ ಪರವಾಗಿ ಕೆಲಸ ಮಾಡಿದೆ’ ಎಂಬ ಆರೋಪದ ವಿಚಾರಣೆಯನ್ನು ದೆಹಲಿ ಅಸೆಂಬ್ಲಿಯ ಶಾಂತಿ ಮತ್ತು ಸಾಮರಸ್ಯದ ಸಮಿತಿ ಆರಂಭಿಸಿದೆ. ಈ ಆರೋಪಗಳ ಬಗ್ಗೆ ತಮ್ಮ ಹೇಳಿಕೆಯನ್ನು ದಾಖಲಿಸಲು ಫೇಸ್‌ಬುಕ್‌ನ ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಆಹ್ವಾನಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಕೆಲವು ದಿನಗಳ ಹಿಂದೆ ಅಮೇರಿಕಾದ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ “ಭಾರತದಲ್ಲಿ ಬಿಜೆಪಿ ನಾಯಕರ ದ್ವೇಷ ಭಾಷಣವನ್ನು ನಿಯಂತ್ರಿಸುವಲ್ಲಿ ಫೇಸ್‌ಬುಕ್ ಕ್ರಮ ತೆಗೆದುಕೊಂಡಿಲ್ಲ. ಆಡಳಿತ ಪಕ್ಷದ ವಿರುದ್ಧ ಕ್ರಮ ತೆಗೆದುಕೊಂಡರೆ ಕಂಪನಿಯ ಭವಿಷ್ಯದ ವ್ಯವಹಾರಗಳಿಗೆ ತೊಂದರೆಯಾಗಬಹುದು ಎಂದು ಫೇಸ್‌ಬುಕ್ ಭಾರತದ ಮುಖ್ಯಸ್ಥರು ಹೇಳಿದ್ದಾರೆ” ಎಂದು ವರದಿ ಮಾಡಿತ್ತು.

ಇದಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಇದರ ಬಗ್ಗೆ ತನಿಖೆಯಾಗಬೇಕೆಂದು ಹಲವರು ಒತ್ತಾಯಿಸಿ ಫೇಸ್‌ಬುಕ್‌ಗೆ ಪತ್ರವನ್ನೂ ಬರೆದಿದ್ದರು. ಇದೀಗ ದೆಹಲಿಯ ಅಸೆಂಬ್ಲಿಯು ಫೇಸ್‌ಬುಕ್ ಅಧಿಕಾರಿಗಳನ್ನು ವಿಚಾರಿಸುವುದಾಗಿ ಹೇಳಿದೆ.

“ತನಿಖೆಗೆ ಸಮಿತಿಯು ಸರ್ವಾನುಮತದಿಂದ ಒಪ್ಪಿಗೆ ಪಡೆದುಕೊಂಡಿದೆ. ದೂರುದಾರರು ಮಾಡಿದ ಆರೋಪಗಳ ಬಗ್ಗೆ ತನಿಖೆ ನಡೆಸಲು ಫೇಸ್‌ಬುಕ್ ಅಧಿಕಾರಿಗಳನ್ನು ಕರೆಸಿಕೊಳ್ಳಬೇಕು. ಹಾಗಾಗಿ ಶೀಘ್ರದಲ್ಲೇ ಫೇಸ್‌ಬುಕ್‌ನ ಉನ್ನತ ಅಧಿಕಾರಿಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸುತ್ತೇವೆ” ಎಂದು ದೆಹಲಿ ಅಸೆಂಬ್ಲಿ ಹೇಳಿಕೆಯಲ್ಲಿ ತಿಳಿಸಿದೆ.

ಸಮಿತಿಯು, ಪತ್ರಕರ್ತ ಮತ್ತು ಲೇಖಕ ಪರಂಜೋಯ್ ಗುಹಾ ಠಾಕೂರ್ತಾ ಮತ್ತು ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ನಿಖಿಲ್ ಪಹ್ವಾ ಅವರ ಹೇಳಿಕೆಗಳನ್ನು ತೆಗೆದುಕೊಂಡು, ಅದನ್ನು “ತಜ್ಞರ ಸಾಕ್ಷಿಗಳು” ಎಂದು ಪರಿಗಣಿಸಿದೆ. ಠಾಕೂರ್ತಾ ಭಾರತದಲ್ಲಿ ‘ಫೇಸ್‌ಬುಕ್‌ನ ರಿಯಲ್ ಫೇಸ್’ ಎಂಬ ಪುಸ್ತಕವನ್ನು ಬರೆದಿದ್ದಾರೆ.

