Homeಪುಸ್ತಕ ವಿಮರ್ಶೆಬಳಗೋಡಕ್ಕೆ ಟಿಸಿ ಬಂದ ಕಥೆ; 'ಹಸಿರು ಟಾವೆಲ್'-ರೈತನೊಬ್ಬನ ಜೀವನ ಕಥನದಿಂದ ಆಯ್ದ ಅಧ್ಯಾಯ

ಬಳಗೋಡಕ್ಕೆ ಟಿಸಿ ಬಂದ ಕಥೆ; ‘ಹಸಿರು ಟಾವೆಲ್’-ರೈತನೊಬ್ಬನ ಜೀವನ ಕಥನದಿಂದ ಆಯ್ದ ಅಧ್ಯಾಯ

- Advertisement -
- Advertisement -

ಸೂಡಿಯಲ್ಲಿ ಪರಸಪ್ಪ ಎನ್ನುವ ದಲಾಲಿ ವ್ಯಾಪಾರಿಯ ಕಿರುಕುಳ ಜೋರಾಗಿತ್ತು. ಸಾವಿರಾರು ಕುಟುಂಬಕ್ಕೆ ಸಾಲ ಕೊಟ್ಟಿದ್ದ. ಆ ಸಾಲದ ಬಲೆಯಲ್ಲಿ ಒಮ್ಮೆ ಸಿಲುಕಿದರೆ ಮತ್ತೆ ವಾಪಸ್ ಬಿಡಿಸಿಕೊಂಡು ಬರೋದು ರೈತರಿಗೆ ಬಹಳ ಕಷ್ಟವಾಗುತ್ತಿತ್ತು. ಅದೊಂದು ತಿರುಗುಣಿ ಇದ್ದಂಗೆ. ಬಡ್ಡಿ, ಚಕ್ರಬಡ್ಡಿ ತಿರುಗುಣಿಯಲ್ಲೇ ರೈತರು ಬಿದ್ದು ಹೊರಳಾಡಬೇಕಿತ್ತು. ಆಮೇಲೆ ಬಡ್ಡಿ ಕೊಡದೇ ಇರುವವರ ಆಸ್ತಿಯನ್ನು ಜಬರ್‌ದಸ್ತಿ ಮಾಡಿ ಬೇರೆಯವರಿಗೆ ಬರೆಸಿಕೊಟ್ಟು ತನ್ನ ರೊಕ್ಕ ಪಡೆಯುತ್ತಿದ್ದ. ಪರಸಪ್ಪನ ಹತ್ತಿರ ಹೀಗೆ ಸಾಲ ಪಡೆದ ಎಷ್ಟೋ ರೈತರು ಬಡ್ಡಿ ಕಟ್ಟದೆ ಹೊಲ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

ಇವರ ಉಪಟಳಕ್ಕೆ ಬೇಸತ್ತಿದ್ದ ರೈತನೊಬ್ಬ ಇದಕ್ಕೆ ಪರಿಹಾರ ಸಿಗಬಹುದೆಂದು ಕೂಡ್ಲೆಪ್ಪನವರ ಬಳಿಗೆ ಬಂದು ಅತ್ತು ಕರೆದಿದ್ದ. ಅವರು ಇದಕ್ಕೆ ಏನಾದರೂ ಮಾಡಲೇಬೇಕೆಂಬ ಯೋಚನೆಗೆ ಬಿದ್ದರು. ದಲಾಲರ ದಬ್ಬಾಳಿಕೆ ವಿರೋಧಿಸಿ ಸಂಘದಿಂದ ಕರಪತ್ರ ಹಾಕಿಸಿದರು. ರೈತಸಂಘದ ಕಾರ್ಯಕರ್ತರೆಲ್ಲ ಸೇರಿ ಕಾರು ಬಾಡಿಗೆ ಪಡೆದು ಸುತ್ತ ಮುತ್ತಲ ಇಪ್ಪತ್ತು ಹಳ್ಳಿಗೆ ಆ ಕರಪತ್ರ ಹಂಚಿದರು.

