ಅದೊಂದು ಕಾಲವಿತ್ತು. ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಒಂದು ಕತ್ತೆ ನಿಂತರೂ ಗೆಲುವು ಸಾಧಿಸುತ್ತದೆ ಎಂದು. ಆದರೆ, ಪ್ರಸ್ತುತ ಪರಿಸ್ಥಿತಿ ಹಾಗಿಲ್ಲ. ಕಾಂಗ್ರೆಸ್‌ನಿಂದ ಕತ್ತೆ ಅಲ್ಲ ಸ್ವತಃ ಪಕ್ಷದ ರಾಷ್ಟ್ರಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯೂ ಗೆಲುವು ಸಾಧಿಸಲು ಸಾಧ್ಯವಾಗುತ್ತಿಲ್ಲ. 2014ಕ್ಕೂ ಮುಂಚೆ ದೇಶದ 14 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಇಂದು ಕೇವಲ ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಮೂರು-ನಾಲ್ಕು ರಾಜ್ಯಗಳಲ್ಲಿ ಮಾತ್ರ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ.
ಆದರೆ, ಕರ್ನಾಟಕ ಮಾತ್ರ ಎಲ್ಲಾ ಕಾಲದಲ್ಲೂ ಕಾಂಗ್ರೆಸ್ ಪಾಲಿಗೆ ಅಕ್ಷರಶಃ ಕಾಮಧೇನುವಾಗಿತ್ತು. ಆದರೆ, ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದ ಪಾಲಿಗೆ ಇದ್ದ ಆ ಒಂದು ಆಶಾವಾದವನ್ನು ಕಿತ್ತುಕೊಂಡಿದೆ.
ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕಳೆದುಕೊಂಡ ವರ್ಚಸ್ಸನ್ನು ಪುನಃ ಗಳಿಸಿಕೊಳ್ಳಲು ಏಕೈಕ ಮಾರ್ಗ ತಳ ಮಟ್ಟದಿಂದ ಮತ್ತೆ ಪಕ್ಷವನ್ನು ಸಂಘಟಿಸುವುದು. ಆದರೆ, ಸೋಲಿನ ನಡುವೆಯೂ ಪಾಠ ಕಲಿಯದ ಕಾಂಗ್ರೆಸ್ ನಾಯಕರ ಒಳ ಜಗಳ, ಅಧಿಕಾರದ ದಾಹ ಹಾಗೂ ಲಾಬಿ ಅಕ್ಷರಶಃ ಹೈಕಮಾಂಡ್ ನಾಯಕರನ್ನೂ ಆತಂಕಕ್ಕೆ ದೂಡಿದೆ. ಪರಿಣಾಮ ಪಕ್ಷದ ಪ್ರಮುಖ ಹುದ್ದೆಯಾದ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕಳೆದ ಎರಡು ತಿಂಗಳಿನಿಂದ ಖಾಲಿಯಾಗಿಯೇ ಇದೆ.
ಈ ಹುದ್ದೆಗೆ ಎಂ.ಬಿ. ಪಾಟೀಲ್‌ಗೆ ದಕ್ಕಬೇಕೆಂದು ಒಂದೆಡೆ ಸಿದ್ದರಾಮಯ್ಯ ದೊಡ್ಡ ಮಟ್ಟದ ಲಾಬಿ ನಡೆಸಿದ್ದರೆ, ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಕುಂತಲ್ಲೇ ರಣತಂತ್ರ ಹೆಣೆಯುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಪಕ್ಷದ ವರ್ಚಸ್ಸನ್ನು ಮತ್ತೆ ವೃದ್ಧಿಸಲು ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಸೂಕ್ತ ಆಯ್ಕೆ ಎಂಬ ನಿರ್ಣಯಕ್ಕೆ ಹೈಕಮಾಂಡ್ ಬಂದಿದೆ ಎನ್ನುತ್ತಿವೆ ಕೈ ಮೂಲಗಳು.
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿಕೆಶಿ ಬಹುತೇಕ ಖಚಿತ?
