ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಹೊಸ ನ್ಯಾಯಾಧೀಶರ ಕುರಿತ ಸುಪ್ರೀಂಕೋರ್ಟ್ ಕೊಲಿಜಿಯಂನ ಶಿಫಾರಸುಗಳ ಕುರಿತು ಮಾಧ್ಯಮ ವರದಿಗಳ ಬಗ್ಗೆ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಹ ಸುದ್ದಿಗಳನ್ನು ವರದಿ ಮಾಡುವಲ್ಲಿ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ಹೇಳಿದ್ದು, ಯಾವುದೇ ಔಪಚಾರಿಕ ಘೋಷಣೆಗೆ ಮುಂಚೆಯೇ ನೇಮಕಾತಿಗಳ ವರದಿಗಳು ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
“ನ್ಯಾಯಾಧೀಶರ ನೇಮಕಾತಿಯ ಪ್ರಕ್ರಿಯೆಯು ಪವಿತ್ರವಾದುದಾಗಿದ್ದು, ಅದಕ್ಕೆ ಘನತೆ ಇದೆ. ಮಾಧ್ಯಮದ ಸ್ನೇಹಿತರು ಈ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಗುರುತಿಸಬೇಕು” ಎಂದು ನ್ಯಾಯಾಧೀಶರಾದ ನ್ಯಾಯಮೂರ್ತಿ ನವೀನ್ ಸಿನ್ಹಾ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಾ ಎನ್‌ವಿ ರಮಣ ಹೇಳಿದ್ದಾರೆ.
ಇದನ್ನೂ ಓದಿ: ನ್ಯಾಯಮೂರ್ತಿ ಬೊಬ್ಡೆ ಅವಧಿಯಲ್ಲಿ ಸಂವಿಧಾನವನ್ನು ಕಾಯುವ ತನ್ನ ಪಾತ್ರವನ್ನುಸುಪ್ರೀಂ ಯಶಸ್ವಿಯಾಗಿ ನಿರ್ವಹಿಸಿತೇ?
“ಇಂತಹ ಬೇಜವಾಬ್ದಾರಿಯುತ ವರದಿ ಮತ್ತು ಊಹಾಪೋಹಗಳಿಂದಾಗಿ ಅತ್ಯುತ್ತಮ ಪ್ರತಿಭೆಗಳ ವೃತ್ತಿಜೀವನದ ಪ್ರಗತಿಗೆ ಕುಂದುಂಟಾದ ಉದಾಹರಣೆಗಳಿವೆ. ಇದು ತುಂಬಾ ದುರದೃಷ್ಟಕರವಾಗಿದ್ದು, ನಾನು ಈ ವರದಿಗಳ ಬಗ್ಗೆ ತುಂಬಾ ಅಸಮಾಧಾನಗೊಂಡಿದ್ದೇನೆ. ಅಂತಹ ಗಂಭೀರ ವಿಷಯದ ಬಗ್ಗೆ ಊಹಾಪೋಹಗಳನ್ನು ಹರಡದಿರುವಲ್ಲಿ ಹೆಚ್ಚಿನ ಹಿರಿಯ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಪ್ರದರ್ಶಿಸಿದ ಪ್ರಬುದ್ಧತೆ ಮತ್ತು ಜವಾಬ್ದಾರಿಯನ್ನು ನಾನು ಪ್ರಶಂಸಿಸುತ್ತೇನೆ” ಎಂದು ನ್ಯಾಯಮೂರ್ತಿ ರಮಣ ಹೇಳಿದ್ದಾರೆ.
ನ್ಯಾಯಾಧೀಶರನ್ನು ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸೂಚಿಸಿರುವ ಅವರು, “ಸಭೆಗಳನ್ನು ನಡೆಸಿ, ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಮಾಧ್ಯಮ ಸ್ವಾತಂತ್ರ್ಯ ಮತ್ತು ವ್ಯಕ್ತಿಗಳ ಹಕ್ಕುಗಳನ್ನು ಗೌರವಿಸುತ್ತದೆ ಎಂದು ಪ್ರತಿಪಾದಿಸಿದ ನ್ಯಾಯಮೂರ್ತಿ ರಮಣ, ನ್ಯಾಯಾಲಯದ ಎಲ್ಲಾ ಪಾಲುದಾರರು ಅದರ ಸಮಗ್ರತೆ ಮತ್ತು ಘನತೆಯನ್ನು ಎತ್ತಿಹಿಡಿಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗುವ ಸಮಯ ದೂರವಿಲ್ಲ: ಜಸ್ಟಿಸ್ ಆರ್.ಎಫ್. ನಾರಿಮನ್
ವರದಿಗಳ ಪ್ರಕಾರ, ನ್ಯಾಯಮೂರ್ತಿ ರಮಣ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಒಂಬತ್ತು ನ್ಯಾಯಾಧೀಶರ ಹೆಸರನ್ನು ಉನ್ನತ ನ್ಯಾಯಾಲಯಕ್ಕೆ ಏರಿಸಲು ಶಿಫಾರಸು ಮಾಡಿದೆ. ಅವರಲ್ಲಿ 2027 ರಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವ ನ್ಯಾಯಮೂರ್ತಿ ಬಿ.ವಿ ನಾಗರತ್ನ ಕೂಡ ಇದ್ದಾರೆ.
ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನು 2008 ರಲ್ಲಿ ಕರ್ನಾಟಕದ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಮತ್ತು ಸುಮಾರು ಎರಡು ವರ್ಷಗಳ ನಂತರ ಖಾಯಂ ನ್ಯಾಯಾಧೀಶರಾಗಿ ನೇಮಿಸಲಾಯಿತು.
ಸುಪ್ರೀಂಕೋರ್ಟ್‌ನ ಐದು ಸದಸ್ಯರ ಕೊಲಿಜಿಯಂ ಶಿಫಾರಸು ಮಾಡಿದ ಇತರ ಹೆಸರುಗಳೆಂದರೆ, ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಎಸ್ ನರಸಿಂಹ, ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ, ನ್ಯಾಯಮೂರ್ತಿ ಸಿ ಟಿ ರವಿಕುಮಾರ್ ಮತ್ತು ನ್ಯಾಯಮೂರ್ತಿ ಎಂ ಎಂ ಸುಂದ್ರೇಶ್, ನ್ಯಾಯಮೂರ್ತಿ ಹಿಮಾಕೋಲಿ, ನ್ಯಾಯಮೂರ್ತಿ ಬೇಲಾ ತ್ರಿವೇದಿ.
ಇದನ್ನೂ ಓದಿ: ‘ನ್ಯಾಯಮೂರ್ತಿ ರಮಣ ಪಕ್ಷಪಾತಿ’: ಆಂಧ್ರ ಸಿಎಂ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್