ಸಾಲ ಪಡೆದ ರೈತರು ಆ ಕರಪತ್ರವನ್ನು ಸಾಲಿ ಕಲಿತ ಮಕ್ಕಳ ಹತ್ತಿರ ಕದ್ದು ಮುಚ್ಚಿ ಓದಿಸಿದರು. ಏನೇನಾಗುತ್ತದೋ ಎಂದು ಜನ ಬಹಳ ಭಯಗೊಂಡಿದ್ದರು. ಹಳ್ಳಿಗಳ ಚಹಾದಂಗಡಿ, ಕಟಿಂಗ್ ಅಂಗಡಿ, ಗುಡಿ, ಮಸೀದಿಗಳ ಕಟ್ಟೆ ಮೇಲೆ ಗುಂಪುಗೂಡಿದ ಜನರಲ್ಲಿ ಈ ಕರಪತ್ರದ್ದೇ ಚರ್ಚೆ. ಒಂದೂರಿನಲ್ಲಿ ಕನಿಷ್ಠ ಅರ್ಧದಷ್ಟು ಜನರಾದರೂ ಪರಸಪ್ಪನ ಹತ್ತಿರ ಸಾಲ ಪಡೆದವರೇ ಆಗಿದ್ದರು. ಸಾಲಗಾರರು ಆ ಕರಪತ್ರ ಮಡಚಿ ಬೊಕ್ಕಣದಲ್ಲಿ ಇಟ್ಕೊಂಡು ಅಡ್ಡಾಡುತ್ತ ಕದ್ದುಮುಚ್ಚಿ ಅವರಿಗೆ ಇವರಿಗೆ ತೋರಿಸೋರು. ಆ ಬಗ್ಗೆ ಬಹಿರಂಗವಾಗಿ ಮಾತಾಡೋಕೆ ಹೆದರುತ್ತಿದ್ದರು. ಪರಸಪ್ಪ ಅಷ್ಟೊಂದು ಭಯವನ್ನು ರೈತರೊಳಗೆ ಬಿತ್ತಿದ್ದ.

ರೈತ ಸಂಘದ ಕರಪತ್ರ ನೋಡಿ ದಲಾಲ ಪರಸಪ್ಪ ಕುದ್ದು ಹೋದ. ಇದು ಅನಿರೀಕ್ಷಿತವಾಗಿ ಅಪ್ಪಳಿಸಿದ ಆಘಾತವಾಗಿತ್ತು. ಅವನ ಮೈ ತುಂಬಾ ರಕ್ತದ ಬದಲು ಸಿಟ್ಟು ಹರಿದಾಡಿತು. ಬರುವ ಸಾಲಗಳಾದರೂ ಬರಲೆಂದು ಹಳ್ಳಿಗಳ ಕಡೆ ವಸೂಲಿಗೆ ತೆರಳಿದ. ಮೊದಲಿಗಿಂತ ಕಠೋರವಾಗಿದ್ದ. ಆದರೆ, ಹಳ್ಳಿಗಳಿಗೆ ಹೋದಾಗ ಜನರ ವರ್ತನೆಗಳು ಮೊದಲಿಗಿಂತ ಈಗ ಬದಲಾಗಿದ್ದು ಗೋಚರವಾಗತೊಡಗಿತು. ಬಂದಾಗೊಮ್ಮೆ ವಿಧೇಯತೆ ತೋರುತ್ತ, ನಮಸ್ಕಾರ ಹೇಳುತ್ತಾ, ಸಾಲ ಹರಿಯಲೆಂದೇ ತಿಂಗಳಪೂರ್ತಿ ಕೂಲಿ ಮಾಡಿದ ದುಡ್ಡನ್ನು ಇವನ ಬೊಗಸೆಗೆ ಹಾಕುತ್ತಿದ್ದರು. ಆಗೆಲ್ಲ ಬಡ್ಡಿ ಹಣ ಕೊಡದಿದ್ದರೆ ಬೆದರಿಕೆ ಹಾಕುತ್ತಿದ್ದ. ಇದರಿಂದ ಹೆದರಿದ್ದ ಜನ ಹೊಟ್ಟೆ ಬಟ್ಟೆಗೆ ಇರದಿದ್ದರೂ ಅಡ್ಡಿ ಇಲ್ಲ, ಬಡ್ಡಿ ಕೊಡಲು ಹಣ ಹೊಂದಿಸುತ್ತಿದ್ದರು. ಈಗ ಜನ ಯಾಕೋ ಹೆದರಿದಂತೆ ಕಾಣುತ್ತಿಲ್ಲ. ಇದು ಪರಸಪ್ಪನನ್ನು ಮತ್ತಷ್ಟು ಕೆರಳಿಸತೊಡಗಿತು.

