(ಈ ಪ್ರಬಂಧ ಹೊಸ ಬರಹದಲ್ಲಿದೆ ಕನ್ನಡ ನುಡಿಗೆ ಹೊಂದದ ಮಹಾಪ್ರಾಣಗಳನ್ನು ಕೈಬಿಡಲಾಗಿದೆ ಅಥವಾ ಮಿತವಾಗಿ ಬಳಸಲಾಗಿದೆ)

ಬಹುಶಃ ನಟ ದೇವಾನಂದ್ ಹೊರತುಪಡಿಸಿದರೆ ಸೌಮಿತ್ರ ಚಟರ್ಜಿಯೊಬ್ಬರೇ ತಮ್ಮ 85ನೆ ವಯಸ್ಸಿನಲ್ಲಿಯೂ ನಟನೆಯಲ್ಲಿ ಸಕ್ರಿಯರಾಗಿದ್ದರು. 2020ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ‘Borunbabur Bondhu’ ಸಿನಿಮಾದಲ್ಲಿ ಅವರು ಲೇಖಕ, ಎಡಪಂಥೀಯ ಚಿಂತಕ Borunbabur ಪಾತ್ರದಲ್ಲಿ ಅಬಿನಯಿಸಿದ್ದರು. 62 ವರ್ಶಗಳ ಈ ಸುದೀರ್ಘ ಪಯಣದಲ್ಲಿ ಅವರು ಬೀಳುಗಳನ್ನು ಎದುರಿಸಿದ್ದು ಇಲ್ಲವೇ ಇಲ್ಲ ಎನ್ನಬಹುದು. 1959ರಲ್ಲಿ ಸತ್ಯಜಿತ್ ರೇ ಅವರ ‘ಅಪೂ ಸಂಸಾರ್’ ಸಿನಿಮಾದಲ್ಲಿ ಪದವಿ ಮುಗಿಸದ ಯುವಕ ಅಪೂನ ಪಾತ್ರದ ಮೂಲಕ ಸಿನಿಮಾ ಜೀವನ ಆರಂಬಿಸುವ ಸೌಮಿತ್ರ ನಿಜಜೀವನದಲ್ಲಿ ಸಾಹಿತ್ಯದ ಸ್ನಾತಕೋತ್ತರ ಪದವೀದರ. ಐವತ್ತರ ದಶಕದ ಕೊನೆ, ಅರವತ್ತರ ದಶಕದ ಆರಂಬದಲ್ಲಿ ಸೌಮಿತ್ರ ಬಂಗಾಲಿ ಸಿನಿಮಾ ಪ್ರವೇಶಿಸಿದಾಗ ಅಲ್ಲಿ ನಟ ಉತ್ತಮ ಕುಮಾರ್ ಸೂಪರ್‌ಸ್ಟಾರ್. ಬಂಗಾಳಿ ‘ಬದ್ರಲೋಕ್’ಗೆ ಸೌಮಿತ್ರರ ನಗರದ ನಾಜೂಕುತನ, ಸಾಹಿತ್ಯ/ರಂಗಬೂಮಿ ಕಲಿಕೆ, ಮತ್ತು ಮದ್ಯಮವರ್ಗದ ನಾಜೂಕಿನ ವ್ಯಕ್ತಿತ್ವವು ಸಹಜವಾಗಿ ಆಕರ್ಶಕವಾಗಿ ಕಂಡಿತು. ಆಗ (1950-70) ಅಲ್ಲಿನ ಸಿನಿಮಾರಂಗದಲ್ಲಿ, ಸಾಂಸ್ಕೃತಿಕ ವಲಯದಲ್ಲಿ ಟ್ಯಾಗೋರ್‌ರ ಸಾಹಿತ್ಯದ ಸಂವೇದನೆ ಡಾಳಾಗಿತ್ತು. ಸೌಮಿತ್ರರಂತಹ ಸಾಹಿತ್ಯದ ಹಿನ್ನಲೆಯ ಒಬ್ಬ ಉದಯೋನ್ಮುಖ ಕಲಾವಿದನಿಗೆ ಈ ವಾತಾವರಣ ಪೂರಕವಾಗಿತ್ತು.

