ಕೇರಳದ ನೆಯ್ಯಟ್ಟಿಂಕರ ಬಳಿಯ ಪೂವರ್‌ನಲ್ಲಿ ಕ್ರಿಸ್‌ಮಸ್ ಆಚರಣೆಯ ಅಂಗವಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕುಸಿದಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಕ್ರಿಸ್ಮಸ್ ಸಂಭ್ರಮದಲ್ಲಿದ್ದ ತಿರುವನಂತಪುರಂನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕ್ರಿಸ್‌ಮಸ್ ಆಚರಣೆಯ ಭಾಗವಾಗಿ ನಿರ್ಮಿಸಿದ ತಾತ್ಕಾಲಿಕ ಸೇತುವೆ ಕುಸಿತದ ಪರಿಣಾಮ 7 ರಿಂದ 8 ಜನರು ಗಾಯಗೊಂಡಿದ್ದು, ಅವರಲ್ಲಿ ಕೆಲವರಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇತುವೆಯ ಮೇಲೆ ನಿಂತಿದ್ದರು. ಇದರಿಂದಾಗಿ ಸೇತುವೆಯು ಭಾರ ತಡೆಯಲಾರದೆ ಒಂದು ಕಡೆ ವಾಲಿದ ಪರಿಣಾಮ ಆ ಬದಿಯಲ್ಲಿ ನಿಂತಿದ್ದವರೆಲ್ಲ ಉರುಳಿ ಬಿದ್ದಿದ್ದಾರೆ. ಏಕಾಏಕಿ ಸೇತುವೆ ಕುಸಿದ ಕಾರಣ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ತಂಡ ತೆರಳಿ ಆಂಬುಲೆನ್ಸ್ ವ್ಯವಸ್ಥೆ ಮಾಡುವ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕ್ರಿಸ್‌ಮಸ್ ಆಚರಣೆಯ ಭಾಗವಾಗಿ ಯೇಸುವಿನ ವಿವಿಧ ಕಲಾಕೃತಿಗಳು, ವಿಭಿನ್ನ ಬಗೆಯ ಮೂರ್ತಿಗಳು, ಅಲಂಕಾರಿಕ ಪ್ರದರ್ಶನ ಏರ್ಪಡಿಸಲಾಗಿತ್ತು. ಒಂದು ಭಾಗದಿಂದ ಇನ್ನೊಂದು ಕಡೆಗೆ ತೆರಳಲು ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲಾಗಿತ್ತು. ಈ ವೇಳೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇತುವೆ ಮೇಲೆ ನಿಂತಿದ್ದಾರೆ. ಅಧಿಕ ಭಾರದಿಂದಾಗಿ ತಾತ್ಕಾಲಿಕ ಸೇತುವೆ ಕುಸಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೇರಳದಲ್ಲಿ ಸೋಮವಾರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ ಮಾಡಲಾಗಿದೆ. ತಡರಾತ್ರಿವರೆಗೆ ಚರ್ಚ್‌ಗಳಲ್ಲಿ ಪ್ರಾರ್ಥನೆಗಳು ನಡೆದಿದೆ. ಜನರು ಕೇಕ್‌ಗಳನ್ನು ಕತ್ತರಿಸಿ, ಶುಭಾಶಯಗಳನ್ನು ವಿನಿಮಯ ಮಾಡುತ್ತಾ ಕ್ರಿಸ್‌ಮಸ್ ಆಚರಣೆ ಮಾಡಿದ್ದಾರೆ. ತಿರುವನಂತಪುರಂನಲ್ಲಿರುವ ಸೇಂಟ್ ಮೇರಿ ಸೈರೋ ಮಲಂಕರ ಕ್ಯಾಥೋಲಿಕ್ ಚರ್ಚ್, ಲ್ಯಾಟಿನ್ ಕ್ಯಾಥೋಲಿಕ್ ಆರ್ಚ್‌ಡೈಯೋಸಿಸ್ ಸೇರಿ ಎಲ್ಲಾ ಚರ್ಚ್‌ಗಳಲ್ಲಿ ಕ್ರೈಸ್ತ ಸಮುದಾಯದವರು ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ ಮಾಡಿದ್ದಾರೆ.
VIDEO | A makeshift bridge set up for #Christmas celebrations collapsed in the Neyyattinkara town in Kerala’s Trivandrum earlier today. Several injuries were reported. Rescue operations are underway. pic.twitter.com/5oTgLCiyo7
— Press Trust of India (@PTI_News) December 25, 2023
ಇದನ್ನು ಓದಿ: ವಾಮಾಚಾರದ ಶಂಕೆಯಲ್ಲಿ ಆದಿವಾಸಿ ಮಹಿಳೆಯ ಸಜೀವ ದಹನ: ಕೊನೆಗೊಳ್ಳದ ‘ಮಾಟಗಾತಿ’ ಹಣೆಪಟ್ಟಿಯ ಹತ್ಯೆ


