ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದೆ, ಸಂಪತ್ತು ಕೆಲವೇ ಮಂದಿಯ ಪಾಲಾಗುತ್ತಿದೆ ಎಂದಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ತಿರುಗೇಟು ಕೊಟ್ಟಿದ್ದಾರೆ. “ಬಡತನಕ್ಕೆ ತಳ್ಳಿದವರ ಬಗ್ಗೆಯೂ ನಿತಿನ್ ಗಡ್ಕರಿ ಮಾತನಾಡಲಿ” ಎಂದಿದ್ದಾರೆ.
ಗಡ್ಕರಿ ಹೇಳಿಕೆಯ ಪತ್ರಿಕಾ ವರದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಹರಿಪ್ರಸಾದ್, ” ದೇಶದಲ್ಲಿ ಬಡವರ ಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿರುವುದರ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸತ್ಯ ಒಪ್ಪಿಕೊಂಡಿದ್ದಕ್ಕೆ ಸ್ವಾಗತ, ಆದ್ರೆ ವಾಸ್ತವವನ್ನು ಮರೆಮಾಚುತ್ತಲೇ ಬಡತನಕ್ಕೆ ದೂಡಿದವರ ಬಗ್ಗೆಯೂ ಮಾತಾಡಿದ್ದರೆ ಸನ್ಮಾನಕ್ಕೂ ಅರ್ಹರಾಗುತ್ತಿದ್ದರು” ಎಂದು ಕುಟುಕಿದ್ದಾರೆ.
2011–12ರಲ್ಲಿ ದೇಶದಲ್ಲಿ, ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ 27 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ಇದೇ ಜನವರಿಯಲ್ಲಿ ಬಿಡುಗಡೆ ಮಾಡಿದ ಬಹು ಆಯಾಮದ ಬಡತನ ಸೂಚ್ಯಂಕ: ಪ್ರಗತಿ ಪರಿಶೀಲನೆ ವರದಿಯಲ್ಲಿ, 2013–14 ಮತ್ತು 2022–23ರ ನಡುವೆ ದೇಶದ 24.28 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ಘೋಷಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಕೇಂದ್ರದ ಹಲವು ಸಚಿವರು ಮತ್ತು ಬಿಜೆಪಿ ನಾಯಕರು ಈ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೇ ಸಾಧನೆ. ಆದರೆ ಎಲ್ಲಿಯೂ ಅಪ್ಪಿತಪ್ಪಿ ದೇಶದಲ್ಲಿ ಈಗ ಇರುವ ಬಡವರೆಷ್ಟು ಎಂಬುದನ್ನು ಮಾತ್ರ ಹೇಳಿರಲಿಲ್ಲ. ಸತ್ಯವನ್ನು ಮರೆಮಾಚಿದ್ದು ಯಾರು? ಯಾಕೆ? ಎನ್ನುವ ಪ್ರಶ್ನೆಗಳಿಗೆ ಈ ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುವ ಷೇರುದಾರರು ಉತ್ತರಿಸಲೇ ಇಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಾರತದಲ್ಲಿ ಬಡತನವನ್ನು ‘ಬಡತನ ರೇಖೆ’ಯ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು. ಬಡತನ ರೇಖೆ ಎಂದರೆ ಗ್ರಾಮೀಣ ಕುಟುಂಬವೊಂದು ತಿಂಗಳೊಂದರಲ್ಲಿ ರೂ. 816 ಮತ್ತು ನಗರ ಪ್ರದೇಶದ ಕುಟುಂಬವೊಂದು ತಿಂಗಳೊಂದರಲ್ಲಿ ರೂ.1,000 ವೆಚ್ಚ ಮಾಡಲು ಸಾಧ್ಯವಾಗದಿದ್ದರೆ, ಅದನ್ನು ಬಡತನದ ರೇಖೆಗಿಂತ ಕೆಳಗೆ ಇರುವ ಕುಟುಂಬ ಎಂದು ಪರಿಗಣಿಸಲಾಗುತ್ತಿತ್ತು (2011–12ರಲ್ಲಿ). ಆದರೆ ಈಗ ಸರ್ಕಾರವು ಈ ಲೆಕ್ಕಾಚಾರವನ್ನೇ ಬಿಟ್ಟಿದೆ ಎಂದಿದ್ದಾರೆ.