ಸೌಮಿತ್ರ ಚಟರ್ಜಿ ನಿದನರಾದಾಗ ಪ.ಬಂಗಾಳದ ಕಡೆಯ ಸಾಂಸ್ಕೃತಿಕ ಐಕಾನ್ ಎಂದು ಅವರನ್ನು ಬಣ್ಣಿಸಲಾಯಿತು. ಇದಕ್ಕೆ ಕಾರಣ ಸೌಮಿತ್ರ ಅವರು ಟ್ಯಾಗೋರ್‌ರ ಸಾಹಿತ್ಯ ಬೌದ್ದಿಕತೆಯ ವಿದ್ಯಾರ್ಥಿಯಾಗಿದ್ದು, ರೇ, ಮೃಣಾಲ್ ಸೇನ್, ತಪನ್ ಸಿನ್ಹಾರಂತಹ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು, ಎಡಪಂಥೀಯ ರಾಜಕೀಯ ಒಲವು ಮತ್ತು ಮುಖ್ಯವಾಗಿ ಇವರ ಬ್ರಾಹ್ಮಣ ಜಾತಿಯ ಹಿನ್ನಲೆ ಎಲ್ಲವೂ ಕಾರಣವೆಂದರೆ ಅದು ಅವರ ನಟನಾ ಪ್ರತಿಬೆಯನ್ನು ಗೌಣಗೊಳಿಸುವುದಿಲ್ಲ. ಜೊತೆಗೆ ಟ್ಯಾಗೋರ್ ಸಂದರ್ಬದ ಬಂಗಾಳ ಪುನರುತ್ತಾನದ (ರಿನಾಯ್ಸೆನ್ಸ್) ಗತಕಾಲ ಮತ್ತು 20ನೆ ಶತಮಾನದ ಬಂಗಾಳದ ಸಮಾಜೋ-ರಾಜಕೀಯ-ಸಾಂಸ್ಕೃತಿಕ ಬಿಕ್ಕಟ್ಟುಗಳ ಒಂದು ಕೊಂಡಿಯಾಗಿ ಕಾಣಿಸಿಕೊಂಡಿದ್ದು ಸಹ ಸೌಮಿತ್ರರ ಸಾರ್ವಜನಿಕ ಬದುಕಿನ ಸಾರ್ಥಕತೆ ಎನ್ನಬಹುದು.

