ಜುಲೈ ಮಧ್ಯದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿಯ ಹಿರಿಯರ ನಾಯಕರು ಪ್ರಶಂಸಿಸುತ್ತಿದ್ದಾರೆ. ಮೊದಲಿಗೆ, ಉತ್ತರ ಪ್ರದೇಶದಲ್ಲಿ ಕೊರೊನಾ ಬಿಕ್ಕಟ್ಟನ್ನು ಯೋಗಿ ನಿರ್ವಹಿಸುತ್ತಿರುವ ಕ್ರಮ “ಸಾಟಿಯಿಲ್ಲದ್ದು” ಎಂದು ಪ್ರಧಾನಿ ಮೋದಿ ಹೇಳಿದ್ದರು. ನಂತರ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಉತ್ತರ ಪ್ರದೇಶವನ್ನು ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದನ್ನಾಗಿ ಮಾಡಿದ್ದಕ್ಕಾಗಿ ಆದಿತ್ಯನಾಥ್ ಅವರನ್ನು ಅಭಿನಂದಿಸುತ್ತೇವೆ ಎಂದು ಹೇಳಿದ್ದರು.

ಇನ್ನು, ಕಳೆದ ವಾರ, ಆದಿತ್ಯನಾಥ್ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶವು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ದೇಶದ “ಉನ್ನತ” ರಾಜ್ಯವಾಗಿ ನಿರ್ಮಾಣವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದರು.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿಯಿದೆ. ಈ ಹೊತ್ತಿನಲ್ಲಿ ಬಿಜೆಪಿಯ ಈ ಹೊಗಳುವಿಕೆಯ ಹಿಂದೆ ಸ್ಪಷ್ಟ ಸಂದೇಶವಿದೆ. ಅದು, ಕೇಸರಿ ಉಡುಪು ಧರಿಸಿದ ಸನ್ಯಾಸಿಯು ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಮರು ಚುನಾಯಿತರಾಗಲು, ಅವರಿಗೆ ಬಿಜೆಪಿ ಭಾರೀ ಪ್ರಚಾರ ನಡೆಸುತ್ತಿದೆ.

ಆದಿತ್ಯನಾಥ್ ಹಾಲಿ ಮುಖ್ಯಮಂತ್ರಿಯಾಗಿರುವುದರಿಂದ, ಇದು ಕೇವಲ ಅನಿವಾರ್ಯ ಮತ್ತು ಸಹಜ ಎಂದು ವಾದಿಸಬಹುದು. ಆದಾಗ್ಯೂ, ಇದು ಜುಲೈ ಆರಂಭದವರೆಗೂ ಪೂರ್ವನಿರ್ಧರಿತ ತೀರ್ಮಾನವಾಗಿ ಉಳಿದಿರಲಿಲ್ಲ.

ಆದಿತ್ಯನಾಥ್‌ ಪಾಲಿಗೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳು ವಿವಿಧ ಕ್ಷೇತ್ರಗಳಲ್ಲಿ ಪ್ರಕ್ಷುಬ್ಧತೆಯಿಂದ ಕೂಡಿತ್ತು. ಕೊರೊನಾ 2ನೇ ಅಲೆಯನ್ನು ಅವರು ಸರಿಯಾಗಿ ನಿರ್ವಹಿಸಲಾಗಲಿಲ್ಲ. ಹೀಗಾಗಿ, ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಇದೇ ವೇಳೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಕಳಪೆ ಸಾಧನೆ ಮಾಡಿದರು. ಇದು ಬಿಜೆಪಿಯ ಉನ್ನತ ನಾಯಕತ್ವಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶ: ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ: ತಂದೆಯನ್ನು ಹೊಡೆಯದಂತೆ ಬೇಡಿಕೊಂಡ ಮಗು

ಇದೆಲ್ಲರ ನಡುವೆ, ಮೋದಿಯೊಂದಿಗಿನ ಅವರ ಆಪ್ತ ಮಾಜಿ ಅಧಿಕಾರಿಗಳನ್ನು ರಾಜ್ಯ ಕ್ಯಾಬಿನೆಟ್‌ನಲ್ಲಿ ಸೇರಿಸಿಕೊಳ್ಳುವಂತೆ ಒತ್ತಡ ಹೇರಲಾಯಿತು. ಅನೇಕರು ಇದನ್ನು ಆಪ್ತರ ನಡುವಿನ ಶಕ್ತಿಯ ಜಗಳವಾಗಿ ನೋಡಿದರು. ಇದು ಆದಿತ್ಯನಾಥ್ ಅವರನ್ನು ವಜಾಗೊಳಿಸುವ ಸಾಧ್ಯತೆಯವರೆಗೂ ಬೆಳೆದಿತ್ತು.

