ನೀಟ್-ಯುಜಿ ಪರೀಕ್ಷೆ 2024ರ ಫಲಿತಾಂಶಗಳನ್ನು ಜುಲೈ 20ರ ಮಧ್ಯಾಹ್ನ 12 ಗಂಟೆಯೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಗೆ ಸುಪ್ರೀಂ ಕೋರ್ಟ್ ಇಂದು(ಜು 18) ನಿರ್ದೇಶನ ನೀಡಿದೆ.
ಅಭ್ಯರ್ಥಿಗಳ ಗುರುತನ್ನು ಬಹಿರಂಗಪಡಿಸಬಾರದು. ನಗರವಾರು ಮತ್ತು ಕೇಂದ್ರವಾರು ಫಲಿತಾಂಶಗಳನ್ನು ಪ್ರಕಟಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅವ್ಯವಹಾರಗಳ ಆರೋಪಗಳ ಹಿನ್ನೆಲೆ ನೀಟ್-ಯುಜಿ 2024 ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಈ ಆದೇಶ ನೀಡಿದೆ.
ಎನ್‌ಟಿಎ ಎಲ್ಲಾ ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸದ ಕಾರಣ ಕೇಂದ್ರವಾರು ಅಂಕಗಳ ಮಾದರಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿದಾರರು ದೂರಿರುವ ಹಿನ್ನೆಲೆ, ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ನ್ಯಾಯಾಲಯ, ಫಲಿತಾಂಶಗಳನ್ನು ಪ್ರಕಟಿಸುವಂತೆ ಎನ್‌ಟಿಎಗೆ ಸೂಚಿಸಿದೆ.
ಅರ್ಜಿದಾರರ ಪರ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ನರೇಂದ್ರ ಹೂಡಾ, ಸಿಬಿಐ ಸ್ಥಿತಿ ವರದಿಯನ್ನು ಅವರೊಂದಿಗೆ ಹಂಚಿಕೊಳ್ಳದ ಕಾರಣ ಅಥವಾ ಸಂಪೂರ್ಣ ಫಲಿತಾಂಶಗಳನ್ನು ಪ್ರಕಟಿಸದ ಕಾರಣ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರೈತರ ದಿಲ್ಲಿ ಚಲೋ ತಡೆದಿದ್ದ ಪೊಲೀಸ್ ಅಧಿಕಾರಿಗಳನ್ನು ಶೌರ್ಯ ಪದಕಕ್ಕೆ ಶಿಫಾರಸು ಮಾಡಿದ ಹರಿಯಾಣ ಸರ್ಕಾರ