‘ಅಪೂ ಸಂಸಾರ್’ನಲ್ಲಿ ಶಿಕ್ಷಣವನ್ನು ಅರ್ದದಲ್ಲಿ ತೊರೆದ ಕನಸುಗಣ್ಣಿನ ಯುವಕ, ‘ಅರಣ್ಯೇ ದಿನ್ ರಾತ್ರಿ’ಯ ಮೇಲ್ದರ್ಜೆ ಉದ್ಯೋಗದಲ್ಲಿರುವ ಅಸೀಮ್, ‘ಆಕಾಶ್ ಕುಸುಮ್’ನ ಬಂಡವಾಳಿಗನಾಗಿ ಬೆಳೆಯಬೇಕೆಂದು ಕನಸು ಕಾಣುವ ಮಹತ್ವಾಕಾಂಕ್ಷಿ ಯುವಕ, ‘ಚಾರುಲತಾ’ದ ಅಮಲ್, ‘ಆಶಾನಿ ಸಂಕೇತ್’ನ ಕಾರ್ಯದೃಶ್ಟಿಯುಳ್ಳ ಟೀಚರ್, ‘ಸಂಪತಿ’ಯ ಅಮುಲ್ಯ, ‘ಸೋನಾರ್ ಕೆಲ್ಲಾ’ದ ಖಾಸಗಿ ಪತ್ತೇದಾರ ಫೆಲೂದ, ‘ಬಸಂತ್ ವಿಲಾಪ್’, ‘ಭುವನೇರ್ ಪಾರೆ’ನ ರೋಮ್ಯಾಂಟಿಕ್ ಹೀರೋ, ‘ಕೋನಿ’ಯ ಕೋಚ್, ‘ಆತಂಕ’ದ ನಿವೃತ್ತ ಶಿಕ್ಷಕ, ‘ಜಿಂದೇರ್ ಬೋಂಡಿ’ಯಲ್ಲಿ ನಾಯಕ ಉತ್ತಮ್ ಕುಮಾರ್ ಎದುರು ಖಳನಾಯಕ, ದಾಸ್ತೋವೆಸ್ಕಿಯ ‘ಈಡಿಯಟ್’ ಕತೆ ಆದರಿಸಿದ ‘ಅಪರಿಚಿತೋ’ದ ಮಾನಸಿಕ ತುಮುಲತೆಯ ಪಾತ್ರ, ಹೀಗೆ ಸೌಮಿತ್ರ ಅಬಿನಯಿಸಿದ ವಿಬಿನ್ನ ಪಾತ್ರಗಳ ಪಟ್ಟಿಯನ್ನು ಬರೆಯುತ್ತಾ ಹೋಗಬಹುದು. ಬಂಗಾಳಿ ಪ್ರೇಕ್ಷಕರಿಗೆ ಪ್ರತಿ ಸಂದರ್ಬದಲ್ಲಿಯೂ ‘ಮತ್ತೊಬ್ಬ ಕುಪಿತ, ಅಸಹಾಯಕ ಯುವಕ’, ‘ಮತ್ತೊಂದು ರೀತಿಯ ರೋಮ್ಯಾಂಟಿಕ್ ಹೀರೋ’, ‘ಮತ್ತೊಂದು ರೀತಿಯ ವ್ಯಕ್ತಿತ್ವದ ಮದ್ಯಮವರ್ಗದ ಮದ್ಯ ವಯಸ್ಕ’ ಹೀಗೆ ಅನೇಕ ಮತ್ತೊಂದುಗಳ ಪ್ರತಿನಿದಿಯಾಗಿ ಕಾಣಿಸಿಕೊಂಡರು. ಸಿದ್ದ ಮಾದರಿಯಲ್ಲಿ ಸಿಲುಕಿಕೊಳ್ಳಲು ನಿರಾಕರಿಸುವ, ಆದರೆ ಬಂಡಾಯವಲ್ಲದ ಈ ‘ಮತ್ತೊಂದು’ ಎನ್ನುವ ಇಮೇಜ್ ಸೌಮಿತ್ರರಂತಹ ಮೃದು ವ್ಯಕ್ತಿತ್ವದ, ಮಹತ್ವಾಕಾಂಕ್ಷಿಯಲ್ಲದ ಕಲಾವಿದನಿಗೆ ವರವಾಯಿತು ಮತ್ತು ಸೌಮಿತ್ರ ಇದನ್ನು ಸದುಪಯೋಗಪಡಿಸಿಕೊಂಡರು. ಜೊತೆಗೆ 60 ವರ್ಶಗಳಲ್ಲಿ ಪ್ರತಿ ಹಂತದಲ್ಲಿಯೂ ಸಮಕಾಲೀನವಾದ ಪಾತ್ರಗಳು ಒದಗಿಬಂದಿರುವುದೂ ಸಹ ಅವರ ‘ಗುಡ್‍ಲಕ್’ ಎಂದರೆ ಅವರ ಹಿರಿಮೆ ಅಲ್ಲಗೆಳೆದಂತಲ್ಲ.