ರಾತ್ರಿ ಕನಸು ಬಿದ್ದರೆ ಅದರಲ್ಲಿ ರೈತಸಂಘದ ಕರಪತ್ರವೇ ಪಟಪಟಿಸಿ ನಿದ್ದೆಗೆಡುತ್ತಿದ್ದ. ಬೆಳಗಾದರೆ ಎಂದಿನಂತೆ ಹಳ್ಳಿಗಳಿಗೆ ಸಾಲ ವಸೂಲು ಮಾಡಲು ಹೋಗೋದು ಈಗೀಗ ಕಿರಿಕಿರಿ ಅನಿಸತೊಡಗಿತ್ತು. ಜನ ಸುಮ್ಮನಿದ್ದರೂ ಅಪಹಾಸ್ಯ ಮಾಡಿದಂತೆ ತೋರುತ್ತಿತ್ತು. ತಲೆಯೊಳಗೆ ನೂರಾರು ಹುಳುಗಳು ಓಡಾಡಿದಂತೆನಿಸುತ್ತಿತ್ತು. ಇದಕ್ಕೆ ಏನಾದರೂ ಮಾಡಲೇಬೇಕೆಂದು ಮನಸೊಳಗೆ ಅಕಲು ಹಾಕತೊಡಗಿದ.

ಜನರಿಗೆ ಭಯ ಹುಟ್ಟಿಸಲು ಮಾಸ್ತಕಟ್ಟಿಯ ಒಬ್ಬ ರೈತನನ್ನು ನಾಪತ್ತೆ ಮಾಡಿದ. ಆದರೆ, ಭಯದ ಬದಲು ಈ ತಂತ್ರ ಪರಸಪ್ಪನಿಗೇ ತಿರುವುಮುರುವಾಯಿತು. ಮಾಸ್ತಕಟ್ಟಿಯ ಜನ ಹನುಮಸಾಗರ ಪೊಲೀಸ್ ಠಾಣೆಗೆ ಹೋಗಿ ಅಲ್ಲಿನ ಪಿಎಸ್‌ಐ ಹುಡುಗಿ ಎನ್ನುವವರಿಗೆ ಕಂಪ್ಲೆಂಟ್ ಕೊಟ್ಟರು. ರೈತಸಂಘದ ಕರಪತ್ರವನ್ನು ಈ ಮೊದಲೇ ಗಮನಿಸಿದ್ದ ಪಿಎಸ್‌ಐ, ಪರಸಪ್ಪನನ್ನು ಒದ್ದು ಜೈಲಿಗೆ ಹಾಕಿದ. ರೊಕ್ಕದ ಪ್ರಭಾವ ಇದ್ದುದರಿಂದ ಕೆಲವೇ ದಿನಗಳಲ್ಲಿ ಪರಸಪ್ಪ ಜೈಲಿನಿಂದ ಹೊರಬಂದ. ಆದರೆ, ಪರಸಪ್ಪ ಜೈಲಿಗೆ ಹೋಗಿಬಂದಿದ್ದು ಹಳ್ಳಿಗಳಲ್ಲೆಲ್ಲಾ ಗುಲ್ಲೆದ್ದು ’ಬೇಸಿ ಮಾಡ್ಯಾರ ನೋಡು ಅಂವಂಗ’ ಅಂತ ಜನ ಮಾತಾಡಿಕೊಂಡರು.

ನೆಲ್ಲೂರಿನಲ್ಲಿ ಸಾಲ ವಸೂಲಿಗೆ ಬಂದಾಗ ಲೆಕ್ಕದ ಪುಸ್ತಕ ಕಸಿದುಕೊಂಡು ಜನ ನಾಲ್ಕು ಹೊಡೆದು ಕಳಿಸಿದರು. ಅವತ್ತಿನಿಂದ ಪರಸಪ್ಪನಿಗೆ ಬುಗಿಲು ಹೊಕ್ಕಿತು. ಬಡ್ಡಿ, ಚಕ್ರಬಡ್ಡಿ ಬಿಟ್ಟು ಕೊಟ್ಟ ದುಡ್ಡನ್ನಷ್ಟೇ ವಿನಯದಿಂದ ಕೇಳತೊಡಗಿದ. ದಲಾಲಿ ಅಂಗಡಿಯವರ ಸಾಲ, ಸಾಲ ಕೊಟ್ಟ ಖಾಸಗಿ ವ್ಯಕ್ತಿಗಳು ರೈತರಿಗೆ ಕಿರುಕುಳ ಕೊಡೋದನ್ನು ನಿಲ್ಲಿಸತೊಡಗಿದರು. ರೈತಸಂಘದ ಕಾಳಜಿಯ ಬಗ್ಗೆ ಜನ ಮಾತಾಡುತ್ತ, ಸಂಘಟಿತರಾಗತೊಡಗಿದರು.