2018 ರಾಜ್ಯ ವಿಧಾನಸಭೆ ಚುನಾವಣೆ 2019ರ ಲೋಕಸಭಾ ಚುನಾವಣೆ ಸೋಲಿನಿಂದ ಹೈರಾಣಾಗಿದ್ದ ಕಾಂಗ್ರೆಸ್ ಮಹತ್ವದ ಉಪ ಚುನಾವಣೆಯಲ್ಲೂ ಹೀನಾಯ ಸೋಲನುಭವಿಸಿತ್ತು. ಅನರ್ಹ ಶಾಸಕರಿಗೆ ಸೋಲುಣಿಸಬೇಕು ಎಂಬ ತಮ್ಮ ಉದ್ದೇಶದಲ್ಲಿ ಎಡವಿತ್ತು. ಪರಿಣಾಮ ಸೋಲಿನ ನೈತಿಕ ಹೊಣೆ ಹೊತ್ತು ಸಿಎಲ್ಪಿ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು.
ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಹೈಕಮಾಂಡ್ ಯಾವುದೇ ಕಾರಣಕ್ಕೂ ಅಂಗೀಕರಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿತ್ತು. ಹೀಗಾಗಿ ಇದೊಂದು ಒತ್ತಡ ಹೇರುವ ನಾಟಕ ಎಂದು ಅನೇಕರು ಟೀಕಿಸಿದ್ದರು.
ಆದರೆ, ದಿನೇಶ್ ಗುಂಡೂರಾವ್ ವಿರುದ್ಧ ಆರಂಭದಿಂದಲೂ ಪಕ್ಷದಲ್ಲಿ ಸಾಕಷ್ಟು ಅಸಮಾಧಾನವಿತ್ತು. ರೋಷನ್ ಬೇಗ್ ಸೇರಿದಂತೆ ಅನೇಕರು ದಿನೇಶ್ ಗುಂಡೂರಾವ್ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸಿದ್ದರು. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡುತ್ತಿದ್ದಂತೆ ಈ ಸ್ಥಾನದ ಮೇಲೆ ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್. ರಾಜಣ್ಣ, ಕೋಲಾರ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಆದಿಯಾಗಿ ಅನೇಕರು ಕಣ್ಣಿಟ್ಟಿದ್ದರು.
ಆದರೆ, ಪ್ರಬಲ ಪೈಪೋಟಿ ಇದ್ದದ್ದು ಮಾತ್ರ ಲಿಂಗಾಯತ ಸಮುದಾಯದ ನಾಯಕ ಎಂ.ಬಿ. ಪಾಟೀಲ್ ಹಾಗೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರ ಮಧ್ಯೆ ಮಾತ್ರ.
ಎಂ.ಬಿ. ಪಾಟೀಲ್ ಪರ ಲಾಬಿ ಮಾಡುವ ಸಲುವಾಗಿ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿ ತಲುಪಿದ್ದರು. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಈ ಕುರಿತು ಸಾಕಷ್ಟು ಚರ್ಚೆ ನಡೆಸಿದ್ದರು. ಆದರೆ, ಡಿ.ಕೆ. ಶಿವಕುಮಾರ್ ಮಾತ್ರ ಬೆಂಗಳೂರು ಬಿಟ್ಟು ಕದಲಿರಲಿಲ್ಲ. ತನಗೆ ಅಧ್ಯಕ್ಷ ಗಾದಿ ನೀಡುವಂತೆ ಯಾರ ಮೇಲೂ ಒತ್ತಡ ಹೇರುವ ಹಾಗೂ ಲಾಬಿ ಮಾಡುವ ಕೆಲಸಕ್ಕೆ ಮುಂದಾಗಿರಲಿಲ್ಲ. ತನಗೆ ಆ ಸ್ಥಾನ ಸಿಗುತ್ತದೆ ಎಂಬ ಅಪಾರ ನಂಬಿಕೆ ಅವರಲ್ಲಿತ್ತು.
ಅವರ ನಂಬಿಕೆಗೆ ಪೂರಕವಾಗಿ ಹೈಕಮಾಂಡ್ ಇದೀಗ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮೂಲಗಳ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕುಗ್ಗಿರುವ ಕಾಂಗ್ರೆಸ್ ವರ್ಚಸ್ಸನ್ನು ಮತ್ತೆ ಮುನ್ನೆಲೆಗೆ ತರಲು ಪಕ್ಷವನ್ನು ತಳ ಮಟ್ಟದಿಂದ ಸಧೃಡಗೊಳಿಸಲು ಡಿಕೆಶಿ ಉತ್ತಮ ಆಯ್ಕೆ ಎಂಬುದು ಹೈಕಮಾಂಡ್ ನಿಲುವು ಎನ್ನಲಾಗುತ್ತಿದೆ. ಅಲ್ಲಿಗೆ ಒಂದು ಹಂತದಲ್ಲಿ ಸಿದ್ದರಾಮಯ್ಯನವರಿಗೆ ಸೋಲಾಗಿರುವುದು ಖಚಿತ.
