ಪಾವಗಡ ರಾಜ್ಯದ ಅತೀ ಹಿಂದುಳಿದ ತಾಲೂಕುಗಳಲ್ಲಿ ಒಂದು. ತುಮಕೂರು ಜಿಲ್ಲೆಯ ಉತ್ತರದ ಗಡಿ ಪಾವಗಡ. ಮೂರು ಕಡೆಯೂ ಆಂಧ್ರಪ್ರದೇಶದ ಗಡಿಗಳಿಂದ ಸುತ್ತುವರೆದಿರುವ ಪಾವಗಡ ಅಭಿವೃದ್ಧಿಯನ್ನೇನೂ ಕಂಡಿಲ್ಲ. ಜಿಲ್ಲೆಯಲ್ಲಿ ಅತ್ಯಂತ ನಿರ್ಲಕ್ಷಿತ ತಾಲೂಕು ಇದು. ಯಾರಿಗೂ ಬೇಡವಾದ ಕೂಸಿನಂತೆ. ಎಲ್ಲಾ ತಾಲೂಕುಗಳಿಗೆ ಹೇಮಾವತಿ ನೀರು ಕುಡಿಯಲು ಪೂರೈಕೆಯಾಗುತ್ತಿದ್ದರೆ ಈ ತಾಲೂಕಿಗೆ ಯಾವ ಮೂಲದಿಂದಲೂ ನೀರು ಇಲ್ಲ. ನೀರಾವರಿ ಸೌಲಭ್ಯವಿಲ್ಲ. ಮಳೆಯಾಶ್ರಿತ ಬೆಳೆಯೂ ಅಷ್ಟಕ್ಕಷ್ಟೇ. ಅಭಿವೃದ್ಧಿ ಮೂಲೆಗೆ ಸೇರಿದೆ. ಕೊರಕಲು ಬಿದ್ದ ರಸ್ತೆಗಳೇ ಇದಕ್ಕೆ ಸಾಕ್ಷಿಯಾಗಿ ನಿಂತಿವೆ.
ಹಲ್ಲುಗಳನ್ನು ನೋಡಿದರೆ ಸಾಕು ಇವರು ಪಾವಗಡದವರು ಎಂದು ಗುರುತಿಸಲಾಗುತ್ತಿದೆ. ಅಷ್ಟು ಪ್ರಸಿದ್ದಿ ಪಾವಗಡ. ಪ್ಲೋರೈಡ್ ನೀರು ಇಲ್ಲಿನ ಜನರನ್ನು ಜೀವಂತ ಶವಗಳನ್ನಾಗಿ ಮಾಡಿದೆ. ಇಂತೆಂಬ ಪಾಳು ನೆಲದಲ್ಲಿ ರಸ್ತೆಗಳೂ ಟಾರು ಕಂಡಿಲ್ಲ. ಕಿತ್ತುಹೋದ ರಸ್ತೆಗಳಲ್ಲೇ ವಾಹನ-ಜನ ಸಂಚಾರ ಸಾಗಿದೆ. ಜನರ ಗೋಳನ್ನು ಕೇಳೋರೇ ಇಲ್ಲ. ಜನಪ್ರತಿನಿಧಿಗಳು ಮೇಲ್ಜಾತಿಯವರ ಮರ್ಜಿಯಲ್ಲಿ ಕೆಲಸ ನಿರ್ವಹಿಸಬೇಕಾಗಿ ಬಂದಿದೆ.
ಪಾವಗಡ ಪ್ರದೇಶ ಡಾ.ನಂಜುಂಡಪ್ಪ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕು. ಅಭಿವೃದ್ಧಿಯನ್ನೇ ಕಾಣದ ಈ ತಾಲೂಕನ್ನು 370 ಜೆ ಕಲಂ ಅಡಿ ತಂದು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕಿತ್ತು. ಆದರೆ ಅದಾಗಲೇ ಇಲ್ಲ. ಜನಪ್ರನಿಧಿಗಳು ಬಂದ ಅನುದಾನದಲ್ಲಿ ಜೇಬು ಭರ್ತಿ ಮಾಡಿಕೊಳ್ಳುವುದು ಹೇಗೆ ಎಂದು ಚಿಂತಿಸಿದರು. ಕೋಟ್ಯಂತರ ಅನುದಾನ ಬಂದರೂ ಅದು ಎಲ್ಲಿ ಹೋಯಿತು ಎಂಬುದು ಮಾತ್ರ ನಿಗೂಢ. ಆದರೆ ದಾಖಲೆಗಳಲ್ಲಿ ಮಾತ್ರ ಹಣ ಖರ್ಚು ಮಾಡಲಾಗಿದೆ. ಅಭಿವೃದ್ಧಿ ಕಡತಗಳಲ್ಲಿ ಮಾತ್ರ ರಸ್ತೆಗಳು ಆಗಿವೆ ಎಂಬುದನ್ನು ಸಾರುತ್ತವೆ.
