ಗಣಪಯ್ಯನವರ ಮುಂದಿನ ಸಾಮಾಜಿಕ ರಾಜಕೀಯ ಜೀವನಕ್ಕೆ ಅವರು ಸಾಕಮ್ಮನವರ ತೋಟದಲ್ಲಿ ಇದ್ದಾಗ ಅವರಿಗಿದ್ದ ಹಲವರ ಒಡನಾಟ, ಸ್ನೇಹಗಳು ತುಂಬ ಪ್ರಭಾವ ಬೀರಿವೆ. ಕೊಡಗಿನಲ್ಲಿ ಸಿ.ಎಂ.ಪೂಣಚ್ಚ, ಕರ್ನಲ್ ಬಸಪ್ಪ, ಗುಂಡು ಕುಟ್ಟಿ ಮಂಜುನಾಥಯ್ಯ, ನಂತರದ ದಿನಗಳಲ್ಲಿ ಗ್ರೆಗೊರಿ ಮಥಾಯಸ್ (ಇವರು ಹಿರಿಯ ಅಧಿಕಾರಿಯಾಗಿದ್ದು ಕರ್ನಾಟಕದ ಫೈನಾನ್ಸ್ ಸೆಕ್ರೆಟರಿ ಕೂಡಾ ಆಗಿದ್ದರು) ಬ್ರಿಟಿಷ್ ಕಾಫಿಬೆಳೆಗಾರ ಎಡ್ವರ್ಡ್ ಚಾರ್ಲ್ಸ್ ವೈಟ್ ಮುಂತಾದವರೆಲ್ಲರೂ ಇವರ ಗೆಳೆಯರ ಬಳಗದಲ್ಲಿದ್ದರು.

ಇದೇ ರೀತಿಯ ಇನ್ನೊಬ್ಬರು ಸುಂಟಿ ಕೊಪ್ಪದ ಬಳಿಯ ಕೊಡಗರ ಹಳ್ಳಿಯ ವೆಂಕಟ ಸುಬ್ಬಯ್ಯ.

ವೆಂಕಟಸುಬ್ಬಯ್ಯ ಕಾಂಗ್ರೆಸಿಗರು, ಕಾಂಗ್ರೆಸ್‌ನ ಕಾರ್ಮಿಕ ಸಂಘಟನೆಯಾದ ಇಂಟಕ್‌ನ ಜಿಲ್ಲಾ ಕಾರ್ಯದರ್ಶಿಯೂ ಅಗಿದ್ದರು. ಆ ಕಾಲದಲ್ಲಿ ಇಂಟಕ್ ಸಂಘಟನೆಗೆ ಕೊಡಗಿನಲ್ಲಿ ಹದಿನೈದು ಸಾವಿರದಷ್ಟು ಸದಸ್ಯರಿದ್ದರಂತೆ. ಇವರಲ್ಲಿ ಬಹುಪಾಲು ಕಾಫಿ ತೋಟಗಳ ಕಾರ್ಮಿಕರಿದ್ದುದು ಸಹಜವಾಗಿತ್ತು.

ಹೆಚ್ಚಿನ‌ ತೋಟಗಳಿಗೆ ಕಾರ್ಮಿಕ ಸಂಘಟನೆಗಾಗಿ ಭೇಟಿ ನೀಡುತ್ತಿದ್ದ ವೆಂಕಟಸುಬ್ಬಯ್ಯನವರಿಗೆ ಗಣಪಯ್ಯನವರೊಂದಿಗೆ ಸ್ನೇಹವೂ ಏಕವಚನದ ಸಲುಗೆಯೂ ಇತ್ತು.

ವೆಂಕಟಸುಬ್ಬಯ್ಯನವರದು ಬಹು ರಂಜಿತ ವ್ಯಕ್ತಿತ್ವ. ದೊಡ್ಡ ದನಿಯಲ್ಲಿ ಮಾತಾಡುತ್ತಾ ಮಹಾನ್ ಒರಟರಂತೆ ಕಾಣಿಸಿ ಕೊಳ್ಳುತ್ತಿದ್ದರು. ಅತ್ಯಂತ ಹಾಸ್ಯ ‌ಪ್ರಜ್ಞೆಯ ಮನುಷ್ಯರಾದ ಅವರು ಇದ್ದಕ್ಕಿದ್ದಂತೆ ಉಗ್ರ ನರಸಿಂಹನೂ ಆಗಿ ಹಲವರ ನಿಷ್ಟೂರವನ್ನೂ ಕಟ್ಟಿಕೊಳ್ಳುತ್ತಿದ್ದರು.

