ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್ ಬಂಡವಾಳಶಾಹಿಗಳು ಕೆಲಸದ ಅವಧಿಯನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಉದ್ಯೋಗಿಗಳನ್ನು ಇನ್ನಷ್ಟು ಸಂಕಷ್ಟಕ್ಕೆ ನೂಕಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿಯೇ ಸರ್ಕಾರಗಳು ಕೂಡ ವರ್ತಿಸುತ್ತಿವೆ.
ಇಂತಹ ಸಂದರ್ಭದಲ್ಲಿ ದೇಶದ ಸಂಸತ್ತಿನಲ್ಲಿ ಮಹತ್ವದ ಮಸೂದೆಯೊಂದು ಮಂಡನೆಯಾಗಿದೆ. ಅದೇ ‘ಸಂಪರ್ಕ ಕಡಿತ ಹಕ್ಕು ಮಸೂದೆ’ (Right to Disconnect Bill). ಅಧಿಕೃತ ಕೆಲಸದ ಸಮಯದ ನಂತರ ಮತ್ತು ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಸಂದೇಶಗಳು ಮತ್ತು ಇಮೇಲ್‌ಗಳನ್ನು ನಿರಾಕರಿಸುವ ಕಾನೂನುಬದ್ಧ ಹಕ್ಕನ್ನು ಉದ್ಯೋಗಿಗಳಿಗೆ ನೀಡುವ ಈ ಮಹತ್ವದ ಮಸೂದೆಯನ್ನು ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಶುಕ್ರವಾರ (ಡಿಸೆಂಬರ್ 5) ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?
ಅಧಿಕೃತ ಕೆಲಸದ ಸಮಯದ ನಂತರ ಮತ್ತು ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಸಂದೇಶಗಳು ಮತ್ತು ಇಮೇಲ್‌ಗಳಿಗೆ ಪ್ರತಿಕ್ರಿಯಿಸುವಂತೆ ಉದ್ಯೋಗಿಗಳನ್ನು ಒತ್ತಾಯಿಸಬಾರದು ಎಂದು ಈ ಮಸೂದೆ ಹೇಳುತ್ತದೆ. ಶಿಸ್ತು ಕ್ರಮದ ಭಯವಿಲ್ಲದೆ, ಕರೆಗಳು ಮತ್ತು ಇಮೇಲ್‌ಗಳನ್ನು ನಿರಾಕರಿಸುವ ಹಕ್ಕನ್ನು ಇದು ಪ್ರತಿಯೊಬ್ಬ ಕೆಲಸಗಾರರಿಗೆ ನೀಡುತ್ತದೆ.
ಉದ್ಯೋಗಿಗಳು ಕೆಲಸದ ಸಮಯದ ನಂತರ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಇಮೇಲ್‌ಗಳು ಅಥವಾ ಸಂದೇಶಗಳಿಗೆ ಉತ್ತರಿಸುವ ಅಗತ್ಯವಿಲ್ಲ. ಪ್ರತಿಕ್ರಿಯಿಸಲು ನಿರಾಕರಿಸಿದ್ದಕ್ಕಾಗಿ ಯಾವುದೇ ಉದ್ಯೋಗಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತಿಲ್ಲ. ಈ ನಿಯಮ ಫೋನ್ ಕರೆಗಳು, ಪಠ್ಯ ಸಂದೇಶಗಳು, ಇಮೇಲ್‌ಗಳು, ವಿಡಿಯೋ ಕರೆಗಳು ಮುಂತಾದ ಎಲ್ಲಾ ರೀತಿಯ ಸಂವಹನಕ್ಕೂ ಅನ್ವಯಿಸುತ್ತದೆ. ಅಗತ್ಯವಿದ್ದರೆ, ಉದ್ಯೋಗದಾತರು ಮತ್ತು ಉದ್ಯೋಗಿಗಳು ತುರ್ತು ಸಂಪರ್ಕ ನಿಯಮಗಳ ಬಗ್ಗೆ ಪರಸ್ಪರ ಪೂರ್ವ ಒಪ್ಪಂದ ಮಾಡಿಕೊಂಡಿರಬೇಕು. ಕಾನೂನು ಉಲ್ಲಂಘಿಸುವ ಸಂಸ್ಥೆಗಳಿಗೆ ಒಟ್ಟು ಉದ್ಯೋಗಿ ಸಂಭಾವನೆಯ ಶೇಕಡಾ 1 ರಷ್ಟು ದಂಡ ವಿಧಿಸಲು ಮಸೂದೆ ಪ್ರಸ್ತಾಪಿಸಿದೆ.