ಈ ಹಿನ್ನೆಲೆಯಲ್ಲಿ, ಕಳೆದ ಎರಡು ವಾರಗಳಲ್ಲಿ ಬಿಜೆಪಿಯ ಎಲ್ಲರಿಂದಲೂ ಆದಿತ್ಯನಾಥ್‌ ಬಗ್ಗೆ ಹೊಗಳಿಕೆಗಳ ಸುರಿಮಳೆ ಆರಂಭವಾಗಿದೆ. ಇದು ಸ್ವಲ್ಪ ಕುತೂಹಲಕಾರಿಯೂ ಆಗಿದೆ. ಅದಕ್ಕಿಂತ ಹೆಚ್ಚಾಗಿ ಇತ್ತೀಚಿನ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟವಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸುವ ಪರಿಪಾಠದಿಂದ ದೂರ ಉಳಿದಿದೆ.

ಆದರೂ, ಇತ್ತೀಚಿನ ದಿನಗಳಲ್ಲಿ ತನ್ನ ಇಮೇಜ್‌ ಅನ್ನು ಕಳೆದುಕೊಂಡ ಆದಿತ್ಯನಾಥ್‌ ಅವರಿಗೆ ಬಿಜೆಪಿ ಭಾರೀ ಒತ್ತು ಕೊಡುತ್ತಿರುವುದು ಏಕೆ..?

ಪ್ರಭಾವ ಕುಸಿತವನ್ನು ಮೇಲೆತ್ತುವ ಅಭಿಯಾನ?

ಕೆಲವು ರಾಜಕೀಯ ವೀಕ್ಷಕರು ಯೋಗಿಯ ಆಡಳಿತದ ದಾಖಲೆಯೇ ಬಿಜೆಪಿಯನ್ನು ಮತ್ತೆ ಅವರ ಮೇಲೆ ಒಲವು ಮೂಡಿಸಿದೆ ಎಂದು ಹೇಳುತ್ತಿದ್ದಾರೆ. ಆದಿತ್ಯನಾಥ್ ಅವರನ್ನು ಮೇಲುತ್ತುವ ನಿರ್ಧಾರವು, ದೇಶದ ಆರ್ಥಿಕತೆಯು ಕುಸಿಯುತ್ತಿರುವ ದಿನಗಳಲ್ಲಿ ಹಿಂದುತ್ವದ ರಾಜಕೀಯದ ಮೇಲೆ ಬಿಜೆಪಿ ಮತ್ತಷ್ಟು ಕೇಂದ್ರಕರಿಸುತ್ತಿದೆ ಎಂದು ಅವರು ಹೇಳುತ್ತಾರೆ.

“ಆರ್ಥಿಕತೆಯು ಕೆಟ್ಟದಾಗಿದೆ, ಉದ್ಯೋಗವಿಲ್ಲ, ರೈತರು ಅಸಮಾಧಾನಗೊಂಡಿದ್ದಾರೆ ಮತ್ತು ಕೊರೊನಾ ಸೋಂಕು ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸಿದೆ” ಎಂದು ಅಲಹಾಬಾದ್ ವಿಶ್ವವಿದ್ಯಾಲಯದ ಜಿಬಿ ಪಂತ್ ಸಾಮಾಜಿಕ ವಿಜ್ಞಾನ ಸಂಸ್ಥೆಯ ಬೋಧಕ ಸತೇಂದ್ರ ಕುಮಾರ್ ಹೇಳಿದ್ದಾರೆ.

