ತೆಲಂಗಾಣದಲ್ಲಿ ಟಿಎಸ್‌ಆರ್‌ಟಿಸಿ ( ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ) ಮತ್ತು ಸರ್ಕಾರದ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಆರ್‌ಟಿಸಿ ಯನ್ನು ಸರ್ಕಾರದೊಳಗೆ ವಿಲೀನಗೊಳಿಸಬೇಕು ಮತ್ತು ಚಾಲಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ೪೮ ಸಾವಿರ ಮಂದಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಸತತ ೨೦ ದಿನಗಳಿಂದ ಅಂದರೆ ಅಕ್ಟೋಬರ್ ೫ರಿಂದ ಎಲ್ಲಾ ಆರ್‌ಟಿಸಿ ಚಾಲಕರು ಬೀದಿಗಿಳಿದು ಧರಣಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಆರ್‌ಟಿಸಿ ನಡೆಸುತ್ತಿರುವ ಹೋರಾಟಕ್ಕೆ ಸಾಥ್ ನೀಡಿವೆ. ಆದರೆ ಸಮಸ್ಯೆ ಆಲಿಸಿ, ಸೂಕ್ಷ್ಮವಾಗಿ ವಿಷಯವನ್ನು ಇತ್ಯರ್ಥಗೊಳಿಸಬೇಕಿದ್ದ ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ್ ರಾವ್ ದುರ್ವರ್ತನೆ, ಅಹಂಕಾರದ ಮಾತುಗಳನ್ನಾಡಿದ್ದಾರೆ.
ಹುಜುರ್‌ನಗರ ಉಪಚುನಾವಣೆ ಗೆಲುವಿನ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಟಿಎಸ್‌ಆರ್‌ಟಿಸಿ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಆರ್‌ಟಿಸಿ ದಿವಾಳಿಯಾಗಿದ್ದು, ಇನ್ನೇನು ಕೆಲ ದಿನಗಳಲ್ಲಿ ಮುಚ್ಚಿ ಹೋಗಲಿದೆ. ಆರ್‌ಟಿಸಿಯನ್ನು ಬಂದ್ ಮಾಡುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಪ್ರತಿಭಟನಾಕಾರರೇ ಇದಕ್ಕೆ ಉತ್ತಮ ಅವಕಾಶ ಒದಗಿಸಿದ್ದಾರೆ. ಇದೇ ಕೊನೆಯ ಪ್ರತಿಭಟನೆಯೊಂದಿಗೆ ಆರ್‌ಟಿಸಿ ಮುಕ್ತಿ ಹೊಂದಲಿದೆ’ ಎಂದು ಅಪಹಾಸ್ಯದ ಮಾತುಗಳನ್ನಾಡಿದ್ದಾರೆ.
ಆರ್‌ಟಿಸಿ ಮತ್ತು ವಿಪಕ್ಷಗಳ ವಿರುದ್ಧ ಕೆಸಿಆರ್ ವಾಗ್ದಾಳಿ ನಡೆಸಿದರು. ’ಸದ್ಯದ ಪರಿಸ್ಥಿತಿಯ ಲಾಭ ಪಡೆದು ಚಾಲಕರಿಗೆ ಪ್ರಚೋದನೆ ನೀಡಲಾಗುತ್ತಿದೆ. ವೋಟ್ ಬ್ಯಾಂಕ್‌ಗಾಗಿ ಇಷ್ಟೆಲ್ಲಾ ಮಾಡಲಾಗುತ್ತಿದೆ. ಟ್ರೇಡ್ ಯೂನಿಯನ್ ನಾಯಕರು, ಮುಗ್ಧ ನೌಕರರು ಮತ್ತು ಅವರ ಕುಟುಂಬದ ಜತೆ ಚೆಲ್ಲಾಟವಾಡುತ್ತಿದ್ದಾರ’ ಎಂದರು.
’ಈಗಾಗಲೇ ಆರ್ಥಿಕ ಕುಸಿತ ಉಂಟಾಗಿದೆ. ನೌಕರರಿಗೆ ನೀಡಲು ಹಣವಿಲ್ಲ. ಧರಣಿ ನಿರತರ ಸಂಬಳವನ್ನು ಕತ್ತರಿಸಲಾಗುವುದು. ಅಲ್ಲದೇ ಮುಂದೆ ಅವರನ್ನು ಬಿಡಿಸಿಕೊಂಡು ಬರಲೂ ಸಹ ಹಣವಿಲ್ಲದಂತಾಗಬಹುದು. ಹಬ್ಬದ ದಿನಗಳಲ್ಲಿ ಈ ರೀತಿ ಪ್ರತಿಭಟನೆ ನಡೆಸುತ್ತಿರುವುದರಿಂದ ಆರ್‌ಟಿಸಿ ಗೆ ೧೨೫ ರಿಂದ ೧೫೦ ಕೋಟಿ ರೂಪಾಯಿ ನಷ್ಟವಾಗಲಿದೆ’ ಎಂದು ಹೇಳಿದರು.
ಇತ್ತ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ನಡೆಸುತ್ತಿರುವವರಲ್ಲಿ ಇಬ್ಬರು ನೌಕರರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಸಿಆರ್ ಪ್ರತಿಕ್ರಿಯೆಗೆ ಟಿಎಸ್‌ಆರ್‌ಟಿಸಿ ಮತ್ತು ಜೆಎಸಿ (ಜಂಟಿ ಕ್ರಿಯಾ ಸಮಿತಿ)ಯ ಸಂಚಾಲಕ ಅಶ್ವತ್ಥಾಮ್ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿ್ದ್ದಾರೆ. ’ಕೆಸಿಆರ್ ದುರ್ವರ್ತನೆ ಮಿತಿ ಮೀರಿದೆ. ಆರ್‌ಟಿಸಿ ಯಾರಪ್ಪನ ಸೊತ್ತಲ್ಲ. ಕೆಸಿಆರ್ ಮಾತು ಖಂಡನಾರ್ಹ ಮತ್ತು ಪ್ರತಿಭಟನಾನಿರತರಿಗೆ ನೋವುಂಟು ಮಾಡಿದೆ. ೧೯೩೨ರಿಂದ ಆರ್‌ಟಿಸಿ ಜಾರಿಯಲ್ಲಿದೆ. ಯಾರು ಕೊನೆಯಾಗುತ್ತಾರೆ ಎಂಬುದನ್ನು ಜನ ನಿರ್ಧರಿಸುತ್ತಾರೆ’ ಎಂದು ಅಶ್ವತ್ಥಾಮ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