ಕಾಂಗ್ರೆಸ್ ಪಕ್ಷಕ್ಕೆ ನಾಲ್ವರು ಕಾರ್ಯಾಧ್ಯಕ್ಷರು
ಕೆಪಿಸಿಸಿ ಆಧ್ಯಕ್ಷ ಹುದ್ದೆ ತಮ್ಮ ಕೈ ತಪ್ಪುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಅವರ ಕೈ ಕಟ್ಟಿಹಾಕಲು ನಾಲ್ಕು ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿಸಲು ಸಿದ್ದರಾಮಯ್ಯ ಹೊಸ ಯೋಜನೆಯೊಂದನ್ನು ಸೃಷ್ಟಿಸಿದ್ದಾರೆ.
ಅಸಲಿಗೆ ಕಳೆದ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಉಪ ಚುನಾವಣೆ ಸೋಲಿನ ಹೊಣೆ ಹೊತ್ತು ಅವರೂ ಸಹ ರಾಜೀನಾಮೆ ನೀಡಿದ್ದಾರೆ.
ಹೀಗಾಗಿ ತೆರವಾಗಿರುವ ಕಾರ್ಯಾಧ್ಯಕ್ಷರ ಹುದ್ದೆಗೆ ನಾಲ್ಕು ಜನ ಪ್ರಬಲ ಸಮುದಾಯದವರನ್ನು ನೇಮಕ ಮಾಡಬೇಕು. ಹೆಚ್.ಸಿ. ಮಹದೇವಪ್ಪ, ಜಮೀರ್ ಅಹಮದ್, ಸತೀಶ್ ಜಾರಕಿಹೊಳಿ ಹಾಗೂ ಈಶ್ವರ ಖಂಡ್ರೆ ಅವರನ್ನು ಈ ಹುದ್ದೆಗೆ ನೇಮಕ ಮಾಡುವ ಮೂಲಕ ನಾಲ್ಕೂ ಪ್ರಬಲ ಸಮುದಾಯಗಳ ಮತಗಳನ್ನು ಸೆಳೆಯಬಹುದು ಎಂದು ಹೈಕಮಾಂಡ್ ನಾಯಕರಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದರು.
ಸಿದ್ದರಾಮಯ್ಯ ಮುಂದಿಟ್ಟಿರುವ ಈ ಸಲಹೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಏಕೆಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಾ. ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂಬ ದೊಡ್ಡ ಕೂಗು ಎದ್ದಿತ್ತು. ಆದರೆ, ಪರಮೇಶ್ವರ್ ಈ ಹುದ್ದೆಗೆ ಏರಲು ಅಡ್ಡಗಾಲು ಹಾಕಿದ್ದ ಸಿದ್ದರಾಮಯ್ಯ ಕೊನೆಯವರೆಗೂ ಡಿಸಿಎಂ ಹುದ್ದೆ ಸೃಷ್ಟಿಯಾಗದಂತೆ ನೋಡಿಕೊಂಡಿದ್ದರು.
ಹೀಗಿದ್ದ ಮೇಲೆ ಇದೀಗ ಪಕ್ಷದ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸುವ ರೀತಿಯಲ್ಲಿ ನಾಲ್ಕು ಜನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದೇಕೆ? ಈ ಮೂಲಕ ಸಿದ್ದರಾಮಯ್ಯ ಪಕ್ಷದ ಅಧ್ಯಕ್ಷರ ಅಧಿಕಾರದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆಯೇ ಎಂಬ ಆರೋಪಗಳೂ ಕೇಳಿ ಬರುತ್ತಿದೆ.
