ಜುಲೈ 17-18 ರಂದು ವಿರೋಧ ಪಕ್ಷಗಳ ಮುಂದಿನ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಪಾಟ್ನಾದಲ್ಲಿ ಅತ್ಯಂತ ಯಶಸ್ವಿಯಾಗಿ ವಿರೋಧ ಪಕ್ಷಗಳ ಸಭೆಯ ನಂತರ, ನಾವು ಮುಂದಿನ ಸಭೆಯನ್ನು ಬೆಂಗಳೂರಿನಲ್ಲಿ 17 ಮತ್ತು 18 ಜುಲೈ, 2023 ರಂದು ನಡೆಸುತ್ತೇವೆ. ಫ್ಯಾಸಿಸ್ಟ್ ಮತ್ತು ಅಪ್ರಜಾಸತ್ತಾತ್ಮಕ ಶಕ್ತಿಗಳನ್ನು ಸೋಲಿಸಲು ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ದಿಟ್ಟ ದೃಷ್ಟಿಯನ್ನು ಪ್ರಸ್ತುತಪಡಿಸುವ ನಮ್ಮ ಸಂಕಲ್ಪದಲ್ಲಿ ನಾವು ಅಚಲರಾಗಿದ್ದೇವೆ” ಎಂದಿದ್ದಾರೆ.
After a hugely successful All-Opposition meeting in Patna, we will be holding the next meeting in Bengaluru on 17 and 18 July, 2023.
We are steadfast in our unwavering resolve to defeat the fascist and undemocratic forces and present a bold vision to take the country forward.
— K C Venugopal (@kcvenugopalmp) July 3, 2023
ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ಮೊದಲ ಸಭೆ ನಡೆದಿದೆ. 15 ವಿಪಕ್ಷಗಳು ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಆದಾದ ನಂತರ ಮೋದಿಯವರು ಪ್ರಕ್ಷುಬ್ದರಾಗಿದ್ದಾರೆ ಎಂದು ಈ ಹಿಂದೆ ಶರದ್ ಪವಾರ್ ತಿಳಿಸಿದ್ದರು.
ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಡಿಸಿಎಂ ತೇಜಸ್ವಿ ಯಾದವ್ ಕರೆದಿದ್ದ 15 ವಿರೋಧ ಪಕ್ಷಗಳ ಪಾಟ್ನಾ ಸಭೆಗೆ ಬಿಜೆಪಿ ಪ್ರತಿಕ್ರಿಯೆ ನೋಡಿದರೆ ಅದು ಯಶಸ್ವಿಯಾಗಿದೆ ಎಂದು ನಿರೂಪಿಸಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲ ಹೇಳಿದ್ದರು.
ಪಾಟ್ನಾ ಸಭೆಯ ನಂತರ ವಿರೋಧ ಪಕ್ಷಗಳ ಮುಂದಿನ ಸಭೆಯನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈಗ ದಕ್ಷಿಣ ಭಾರತದಲ್ಲಿ ನಡೆಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಶರದ್ ಪವಾರ್ ಮತ್ತು ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಮೊದಲ ಸಭೆಯಲ್ಲಿ ವಿರೋಧ ಪಕ್ಷಗಳ ಐಕ್ಯತೆ ಮತ್ತು ಅಗತ್ಯತೆ ಬಗ್ಗೆ ಚರ್ಚಿಸಲಾಗಿತ್ತು. ಸೀಟು ಹಂಚಿಕೆಯ ಬಗ್ಗೆ ಮುಂದಿನ ಸಭೆಗಳಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ; ಇಂದಿನಿಂದ ಅಧಿವೇಶನ ಆರಂಭ; ವಿರೋಧ ಪಕ್ಷ ನಾಯಕನ ಆಯ್ಕೆ ಇನ್ನೂ ಆಗಿಲ್ಲ


