ಇನ್‌ಸ್ಟಂಟ್ ಲೋನ್ ಆ್ಯಪ್‌ನಿಂದ ₹ 2,000 ಸಾಲ ಪಡೆದ ನಂತರ ನಿರಂತರ ಕಿರುಕುಳವನ್ನು ಎದುರಿಸಿದ 27 ವರ್ಷದ ಯುವಕ ವಿವಾಹವಾದ 47 ದಿನಗಳ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.
ಜೀವನೋಪಾಯಕ್ಕಾಗಿ ಮೀನು ಹಿಡಿಯುವ ನರೇಂದ್ರ ಅವರು ಪ್ರತಿಕೂಲ ಹವಾಮಾನದ ಕಾರಣದಿಂದ ಕೆಲವು ತಿಂಗಳ ಹಿಂದೆ ಮೀನುಗಾರಿಕೆಗೆ ಹೋಗಲು ಸಾಧ್ಯವಾಗಲಿಲ್ಲ. ತ್ವರಿತ ಸಾಲದ ಅಪ್ಲಿಕೇಶನ್‌ನಿಂದ ₹ 2,000 ಸಾಲ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನರೇಂದ್ರ ಅವರು ಅಸಲು ಮೊತ್ತವನ್ನು ಮರುಪಾವತಿಸುವಲ್ಲಿ ಯಶಸ್ವಿಯಾದರು. ಆದರೆ, ಸಾಲದ ಕಂಪನಿಯ ಜನರನ್ನು ಕಳುಹಿಸಿ ಕಿರುಕುಳ ನೀಡಿದ್ದರು. ಅವರು ದೊಡ್ಡ ಮೊತ್ತವನ್ನು ಬಡ್ಡಿಯಾಗಿ ಪಾವತಿಸಲು ಒತ್ತಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಕಂಪನಿಯ ಜನರು ಕಿರುಕುಳ ನೀಡಿ ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅಕ್ಟೋಬರ್ 20 ರಂದು ಮದುವೆಯಾಗಿದ್ದ ಆತನಿಗೆ ಹಾಗೂ ಆತನ ಪತ್ನಿಗೆ ಬ್ಲ್ಯಾಕ್ ಮೇಲ್ ಮಾಡಿ ನಗ್ನ ಫೋಟೋವನ್ನು ಮಾರ್ಫಿಂಗ್ ಮಾಡಿ ತನ್ನ ಸ್ನೇಹಿತರೊಂದಿಗೆ ವಾಟ್ಸಾಪ್ ನಲ್ಲಿ ಶೇರ್ ಮಾಡಿದ್ದಾರೆ.
ಕಿರುಕುಳದ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳುವುದು ನರೇಂದ್ರನಿಗೆ ಕಷ್ಟಕರವಾಗಿತ್ತು. ಇದು ಖಿನ್ನತೆಗೆ ಕಾರಣವಾಯಿತು ಎಂದು ಅಧಿಕಾರಿಗಳು ಹೇಳಿದರು. ಕಿರುಕುಳ ಮತ್ತು ಆಘಾತವನ್ನು ಸಹಿಸಲಾಗದ ನರೇಂದ್ರ ಶನಿವಾರ ನೇಣು ಬಿಗಿದುಕೊಂಡಿದ್ದಾನೆ. ಅವರ ಕುಟುಂಬಸ್ಥರು ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ; ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ; ಮೃತನ ಪತ್ನಿ, ನ್ಯಾಯಾಧೀಶರ ವಿರುದ್ಧ ಕಿರುಕುಳ ದೂರು ದಾಖಲಿಸಿದ ಕುಟುಂಬ