ತುರ್ತು ನಿಯಮಗಳು
ನೌಕರರ ವೈಯಕ್ತಿಕ ಸಮಯವನ್ನು ರಕ್ಷಿಸುವುದರ ಜೊತೆಗೆ, ನಿಜವಾದ ತುರ್ತು ಪರಿಸ್ಥಿತಿಗಳನ್ನು ಪರಿಹರಿಸಲು ಒಂದು ಕಾರ್ಯವಿಧಾನವನ್ನು ಸಹ ಮಸೂದೆ ಪ್ರಸ್ತಾಪಿಸುತ್ತದೆ. ಕೆಲಸದ ಸಮಯದ ನಂತರ ನೌಕರರನ್ನು ಸಂಪರ್ಕಿಸಲು ಪರಸ್ಪರ ಒಪ್ಪಿದ ನಿಯಮಗಳನ್ನು ರೂಪಿಸಲು ಸಮಿತಿಯನ್ನು ಸ್ಥಾಪಿಸಲು ಇದು ಸಲಹೆ ನೀಡುತ್ತದೆ.
ಉದ್ಯೋಗದಾತರು ಮತ್ತು ಉದ್ಯೋಗಿ ಪರಸ್ಪರ ಪೂರ್ವ ಮಾತುಕತೆ ನಡೆಸಿ ಒಪ್ಪಿಕೊಂಡ ಸಮಯದ ಅವಧಿಯಲ್ಲಿ ಯಾವುದೇ ರೀತಿಯ ಸಂವಹನದ ಮೂಲಕ ಸಂಪರ್ಕಿಸಬಹುದು. ನೌಕರರು ಕಚೇರಿ ಸಮಯವನ್ನು ಮೀರಿ ಕೆಲಸ ಮಾಡುತ್ತಿದ್ದರೆ, ಅವರೊಂದಿಗೆ ಸಂವಹನ ನಡೆಸಬಹುದು. ಆದರೆ, ಅವರು ಸಾಮಾನ್ಯ ವೇತನ ದರದಲ್ಲಿ ಅಧಿಕಾವಧಿಗೆ ವೇತನ ಪಡೆಯುತ್ತಿರಬೇಕು ಎಂದು ಮಸೂದೆ ಹೇಳುತ್ತದೆ.
ಈ ಮಸೂದೆಯ ಅಗತ್ಯವೇನು?
ಡಿಜಿಟಲ್ ಸಂವಹನ ಸಾಧನಗಳಿಂದ ಹೆಚ್ಚಿನ ಲಾಭವಿದೆ. ಆದರೆ, ಅವುಗಳ ಮೂಲಕ ಉದ್ಯೋಗಿಗಳು ಕೆಲಸದ ಅವಧಿಯ ಹೊರತಾಗಿಯೂ ನಿರಂತರ ಸಂಪರ್ಕದಲ್ಲಿ ಇರಬೇಕು ಎಂಬ ಸಂಸ್ಕೃತಿ ಬೆಳೆದಿದೆ. ಇದರಿಂದ ಉದ್ಯೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ನಿದ್ರಾಹೀನತೆ, ಒತ್ತಡ ಮತ್ತು ಮಾನಸಿಕ ಸುಸ್ತು, ಹಾಗೂ ಸಂದೇಶಗಳಿಗೆ ತಕ್ಷಣ ಪ್ರತಿಕ್ರಿಯಿಸಬೇಕೆಂಬ ಟೆಲಿಪ್ರೆಶರ್ ಅವುಗಳಲ್ಲಿ ಪ್ರಮುಖವಾಗಿವೆ. ಜೊತೆಗೆ, ಕೆಲಸಕ್ಕೆ ಸಂಬಂಧಿಸಿದ ಸಂದೇಶಗಳನ್ನು ನಿರಂತರವಾಗಿ ಪರಿಶೀಲಿಸುವ ಅಭ್ಯಾಸದಿಂದ ‘ಮಾಹಿತಿ ಅತಿಭಾರ’ (info-obesity) ಉಂಟಾಗುತ್ತಿದೆ ಎಂದು ಮಸೂದೆ ಹೇಳುತ್ತದೆ.
ಸುಪ್ರಿಯಾ ಸುಳೆ ಅವರು 2019ರಲ್ಲೂ ಇದೇ ರೀತಿಯ ಮಸೂದೆಯನ್ನು ಮಂಡಿಸಿದ್ದರು. ಇದೀಗ ಡಿಜಿಟಲ್ ಸಂವಹನ ಸಾಧನಗಳ ಮೂಲಕ ಉದ್ಯೋಗಿಗಳ ಮೇಲೆ ಹೇರುತ್ತಿರುವ ಒತ್ತಡವನ್ನು ಇನ್ನಷ್ಟು ವಿವರಿಸಿ ಮತ್ತು ಈ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿ ಹೊಸ ಮಸೂದೆ ಮಂಡಿಸಿದ್ದಾರೆ. ಭಾರತ ಪ್ರಸ್ತುತ ಜಗತ್ತಿನಲ್ಲೇ ಹೆಚ್ಚು ಬೇಡಿಕೆಯಿರುವ ವಾರಕ್ಕೆ 48 ಗಂಟೆಗಳ ಕೆಲಸದ ಮಿತಿಯನ್ನು ಅನುಸರಿಸುತ್ತಿದೆ.