***

ಬೆಳೆಗಳು ಅಷ್ಟಕ್ಕಷ್ಟೆ ಬರುತ್ತಿದ್ದರಿಂದ ರೈತರಿಗೆ ವಿದ್ಯುತ್ ಬಿಲ್ ತುಂಬೋದು ತ್ರಾಸದಾಯಕವಾಗತೊಡಗಿತ್ತು. ಇದನ್ನೆಲ್ಲ ಮನಗಂಡ ರೈತ ಸಂಘ ಕರ ನಿರಾಕರಣೆ ಚಳವಳಿ ಹಮ್ಮಿಕೊಂಡಿತು. ಬೋರ್‌ಗಳಿಗೆ ಅಳವಡಿಸಿದ್ದ ಮೀಟರ್‌ಗಳನ್ನೆಲ್ಲ ಕಿತ್ತು ರೈತರು ಕೊಪ್ಪಳಕ್ಕೆ ಹೋಗಿ ಕೊಟ್ಟುಬಂದರು. ರೈತರ ಪ್ರಬಲ ವಿರೋಧ ಎದುರಿಸಬೇಕಾದುದರಿಂದ ವಿದ್ಯುತ್ ಬಿಲ್ ವಸೂಲಿ ಮಾಡಲು ಹಳ್ಳಿಗಳಿಗೆ ಬರುವುದಕ್ಕೆ ಹಿಂದೇಟು ಹಾಕತೊಡಗಿದರು. ಹದಿಮೂರು ವರ್ಷಗಳವರೆಗೆ ರೈತರು ಹೀಗೆ ವಿದ್ಯುತ್ ಬಿಲ್ ತುಂಬಲಿಲ್ಲ.

ರೈತ ಸಂಘ ಇದೇ ಹೊತ್ತಿನಲ್ಲಿ ಇಬ್ಬಾಗ ಆಯ್ತು. ನಂಜುಂಡಸ್ವಾಮಿ ಬಣ ಮತ್ತು ಪುಟ್ಟಣ್ಣಯ್ಯ ಬಣಗಳಾದ ಮೇಲೆ ನಂಜುಂಡಸ್ವಾಮಿ ರೋಣದಲ್ಲಿ ಬಂದು ಮೂರು ದಿನ ಉಳಿದರು. ರೋಣ ತಾಲ್ಲೂಕಿನ ರೈತರು ತಮ್ಮ ಜೊತೆಗಿರಬೇಕೆಂಬುದು ನಂಜುಂಡಸ್ವಾಮಿಯವರ ಹಂಬಲವಾಗಿತ್ತು. ಆದರೂ ರೋಣದಲ್ಲಿ ರೈತರು ಎರಡು ಬಣಗಳಾಗಿ ಒಡೆದುಹೋದರು.