Pc : Pinterest

ಸೌಮಿತ್ರ minimalist ನಟನಾಗಿದ್ದರು. ‘ಬದ್ರಲೋಕ್’ನ ಸ್ವಾರ್ಥಿಯಾಗಿ ನಟಿಸಿದಶ್ಟೆ ಲೀಲಾಜಾಲವಾಗಿ ಲುಂಪೆನ್, ಸಬಲ್ಟ್ರಾನ್ ಪಾತ್ರಗಳಲ್ಲಿ, ದ್ವಂದ, ಗೊಂದಲಗಳ ಹದಿಹರೆಯದವನ ರೂಹುಗಳಲ್ಲಿ ಈಜಿದರು. ‘ಕಮರ್ಶಿಯಲ್’ ಮತ್ತು ‘ಕಲಾತ್ಮಕ’ ಎಂಬ ವಿರುದ್ದ ದಿಕ್ಕುಗಳಲ್ಲಿ ಸರಾಗವಾಗಿ ಅಲೆದಾಡಿದರು. ಬಹುಶಃ ಸೌಮಿತ್ರ ತಮ್ಮನ್ನು ಬಂಗಾಳ ಸ್ಥಳೀಯತೆಗೆ, ಬಂಗಾಳಿ ತಾಯ್ನುಡಿಗೆ ಬದ್ದತೆಯಿಂದ ಸಮರ್ಪಿಸಿಕೊಂಡ ನಿಯತ್ತಿನ ಅಬಿಮಾನವೂ ಸಹ ಈ ಯಶಸ್ಸಿಗೆ ಕಾರಣ. ಒಬ್ಬ ವೃತ್ತಿಪರ ನಟನಾಗಿ ಸಜ್ಜನಿಕೆಯನ್ನು, ಸರಳತೆಯನ್ನು ಮೈಗೂಡಿಸಿಕೊಂಡಿದ್ದರು, ಆದರೆ ತಮ್ಮ ಸಮಕಾಲೀನರಾದ ರುತ್ವಿಕ್ ಘಟಕ್‍ರಂತಹ ಅಸಮಾನ್ಯ ನಿರ್ದೇಶಕನ ಸಿನಿಮಾದಲ್ಲಿ ಅಬಿನಯಿಸಲಿಲ್ಲ ಎನ್ನುವುದು ಸೌಮಿತ್ರರೊಳಗಿನ ‘ಮೇಲ್ಜಾತಿ ಮದ್ಯಮವರ್ಗ’ದ ವ್ಯಕ್ತಿತ್ವ ಕಾರಣ ಹೊರತಾಗಿ ರುತ್ವಿಕ್‍ರ ಅರಾಜಕತೆ ಅಲ್ಲ.

ಸತ್ಯಜಿತ್ ರೇ – ಸೌಮಿತ್ರ ಚಟರ್ಜಿ ಜೋಡಿಯು 14 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಜಾಗತಿಕವಾಗಿ ಜಪಾನ್ ದೇಶದ ಅಕಿರೋ ಕುರಸೋವ- ತೋಶಿನೋ ಮಿಫುನೆ ಜೋಡಿ (16 ಸಿನಿಮಾಗಳು), ಇಟಲಿಯ ಫೆಡರಿಕೋ ಫೆಲಿನಿ-ಮಾರ್ಸೆಲೋ ಮಾಸ್ಟ್ರೋಯನ್ನಿ, ಸ್ವೀಡನ್‍ನ ಇಂಗ್ಮರ್ ಬರ್ಗಮನ್- ಮಾಕ್ಸ್ ವಾನ್ ಸಿಡೋ ರಂತಹ ‘ನಿರ್ದೇಶಕ-ನಟ’ ಜೋಡಿಯ ಜೊತೆಗೆ ರೇ-ಸೌಮಿತ್ರರನ್ನು ಯಾವುದೇ ಹಿಂಜರಿಕೆಯಲ್ಲದೆ ಹೋಲಿಸಬಹುದು. ಆದರೆ ಇವರಿಬ್ಬರದು ಪಕ್ಕಾ ಟೀಚರ್- ವಿದ್ಯಾರ್ಥಿ ಸಂಬಂದಂತಿತ್ತು. ಸೌಮಿತ್ರರಿಗೆ ನಿರ್ದೇಶಕ ರೇ ಕುರಿತು ಬಯಮಿಶ್ರಿತ ಗೌರವವಿತ್ತು, ವಿದೇಯತೆ ಇತ್ತು. ಆದೇಶವನ್ನು ಶಿರಸಾವಹಿಸಿ ಪಾಲಿಸುವ ನಿಶ್ಟಾವಂತ ಕಾರ್ಯಕರ್ತನ ರೀತಿಯಲ್ಲಿ ಕಾಪಾಡಿಕೊಂಡು ಬಂದಿದ್ದರು. ಮತ್ತೊಂದೆಡೆ ಕುರಸೋವ-ಮಿಫುನೆ ನಡುವೆ ಗೆಳೆಯರ ರೀತಿಯ ಒಡನಾಟವಿತ್ತು. ನಟ ಮಿಫುನೆ ನಿರ್ದೇಶಕ ಕುರಸೋವಾರನ್ನು ವಿಮರ್ಶೆ ಮಾಡುತ್ತಿದ್ದರು, ಸಲಹೆ ಕೊಡುತ್ತಿದ್ದರು. ಅಬಿಪ್ರಾಯ ಹಂಚಿಕೊಳ್ಳುತ್ತಿದ್ದರು. ಕಡಗೆ ಇವರಿಬ್ಬರು ಜಗಳವಾಡಿಕೊಂಡಿದ್ದರು. ಮೇಲಿನ ನಿರ್ದೇಶಕ-ನಟರ ಈ ಕೆಮಿಸ್ಟ್ರಿ, ನಿರ್ದೇಶಕ ಮತ್ತು ಆತನ protagonist ಮತ್ತು ಜಾಗತಿಕವಾಗಿ, ಪ್ರಾದೇಶಿಕವಾಗಿ ಅದರ ಪ್ರಬಾವ ಕುರಿತು ತೌಲನಿಕವಾಗಿ ಅದ್ಯಯನ ಮಾಡಬಹುದು. ಇದು ಒಂದು ಮೌಲಿಕ ಸಂಶೋದನೆಯಾಗುತ್ತದೆ.

