Homeಕರ್ನಾಟಕಪಾವಗಡ ತಾಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆ: ಕೊರಕಲು ಬಿದ್ದ ರಸ್ತೆಗಳ ದುರಸ್ತಿಗೆ ಆಗ್ರಹ

ಪಾವಗಡ ತಾಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆ: ಕೊರಕಲು ಬಿದ್ದ ರಸ್ತೆಗಳ ದುರಸ್ತಿಗೆ ಆಗ್ರಹ

- Advertisement -
- Advertisement -

ಪಾವಗಡ ರಾಜ್ಯದ ಅತೀ ಹಿಂದುಳಿದ ತಾಲೂಕುಗಳಲ್ಲಿ ಒಂದು. ತುಮಕೂರು ಜಿಲ್ಲೆಯ ಉತ್ತರದ ಗಡಿ ಪಾವಗಡ. ಮೂರು ಕಡೆಯೂ ಆಂಧ್ರಪ್ರದೇಶದ ಗಡಿಗಳಿಂದ ಸುತ್ತುವರೆದಿರುವ ಪಾವಗಡ ಅಭಿವೃದ್ಧಿಯನ್ನೇನೂ ಕಂಡಿಲ್ಲ. ಜಿಲ್ಲೆಯಲ್ಲಿ ಅತ್ಯಂತ ನಿರ್ಲಕ್ಷಿತ ತಾಲೂಕು ಇದು. ಯಾರಿಗೂ ಬೇಡವಾದ ಕೂಸಿನಂತೆ. ಎಲ್ಲಾ ತಾಲೂಕುಗಳಿಗೆ ಹೇಮಾವತಿ ನೀರು ಕುಡಿಯಲು ಪೂರೈಕೆಯಾಗುತ್ತಿದ್ದರೆ ಈ ತಾಲೂಕಿಗೆ ಯಾವ ಮೂಲದಿಂದಲೂ ನೀರು ಇಲ್ಲ. ನೀರಾವರಿ ಸೌಲಭ್ಯವಿಲ್ಲ. ಮಳೆಯಾಶ್ರಿತ ಬೆಳೆಯೂ ಅಷ್ಟಕ್ಕಷ್ಟೇ. ಅಭಿವೃದ್ಧಿ ಮೂಲೆಗೆ ಸೇರಿದೆ. ಕೊರಕಲು ಬಿದ್ದ ರಸ್ತೆಗಳೇ ಇದಕ್ಕೆ ಸಾಕ್ಷಿಯಾಗಿ ನಿಂತಿವೆ.

ಹಲ್ಲುಗಳನ್ನು ನೋಡಿದರೆ ಸಾಕು ಇವರು ಪಾವಗಡದವರು ಎಂದು ಗುರುತಿಸಲಾಗುತ್ತಿದೆ. ಅಷ್ಟು ಪ್ರಸಿದ್ದಿ ಪಾವಗಡ. ಪ್ಲೋರೈಡ್ ನೀರು ಇಲ್ಲಿನ ಜನರನ್ನು ಜೀವಂತ ಶವಗಳನ್ನಾಗಿ ಮಾಡಿದೆ. ಇಂತೆಂಬ ಪಾಳು ನೆಲದಲ್ಲಿ ರಸ್ತೆಗಳೂ ಟಾರು ಕಂಡಿಲ್ಲ. ಕಿತ್ತುಹೋದ ರಸ್ತೆಗಳಲ್ಲೇ ವಾಹನ-ಜನ ಸಂಚಾರ ಸಾಗಿದೆ. ಜನರ ಗೋಳನ್ನು ಕೇಳೋರೇ ಇಲ್ಲ. ಜನಪ್ರತಿನಿಧಿಗಳು ಮೇಲ್ಜಾತಿಯವರ ಮರ್ಜಿಯಲ್ಲಿ ಕೆಲಸ ನಿರ್ವಹಿಸಬೇಕಾಗಿ ಬಂದಿದೆ.
ಪಾವಗಡ ಪ್ರದೇಶ ಡಾ.ನಂಜುಂಡಪ್ಪ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕು. ಅಭಿವೃದ್ಧಿಯನ್ನೇ ಕಾಣದ ಈ ತಾಲೂಕನ್ನು 370 ಜೆ ಕಲಂ ಅಡಿ ತಂದು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕಿತ್ತು. ಆದರೆ ಅದಾಗಲೇ ಇಲ್ಲ. ಜನಪ್ರನಿಧಿಗಳು ಬಂದ ಅನುದಾನದಲ್ಲಿ ಜೇಬು ಭರ್ತಿ ಮಾಡಿಕೊಳ್ಳುವುದು ಹೇಗೆ ಎಂದು ಚಿಂತಿಸಿದರು. ಕೋಟ್ಯಂತರ ಅನುದಾನ ಬಂದರೂ ಅದು ಎಲ್ಲಿ ಹೋಯಿತು ಎಂಬುದು ಮಾತ್ರ ನಿಗೂಢ. ಆದರೆ ದಾಖಲೆಗಳಲ್ಲಿ ಮಾತ್ರ ಹಣ ಖರ್ಚು ಮಾಡಲಾಗಿದೆ. ಅಭಿವೃದ್ಧಿ ಕಡತಗಳಲ್ಲಿ ಮಾತ್ರ ರಸ್ತೆಗಳು ಆಗಿವೆ ಎಂಬುದನ್ನು ಸಾರುತ್ತವೆ.