ದೆಹಲಿ ಅಸೆಂಬ್ಲಿ ಸಮಿತಿಯ ಅಧ್ಯಕ್ಷರಾಗಿರುವ ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಾಡ್ಡ, ಫೇಸ್‌ಬುಕ್-ಬಿಜೆಪಿ ಸಂಬಂಧ ಮತ್ತು ಆರೋಪಿಸಲಾಗಿರುವ ಫೇಸ್‌ಬುಕ್-ಬಿಜೆಪಿ ಸಂಬಂಧ ಮತ್ತು ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಕೋಮುಗಲಭೆಯಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರದ ಬಗ್ಗೆ ಹಲವಾರು ಪ್ರಶ್ನೆಗಳ ಕುರಿತು ತಜ್ಞರನ್ನು ಸಲಹೆ ಕೇಳಿದ್ದಾರೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ‘ಫೇಸ್‌ಬುಕ್ ಹೇಳುವಂತೆ ಅದು ವಿಷಯ ತಟಸ್ಥ ನಿಲುವು ಹೊಂದಿಲ್ಲ. ಅತಿದೊಡ್ಡ ಜಾಲ ಹೊಂದಿರುವ ಸಾಮಾಜಿಕ ಮಾಧ್ಯಮ ಮತ್ತು ಬಿಜೆಪಿ ನಡುವಿನ ಸಂಬಂಧವನ್ನು ಸಾಬೀತುಪಡಿಸಲು ಪುರಾವೆಗಳಿವೆ’ ಎಂದು ತಜ್ಞರು ಹೇಳಿದ್ದಾರೆ.

ಕೋಮು ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಫೇಸ್‌ಬುಕ್‌ನ ಪಾತ್ರ ಮತ್ತು ದ್ವೇಷ ಹರಡುವ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಅದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸ್ವತಂತ್ರ ವಿಚಾರಣೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 14 ರಂದು ದಿ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಿಂದ ದ್ವೇಷ ಭಾಷಣದ ಬಗ್ಗೆ ಫೇಸ್‌ಬುಕ್‌ನ ಏಕ ಪಕ್ಷಪಾತತೆಯನ್ನು ಬಹಿರಂಗಪಡಿಸಲಾಗಿದೆ. ಈ ವರದಿಯು ಭಾರತದಲ್ಲಿ ರಾಜಕೀಯವಾಗಿ ಭಾರೀ ಮಹತ್ವದ್ದೆನಿಸಿದೆ.

ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮತ್ತು ಗುಂಪುಗಳಿಗೆ “ದ್ವೇಷ-ಭಾಷಣ ನಿಯಮಗಳನ್ನು ಅನ್ವಯಿಸಿಲ್ಲ” ಎಂದು ಫೇಸ್‌ಬುಕ್ ಇಂಡಿಯಾದ ಸಾರ್ವಜನಿಕ ನೀತಿಯ ಮುಖ್ಯಸ್ಥೆ ಅಂಖಿ ದಾಸ್ ಅವರ ಕಾರ್ಯವೈಖರಿಯನ್ನು ಈ ವರದಿಯು ಬಹಿರಂಗಪಡಿಸಿತ್ತು.

ಕಳೆದ ವಾರ, ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಸೆಪ್ಟೆಂಬರ್ 2 ರಂದು ಈ ಕುರಿತು ಚರ್ಚಿಸಲು ಫೇಸ್‌ಬುಕ್ ಪ್ರತಿನಿಧಿಗಳನ್ನು ಕರೆಸಲಿದೆ ಎಂದು ಹೇಳಿದೆ. ಸಮಿತಿಯ ಅಧ್ಯಕ್ಷ ಶಶಿ ತರೂರ್ ಆಗಸ್ಟ್ 17 ರಂದು ತನಿಖೆ ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದ್ದರು.

ಇದರ ನಡುವೆ, ಫೇಸ್‌ಬುಕ್, ತನ್ನ ವೇದಿಕೆಯಲ್ಲಿ ದ್ವೇಷ ಭಾಷಣಕ್ಕೆ ಸ್ಥಳವಿಲ್ಲ ಎಂದು ಶುಕ್ರವಾರ ಹೇಳಿ, ಯಾವುದೇ ಕಾರಣಕ್ಕೂ ಇಲ್ಲಿ ಏಕ ಪಕ್ಷಪಾತತೆಗೆ ಅವಕಾಶವಿಲ್ಲ. ಮತ್ತು ಕೋಮು ಪ್ರಚೋದನೆಗೂ ಅವಕಾಶವಿಲ್ಲ ಎಂದು ಹೇಳಿದೆ.


ಇದನ್ನೂ ಓದಿ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಫೇಸ್‌ಬುಕ್‌ ಅನ್ನು ನಿಯಂತ್ರಿಸುತ್ತಿದ್ದಾರೆ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...