ಅವರು ಕೂಡಾ ಕೊಡಗಿಗೆ ಬಂದ ಗಾಂಧೀಜಿಯನ್ನು ಭೇಟಿ ಮಾಡಿದ್ದರು. ಸುಂಟಿಕೊಪ್ಪದ ಬಳಿಯಿರುವ ಕೆಲವು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ವೆಂಕಟಸುಬ್ಬಯ್ಯನವರ ಶ್ರಮ ದೊಡ್ಡದು. ಅವರು ನಂದೀಶ್ವರ ಎಂಬ ಹೆಸರಿನಲ್ಲಿ ತತ್ವಪದಗಳನ್ನು ಬರೆಯುತ್ತಿದ್ದರು. ಅವನ್ನು ಅಲ್ಲಿ ಇಲ್ಲಿ ಅವರೇ ಓದಿ ಹೇಳಿದ್ದು ಬಿಟ್ಟರೆ ಪ್ರಕಟ ಮಾಡಿದ್ದು ಕಾಣೆ. ಕತೆಗಾರ್ತಿ ಗೌರಮ್ಮ ವೆಂಕಟಸುಬ್ಬಯ್ಯನವರ ಅಣ್ಣನ ಪತ್ನಿ, ಅತ್ತಿಗೆ.

ಅಂದಿನ ಕೊಡಗಿನ ಜಿಲ್ಲಾ ಕಾಂಗ್ರೆಸ್‌ನ ಹಲವಾರು ಸಭೆಗಳು ಕೊಡಗರ ಹಳ್ಳಿಯ ವೆಂಕಟಸುಬ್ಬಯ್ಯ ನವರ ಮನೆಯಲ್ಲಿ ನಡೆಯುತ್ತಿದ್ದವು.

ಗಣಪಯ್ಯನವರಲ್ಲಿ ತನಗೆ ತೋಟದ ರೈಟರ್ ಕೆಲಸ ಬೇಡವೆಂದದ್ದಕ್ಕೆ ದಾರಿಯಲ್ಲಿ ಕಾರಿನಿಂದ ಇಳಿಸಲ್ಪಟ್ಟ ಗುಂಡುರಾವ್ ಮುಂದಿನ ದಿನಗಳಲ್ಲಿ ವೆಂಕಟಸುಬ್ಬಯ್ಯನವರ ಶಿಷ್ಯರಾದರು.

ಗುಂಡುರಾವ್ ಅವರು ಪ್ರಥಮ ಬಾರಿಗೆ ಶಾಸಕರಾಗುವಲ್ಲಿ ವೆಂಕಟಸುಬ್ಬಯ್ಯನವರ ಕೊಡುಗೆಯಿತ್ತು. ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಯ ಆಯ್ಕೆಗಾಗಿ ವೆಂಕಟಸುಬ್ಬಯ್ಯ ನವರ ಮನೆಯಲ್ಲಿಯೇ ಸಭೆ ಸೇರಿತ್ತು. ಸಹಜವಾಗಿಯೇ ಅತಿ ದೊಡ್ಡ ಕಾರ್ಮಿಕ ಸಂಘಟನೆಯಲ್ಲಿ ಕೆಲಸ ಮಾಡಿ ಅನುಭವವಿದ್ದ ವೆಂಕಟಸುಬ್ಬಯ್ಯ ಅಭ್ಯರ್ಥಿಯಾಗಲಿ ಎಂದು ಹೆಚ್ಚಿನವರ ಅಭಿಪ್ರಾಯವಾಗಿತ್ತು.

ಆಗ ವೆಂಕಟಸುಬ್ಬಯ್ಯ ನನಗೆ ವಯಸ್ಸಾಯಿತು. ಗುಂಡ ಹುಡುಗ (ಅವರು ಹಾಗೇ ಕರೆಯುತ್ತಿದ್ದುದು) ಅವನಿಗೆ ಕೊಡಿ ಎಂದು ಹೇಳಿದರು. ಟಿಕೆಟ್ ಗುಂಡುರಾವ್‌ಗೆ ಸಿಕ್ಕಿ ಅವರು ಗೆದ್ದು ಶಾಸಕರಾದರು.

