Homeಮುಖಪುಟಕೇರಳ: ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗೆ 5 ವರ್ಷ ಜೈಲು!

ಕೇರಳ: ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗೆ 5 ವರ್ಷ ಜೈಲು!

ಕೊರೊನಾ ಪ್ರಾರಂಭವಾದಾಗಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಅಪರಾಧಗಳು, ನಕಲಿ ಪ್ರಚಾರ ಮತ್ತು ದ್ವೇಷದ ಮಾತುಗಳ ಹೆಚ್ಚಳವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ

- Advertisement -
- Advertisement -

ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ, ಬೆದರಿಕೆ, ಮಾನಹಾನಿಕರ, ವಿವಾದಿತ ಪೋಸ್ಟ್ ಹಾಕುವುದರ ವಿರುದ್ಧ ಕೇರಳ ರಾಜ್ಯ ಸರ್ಕಾರ ಕಠಿಣ ಸುಗ್ರೀವಾಜ್ಞೆಗೆ ಜಾರಿ ಮಾಡಿದೆ. ಈ ಕಾನೂನಿಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇಂದು ಸಹಿ ಮಾಡಿ ಅನುಮೋದನೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರಮಣಕಾರಿ, ಬೆದರಿಕೆ, ಅವಮಾನಕರ ಹೇಳಿಕೆ ನಿಡುವುದು, ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದರ ವಿರುದ್ಧ ಜೈಲು ಶಿಕ್ಷೆ ವಿಧಿಸುವ ಕೇರಳ ಪೊಲೀಸ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಕಠಿಣ ಸುಗ್ರೀವಾಜ್ಞೆ ಜಾರಿಯಾಗಿದೆ.

ಕೇರಳ ಪೊಲೀಸ್ ಕಾಯ್ದೆಯಲ್ಲಿ 118 (ಎ) ಎಂಬ ಹೊಸ ವಿಭಾಗವನ್ನು ಒಳಗೊಂಡಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ರಾಜಭವನ ಶನಿವಾರ ದೃಢಪಡಿಸಿದೆ. ಈ ಕಾಯ್ದೆ ಅನ್ವಯ ಸೋಷಿಯಲ್ ಮೀಡಿಯಾಗಳಲ್ಲಿ ಬೆದರಿಕೆ, ನಿಂದನೀಯ, ಅವಮಾನಕರ ಅಥವಾ ಮಾನಿಹಾನಿಕರವಾಗಿ ನಡೆದುಕೊಂಡವರಿಗೆ 5 ವರ್ಷ ಜೈಲು ಶಿಕ್ಷೆ ಅಥವಾ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇಲ್ಲ ಎರಡನ್ನೂ ವಿಧಿಸುವ ಅಧಿಕಾರ ನ್ಯಾಯಾಲಯಕ್ಕೆ ಇರುತ್ತದೆ.

ಇದನ್ನೂ ಓದಿ: ಯುಪಿ ಸರ್ಕಾರ ಬಂಧಿಸಿದ ಕೇರಳದ ಪತ್ರಕರ್ತನಿಗೆ ಮಧ್ಯಂತರ ಜಾಮೀನು ನಿರಾಕರಿಸಿದ ಸುಪ್ರೀಂ!

ಕಾಯಿದೆಯ 118 (ಡಿ) ಸೆಕ್ಷನ್ ವಿರುದ್ಧ 2015 ರಲ್ಲಿ ಸುಪ್ರೀಂ ಕೋರ್ಟ್‌ಗೆ ತೆರಳಿದ ಕೇರಳ ಮೂಲದ ವಕೀಲ ಅನೂಪ್ ಕುಮಾರನ್ ಅವರು ಸುಗ್ರೀವಾಜ್ಞೆಯ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. “ಸೆಕ್ಷನ್ 118 (ಎ) ಸಾರ್ವಜನಿಕರನ್ನು, ವಿಶೇಷವಾಗಿ ಮಹಿಳೆಯರನ್ನು ಸಾಮಾಜಿಕ ಮಾಧ್ಯಮ ನಿಂದನೆಯಿಂದ ರಕ್ಷಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ, ಹೊಸ ಕಾನೂನನ್ನು ಅಧಿಕಾರಿಗಳು ಮತ್ತು ಸರ್ಕಾರವನ್ನು ಟೀಕಿಸುವವರ ವಿರುದ್ಧ ಬಳಸುತ್ತದೆ”ಎಂದು ಆರೋಪಿಸಿದ್ದಾರೆ.

ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118 (ಡಿ) ಅನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಹಾಗಾಗಿ ಇದು ಅಸಂವಿಧಾನಿಕ ಎಂದು ಘೋಷಿಸಿತ್ತು.

ಇದನ್ನೂ ಓದಿ: ಕೇರಳ ಚುನಾವಣೆ: ಕೋತಿಗಳ ಕಾಟ ತಡೆಯುವವರಿಗೆ ನಮ್ಮ ಮತ ಎಂದ ಸ್ಥಳೀಯರು!

ಸಿಪಿಎಂ ನೇತೃತ್ವದ ಸರ್ಕಾರವು ಕೊರೊನಾ ಪ್ರಾರಂಭವಾದಾಗಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಅಪರಾಧಗಳು, ನಕಲಿ ಪ್ರಚಾರ ಮತ್ತು ದ್ವೇಷದ ಮಾತುಗಳ ಹೆಚ್ಚಳವಾಗಿದೆ ಎಂದು ಹೇಳಿಕೊಂಡಿತ್ತು. ಜೊತೆಗೆ ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳು ಅವುಗಳ ವಿರುದ್ಧ ಹೋರಾಡಲು ಅಸಮರ್ಪಕವೆಂದು ಹೇಳಿತ್ತು.

ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118 (ಡಿ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66-ಎ ಅನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದರೂ, ಅವುಗಳನ್ನು ಬದಲಾಯಿಸಲು ಕೇಂದ್ರವು ಬೇರೆ ಯಾವುದೇ ಕಾನೂನು ಚೌಕಟ್ಟನ್ನು ಪರಿಚಯಿಸಿಲ್ಲ. “ಈ ಸನ್ನಿವೇಶದಲ್ಲಿ, ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡಿದ ಅಪರಾಧಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಪೊಲೀಸರಿಗೆ ಸಾಧ್ಯವಿಲ್ಲ” ಎಂದು ಸರ್ಕಾರ ಹೇಳಿಕೊಂಡಿತ್ತು.

ಆದರೆ, ಸರ್ಕಾರದ ಹೊಸ ಕಾನೂನಿನ ವಿರುದ್ಧ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿದ್ದು, ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಕುರಿತು ಪೋಸ್ಟ ಮಾಡಿದ್ದಾರೆ.

“ಸಾಮಾಜಿಕ ಜಾಲತಾಣಗಳಲ್ಲಿ ಆಕ್ರಮಣಕಾರಿ ಪೋಸ್ಟ್ ಮಾಡಿದವರಿಗೆ 5 ವರ್ಷ ಶಿಕ್ಷೆ ನೀಡುವ ಈ ಕಾನೂನನ್ನು ಕೇರಳದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್(LDF) ರೂಪಿಸಿರುವುದು ಆಘಾತಕಾರಿ” ಎಂದಿದ್ದಾರೆ.

 

ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ನಿಂದನೆಯನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆದರೆ ಈ ತಿದ್ದುಪಡಿಯು ಪೊಲೀಸರಿಗೆ ಹೆಚ್ಚಿನ ಶಕ್ತಿಯನ್ನು ನೀಡುವ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕಾನೂನು ಎಂಬ ಆತಂಕ ಎಲ್ಲೆಡೆ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ: ಕೊರೊನಾ ಬಿಕ್ಕಟ್ಟಿನ ನಡುವೆಯೂ 2 ತಿಂಗಳಲ್ಲಿ 61,290 ಜನರಿಗೆ ಉದ್ಯೋಗ ನೀಡಿದ ಕೇರಳ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...