ಈ ನಡುವೆ ಸಿದ್ದರಾಮಯ್ಯ ವಿರುದ್ಧವೂ ಒಂದು ಬಣ ಕಳೆದ ಹಲವು ವರ್ಷಗಳಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಸುಳ್ಳಲ್ಲ. ವಿರೋಧ ಪಕ್ಷದ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೂ ಹೈಕಮಾಂಡ್ ಅದನ್ನು ಅಂಗೀಕರಿಸಿಲ್ಲ. ಹೀಗಾಗಿ ಮತ್ತೆ ಆ ಸ್ಥಾನಕ್ಕೆ ಸಿದ್ದರಾಮಯ್ಯನವರನ್ನು ನೇಮಕ ಮಾಡುವುದು ಈಗಾಗಲೇ ಖಚಿತವಾಗಿದೆ.
ಆದರೆ, ಸಿದ್ದರಾಮಯ್ಯ ವಿರೋಧಿ ಬಣ ಈಗಾಗಲೇ ಸಿಎಲ್‌ಪಿ ಹಾಗೂ ಪ್ರತಿಪಕ್ಷ ನಾಯಕನ ಸ್ಥಾನ ಎರಡಕ್ಕೂ ಬೇರೆ ಬೇರೆ ನಾಯಕರನ್ನು ನೇಮಕ ಮಾಡಬೇಕು, ಸಿಎಲ್‌ಪಿ ನಾಯಕ ಸ್ಥಾನಕ್ಕೆ ಪರಮೇಶ್ವರ್ ಅವರನ್ನು ನೇಮಕ ಮಾಡಬೇಕು ಎಂಬ ವಾದವನ್ನು ಹೈಕಮಾಂಡ್ ಮುಂದಿಟ್ಟಿದೆ.
ಈ ಮೂಲಕ ಸಿದ್ದರಾಮಯ್ಯ ಅವರ ಅಧಿಕಾರಕ್ಕೆ ಕೈ ಹಾಕುವುದು ಈ ಬಣದ ಉದ್ದೇಶ. ಆದರೆ, ಸಿಎಲ್ಪಿ ಹಾಗೂ ಪ್ರತಿಪಕ್ಷದ ನಾಯಕ ಸ್ಥಾನವನ್ನು ಇಬ್ಬರು ನಾಯಕರಿಗೆ ಹಂಚುವುದಾದರೆ ತಮಗೆ ಯಾವುದೇ ಸ್ಥಾನಮಾನ ಬೇಡ ಎಂದು ಸಿದ್ದರಾಮಯ್ಯ ಸಾರಾಸಗಟಾಗಿ ತಿಳಿಸಿದ್ದಾರೆ. ಆದರೆ, ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೂ ಸೂಕ್ತ ಆಯ್ಕೆಗಳಿಲ್ಲ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಸಹ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.
ಒಟ್ಟಿನಲ್ಲಿ ಸೋಲಿನ ನಡುವೆಯೂ ಪಾಠ ಕಲಿಯದ ಕಾಂಗ್ರೆಸ್ ಪಕ್ಷದ ಒಳ ಜಗಳ ಇದೀಗ ಬೀದಿಗೆ ಬಿದ್ದಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಓರ್ವ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್‌ಗೆ ಎರಡು ತಿಂಗಳಾದರೂ ಸಾಧ್ಯವಾಗುತ್ತಿಲ್ಲ ಎಂದರೆ ಪಕ್ಷದ ಒಳಗೆ ಯಾವ ಮಟ್ಟದ ಲಾಬಿ ನಡೆಯುತ್ತಿದೆ ಎಂಬುದನ್ನು ಊಹಿಸಬಹುದು.
ಕಳೆದ ದಶಕದ ಹಿಂದಿನವರೆಗೆ ರಾಷ್ಟ್ರದ ಬಹುತೇಕ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಇಂದು ಮೂಲೆ ಗುಂಪಾಗಲು ಈ ರೀತಿಯ ಲಾಬಿ, ಒತ್ತಡ ತಂತ್ರ ಮತ್ತು ಓಲೈಕೆ ರಾಜಕಾರಣವೇ ಕಾರಣ ಎಂಬುದು ಇಂದು ಗುಟ್ಟಾಗೇನೂ ಉಳಿದಿಲ್ಲ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಮೂರು ಮತ್ತೊಂದು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸಾಧನೆ ಶೂನ್ಯಕ್ಕೆ ಇಳಿದರೂ ಅಚ್ಚರಿ ಇಲ್ಲ.