ಗುಂಡುರಾವ್ ಮುಖ್ಯಮಂತ್ರಿ ಆದಾಗಲೂ ಅದನ್ನು ‌ಮರೆತಿರಲಿಲ್ಲ. ಕೊಡಗಿಗೆ ಬಂದಾಗ ವೆಂಕಟಸುಬ್ಬಯ್ಯ ನವರ ಮನೆಗೇ ಬಂದು ಮಾತನಾಡಿ, ನಮಸ್ಕರಿಸಿ, ಊಟ ಮಾಡಿ ಹೋಗುವುದಿತ್ತು.

ಗುಂಡುರಾವ್ ವೆಂಕಟಸುಬ್ಬಯ್ಯನವರನ್ನು ಮುಜರಾಯಿ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಿಸಿದರು.

ಮುಂದಿನ ಇವೆರಡು ಪ್ರಸಂಗಗಳು ಒರಟಾಗಿ ಕಂಡರೂ ಅವರ ಹಾಸ್ಯ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆಯ ಸಂಕೇತಗಳಾಗಿರುವುದರಿಂದ ಇಲ್ಲಿ ಉಲ್ಲೇಖಿಸುತ್ತೇನೆ. ಇವೆಲ್ಲವೂ ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಘಟನೆಗಳು.

ಒಮ್ಮೆ ವೆಂಕಟಸುಬ್ಬಯ್ಯನವರ ಮನೆಯಲ್ಲಿ ಏನೋ ಸಮಾರಂಭ, ರಾಮ ಎಂಬ ಹೆಸರಿನ ವ್ಯಕ್ತಿಯೊಬ್ಬರು ಪಕ್ಕದಲ್ಲಿ ಕುಳಿತ ರೈತರೊಬ್ಬರಿಗೆ ಏನೋ ಬೋಧನೆ ಮಾಡುತ್ತಿರುವುದು ವೆಂಕಟಸುಬ್ಬಯ್ಯನವರಿಗೆ ಕಂಡಿತು. ವೆಂಕಟಸುಬ್ಬಯ್ಯ ಅವರ ಪಕ್ಕಕ್ಕೆ ಬಂದು ಅವರಲ್ಲಿ “ಏನೋ ಅದು ಬೋಧನೆ? ಎಂದು ಎಂದಿನ ಸ್ವರದಲ್ಲಿ ಗುಡುಗಿದರು.

“ಅದು ನಾನು ಇವರಿಗೆ ರಾಮನಾಮದ ಮಹಿಮೆ ಹೇಳ್ತಾ ಇದ್ದೇನೆ! ಎಂದರು ಆತ.

“ಯಾವ ರಾಮ‌ ಅದು? ಬಂತು ಪ್ರಶ್ನೆ.

“ಅದು ದೇವರು ಶ್ರೀ ರಾಮ…”

“ನನಿಗೆ ಗೊತ್ತಿರದು‌ ಮೂರು ಜನ ರಾಮರು, ಒಂದು‌ ನೀನು,‌ ಇನ್ನೊಂದು‌ ಪಕ್ಕದ ತೋಟದ ಮೇಸ್ತ್ರಿ ಕುಂಞ ರಾಮ, ಮೂರನೆಯವ ಅಯೋಧ್ಯೆಯ ದಶರಥನ‌ ಮಗ ರಾಮ ಅಯೋಧ್ಯೆಯ ಅರಸ. ಹೇಳು ಇವರಲ್ಲಿ ನಿನ್ನ ರಾಮ ಯಾರು?”

“ಅದೇ ಹೇಳಿದ್ನಲ್ಲ, ಶ್ರೀರಾಮ “

ನಿನಿಗೆ ಗಾಯತ್ರಿ ಮಂತ್ರ ಗೊತ್ತೋ?‌

“ಗೊತ್ತು…………?”

” ಹಾಗಿದ್ರೆ ಅದನ್ನ ಅವನಿಗೆ ಹೇಳಿಕೊಡು. ಎದುರಿಗೆ ಕಾಣ್ತಾ ಇದ್ದಾನಲ್ಲ ಸೂರ್ಯ ಅವನಿಗೇ ನಮಸ್ಕಾರ ‌ಮಾಡಕ್ಕೆ ಹೇಳು.. ಎಂದು‌ ಮತ್ತೊಮ್ಮೆ ಗುಡುಗಿದರು.

ಮತ್ತೆ ಆ ವ್ಯಕ್ತಿ “ಅದು ಅದು ಗಾಯತ್ರಿ‌ ಮಂತ್ರ  ಹೇಗೆ? ಎಂದು ತಡವರಿಸಿದರು.