ಸೌಮಿತ್ರ ಚಟರ್ಜಿಯವರ ಬದುಕು ಕೇವಲ ಸಿನಿಮಾಗೆ ಮಾತ್ರ ಸೀಮಿತಗೊಂಡಿರಲಿಲ್ಲ. ರಂಗಬೂಮಿಯಲ್ಲಿ ಅಬಿನಯಿಸಿದರು, ನಾಟಕಗಳನ್ನು ನಿರ್ದೇಶಿಸಿದರು. ಸುಮಾರು 30 ನಾಟಕಗಳನ್ನು ಬರೆದಿದ್ದಾರೆ. ನಿರ್ಮಲ್ಯ ಆಚಾರ್ಯ ಜೊತೆಗೂಡಿ Ekkhon ಸಾಹಿತ್ಯ ಪತ್ರಿಕೆಗೆ 18 ವರ್ಶಗಳ ಕಾಲ ಸಹ ಸಂಪಾದಕರಾಗಿದ್ದರು. ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸೃಜನಶೀಲ ಪೇಂಟರ್ ಆಗಿದ್ದರು. ‘ತಾರಾ ವರ್ಚಸ್ಸನ್ನು’ ಹಣೆಗೆ ಅಂಟಿಸಿಕೊಂಡು ಮೆರೆದಾಡುವ ಭಾರತೀಯ ಸಿನಿಮಾರಂಗದಲ್ಲಿ ಸೌಮಿತ್ರ ಎಡಪಂಥೀಯ ಚಿಂತನೆಯ ನಟರಾಗಿದ್ದರು ಎಂಬುದು ಕುತೂಹಲಕರ. ಬಲಪಂಥೀಯತೆಗೆ ಪರ್ಯಾಯವೆಂದರೆ ಅದು ಮಾರ್ಕ್ಸಿಸಂ ಎಂದು ಕಡೆಗಾಲದವರೆಗೂ ನಂಬಿದ್ದರು. ನಂದಿಗ್ರಾಮ್ ಮತ್ತು ಸಿಂಗೂರ್‌ನ ಚಳುವಳಿಯನ್ನು ಹತ್ತಿಕ್ಕಿ ಬಂಡವಾಳಿಶಾಹಿ ಪರ ವಹಿಸಿದ ಆಗಿನ ಮುಖ್ಯಮಂತ್ರಿ ಬುದ್ದದೇವ ಬಟ್ಟಾಚಾರ್ಯರನ್ನು ಬೆಂಬಲಿಸಿದರು. ಇದು ಜನಪರ ಚಳುವಳಿಗಳ ಅಂತಸ್ಸತವನ್ನು ಗ್ರಹಿಸಲು ವಿಫಲಗೊಂಡ ಅವರ ಮಿತಿಯನ್ನು ಸಹ ತೋರಿಸುತ್ತದೆ. ಸೈದ್ದಾಂತಿಕ ಬದ್ದತೆ ಏಕತಾನತೆ ಪಡೆದುಕೊಂಡರೆ ಅದು ಜಡಗೊಳ್ಳುತ್ತದೆ ಎಂದು ಅರಿಯಲು ಸೌಮಿತ್ರ ಅವರಿಗೆ ಸಾದ್ಯವಾಗಲಿಲ್ಲ. ಆದರೆ ಆತ್ಮವಂಚನೆಯಲ್ಲಿ, ಸುಳ್ಳುಗಳಲ್ಲಿ ಬದುಕಿದ ಇಂದಿನ ಬಹುತೇಕ ಕಲಾವಿದರಿಗೆ ಹೋಲಿಸಿದರೆ ಸೌಮಿತ್ರರ ಸೆಕ್ಯುಲರ್ ನಿಲುವು ಎಂತಹ ಅರ್ಥಪೂರ್ಣ ಎಂಬುದು ಮನವರಿಕೆಯಾಗುತ್ತದೆ. ಇವರು ನರೇಂದ್ರ ಮೋದಿಯ ಸರ್ವಾದಿಕಾರ ಆಡಳಿತದ ವಿರುದ್ದ ಕಟುವಾದ ವಿಮರ್ಶಕರಾಗಿದ್ದರು. ಸಿಎಎ-ಎನ್‍ಆರ್‌ಸಿ ವಿರುದ್ದದ ಹೋರಾಟಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಡಿಸೆಂಬರ್ 2019ರಲ್ಲಿ ‘ಈ ಶಾಸನಗಳು ಬಹುಸಂಖ್ಯೆಯಲ್ಲಿ ಜನರನ್ನು ಶೋಷಿಸುತ್ತದೆ’ ಎಂದು ಹೇಳಿಕೆ ನೀಡಿದ್ದರು. ಅಬಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿರಂತರ ದನಿಯಾಗಿದ್ದರು. ನಟನೊಬ್ಬ ಇಶ್ಟೊಂದು ಆಯಾಮಗಳಲ್ಲಿ ರಾಜಕೀಯ ಸೈದ್ದಾಂತಿಕತೆಯನ್ನು ಬದ್ದತೆಯಿಂದ ರೂಡಿಸಿಕೊಂಡಿರುವುದು ಭಾರತೀಯ ಸಿನಿಮಾರಂಗದಲ್ಲಿ ವಿರಳವೆಂದೇ ಹೇಳಬಹುದು. ಈ ವಿರಳತೆಯೂ ಸಹ ಕಣ್ಮರೆಯಾಗುತ್ತಿರುವುದು ಆತಂಕದ ಸಂಗತಿ

ಸೌಮಿತ್ರ ಚಟರ್ಜಿಯ ಸಾವಿನಿಂದ ಕೇವಲ ನಟನನ್ನು ಮಾತ್ರ ಕಳೆದುಕೊಂಡಿಲ್ಲ. ಜೊತೆಗೆ ಮಾನವೀಯ ಪ್ರಜ್ಞೆಯ, ಸೂಕ್ಷ್ಮ ಸಂವೇದನೆಯ ನಾಗರಿಕನನ್ನು ಸಹ ಕಳೆದುಕೊಂಡಿದ್ದೇವೆ.

  • ಬಿ. ಶ್ರೀಪಾದ ಭಟ್

ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್‌ರವರು, ಹಿರಿಯ ಚಿಂತಕರು, ಬರಹಗಾರರು. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿನ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ‘JNU ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು’, ‘ವಿಮೋಚಕಿಯ ಕನಸುಗಳು’ ಸೇರಿದಂತೆ ಹಲವು ಅತ್ಯಮೂಲ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ’ಆಕ್ಟ್-1978’ ಚಿತ್ರ: ಸಾಮಾಜಿಕ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ವೈರಲ್‌‌!

LEAVE A REPLY

Please enter your comment!
Please enter your name here