ಕೇರಳ ಪೊಲೀಸ್ ಕಾಯ್ದೆಗೆ 118 (ಎ) ಎಂಬ ಹೊಸ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿರುವ LDF ಸರ್ಕಾರದ ನಿರ್ಧಾರವನ್ನು ಸಿಪಿಎಂ ಕೇಂದ್ರ ನಾಯಕತ್ವವು ವಿರೋಧಿಸಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಪೊಲೀಸ್ ಕಾಯ್ದೆಯ ಸೆಕ್ಷನ್ 118 ಎ ಅನ್ನು ಕೇರಳ ಸರ್ಕಾರ ಪರಿಷ್ಕರಿಸಬೇಕೆಂದು ಒತ್ತಾಯಿಸಿದ್ದಾರೆ.
ಆದರೆ ಕೇರಳ ಮುಖ್ಯಮಂತ್ರಿ ಕಾನೂನು ದುರುಪಯೋಗವಾಗುವುದಿಲ್ಲ ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದಾಗ್ಯೂ, ವ್ಯಕ್ತಿ ಸ್ವಾತಂತ್ಯ್ರಕ್ಕೆ ಹಾನಿ ಮಾಡುತ್ತದೆ ಎಂದು ಸುಪ್ರೀಂಕೋರ್ಟ್ ಈ ಹಿಂದೆ ದುರ್ಬಲಗೊಳಿಸಿದ ಕಾನೂನಾದ 118 ಡಿ ಮತ್ತು 66 ಎ ಸೆಕ್ಷನ್‌ಗಿಂತಲೂ ಇದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕೇಂದ್ರ ನಾಯಕತ್ವ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗೆ 3 ವರ್ಷ ಜೈಲು!
ವ್ಯಕ್ತಿಯೊಬ್ಬನನ್ನು ಅವಮಾನಿಸಲಾಗಿದೆ ಎಂಬ ದೂರು ಬಂದ ಕೂಡಲೆ ವಾರಂಟ್ ಸಹ ನೀಡದೆ ಆರೋಪಿಗಳನ್ನು ಪೊಲೀಸರು ಬಂಧಿಸಲು ಹಾಗೂ ಅಪರಾಧ ಸಾಬೀತಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಈ ತಿದ್ದುಪಡಿ ಅನುಮತಿ ನೀಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನಿಂದನೆ, ಬೆದರಿಕೆ, ಮಾನಹಾನಿಕರ, ವಿವಾದಿತ ಪೋಸ್ಟ್ ಹಾಕುವುದರ ವಿರುದ್ಧ ಈ ಕಾನೂನನ್ನು ತಿದ್ದುಪಡಿ ಮಾಡಲಾಗಿದ್ದರೂ, ಅಧಿಸೂಚನೆಯು ಎಲ್ಲಾ ರೀತಿಯ “ಸಂವಹನ ಮಾಧ್ಯಮ”ಗಳನ್ನು ಒಳಗೊಂಡಿದೆ.
ಈ ಕಾನೂನಿನ ಮರೆಯಲ್ಲಿ ಮಾಧ್ಯಮ ಸ್ವಾತಂತ್ಯ್ರವನ್ನೇ ಕಿತ್ತುಕೊಳ್ಳಲು ಸರ್ಕಾರ ಹೊರಟಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ. ಅಷ್ಟೇ ಅಲ್ಲದೆ ತಿದ್ದುಪಡಿಯನ್ನು ವಕೀಲರುಗಳು ಕೂಡಾ ತೀವ್ರ ಟೀಕೆಗೆ ಗುರಿಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ, ಬೆದರಿಕೆ, ಮಾನಹಾನಿಕರ, ವಿವಾದಿತ ಪೋಸ್ಟ್ ಹಾಕುವುದರ ವಿರುದ್ಧ ಕೇರಳ ಸರ್ಕಾರ ನಿನ್ನೆ ಸುಗ್ರಿವಾಜ್ಞೆ ಹೊರಡಿಸಿದ್ದು, ಕಾನೂನಿಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಹಿ ಮಾಡಿ ಅನುಮೋದನೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ಬಿಕ್ಕಟ್ಟಿನ ನಡುವೆಯೂ 2 ತಿಂಗಳಲ್ಲಿ 61,290 ಜನರಿಗೆ ಉದ್ಯೋಗ ನೀಡಿದ ಕೇರಳ!