ಹೇಗೆ ಅಂದರೆ, ಬ್ರಾಹ್ಮಣರು ಅತ್ಯಂತ ಸ್ವಾರ್ಥಿಗಳು. ವಿಶ್ವಾಮಿತ್ರ ಶೂದ್ರ‌. ಅವನು ಕೊಟ್ಟದ್ದು ಗಾಯತ್ರಿ ಮಂತ್ರ. ನಾವು ಸ್ವಾರ್ಥದಿಂದ ಯಾರಿಗೂ ಕೊಡದೆ ಇಟ್ಕೊಂಡಿದ್ದೇವೆ, ಅದನ್ನು ಎಲ್ಲರಿಗೂ ಹಂಚಬೇಕು. ಅದರಿಂದ ಮೇಲೆ ಯಾವುದೂ ಇಲ್ಲ, ನಿನ್ನ ರಾಮನಾಮಕ್ಕಿಂತ ಅದನ್ನ ಮೊದಲು‌ ಮಾಡು” ಎಂದು ತಲೆಗೆ ಮೊಟಕಿದಂತೆ ಹೇಳಿ ಅಲ್ಲಿಂದ ಹೋದರು.!

ರಾಮನಾಮದ ವ್ಯಕ್ತಿ ಪೆಚ್ಚಾಗಿ ಕುಳಿತರು. ಬೋಧನೆ ಅಲ್ಲಿಗೆ ಮುಗಿಯಿತು!

ಇನ್ನೊಮ್ಮೆ ವೆಂಕಟಸುಬ್ಬಯ್ಯನವರು ಅವರ‌ ಪತ್ನಿ ಲಕ್ಷ್ಮಿಗೆ, “ನಿನ್ನ ತವರಿನವರು ಮೂರು ಕಾಸಿನವರು” ಎಂದು ಬಿಟ್ಟರು. ಗಂಡ ಹೆಂಡಿರಲ್ಲಿ ವಾಗ್ಯುದ್ಧ ಪ್ರಾರಂಭವಾಯಿತು.

“ನನ್ನ ಅಜ್ಜನಿಗೆ ಕೇರಳದ ಮಹಾರಾಜರು ಸನ್ಮಾನ ಮಾಡಿದ್ದಾರೆ ಗೊತ್ತೋ” ಎಂದರು ಲಕ್ಷ್ಮಿ.

“ಅದೇನು ಮಹಾ ನಿನ್ನ ಅಜ್ಜ ರಾಜನ ಮುಂದೆ ತಲೆ ಬಾಗಿಸಿ ಬಿಕ್ಷುಕನ ಹಾಗೆ ನಿಂತಿರ್ತಾನೆ, ರಾಜ ಹೆಣಕ್ಕೆ ಹೂಮಾಲೆ ಹಾಕಿದಾಗೆ ಒಂದು ಶಾಲು ಬಿಸಾಡಿದ್ದಾನೆ ಅಷ್ಟೇ, ಅದೇನು ಮಹಾ? ನಾನು ನೋಡು ಸಾಕ್ಷಾತ್ ನಿನ್ನ ಗಂಡ ಮೈಸೂರು ಸಿಂಹಾಸನದ ಮೇಲೆ ಕೂತಿದ್ದಾನೆ ಗೊತ್ತೋ” ಎಂದರು.

“ಮೈಸೂರು ಸಿಂಹಾಸನದ ಮೇಲೆ ನೀವು ಕೂತರೆ ಹಿಂಬದಿ ಹೊತ್ತಿ ಉರಿದೀತು” ಅಂದರು ಲಕ್ಷ್ಮಿ

ಕೂಡಲೇ ಅವರು ಹಿಂದಕ್ಕೆ ತಿರುಗಿ ನಿಂತು, ಹಿಂಭಾಗವನ್ನು ತೋರಿಸಿ “ನೀನೇ ನೋಡಿಕೊಂಡು ಬಿಡು ಹೊತ್ತಿ ಉರಿದಿದೆಯಾ ಹೇಗೆ”?! ಎಂದರು.

ನಂತರ ಅವರೇ ಕತೆ ಹೇಳಿದರು.

ವೆಂಕಟಸುಬ್ಬಯ್ಯ ಒಮ್ಮೆ ‌ಮೈಸೂರಿಗೆ ಹೋದಾಗ ಅರಮನೆ ‌ನೋಡಬೇಕೆಂದು ಹೋದರಂತೆ. ಆಗ ಅರಮನೆ ರಿಪೇರಿ ಕೆಲಸ ನಡೆಯುತ್ತಿದ್ದು, ಸುಣ್ಣ ಬಣ್ಣ ಆಗುತ್ತಿತ್ತಂತೆ. ಪ್ರವಾಸಿಗರಿಗೆ ಒಳಗೆ ಪ್ರವೇಶ ಇರಲಿಲ್ಲ. ಇವರು ನಿರಾಸೆಯಿಂದ ಅಲ್ಲೇ ಸುತ್ತುವಾಗ ಒಂದು ಕಡೆ ಗೋಡೆಯ ಬಣ್ಣ ಕಲಸಿಟ್ಟ ಡಬ್ಬಿ, ಬ್ರಷ್ಷು ಇತ್ಯಾದಿಗಳು ಕಾಣಿಸಿತಂತೆ ಕೂಡಲೇ ಅವರಿಗೆ ಒಂದು ಉಪಾಯ ಹೊಳೆಯಿತಂತೆ. ಬಣ್ಣದ ಡಬ್ಬು ಹಿಡಿದು. ಉಟ್ಟ ಪಂಚೆ ಯನ್ನು ಬಿಚ್ಚಿ ತಲೆಗೆ ಮುಂಡಾಸು ಕಟ್ಟಿ ಕೊಂಡು, ಚಡ್ಡಿಯಲ್ಲೇ ಅರಮನೆ ಒಳಗೆ ಹೋದರಂತೆ, ಯಾರೋ ಕೆಲಸಗಾರನೆಂದು ತಿಳಿದು ಯಾರೂ ಇವರನ್ನು ತಡೆಯಲಿಲ್ಲ!

ಹೀಗೆ ಇಡೀ ಅರಮನೆ ಸುತ್ತಿ ಸಿಂಹಾಸನದ ಹತ್ತಿರ ಬಂದರೆ ಅಲ್ಲಿ ಯಾರೂ ಇರಲಿಲ್ಲವಂತೆ. ಅದರ‌ ಮೇಲೆ ಹತ್ತಿ ಕುಳಿತು ಅತ್ತ ಇತ್ತ, ಸುತ್ತ ತಿರುಗಿ ನೋಡಿ ನಂತರ ಇಳಿದು ಬಂದರಂತೆ!!

ಇವರ ಕಟ್ಟು ಕತೆ ಕೇಳುತ್ತ ಕೇಳುತ್ತ ಸುತ್ತ ಇದ್ದವರೆಲ್ಲರೂ ನಗಲಾರಂಭಿಸಿದರು. ಗಂಡ ಹೆಂಡಿರ ಜಗಳ‌ ಬರಕಾಸ್ತಾಯಿತು. ನಂತರ ಅವರೇ “ಸಿಂಹಾಸನದ ಮೇಲೆ ಮಾರಾಜ ಕೂತ್ರೂ, ಮಾರಣ್ಣ ಕೂತ್ರೂ ಯಾರ ತಿಕವೂ ಸುಡದಿಲ್ಲ. ಅದೆಲ್ಲ ಸುಳ್ಳು” ಎಂದರು.

ಅವರ ಮಾತುಗಳ ಹಿಂದಿನ‌ ಮನೋಭಾವವನ್ನು ಗ್ರಹಿಸಬೇಕು. ಆ ಕಾರಣಕ್ಕಾಗಿಯೇ ಅವರ ಮನೆ ಎಲ್ಲರಿಗೂ ತೆರೆದ ಮನೆಯಾಗಿತ್ತು.

ಅದು ನಂತರ ಅವರ ಮಕ್ಕಳಲ್ಲಿಯೂ ಮುಂದುವರಿಯಿತು.