“ಹಾಗಾದರೆ ನೀವು ಏನು ಮಾಡುತ್ತೀರಿ? ನೀವು ದೇವಸ್ಥಾನಗಳನ್ನು ಕಟ್ಟುತ್ತಿದ್ದೀರಿ. ಹಿಂದೂಗಳನ್ನು ಮುಸ್ಲಿಮರಿಂದ ರಕ್ಷಿಸುತ್ತಿದ್ದೀರಿ ಎಂದು ಹೇಳಿಕೊಳ್ಳುತ್ತಿದ್ದೀರಿ. ಹಿಂದೂತ್ವದ ಮೇಲೆ ಕೇಂದ್ರೀಕರಣವು ಅವರಿಗೆ ರಾಜಕೀಯ ಉಪಯೋಗ ನೀಡುತ್ತಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ಎಕ್ಸಾಂ ಬರೆಯಲು ಬಂದಿದ್ದ ದಲಿತ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ಈ ತಂತ್ರದ ಆರಂಭಿಕ ಭಾಗವಾಗಿ ‘ಉತ್ತರ ಪ್ರದೇಶ ಸರ್ಕಾರವು ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವ ಯೋಜನೆಗಳನ್ನು ಘೋಷಿಸಿದೆ. ಇದು ಹೆಚ್ಚು ಮಕ್ಕಳನ್ನು ಹೊಂದು ಮುಸ್ಲಿಮರ ವಿರುದ್ದ ಯೋಜನೆ ಎಂದು ಅವರ ಲಾಭವನ್ನು ಬಿಜೆಪಿ ಪಡೆದುಕೊಳ್ಳಲು ಮುಂದಾಗಿದೆ’ ಎಂದು ಅವರು ತಿಳಿಸಿದ್ದಾರೆ.

“ಈ ಯೋಜನೆಯು ಮುಸ್ಲಿಂ ವಿರೋಧಿ ನಡೆ ಎಂದು ಪರಿಗಣಿಸಲ್ಪಟ್ಟಿರುವುದರಿಂದ ಹಿಂದೂ ಮತದಾರರನ್ನು ಬಿಜೆಪಿಯತ್ತ ಪ್ರಚೋದಿಸುತ್ತದೆ. ಇದು ಯುಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದೂ ಮೇಲ್ಜಾತಿ ಮತಗಳನ್ನು ಒಟ್ಟುಗೂಡಿಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.

ಆದಿತ್ಯನಾಥ್ ಅವರ ಇತ್ತೀಚಿನ ಹಿನ್ನಡೆಗಳ ಹೊರತಾಗಿಯೂ, ಉತ್ತರ ಪ್ರದೇಶದಲ್ಲಿ ಅತ್ಯಂತ ಪ್ರಭಾವಶಾಲಿ ಬಿಜೆಪಿ ನಾಯಕರಾಗಿ ಉಳಿದಿದ್ದಾರೆ. ಅವರು ಪೂರ್ವ ಉತ್ತರ ಪ್ರದೇಶದಲ್ಲಿ ದೊಡ್ಡ ನೆಲೆಯನ್ನು ಹೊಂದಿದ್ದಾರೆ. ಹೀಗಾಗಿ ಅವರಿಗೆ ಒತ್ತು ಕೊಡಲಿದ್ದರೆ, ಬಿಜೆಪಿಗೇ ನಷ್ಟವೆಂದು ಕುಮಾರ್ ತಿಳಿಸಿದ್ದಾರೆ.

“ಯೋಗಿಯನ್ನು ತೆಗೆದುಹಾಕುವುದು ಸುಲಭವಲ್ಲ ಎಂದು ಬಿಜೆಪಿ ಅರಿತುಕೊಂಡಿದೆ. ಅವರು ಸಂಘ ಪರಿವಾರದಲ್ಲಿ ತನ್ನದೇ ಆದ ನೆಲೆಯನ್ನು ಹೊಂದಿದ್ದಾರೆ. ಚುನಾವಣೆಗಳು ಬಹುಸಂಖ್ಯಾತತೆಯ ಮೇಲೆ ನಡೆಯುವುದರಿಂದ ಅವರು ಬಿಜೆಪಿಗೆ ಅನಿವಾರ್ಯವಾಗಿದ್ದಾರೆ” ಎಂದು ಭಾರತದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನಿ ಮಿರ್ಜಾ ಅಸ್ಮರ್ ಬೇಗ್ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ಮೈತ್ರಿಗಾಗಿ ಸಣ್ಣ ಪಕ್ಷಗಳಿಗೆ ಬಾಗಿಲು ತೆರೆದಿದೆ ಎಂದ ಅಖಿಲೇಶ್ ಯಾದವ್