ಕೂಡ್ಲೆಪ್ಪನವರು ನಂಜುಂಡಸ್ವಾಮಿ ಬಣದಲ್ಲಿ ಉಳಿದರು. ಅಂದಿನಿಂದ ನಂಜುಂಡಸ್ವಾಮಿಯವರು ಕೂಡ್ಲೆಪ್ಪನವರಿಗೆ ರೈತ ಚಳವಳಿಯ ಮಾರ್ಗದರ್ಶನ ಮಾಡತೊಡಗಿದರು. ನಂಜುಂಡಸ್ವಾಮಿಯವರ ಮೂಲಕ ಇವರಿಗೆಲ್ಲ ಪೆರಿಯಾರ್ ಆಲೋಚನೆ ಪರಿಚಯ ಆಯ್ತು. ರೈತರು ತಿಳಿದುಕೊಳ್ಳಬೇಕಾದ ಕಾನೂನುಗಳ ಬಗೆಗಿನ ಸಾಹಿತ್ಯವನ್ನು ರೈತ ಮುಖಂಡರಿಗೆ ತಲುಪಿಸುತ್ತಿದ್ದರು. ಕರಪತ್ರಗಳು ಕೂಡ ಹೊಸ ತಿಳಿವಳಿಕೆ ನೀಡುವುದರ ಜೊತೆಗೆ ಅರಿವನ್ನು ತಿದ್ದುವಂತಿರುತ್ತಿದ್ದವು. ಪ್ರಭುತ್ವದ ಹುನ್ನಾರಗಳನ್ನು ಬಹುಬೇಗನೆ ಗ್ರಹಿಸುವಂತಾಯಿತು. ಸೈದ್ಧಾಂತಿಕವಾಗಿ ಆಗ ಕೂಡ್ಲೆಪ್ಪನವರು ಗಟ್ಟಿಗೊಳ್ಳತೊಡಗಿದರು.

ಅದೆಷ್ಟು ಗಟ್ಟಿ ಎಂದರೆ ಅಧಿಕಾರಶಾಹಿಯನ್ನು ರಾಜಾರೋಷವಾಗಿ ವಿರೋಧಿಸುವುದನ್ನು, ನೇರವಾಗಿ ಮಾತಾಡುವುದನ್ನು ಕಲಿತರು. ಬಳಗೋಡದಲ್ಲಿ ಒಮ್ಮೆ ಟಿಸಿ ಸುಟ್ಟಿತ್ತು. ಕೆಇಬಿಯವರು ಟಿ.ಸಿ.ಹಾಕಲೇ ಇಲ್ಲ. ರೈತರು ಸಂಘಟಿತರಾಗಿ ಕೆಇಬಿಗೆ ಹೋಗಿ ಮುತ್ತಿಗೆ ಹಾಕಲು ನಿರ್ಧರಿಸಿದರು. ಆಗ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ಹದಿನಾರು ಎತ್ತಿನ ಚಕ್ಕಡಿಗಳೊಂದಿಗೆ ನೂರಾರು ರೈತರು ಕೆಇಬಿಯೊಳಗೆ ನುಗ್ಗಿದರು. ಆಗ ಅಲ್ಲಿದ್ದ ಸಿಪಿಐ ಒಬ್ಬ, ರೈತ ಮುಖಂಡ ಕೂಡ್ಲೆಪ್ಪನವರಿಗೆ ’ಚಕ್ಕಡಿ ಒಳ ಬಿಡಬೇಡ್ರಿ..’ ಅಂತ ಕೈ ಜಗ್ಗಾಡಿದ.

ಆಗ ಕೂಡ್ಲೆಪ್ಪನವರು ’ಏನಪ್ಪ ಇದನ್ನೇ ಓದಿದ್ದಾ ನೀನು. ನಾವು ಏನ್ ಮಾಡ್ತಿದಿವಿ ಅನ್ನೋದೇನಾದ್ರು ಅರಿವಿದೆಯಾ ನಿನಗೆ. ದಾಂಧಲೆ ಮಾಡೋಕೆ ಬಂದಿದಿವಾ ನಾವು. ಟಿ.ಸಿ. ಸುಟ್ಟು ರೈತರ ಬೆಳೆಗೆ ನೀರು ಇಲ್ದ ಒಣಗಾಕ ಹತ್ಯಾವು. ಬೆಳಿ ಬರದಿದ್ರೆ ನಾಳೆ ಏನು ಊಟ ಮಾಡ್ತಿರಿ. ರೈತರೇನು ಶ್ರೀಮಂತರಲ್ಲ. ಅವ್ರಿಗೆ ನಿಮ್ಮಂಗ ತಿಂಗಳಾ ತಿಂಗಳ ತಪ್ಪದ ಪಗಾರ ಬರೋದಿಲ್ಲ. ನೀವೆಲ್ಲ ತಿಳಿವಳಿಕೆ ಇರೋರು. ಇದ್ನೆಲ್ಲಾ ನಿಮಗ ಹೇಳಬೇಕೇನು..’ ಅಂತ ಮುಖಕ್ಕೆ ಹೊಡೆದಂಗೆ ಹೇಳಿದರು.