ಪಾವಗಡಕ್ಕೆ ಕೂಗಳತೆ ದೂರದಲ್ಲಿರುವ ವೆಂಕಟಾಪುರ ಗ್ರಾಮ ಪಂಚಾಯ್ತಿ ಕೇಂದ್ರ. ರಸ್ತೆಯನ್ನು ನೋಡಿದರೆ ಯಡಿಯೂರು ಸಿದ್ದಲಿಂಗೇಶ್ವರನೇ ಮೆಚ್ಚಬೇಕು. ವೆಂಕಟಾಪುರ-ಮಡಕಶಿರಾ ರಸ್ತೆ ಟಾರು ಕಂಡು ದಶಕವೇ ಕಳೆದಿದೆ. ಟಾರು ಕಿತ್ತುಹೋಗಿರುವುದರಿಂದ ಜಲ್ಲಿಯೇ ರಸ್ತೆಯ ಮೇಲಿದೆ. ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಂಚಾರ ಮಾಡುವುದೇ ದುಸ್ಥರವಾಗಿದೆ. ವೆಂಕಟಾಪುರದಿಂದ ಮಡಕಶಿರಾಕ್ಕೆ ನಿತ್ಯವೂ ನೂರಾರು ಜನರು ಪ್ರಯಾಣಿಸುತ್ತಾರೆ. ದಿನಸಿ, ಪೆಟ್ರೋಲ್, ಡಿಸೆಲ್, ತರಕಾರಿ ತರುವುದು ಅಲ್ಲಿಂದಲೇ. ಪಾವಗಡಕ್ಕೆ ಬರಬೇಕೆಂದರೆ ನಾಲ್ಕೈದು ಕಿಲೋ ಮೀಟರ್ ಹೆಚ್ಚು ದಾರಿ ಕ್ರಮಿಸಬೇಕು. ಹಾಗಾಗಿ ವೆಂಕಟಾಪುರ ಗ್ರಾಮಸ್ಥರು ಮಡಕಶಿರಾಕ್ಕೆ ಹೋಗಿ ಬರುವುದೇ ಹೆಚ್ಚು. ಎಕ್ಕೆದ್ದು ಹೋಗಿರುವ ರಸ್ತೆಯಲ್ಲಿ ರಾಜಕಾರಣಿಗಳಿಗೆ ಹಿಡಿಶಾಪ ಹಾಕುತ್ತಲೇ ದಾರಿ ಸವೆಸುವುದು ಮಾಮೂಲಿನ ಸಂಗತಿ.
ಪಾವಗಡಕ್ಕೆ ಹೋಲಿಸಿದರೆ ಪೆಟ್ರೋಲ್, ಡಿಸೆಲ್ ಬೆಲೆ ಆಂದ್ರಪ್ರದೇಶದಲ್ಲಿ ಮೂರು ರೂಪಾಯಿ ಕಡಿಮೆ ಇದೆ. ಆ ಕಾರಣಕ್ಕಾಗಿಯೇ ದ್ವಿಚಕ್ರವಾಹನ ಸವಾರರು, ಟ್ಯಾಕ್ಟರ್ ಮಾಲಿಕರು, ಆಟೋಚಾಲಕರು ಮಡಕಶಿರಾಕ್ಕೆ ಬರುವುದು ರೂಢಿಯಲ್ಲಿದೆ. ರಸ್ತೆ ಕೆಟ್ಟು ಹೋಗಿದ್ದರೂ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು, ಪಿಡಿಒ ಮತ್ತು ಇಲ್ಲಿನ ಶಾಸಕರು ತಲೆಗೆ ಹಾಕಿಕೊಂಡಿಲ್ಲ.
ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ 14 ಲಕ್ಷ ರೂ ಬಿಡುಗಡೆ ಆಗಿತ್ತು. ಆದರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಿಡಿಒ ಶಾಮೀಲಾಗಿ ಹಣವನ್ನು ಲೂಟಿ ಮಾಡಿ ನೆಪಕ್ಕೆ ಮಾತ್ರ ಕಡಿಮೆ ನೀರು ತುಂಬುವ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದೂ ಕೂಡ ಕಳಪೆ ಕಾಮಗಾರಿಯಾಗಿದೆ. ಅಧಿಕಾರಿ ವರ್ಗ ಸ್ಮಾರ್ಟ್ ಆಗುತ್ತಿದೆಯೇ ಹೊರತು ರಸ್ತೆಗಳು ಮಾತ್ರ ಅಭಿವೃದ್ಧಿ ಕಾಣುತ್ತಿಲ್ಲ ಎಂದು ವೆಂಕಟಾಪುರದ ಯುವ ಮುಖಂಡ ಈ ಶಿವಣ್ಣ ದೂರಿದ್ದಾರೆ.
ವೆಂಕಟಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದೆ. 24X7 ಸೇವೆ ನೀಡಲಾಗುವುದು ಎಂಬ ಫಲಕ ಎದ್ದುಕಾಣುತ್ತದೆ. ಆದರೆ ಅದು ನೆಪಮಾತ್ರಕ್ಕೆ ಹಾಕಿರುವ ಫಲಕ. ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ತೆರೆಯುವುದೇ ಅಪರೂಪ. ವೈದ್ಯರು ಬರುವುದೇ ದುಸ್ಥರ. ಇಲ್ಲಿನ ಸಿಬ್ಬಂದಿ ಖಾಸಗಿ ಕ್ಲಿನಿಕ್ ವೈದ್ಯರೊಂದಿಗೆ ಶಾಮೀಲಾಗಿ ಆಸ್ಪತ್ರೆಗೆ ಬರುತ್ತಿಲ್ಲ. ಬಂದರೂ ಸರಿಯಾಗಿ ನೋಡುವುದಿಲ್ಲ. ಸರ್ಕಾರಿ ವೇತನ ಪಡೆಯುವ ವೈದ್ಯರು ಖಾಸಗಿ ವೈದ್ಯರಿಂದಲೂ ಮಾಮೂಲಿ ಸ್ವೀಕರಿಸುತ್ತಾರೆ. ಹಾಗಾಗಿ ಖಾಸಗಿ ಕ್ಲಿನಿಕ್ ಗಳಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾರೂ ಇರುವುದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಸಬಾ ಹೋಬಳಿ ವ್ಯಾಪ್ತಿಯ ಗುಂಡಾರ್ಲಹಳ್ಳಿ-ವೀರ್ಲಗೊಂದಿ-ಕನ್ನಡಮೇಡಿ ರಸ್ತೆ ಕೆಟ್ಟು ಕೆರ ಹಿಡಿದಿದೆ. ಇರುವ ಒಂದೇ ಒಂದು ಬಸ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರೆ ಹೊಟ್ಟೆಯೊಳಗಿನ ಹಿಟ್ಟು ಬಾಯಿಗೆ ಬರುತ್ತದೆ. ಕುಲುಕಾಟಕ್ಕೆ ಬಸ್ ನಲ್ಲಿ ಕುಳಿತವರು ಅತ್ತಿತ್ತ ವಾಲಾಡುವಂತಹ ಪರಿಸ್ಥಿತಿ ಇದೆ. ರಸ್ತೆಗೆ ಹಾಕಿದ್ದ ಜಲ್ಲಿ ಮೇಲೆದ್ದು ಸಂಚಾರಕ್ಕೆ ಕಿರಿಕಿರಿ ಉಂಟುಮಾಡುತ್ತದೆ. ದ್ವಿಚಕ್ರವಾಹನ, ಆಟೋಗಳಲ್ಲಿ ಹೋಗುವವರು ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಬಾಯಿಗೆ ಬಂದಂತೆ ಶಪಿಸುತ್ತಲೇ ಹೋಗುವುದು ಸಾಮಾನ್ಯ ವಾಗಿದೆ.
ಪಾವಗಡ ತಾಲೂಕಿನಲ್ಲಿ ನಾಲ್ಕು ಹೋಬಳಿಗಳಿದ್ದು ಕೆಲವು ಕಡೆ ಮಾತ್ರ ರಸ್ತೆಗಳು ಟಾರನ್ನು ಕಂಡಿವೆ. ಉಳಿದ ಕಡೆ ಸಾಕಷ್ಟು ಸಮಸ್ಯೆಗಳಿದ್ದರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ತಾಲೂಕಿನ ರಸ್ತೆಗಳನ್ನು ಅಬಿವೃದ್ಧಿಪಡಿಸಬೇಕು. ಶುದ್ದ ಕುಡಿಯುವ ನೀರನ್ನು ಎಲ್ಲಾ ಗ್ರಾಮಗಳಿಗೂ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟದಲ್ಲಿ ಜ್ಞಾನ ಪ್ರಸರಣ: ಗಮನ ಸೆಳೆದ ಕಿಸಾನ್ ಗ್ರಂಥಾಲಯಗಳು!


