ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಝೊಹ್ರಾನ್ ಮಮ್ದಾನಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ನ.21) ಶ್ವೇತಭವನದಲ್ಲಿ ತಮ್ಮ ಮೊದಲ ಮುಖಾಮುಖಿ ಮಾತುಕತೆ ನಡೆಸಿದ್ದಾರೆ.
ರಾಜಕೀಯ ಮತ್ತು ಸೈದ್ದಾಂತಿಕವಾಗಿ ಪರಸ್ಪರ ಶತ್ರುಗಳಾಗಿರುವ ಮಮ್ದಾನಿ ಮತ್ತು ಟ್ರಂಪ್, ಮೊದಲ ಭೇಟಿಯಲ್ಲಿ ಬಹಳ ಆತ್ಮೀಯತೆಯಿಂದ, ನಗು ನಗುತ್ತಾ ಮಾತನಾಡಿರುವುದು ಹಲವರನ್ನು ಆಶ್ವರ್ಯಗೊಳಿಸಿದೆ.
ಶ್ವೇತ ಭವನದಲ್ಲಿ ಟ್ರಂಪ್ ಜೊತೆ ಬಹಳ ಆಪ್ತವಾಗಿ ಮಾತುಕತೆ ನಡೆಸಿರುವ ಮಮ್ದಾನಿ, ಅಲ್ಲಿಂದ ಹೊರ ಬಂದ ಬಳಿಕ ಟ್ರಂಪ್ ವಿಚಾರದಲ್ಲಿ ತಮ್ಮ ನಿಲುವನ್ನು ಬದಲಿಸಿಲ್ಲ. ಟ್ರಂಪ್ ಒಬ್ಬ ‘ಫ್ಯಾಸಿಸ್ಟ್’ ಎಂದು ಪುನರುಚ್ಚರಿಸಿದ್ದಾರೆ.
ಶನಿವಾರ (ನ.22) ಎನ್‌ಬಿಸಿ ನ್ಯೂಸ್‌ನ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಮ್ದಾನಿ, ಶುಕ್ರವಾರ ಟ್ರಂಪ್ ಜೊತೆ ನಡೆಸಿರುವ ಮಾತುಕತೆ ಫಲದಾಯಕವಾಗಿದೆ. ಆದರೆ, ಟ್ರಂಪ್ ಒಬ್ಬ ‘ಫ್ಯಾಸಿಸ್ಟ್’ ಮತ್ತು ‘ನಿರಂಕುಶಾಧಿಕಾರಿ’ ಎಂದು ಎಂಬ ನಿಲುವನ್ನು ಈಗಲೂ ಹೊಂದಿದ್ದೇನೆ ಎಂದಿದ್ದಾರೆ.
ಪ್ರಾಥಮಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮಮ್ದಾನಿ ಡೆಮಾಕ್ರಟಿಕ್ ಪಕ್ಷದ ನ್ಯೂಯಾರ್ಕ್ ಮೇಯರ್ ಅಭ್ಯರ್ಥಿಯಾಗಿ ಆಯ್ಕೆಯಾದಾಗಲೇ ಟ್ರಂಪ್ ಟೀಕಿಸಿದ್ದರು. ಮಮ್ದಾನಿ ‘ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚ’ ಎಂದು ಜರೆದಿದ್ದರು. ಆದರೆ, ಶುಕ್ರವಾರದ ಸಭೆಯಲ್ಲಿ ಮಮ್ದಾನಿಗೆ ಶುಭಾಷಯ ಕೋರಿ, ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಮ್ದಾನಿ, ಟ್ರಂಪ್ ಜೊತೆಗಿನ ಚರ್ಚೆಗಳು ಧನಾತ್ಮಕವಾಗಿತ್ತು. ಮುಖ್ಯವಾಗಿ ಜನರ ಜೀವನ ವೆಚ್ಚ ಮತ್ತು ಆರ್ಥಿಕ ಸಾಧ್ಯತೆಗಳ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿದ್ದವು ಎಂದು ತಿಳಿಸಿದ್ದಾರೆ.
ನಿಲುವಿಗೆ ಬದ್ದ-ಮಮ್ದಾನಿ
ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್ ಬಗ್ಗೆ ನೀಡಿದ್ದ ನೇರ ಹೇಳಿಕೆಗಳಿಗೆ ತಾನು ಈಗಲೂ ಬದ್ಧನಾಗಿರುವುದಾಗಿ ಮಮ್ದಾನಿ ಸ್ಪಷ್ಟಪಡಿಸಿದ್ದಾರೆ.
“ನಾನು ಹಿಂದೆ ಯಾವ ಯಾವ ಮಾತುಗಳನ್ನು ಹೇಳಿದ್ದೆಯೋ, ಅವೆಲ್ಲವನ್ನೂ ಇಂದಿಗೂ ನಾನು ಪೂರ್ತಿಯಾಗಿ ನಂಬುತ್ತೇನೆ. ನನ್ನ ಆಲೋಚನೆಗಳು ಬದಲಾಗಿಲ್ಲ. ಆದರೆ ರಾಜಕೀಯದಲ್ಲಿ ಒಂದು ಒಳ್ಳೆಯ ವಿಷಯ ಇದೆ: ನಮಗೆ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮುಚ್ಚಿಹಾಕುವುದಿಲ್ಲ. ನಾವು ತಾಳ್ಮೆಯಿಂದ ಕೂತು ಮಾತಾಡುತ್ತೇವೆ. ನಾನು ಅಧ್ಯಕ್ಷರ ಓವಲ್ ಆಫೀಸ್‌ಗೆ ಹೋಗಿರುವುದು ತಮಾಷೆಗೋ, ತೋರಿಕೆಗೋ ಅಲ್ಲ. ನನ್ನ ಸಿದ್ಧಾಂತಗಳನ್ನು ಜಗಳ ಮಾಡಿಕೊಳ್ಳಲು ಅಲ್ಲ. ನಾನು ಅಲ್ಲಿಗೆ ಹೋಗಿರುವುದು ಕೇವಲ ನ್ಯೂಯಾರ್ಕ್ ನಗರದ ಜನರಿಗೆ ಒಳ್ಳೆಯ ಕೆಲಸ ಮಾಡಲು, ಅವರ ಸಮಸ್ಯೆಗಳಿಗೆ ಪರಿಹಾರ ತಂದುಕೊಡಲು ಮಾತ್ರ” ಎಂದು ಮಮ್ದಾನಿ ಹೇಳಿದ್ದಾರೆ.
ಶುಕ್ರವಾರದ ಮಾತುಕತೆ ವೇಳೆ, “ನಾನು ನಿನ್ನನ್ನು ಫ್ಯಾಸಿಸ್ಟ್ ಅಂತ ಕರ್ದಿದ್ದಲ್ಲಾ? ಇನ್ನೊಮ್ಮೆ ‘ಹೌದು’ ಅಂತ ಹೇಳಿಬಿಡು” ಎಂದು ಟ್ರಂಪ್ ನಗು ನಗುತ್ತಾ ಮಮ್ದಾನಿಗೆ ಹೇಳಿದ್ದರು. ಮಮ್ದಾನಿ ಕೂಡ ನಗು ನಗುತ್ತಾ, ಅದನ್ನು ಈಗಾಗಲೇ ಹೇಳಿದ್ದೇನೆ ಸರ್” ಅಂತ ಶುರು ಮಾಡ್ತಿದ್ದಂತೆ, “ಅಯ್ಯೋ ಬಿಡು ವಿವರಣೆ ಬೇಡ, ಕೇವಲ ‘ಹೌದು’ ಅಂತ ಹೇಳು, ಅಷ್ಟೇ ಸಾಕು. ನನಗೆ ಚಿಂತೆಯೇ ಇಲ್ಲ!” ಎಂದು ಟ್ರಂಪ್ ಹೇಳಿದ್ದರು. ಮಮ್ದಾನಿಯ ತೋಳಿಗೆ ಗಟ್ಟಿಯಾಗಿ ತಟ್ಟಿದ್ದರು. ಇಬ್ಬರೂ ಒಟ್ಟಿಗೆ ಜೋರಾಗಿ ನಕ್ಕಿದ್ದರು.
ಟ್ರಂಪ್‌ಗೆ ಮತ ಹಾಕಿದವರೇ ಆಗಲಿ, ನನ್ನ ಪರ ಮತ ಹಾಕಿದವರೇ ಆಗಲಿ, ಎಲ್ಲರ ಸಮಸ್ಯೆ ಒಂದೇ : ಬಾಡಿಗೆ, ಆಹಾರ, ಎಲ್ಲವೂ ದುಬಾರಿಯಾಗಿದೆ. ಅದನ್ನು ಕಡಿಮೆ ಮಾಡುವುದೇ ನನ್ನ ಮೊದಲ ಕೆಲಸ ಎಂದು ಮಮ್ದಾನಿ ತಿಳಿಸಿದ್ದಾರೆ.
ನಾನು ಶ್ವೇತಭವನಕ್ಕೆ ಹೋಗುವಾಗ ಒಂದೇ ಉದ್ದೇಶ ಇತ್ತು, ಅದು ಟ್ರಂಪ್ ಜೊತೆ ಒಳ್ಳೆಯ, ಕೆಲಸ ಮಾಡಬಹುದಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಆ ಸಂಬಂಧ ನ್ಯೂಯಾರ್ಕ್ ಜನರನ್ನು ರಾತ್ರಿಯೆಲ್ಲಾ ನಿದ್ರೆ ಬರದಂತೆ ಕಾಡುವ ಸಮಸ್ಯೆಗಳ ಮೇಲೆಯೇ ಕೇಂದ್ರೀಕೃತವಾಗಿರಬೇಕು ಎಂಬುವುದು ಎಂದು ಮಮ್ದಾನಿ ಹೇಳಿದ್ದಾರೆ.
ಟ್ರಂಪ್ ಜೊತೆ ಮಾತನಾಡುವಾಗ, “ನಾನು ಎರಡನೇ ಬಾರಿ ಅಧ್ಯಕ್ಷನಾದರೆ ಮೊದಲ ದಿನದಿಂದಲೇ ಜೀವನ ವೆಚ್ಚವನ್ನು ಕಡಿಮೆ ಮಾಡುತ್ತೇನೆ ಎಂದು ನೀವೇ ಕಳೆದ ವರ್ಷ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದೀರಿ. ಅದಕ್ಕಾಗಿಯೇ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಮಮ್ದಾನಿ ಹೇಳಿದ್ದರು.


