ಕೇಂದ್ರ ಸರ್ಕಾರ ಅಂಗೀಕರಿಸಿರುವ 3 ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ರೈತ ಸಂಘಟನೆಗಳು, ವಿರೋಧ ಪಕ್ಷಗಳು ವ್ಯಾಪಕ ವಿರೋಧ ದಾಖಲಿಸಿದ್ದು, ಇಂದಿಗೂ ಪ್ರತಿಭಟನೆ ನಡೆಸುತ್ತಿವೆ. ಅದರಲ್ಲಿಯೂ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೋರಾಟ ಉತ್ತುಂಗಕ್ಕೆ ಮುಟ್ಟಿತ್ತು. ಪಂಜಾಬ್‌ನ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಸಹ ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ದನಿಗೂಡಿಸಿತ್ತು. ಈ ನಡುವೆ ಅದೇ ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಹೊಸ ಕೃಷಿ ಮಸೂದೆ ಕುರಿತು ವಿರೋಧ ಪಕ್ಷ ಆಪ್ ಪ್ರತಿಭಟನೆ ಆರಂಭಿಸಿದೆ.
ಪಂಜಾಬ್ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳಿಗೆ ಸೆಡ್ಡುಹೊಡೆದು ರಾಜ್ಯದಲ್ಲಿ ಹೊಸ ಕೃಷಿ ಮಸೂದೆಯನ್ನು ಅಂಗೀಕರಿಸಲು ಹೊರಟಿದೆ. ಆದರೆ ಆ ಕರಡು ಮಸೂದೆಯನ್ನು ಸರ್ಕಾರ ವಿರೋಧ ಪಕ್ಷಗಳೊಂದಿಗೆ ಹಂಚಿಕೊಳ್ಳುತ್ತಿಲ್ಲವೆಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಶಾಸಕರು ನಿನ್ನೆ ರಾತ್ರಿಯೆಲ್ಲ ವಿಧಾನಸಭಾ ಕಟ್ಟಡದಲ್ಲಿಯೇ ಉಳಿದು ಪ್ರತಿಭಟನೆ ದಾಖಲಿಸಿದ್ದಾರೆ.
ಈ ಗುರುವಾರ ಅಸೆಂಬ್ಲಿಯಲ್ಲಿ ಮಂಡನೆಯಾಗಲಿರುವ ಕರಡು ಕೃಷಿ ಮಸೂದೆಯನ್ನು ಬಹಿರಂಗಪಡಿಸಬೇಕು ಎಂಬುದು ಆಪ್ ಶಾಸಕರ ಬೇಡಿಕೆಯಾಗಿದೆ. “ನಾವು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗೆ ಪ್ರತಿಯಾಗಿ ರಾಜ್ಯ ಸರ್ಕಾರ ತರಲು ಹೊರಟಿರುವ ಮಸೂದೆಯನ್ನು ಬೆಂಬಲಿಸುತ್ತೇವೆ. ಆದರೆ ಆ ಮಸೂದೆಯಲ್ಲಿ ಏನಿದೆ ಎಂಬುದನ್ನು ನಮಗೆ ತಿಳಿಸಬೇಕಲ್ಲವೇ? ಏನಿದೆ ಎಂದು ತಿಳಿಯದೇ ಶಾಸಕರು ಅದರ ಬಗ್ಗೆ ಚರ್ಚೆ ಮತ್ತು ವಾದ ನಡೆಸಲು ಸಾಧ್ಯವೇ ಎಂದು ವಿರೋಧ ಪಕ್ಷದ ನಾಯಕ ಹರ್ಪಾಲ್ ಚೀಮಾ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ತಾನೇ ಕೃಷಿ ಮಸೂದೆಗಳನ್ನು ವಿರೋಧಿಸಿ ಎನ್‌ಡಿಎ ತೊರೆದಿರುವ ಶಿರೋಮಣಿ ಅಕಾಲಿ ದಳವು ಹೊಸ ಮಸೂದೆಯನ್ನು ಸೋಮವಾರವೇ ಚರ್ಚೆಗೆ ಬಿಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ.
ಕಳೆದ ವರ್ಷ ರಾಜ್ಯ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಾಸಕ ನವಜ್ಯೋತ್ ಸಿಂಗ್ ಸಿಧು ಸೋಮವಾರ ಅಸೆಂಬ್ಲಿಗೆ ಹಾಜರಾಗಿದ್ದಾರೆ. ಅವರು ತಮ್ಮ ಯೂಟ್ಯೂಬ್‌ನಲ್ಲಿ ಕೇಂದ್ರದ ಕೃಷಿ ಕಾಯ್ದೆಗಳು ದೇಶದ ಒಕ್ಕೂಟ ವ್ಯವಸ್ಥೆಯ ಮೇಲಿನ ಗಧಾಪ್ರಹಾರ ಎಂದು ಕರೆದಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆಗೆ ವಿರೋಧ: ಪಂಜಾಬ್ BJP ಪ್ರಧಾನ ಕಾರ್ಯದರ್ಶಿ ರಾಜೀನಾಮೆ!