ತಿನ್ನಲು ಪೌಷ್ಟಿಕ ಅನ್ನವಿಲ್ಲದಿದ್ದರೂ ಕೇವಲ ಸೈಕಲ್ ಹೊಂದಿದ್ದರೆ ಬಡತನ ಆಯಾಮಗಳಿಂದ ಹೊರಗಿಟ್ಟಿರುವ ಕೇಂದ್ರದ ನೀತಿಯೇ ಅತ್ಯಂತ ಅವೈಜ್ಞಾನಿಕ. ಇನ್ನೊಂದೆಡೆ ಮೂರೊತ್ತು ಊಟ ಇಲ್ಲದಿದ್ದರೂ, ಸ್ವಂತ ಮನೆ ಇಲ್ಲದೆ, ಕುಡಿಯುವ ನೀರಿನ ಸಂಪರ್ಕವೂ ಇಲ್ಲದೆ, ಆದರೆ ಆ ಕುಟುಂಬವು ಸರ್ಕಾರ ಉಚಿತವಾಗಿ ನೀಡುವ ಅಡುಗೆ ಅನಿಲ ಸಂಪರ್ಕ ಹೊಂದಿದ ಕಾರಣಕ್ಕಾಗಿ ಸರ್ಕಾರದ ದೃಷ್ಟಿಯಲ್ಲಿ ಬಡತನದಿಂದ ಹೊರಗುಳಿದಿರುವುದು ಅವೈಜ್ಞಾನಿಕ ಮಾತ್ರವಲ್ಲ, ಅಂತಃಕರಣವೇ ಇಲ್ಲದ್ದು ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.
ಭಾರತದಲ್ಲಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗಿದ್ದು, ಉಳ್ಳವರು ಮತ್ತು ಇಲ್ಲದವರ ನಡುವೆ ಬೃಹತ್ ಕಂದಕ ಸೃಷ್ಟಿಯಾಗಿದೆ. ಶತಕೋಟ್ಯಧಿಪತಿಗಳು ರಾಜಕೀಯ ಪ್ರಭಾವವನ್ನೂ ಬೆಳೆಸಿಕೊಂಡಿದ್ದಾರೆ ಎಂದು “ಆಕ್ಸ್‌ಫಾಮ್” ಸಂಸ್ಥೆಯೂ ಭಾರತದ ಅಸಮಾನತೆ ಕುರಿತ ವರದಿ ಮಾಡಿದೆ. ಸಾರ್ವಜನಿಕರ ಬೃಹತ್ ಮೊತ್ತದ ಹಣಕ್ಕೆ ಅಪಾಯ ಎದುರಾಗಿದೆ. ನೀತಿ ನಿರೂಪಕರು ತಮ್ಮ ಉದ್ಯಮಿ ಸ್ನೇಹಿತರು ಮತ್ತು ಇತರರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಭ್ರಷ್ಟಾಚಾರ ಹೆಚ್ಚಾಗಿದ್ದು, ಸರ್ಕಾರಗಳ ಆಡಳಿತದಲ್ಲಿ ಉದ್ಯಮಿಗಳ ಪಾತ್ರವೂ ಹೆಚ್ಚಾಗುತ್ತಿದೆ ಎಂದು ವರದಿ ಮಾಡಿದೆ. ಹಾಗಾದರೆ ಯಾರೂ ಆ ಮೋದಾನಿಗಳು? ಯಾರು ಆ ಕೇಲವೇ ಕೆಲವು ಶತಕೋಟ್ಯಾಧೀಶ್ವರರು? ಎಂಬ ಪ್ರಶ್ನೆಗಳಿಗೆ ಗಡ್ಕರಿಯವರ ಬಳಿ ಉತ್ತರವಂತೂ ಇರಬಹುದು, ಆದರೆ ಸತ್ಯ ಹೇಳುವ ಎದೆಗಾರಿಕೆ ಪ್ರದರ್ಶಿಸುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರವೇ ಈ ಹಿಂದೆ ಹೇಳಿದಂತೆ 24.28 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದರೆ, ಉಳಿದ ಬಡವರೆಷ್ಟು ಎಂಬ ಪ್ರಶ್ನೆ ಮೂಡುತ್ತದೆ. 