ಪಾವಗಡಕ್ಕೆ ಕೂಗಳತೆ ದೂರದಲ್ಲಿರುವ ವೆಂಕಟಾಪುರ ಗ್ರಾಮ ಪಂಚಾಯ್ತಿ ಕೇಂದ್ರ. ರಸ್ತೆಯನ್ನು ನೋಡಿದರೆ ಯಡಿಯೂರು ಸಿದ್ದಲಿಂಗೇಶ್ವರನೇ ಮೆಚ್ಚಬೇಕು. ವೆಂಕಟಾಪುರ-ಮಡಕಶಿರಾ ರಸ್ತೆ ಟಾರು ಕಂಡು ದಶಕವೇ ಕಳೆದಿದೆ. ಟಾರು ಕಿತ್ತುಹೋಗಿರುವುದರಿಂದ ಜಲ್ಲಿಯೇ ರಸ್ತೆಯ ಮೇಲಿದೆ. ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಂಚಾರ ಮಾಡುವುದೇ ದುಸ್ಥರವಾಗಿದೆ. ವೆಂಕಟಾಪುರದಿಂದ ಮಡಕಶಿರಾಕ್ಕೆ ನಿತ್ಯವೂ ನೂರಾರು ಜನರು ಪ್ರಯಾಣಿಸುತ್ತಾರೆ. ದಿನಸಿ, ಪೆಟ್ರೋಲ್, ಡಿಸೆಲ್, ತರಕಾರಿ ತರುವುದು ಅಲ್ಲಿಂದಲೇ. ಪಾವಗಡಕ್ಕೆ ಬರಬೇಕೆಂದರೆ ನಾಲ್ಕೈದು ಕಿಲೋ ಮೀಟರ್ ಹೆಚ್ಚು ದಾರಿ ಕ್ರಮಿಸಬೇಕು. ಹಾಗಾಗಿ ವೆಂಕಟಾಪುರ ಗ್ರಾಮಸ್ಥರು ಮಡಕಶಿರಾಕ್ಕೆ ಹೋಗಿ ಬರುವುದೇ ಹೆಚ್ಚು. ಎಕ್ಕೆದ್ದು ಹೋಗಿರುವ ರಸ್ತೆಯಲ್ಲಿ ರಾಜಕಾರಣಿಗಳಿಗೆ ಹಿಡಿಶಾಪ ಹಾಕುತ್ತಲೇ ದಾರಿ ಸವೆಸುವುದು ಮಾಮೂಲಿನ ಸಂಗತಿ.

ಪಾವಗಡಕ್ಕೆ ಹೋಲಿಸಿದರೆ ಪೆಟ್ರೋಲ್, ಡಿಸೆಲ್ ಬೆಲೆ ಆಂದ್ರಪ್ರದೇಶದಲ್ಲಿ ಮೂರು ರೂಪಾಯಿ ಕಡಿಮೆ ಇದೆ. ಆ ಕಾರಣಕ್ಕಾಗಿಯೇ ದ್ವಿಚಕ್ರವಾಹನ ಸವಾರರು, ಟ್ಯಾಕ್ಟರ್ ಮಾಲಿಕರು, ಆಟೋಚಾಲಕರು ಮಡಕಶಿರಾಕ್ಕೆ ಬರುವುದು ರೂಢಿಯಲ್ಲಿದೆ. ರಸ್ತೆ ಕೆಟ್ಟು ಹೋಗಿದ್ದರೂ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು, ಪಿಡಿಒ ಮತ್ತು ಇಲ್ಲಿನ ಶಾಸಕರು ತಲೆಗೆ ಹಾಕಿಕೊಂಡಿಲ್ಲ.

ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ 14 ಲಕ್ಷ ರೂ ಬಿಡುಗಡೆ ಆಗಿತ್ತು. ಆದರೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಿಡಿಒ ಶಾಮೀಲಾಗಿ ಹಣವನ್ನು ಲೂಟಿ ಮಾಡಿ ನೆಪಕ್ಕೆ ಮಾತ್ರ ಕಡಿಮೆ ನೀರು ತುಂಬುವ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದೂ ಕೂಡ ಕಳಪೆ ಕಾಮಗಾರಿಯಾಗಿದೆ. ಅಧಿಕಾರಿ ವರ್ಗ ಸ್ಮಾರ್ಟ್ ಆಗುತ್ತಿದೆಯೇ ಹೊರತು ರಸ್ತೆಗಳು ಮಾತ್ರ ಅಭಿವೃದ್ಧಿ ಕಾಣುತ್ತಿಲ್ಲ ಎಂದು ವೆಂಕಟಾಪುರದ ಯುವ ಮುಖಂಡ ಈ ಶಿವಣ್ಣ ದೂರಿದ್ದಾರೆ.

ವೆಂಕಟಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದೆ. 24X7 ಸೇವೆ ನೀಡಲಾಗುವುದು ಎಂಬ ಫಲಕ ಎದ್ದುಕಾಣುತ್ತದೆ. ಆದರೆ ಅದು ನೆಪಮಾತ್ರಕ್ಕೆ ಹಾಕಿರುವ ಫಲಕ. ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ತೆರೆಯುವುದೇ ಅಪರೂಪ. ವೈದ್ಯರು ಬರುವುದೇ ದುಸ್ಥರ. ಇಲ್ಲಿನ ಸಿಬ್ಬಂದಿ ಖಾಸಗಿ ಕ್ಲಿನಿಕ್  ವೈದ್ಯರೊಂದಿಗೆ ಶಾಮೀಲಾಗಿ ಆಸ್ಪತ್ರೆಗೆ ಬರುತ್ತಿಲ್ಲ. ಬಂದರೂ ಸರಿಯಾಗಿ ನೋಡುವುದಿಲ್ಲ. ಸರ್ಕಾರಿ ವೇತನ ಪಡೆಯುವ ವೈದ್ಯರು ಖಾಸಗಿ ವೈದ್ಯರಿಂದಲೂ ಮಾಮೂಲಿ ಸ್ವೀಕರಿಸುತ್ತಾರೆ. ಹಾಗಾಗಿ  ಖಾಸಗಿ ಕ್ಲಿನಿಕ್ ಗಳಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾರೂ ಇರುವುದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಸಬಾ ಹೋಬಳಿ ವ್ಯಾಪ್ತಿಯ ಗುಂಡಾರ್ಲಹಳ್ಳಿ-ವೀರ್ಲಗೊಂದಿ-ಕನ್ನಡಮೇಡಿ ರಸ್ತೆ ಕೆಟ್ಟು ಕೆರ ಹಿಡಿದಿದೆ. ಇರುವ ಒಂದೇ ಒಂದು ಬಸ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರೆ ಹೊಟ್ಟೆಯೊಳಗಿನ ಹಿಟ್ಟು ಬಾಯಿಗೆ ಬರುತ್ತದೆ. ಕುಲುಕಾಟಕ್ಕೆ ಬಸ್ ನಲ್ಲಿ ಕುಳಿತವರು ಅತ್ತಿತ್ತ ವಾಲಾಡುವಂತಹ ಪರಿಸ್ಥಿತಿ ಇದೆ. ರಸ್ತೆಗೆ ಹಾಕಿದ್ದ ಜಲ್ಲಿ ಮೇಲೆದ್ದು ಸಂಚಾರಕ್ಕೆ ಕಿರಿಕಿರಿ ಉಂಟುಮಾಡುತ್ತದೆ. ದ್ವಿಚಕ್ರವಾಹನ, ಆಟೋಗಳಲ್ಲಿ ಹೋಗುವವರು ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಬಾಯಿಗೆ ಬಂದಂತೆ ಶಪಿಸುತ್ತಲೇ ಹೋಗುವುದು ಸಾಮಾನ್ಯ ವಾಗಿದೆ.

ಪಾವಗಡ ತಾಲೂಕಿನಲ್ಲಿ ನಾಲ್ಕು ಹೋಬಳಿಗಳಿದ್ದು ಕೆಲವು ಕಡೆ ಮಾತ್ರ ರಸ್ತೆಗಳು ಟಾರನ್ನು ಕಂಡಿವೆ. ಉಳಿದ ಕಡೆ ಸಾಕಷ್ಟು ಸಮಸ್ಯೆಗಳಿದ್ದರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ತಾಲೂಕಿನ ರಸ್ತೆಗಳನ್ನು ಅಬಿವೃದ್ಧಿಪಡಿಸಬೇಕು. ಶುದ್ದ ಕುಡಿಯುವ ನೀರನ್ನು ಎಲ್ಲಾ ಗ್ರಾಮಗಳಿಗೂ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ರೈತ ಹೋರಾಟದಲ್ಲಿ ಜ್ಞಾನ ಪ್ರಸರಣ: ಗಮನ ಸೆಳೆದ ಕಿಸಾನ್ ಗ್ರಂಥಾಲಯಗಳು!

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...