ಇವರ ಮಾತುಗಳಿಂದ ಸಿಪಿಐಗೆ ಜ್ಞಾನೋದಯವಾಗಿರಬೇಕು. ಮರು ಮಾತಾಡದೇ ಅಲ್ಲಿಂದ ಕಾಲ್ಕಿತ್ತು ತಾಸು ಎರಡು ತಾಸು ಆಫೀಸಿನಲ್ಲಿ ಕುಳಿತವರು ಮತ್ತೆ ಹೊರಗೆ ಬರಲೇ ಇಲ್ಲ. ಬದಲಾಗಿ ರೈತರಿಗೆಲ್ಲ ಸಪೋರ್ಟ್ ಮಾಡುತ್ತ, ಅವರಿಗೆಲ್ಲ ನಾಲ್ಕೈದು ದಿನ ಊಟಕ್ಕೆ ವ್ಯವಸ್ಥೆ ಮಾಡಿದ. ರೈತರು ಅಲ್ಲೇ ಕೆಇಬಿ ಆವರಣದಲ್ಲಿ ಮೇವು ಹಾಕಿ ಎತ್ತುಗಳನ್ನು ಕಟ್ಟಿದ್ದರು.

ಕೊನೆಗೆ ರೈತರೊಂದಿಗೆ ಮಾತಾಡಲು ಎಸ್‌ಪಿ ಬರಬೇಕಾಯಿತು. ರಾಜೀ ಮಾಡಲು ನೋಡಿದರು. ’ಎಲ್ಲ ರೈತರು ನೂರು ರೂಪಾಯಿ ತುಂಬ್ರಿ. ಟಿಸಿ ಕೊಡಿಸೋ ವ್ಯವಸ್ಥೆ ಮಾಡೋಣು..’ ಅಂದ್ರು.

ಕೂಡ್ಲೆಪ್ಪನವರು ’ಒಂದು ರೂಪಾಯಿ ತುಂಬೋದಿಲ್ಲ. ರೈತರು ಕಷ್ಟದಾಗಿದಾರ. ನಯಾಪೈಸೆ ಬೆಳೆ ಬಂದಿಲ್ಲ. ರೈತರು ರೊಕ್ಕ ಎಲ್ಲಿಂದ ಕೊಡಬೇಕು. ಅವ್ರಿಗೆಲ್ಲ ಊಟುದ್ದ ಚಿಂತಿ ಆಗೇತಿ. ಇಂತಾದ್ರಾಗ ಟಿಸಿ ಕೊಡ್ಲಿಲ್ಲಂದ್ರ ಹೆಂಗ. ಟಿಸಿ ಕೊಡೋವರೆಗೂ ನಾವು ಪ್ರತಿಭಟನೆ ಮಾಡ್ತಿವಿ..’ ಅಂದರು.

ಆಗ ರೈತರೆಲ್ಲ ’ರೈತ ವಿರೋಧಿ ಸರಕಾರಕ್ಕೆ ಧಿಕ್ಕಾರ’, ’ರೈತ ವಿರೋಧಿ ಅಧಿಕಾರಿಗಳಿಗೆ ಧಿಕ್ಕಾರ’, ಅಂತ ಘೋಷಣೆ ಹಾಕತೊಡಗಿದರು. ಹೋರಾಟಕ್ಕೆ ಮಣಿದ ಎಸ್‌ಪಿ ಕೆಇಬಿ ಅಧಿಕಾರಿಗಳ ಜೊತೆ ಚರ್ಚಿಸಿ ಟಿಸಿ ಕಳಿಸಲು ಒಪ್ಪಿಸಿದರು. ರೈತರು ಹೋರಾಟ ಹಿಂತೆಗೆದುಕೊಂಡರು. ಮರುದಿನವೇ ಬಳಗೋಡಕ್ಕೆ ಟಿಸಿ ಬಂತು.

ಟಿ.ಎಸ್.ಗೊರವರ

ಟಿ.ಎಸ್. ಗೊರವರ
ಗದಗ ಜಿಲ್ಲೆಯವರಾದ ಟಿ.ಎಸ್. ಗೊರವರ, ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಹೊರತಂದಿದ್ದಾರೆ. ಸದ್ಯ ’ಸಂಗಾತ’ ತೈಮಾಸಿಕ ಸಾಹಿತ್ಯ ಪತ್ರಿಕೆ ಸಂಪಾದಕ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...