2011–12ರಲ್ಲಿ 27 ಕೋಟಿಯಷ್ಟು ಇದ್ದ ಕಡುಬಡವರಲ್ಲಿ, 24.28 ಕೋಟಿಯನ್ನು ಕಳೆದರೆ 2.72 ಕೋಟಿಯಷ್ಟು ಬಡವರು ಉಳಿಯುತ್ತಾರೆ. ಅಂದರೆ ದೇಶದಲ್ಲಿರುವ ಬಡವರ ಸಂಖ್ಯೆ ಕೇವಲ 2.72 ಕೋಟಿಯೇ.? ಖಂಡಿತ ಇಲ್ಲ. ದೇಶದ ಅಧಿಕೃತ ಜನಸಂಖ್ಯೆಗೆ (2011ರ ಜನಗಣತಿಯಂತೆ 126 ಕೋಟಿ) ಹೋಲಿಸಿದರೆ, 2.72 ಕೋಟಿ ಜನರ ಪ್ರಮಾಣವು ಶೇ 2.1ರಷ್ಟು ಮಾತ್ರ. ಆದರೆ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ನೀತಿ ಆಯೋಗವು, ‘ಇನ್ನೂ ಶೇ 11.28ರಷ್ಟು ಜನರು ಬಹು ಆಯಾಮದ ಬಡವರಿದ್ದಾರೆ’ ಎಂದು ಹೇಳಿತ್ತು. 126 ಕೋಟಿ ಜನರಲ್ಲಿ ಶೇ 11.28ರಷ್ಟು ಅಂದರೆ, ಅದು 14.2 ಕೋಟಿಯಷ್ಟಾಗುತ್ತದೆ. 2011ರ ಜನಗಣತಿಯ ಸಂಖ್ಯೆಯ ಪ್ರಕಾರ ದೇಶದಲ್ಲಿ 14.2 ಕೋಟಿ ಜನ ಬಹು ಆಯಾಮದ ಬಡವರಿದ್ದಾರೆ. ಅಂದರೆ ಈ ಸರ್ಕಾರದ ಅವಧಿಯಲ್ಲಿ 24 ಕೋಟಿಗೂ ಹೆಚ್ಚು ಜನರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದರೂ, 12 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ದೂಡಲ್ಪಟ್ಟಿದ್ದಾರೆ. ಈ ಸತ್ಯವನ್ನು ದೇಶದ ಜನರೆದುರು ಒಪ್ಪಿಕೊಳ್ಳದೆ ಮರೆ ಮಾಚಿರುವುದೇ ಮೋದಿ ಸರ್ಕಾರದ ಸಾಧನೆ ಎಂದು ಟೀಕಿಸಿದ್ದಾರೆ.
ದೇಶದ ಬಡ ಜನರ ಬದುಕನ್ನು ಮೇಲೆಕ್ಕೆತ್ತಲು ಮೂಲ ಪರಿಹಾರ ಇರುವುದೇ ಜಾತಿ ಹಾಗೂ ಜನಗಣತಿಯಲ್ಲಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಗಣತಿಯಿಂದಾಗಿ ದೇಶದ ವಾಸ್ತವ ಸ್ಥಿತಿ ತೆರೆದಿಡುತ್ತದೆ. ಆಗ ಮಾತ್ರ ಸರ್ಕಾರ ತುಳಿತಕ್ಕೊಳಗಾದವರ, ಹಿಂದುಳಿದ ಹಾಗೂ ಎಲ್ಲಾ ಸಮುದಾಯಗಳಲ್ಲಿರುವ ಬಡ ಕುಟುಂಬಗಳನ್ನು ಏಳಿಗೆ ಮಾಡಲು ಸಾಧ್ಯ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಜಾತಿ ಹಾಗೂ ಜನಗಣತಿಯನ್ನು ಒತ್ತಾಯಿಸುತ್ತಿರುವುದು. ಸಮಸ್ಯೆಯ ಮೂಲ ಹುಡುಕದೆ ಪರಿಹಾರ ನೀಡಲು ಸಾಧ್ಯವಿಲ್ಲ. ಸರ್ಕಾರ ಈಗಲಾದರೂ ಗಣತಿ ನಡೆಸಿ ದೇಶದ ಕಟ್ಟಕಡೆಯ ಕುಟುಂಬಕ್ಕೂ ಸರ್ಕಾರದ ಸವಲತ್ತು ಸಿಗುವಂತಾಗಲಿ ಎಂದು ಒತ್ತಾಯಿಸುತ್ತೇನೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಎಡಿಆರ್