ಕೇರಳ ಸರ್ಕಾರ ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿದ್ದ ವಿವಾದಾತ್ಮಕ ಪೊಲೀಸ್ ಕಾನೂನು ತಿದ್ದುಪಡಿಯನ್ನು ಹಿಂಪಡೆಯಲಾಗಿದ್ದು, ತಿದ್ದುಪಡಿಯನ್ನು ಜಾರಿಗೆ ತರುವ ಉದ್ದೇಶವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ವಿವರವಾದ ಚರ್ಚೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ತಿದ್ದುಪಡಿಯ ವಿರುದ್ಧ ಸಿಪಿಎಂ ಕೇಂದ್ರ ನಾಯಕತ್ವವು ವಿರೋಧ ವ್ಯಕ್ತಪಡಿಸಿದ ನಂತರ ಕೇರಳ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಕೇರಳ ಸರ್ಕಾರ ಮಾಡಿದ ತಿದ್ದುಪಡಿ ಸೆಕ್ಷನ್ 118 ಎ ಅನ್ನು ಮರುಪರಿಶೀಲಿಸುವಂತೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಒತ್ತಾಯಿಸಿದ್ದರು.
ಇದನ್ನೂ ಓದಿ: ಪೊಲೀಸ್ ಕಾಯ್ದೆ ತಿದ್ದುಪಡಿಗೆ ಸಿಪಿಎಂ ಕೇಂದ್ರ ಸಮಿತಿ ವಿರೋಧ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಯ ಪೂರ್ಣ ಪಠ್ಯ
ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಘನತೆಯನ್ನು ಪ್ರಶ್ನಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಅದರ ಹೊರಗೆ ವ್ಯಾಪಕವಾಗಿ ನಡೆಯುವ ಅಪಪ್ರಚಾರವನ್ನು ತಡೆಯುವ ಪ್ರಯತ್ನವಾಗಿ ಕೇರಳ ಸರ್ಕಾರ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಾನಹಾನಿಕರ, ಸುಳ್ಳು ಮತ್ತು ಅಶ್ಲೀಲ ಪ್ರಚಾರದ ವಿರುದ್ಧ ಸಮಾಜದ ವಿವಿಧ ವರ್ಗಗಳಿಂದ ಟೀಕೆಗಳು ಮತ್ತು ದೂರುಗಳಿವೆ. ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ದಾಳಿಗಳ ವಿರುದ್ದ ಸಮಾಜದಲ್ಲಿ ದೊಡ್ಡ ಪ್ರತಿಭಟನೆಗಳು ನಡೆಯುತ್ತಿವೆ. ಇದು ಕುಟುಂಬ ಸಂಬಂಧಗಳ ಮೇಲೆ ಪರಿಣಾಮ ಬೀರಿ, ಬಲಿಪಶುಗಳ ಆತ್ಮಹತ್ಯೆಗೆ ಕೂಡಾ ಕಾರಣವಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಧ್ಯಮ ಮುಖ್ಯಸ್ಥರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಪೊಲೀಸ್ ಕಾಯ್ದೆಗೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಯಿತು.
ಇದನ್ನೂ ಓದಿ: ಕೊರೊನಾ ಬಿಕ್ಕಟ್ಟಿನ ನಡುವೆಯೂ 2 ತಿಂಗಳಲ್ಲಿ 61,290 ಜನರಿಗೆ ಉದ್ಯೋಗ ನೀಡಿದ ಕೇರಳ!