ಇವರ ತೋಟದ ಪಕ್ಕದಲ್ಲೇ ವೈಟ್ ದೊರೆ (Edward charles white )ಎಂದು ಕರೆಯಲ್ಪಡುತ್ತಿದ್ದ ಬ್ರಿಟಿಷ್ ಪ್ಲಾಂಟರ್‌ನ ತೋಟವಿತ್ತು. ಆ ಕಾಲದಲ್ಲಿ ಆತ ಒಬ್ಬ ಪ್ರಯಾಣಿಸಬಲ್ಲಂತ ಸ್ವಂತ ವಿಮಾನವೊಂದನ್ನು ಹೊಂದಿದ್ದು ಅದರಲ್ಲೇ ಕೊಡಗಿಗೆ ಬರುತ್ತಿದ್ದರಂತೆ. ಅವರು ಕಾಫಿಯ ಹೊಸ ತಳಿ ಯಾವುದಾದರೂ ಬಂದರೆ ಅದನ್ನು ಮೊದಲು ಕೃಷಿಮಾಡಿ ನೋಡುವ ಉತ್ಸಾಹಿ. ಹೀಗೆ ಒಮ್ಮೆ ತನ್ನ ತೋಟದ ಒಂದು ವಿಭಾಗದ ಸುಮಾರು ಹತ್ತು ಹನ್ನೆರಡು ವರ್ಷ ವಯಸ್ಸಿನ ರೊಬಸ್ಟಾ ಗಿಡಗಳನ್ನು ಸಂಪೂರ್ಣವಾಗಿ ಕೀಳಿಸಿ ಹೊಸ ತೋಟ ಮಾಡಿದರಂತೆ. ಆಗ ವೆಂಕಟಸುಬ್ಬಯ್ಯ ಅದನ್ನು ನನಗೆ ಕೊಡಿ ಎಂದು ಕೇಳಿ, ತಮ್ಮ ಒಂದು ಐದು ಎಕರೆ ಪ್ರದೇಶಕ್ಕೆ ಆ ದೊಡ್ಡ ಗಿಡಗಳನ್ನು ಕೀಳಿಸಿ ಹೊರಿಸಿಕೊಂಡು ಬಂದು ನೆಟ್ಟರಂತೆ. ಅದೊಂದು ಸಾಹಸದ ಕೆಲಸ. ಆ ಗಿಡಗಳು ವೆಂಕಟಸುಬ್ಬಯ್ಯನವರ ತೋಟದಲ್ಲಿ ಚೆನ್ನಾಗಿ ನೆಲಕಚ್ಚಿ ಬೆಳೆದವು. ಆ ವಿಭಾಗಕ್ಕೆ ಅವರು ವೈಟ್ ತೋಟ ಎಂದೇ ಹೆಸರಿಸಿದ್ದರು.

ಸುಂಟಿಕೊಪ್ಪದ ಬಳಿ ಕೊಡಗರ ಹಳ್ಳಿಯಲ್ಲಿದ್ದ ವೈಟ್‌ರ ಕಾಫಿ ತೋಟ ಈಗ ಐ.ಬಿ.ಸಿ.ಕಂಪನಿಯ ವಶದಲ್ಲಿ ಇದೆ.

ಅಟೆನ್ ಬರೋನ ಗಾಂಧಿ ಸಿನಿಮಾ ಬಂದಾಗ ಹೋಗಿ ನೋಡಿದ ಅವರು, ಸಿನಿಮಾ ಚೆನ್ನಾಗಿಲ್ಲ, ನಾನು ಗಾಂಧಿಯನ್ನೇ ನೋಡಿದ್ದೇನೆ. ಇವನೆಂತ ಗಾಂಧಿ ಎಂದು ಬೈದಿದ್ದರು.

ಗಾಂಧಿ ಪ್ರಭಾವಕ್ಕೊಳಗಾಗಿದ್ದ ವೆಂಕಟಸುಬ್ಬಯ್ಯ ಮಾತಿನಲ್ಲಿ ನಿಷ್ಟುರಿಯಾಗಿದ್ದರೂ ಕೊನೆಯವರೆಗೂ ವೈಯಕ್ತಿಕ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದರು. ಶಿಷ್ಯ ಮುಖ್ಯಮಂತ್ರಿ ಆಗಿದ್ದರೂ ತಮಗೆ ಪಿತ್ರಾರ್ಜಿತವಾಗಿ ಬಂದಿದ್ದ ಸಣ್ಣ ಜಮೀನನ್ನು ಒಂದಿಷ್ಟೂ ಹೆಚ್ಚಿಸಿಕೊಳ್ಳದೆ, ಅಷ್ಟನ್ನೇ ಮಕ್ಕಳಿಗೆ ಹಂಚಿ ನಿರ್ಗಮಿಸಿದರು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು- 2: ಕರ್ನಾಟಕದ ಪ್ರಥಮ ಮಹಿಳಾ ಉದ್ಯಮಿ ಸಾಕಮ್ಮ

LEAVE A REPLY

Please enter your comment!
Please enter your name here