“ದೆಹಲಿ ಬಿಜೆಪಿ ನಾಯಕತ್ವ ಮತ್ತು ಯೋಗಿ ನಡುವಿನ ವಿಷಯಗಳು ಸಂಪೂರ್ಣವಾಗಿ ಸರಿಯಾಗಿಲ್ಲ ಎಂಬುದು ಸ್ಪಷ್ಟ. ಆದರೂ, ರಾಜ್ಯದಲ್ಲಿ “ಮುಂದಿನ ಗುಂಪುಗಾರಿಕೆ”ಯನ್ನು ತಪ್ಪಿಸಲು ಸದ್ಯಕ್ಕೆ ಯೋಗಿಯನ್ನು ಸಮಾಧಾನಪಡಿಸಲು ಮೋದಿ ನಿರ್ಧರಿಸಿದ್ದಾರೆ. ಅದನ್ನು ರಾಜ್ಯದಲ್ಲಿ ಎಲ್ಲರಿಗೂ ಗೊತ್ತು ಪಡಿಸದಿದ್ದರೆ ವಿಷಯಗಳು ಬದಲಾಗಬಹುದು” ಎಂದು ರಾಜಕೀಯ ವಿಜ್ಞಾನಿ ಸುಹಾಸ್ ಪಾಲ್ಶಿಕರ್ ಹೇಳಿದ್ದಾರೆ.

” ಬಿಜೆಪಿ ನಾಯಕರು ಯೋಗಿಯೊಂದಿಗೆ ಶಾಂತಿಯನ್ನು ಖರೀದಿಸುತ್ತಿದ್ದಾರೆ. ಏಕೆಂದರೆ ಈ ಸಮಯದಲ್ಲಿ ಯಾವುದೇ ಪರ್ಯಾಯವಿಲ್ಲ. ಆದರೆ. ಇದೇ ಸಮಯದಲ್ಲಿಮುಂಬರುವ ಚುನಾವಣೆಗಳಲ್ಲಿ ಅವರ ಶಕ್ತಿ ಕಡಿಮೆಯಾಗುತ್ತದೆಯೇ ಎಂದು ನೀವು ನಿರೀಕ್ಷಿಸಿ ಮತ್ತು ನೋಡಿ” ಎಂದು ಪಾಲ್ಶಿಕರ್ ಹೇಳಿದ್ದಾರೆ.

“ಯೋಗಿ ಖಂಡಿತವಾಗಿಯೂ ಮೋದಿಗಿಂತ ದೊಡ್ಡ ಹಿಂದುತ್ವದ ಮ್ಯಾಸ್ಕಾಟ್ ಅಲ್ಲ. ಆದರೆ, ಪ್ರಧಾನಿಯನ್ನು ತನ್ನ ನಾಯಕ ಎಂದು ಬಿಂಬಿಸುವ ಮೂಲಕ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಗೆ ಸಾಧ್ಯವಿಲ್ಲ. ಉತ್ತರ ಪ್ರದೇಶದ ಚುನಾವಣಾ ಕಾವು 2014ರ ವರೆಗೂ ಮುಂದುವರೆಯಲಿದೆ. ಒಮ್ಮೆ ಅವರು ಉತ್ತರ ಪ್ರದೇಶವನ್ನು ಕಳೆದುಕೊಂಡರೆ, ಮತ್ತೆ ಅದನ್ನು ಪಡೆದುಕೊಳ್ಳಲು ಬಿಜೆಪಿಗರಿಗೆ ಸಾಧ್ಯವಿಲ್ಲ” ಎಂದು ದಲಿತ ಹಕ್ಕುಗಳ ಹೋರಾಟಗಾರ ಸತೀಶ್ ಪ್ರಕಾಶ್ ಹೇಳಿದ್ದಾರೆ.

ಮೂಲ: ಸ್ಕ್ರೋಲ್‌.ಇನ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಹೆಸರು ಬದಲಾವಣೆ ಮುಂದುವರೆಸಿದ ಬಿಜೆಪಿ: ಉತ್ತರ ಪ್ರದೇಶದ ಅಲಿಗಢ ಮರುನಾಮಕರಣಕ್ಕೆ ಪ್ರಸ್ತಾಪ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಅನುವಾದಿತ ಲೇಖನ
+ posts

LEAVE A REPLY

Please enter your comment!
Please enter your name here