ತಿದ್ದುಪಡಿಯನ್ನು ಘೋಷಣೆ ಮಾಡುವುದರೊಂದಿಗೆ, ವಿವಿಧ ಭಾಗಗಳಿಂದ ವಿಭಿನ್ನ ಅಭಿಪ್ರಾಯಗಳು ಹುಟ್ಟಿಕೊಂಡಿದೆ. ಎಡಪಕ್ಷಗಳ ಬೆಂಬಲಿಗರು ಸೇರಿದಂತೆ ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಹೋರಾಡುತ್ತಿರುವವರು ಕೂಡಾ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕಾನೂನನ್ನು ತಿದ್ದುಪಡಿ ಮಾಡುವುದಿಲ್ಲ ಹಾಗೂ ಈ ಬಗ್ಗೆ ವಿವರವಾದ ಚರ್ಚೆಗಳು ವಿಧಾನಸಭೆಯಲ್ಲಿ ನಡೆಯಲಿದ್ದು, ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಿದ ನಂತರ ಈ ಕುರಿತು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ಸಾಮಾಜಿಕ ಜಾಲತಾಣದಲ್ಲಿ ಹಾಗೂ ಹೊರಗೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವೀಯ ಮೂಲ ತತ್ವದ ವಿರುದ್ದ ಅಪಪ್ರಚಾರದಲ್ಲಿ ತೊಡಗಿರುವವರು ಅದರಿಂದ ದೂರವಿರುವಂತೆ ಮತ್ತು ಸಮಾಜವು ಈ ವಿಷಯದ ಬಗ್ಗೆ ಜಾಗರೂಕರಾಗಿರಲು ನಾನು ವಿನಂತಿಸುತ್ತೇನೆ.
ಇದನ್ನೂ ಓದಿ: ಜೈಲು ಖೈದಿಗಳ ಮಕ್ಕಳ ಶಿಕ್ಷಣಕ್ಕೆ 20 ಲಕ್ಷ ಮೀಸಲಿಟ್ಟ ಕೇರಳ ಸರ್ಕಾರ!
ರಾಜ್ಯ ಸರ್ಕಾರ ಈ ಕಾನೂನಿನ ಮರೆಯಲ್ಲಿ ಮಾಧ್ಯಮ ಸ್ವಾತಂತ್ಯ್ರವನ್ನೇ ಕಿತ್ತುಕೊಳ್ಳಲು ಹೊರಟಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಅಷ್ಟೇ ಅಲ್ಲದೆ ತಿದ್ದುಪಡಿಯನ್ನು ವಕೀಲರುಗಳು ಕೂಡಾ ತೀವ್ರ ಟೀಕೆಗೆ ಗುರಿಪಡಿಸಿದ್ದರು. ಅಲ್ಲದೆ, ಈ ಕಾನೂನು ವ್ಯಕ್ತಿ ಸ್ವಾತಂತ್ಯ್ರಕ್ಕೆ ಹಾನಿ ಮಾಡುತ್ತದೆ ಎಂದು ಸುಪ್ರೀಂಕೋರ್ಟ್ ಈ ಹಿಂದೆ ದುರ್ಬಲಗೊಳಿಸಿದ ಕಾನೂನಾದ 118 ಡಿ ಮತ್ತು 66 ಎ ಸೆಕ್ಷನ್‌ಗಿಂತಲೂ ಇದು ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದ ಸಿಪಿಎಂ ಕೇಂದ್ರ ನಾಯಕತ್ವ ಮರುಪರಿಶೀಲಿಸುವಂತೆ ಒತ್ತಾಯಿಸಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ, ಬೆದರಿಕೆ, ಮಾನಹಾನಿಕರ, ವಿವಾದಿತ ಪೋಸ್ಟ್ ಹಾಕುವುದರ ವಿರುದ್ಧ ಕೇರಳ ಸರ್ಕಾರ ನಿನ್ನೆ ಸುಗ್ರಿವಾಜ್ಞೆ ಹೊರಡಿಸಿದ್ದು, ಕಾನೂನಿಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಹಿ ಮಾಡಿ ಅನುಮೋದನೆ ನೀಡಿದ್ದರು.
ಇದನ್ನೂ ಓದಿ: ಕೇರಳ: ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗೆ 5 ವರ್ಷ ಜೈಲು!


