ಜೂನ್ 23 ರಂದು ದೆಹಲಿಯ ಶರದ್ ಪವಾರ್ ನಿವಾಸದಲ್ಲಿ ವಿವಿಧ ರಾಜಕೀಯ ಪಕ್ಷದ ನಾಯಕರು ಸಭೆ ಸೇರಿ ಚರ್ಚೆ ನಡೆಸಿದ್ದರು. ಯಶವಂತ್ ಸಿನ್ಹಾ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳ ನಾಯಕರು ಒಟ್ಟಿಗೆ ಸೇರಿದ್ದು ದೇಶದ ರಾಜಕೀಯದಲ್ಲಿ ವಿವಿಧ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿತ್ತು. ತೃತೀಯ, ಚತುರ್ಥ ರಂಗದ ಚರ್ಚೆಯೂ ಆರಂಭವಾಗಿತ್ತು. ಕಾಂಗ್ರಸೇತರ ಮೈತ್ರಿಯ ಸಾಧ್ಯತೆಗಳನ್ನು ಶರದ್ ಪವಾರ್ ಹುಡುಕುತ್ತಿದ್ದಾರೆ ಎಂಬ ಬಲವಾದ ವಾದವೂ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ರಾಜಕೀಯ ಪಡಸಾಲೆಯ ಈ ಎಲ್ಲಾ ಗುಸು ಗುಸು ಚರ್ಚೆಗಳಿಗೆ ಶರದ್ ಪವಾರ್ ತೆರೆ ಎಳೆದಿದ್ದಾರೆ.
ಜೂನ್ 23 ರಂದು ನಡೆದ ಸಭೆಯಲ್ಲಿ ತೃತೀಯ ರಂಗ ರಚನೆಯ ಯಾವುದೇ ಚರ್ಚೆ ನಡೆದಿಲ್ಲ. ಯಶವಂತ್ ಸಿನ್ಹಾ ಅವರ ರಾಷ್ಟ್ರ ಮಂಚ್ ಆಯೋಜಿಸಿದ ಸಭೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಚರ್ಚೆ ನಡೆಸಿದ್ದೇವೆ. ತೃತೀಯ ರಂಗದ ಪ್ರಶ್ನೆ ನಮ್ಮ ಮುಂದೆ ಇಲ್ಲ ಎಂದು ಶರದ್ ಪವಾರ್ ಸ್ಪಷ್ಟ ಪಡಿಸಿದ್ದಾರೆ.
ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ತೊರೆಯುವ ಪ್ರಶ್ನೆ ಇಲ್ಲ. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಿಬೇಕಾದರೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಒಂದಾಗಬೇಕು. ಅತಿದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್ ಭಾರತದಾದ್ಯಂತ ವಿಸ್ತರಿಸಿಕೊಂಡಿದೆ. ಯಾವುದೇ ರಾಜಕೀಯ ಒಕ್ಕೂಟವನ್ನು ರಚಿಸುವುದಾದರೆ ಕಾಂಗ್ರೆಸ್ ಪಕ್ಷವನ್ನು ಒಳಗೊಂಡಂತೆಯೇ ವಿರೋಧ ಪಕ್ಷಗಳ ಸಂಘಟನೆಯನ್ನು ಮಾಡಬೇಕಿದೆ ಎಂದು ಜೂನ್ 23 ರಂದು ನಡೆದ ಸಭೆಯಲ್ಲಿ ಹೇಳಿದ್ದೇನೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮೈತ್ರಿ ಸರ್ಕಾರದಲ್ಲಿ ಯಾವುದೇ ಬಿರುಕು ಇಲ್ಲ.ಕೆಲವು ಭಿನ್ನಾಭಿಪ್ರಾಯಗಳನ್ನು ಕಾಂಗ್ರೆಸ್, ಶಿವಸೇನೆ ಮತ್ತು ಎನ್‌ಸಿಪಿ ಪಕ್ಷದ ಮುಖಂಡರು ಒಟ್ಟಿಗೆ ಕೂತು ಚರ್ಚಿಸಿ ಬಗೆಹರಿಸಿಕೊಳ್ಳಲಿದ್ದಾರೆ ಎಂದು ಮಹರಾಷ್ಟ್ರದ ರಾಜಕೀಯ ವಿದ್ಯಮಾನಗಳ ಕುರಿತು ಶರದ್ ಪವಾರ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಶರದ್ ಪವಾರ್ ನಿವಾಸದಲ್ಲಿ ನಡೆದ ಸಭೆಯ ಕುರಿತು ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದು ಕಾಂಗ್ರೆಸ್ ಇಲ್ಲದೇ ವಿರೋಧ ಪಕ್ಷಗಳ ಒಕ್ಕೂಟ ಪೂರ್ಣವಾಗುವುದಿಲ್ಲ. ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟಿಗೆ ತರುವ ಪ್ರಯತ್ನ ಚಾಲ್ತಿಯಲ್ಲಿದೆ. ಕಾಂಗ್ರೆಸ್ ಕೂಡ ಈ ಪ್ರಯತನ್ನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕಾಂಗ್ರೆಸ್ ಸಹಿತ ಒಕ್ಕೂಟದಿಂದ ಮಾತ್ರ ಪ್ರಸಕ್ತ ದೇಶವನ್ನು ಆಳುತ್ತಿರುವ ಶಕ್ತಿಯ ವಿರುದ್ಧ ಹೋರಾಡಲು ಸಾಧ್ಯ ಎಂದು ಹೇಳಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾ ಕೂಡ ಇದೇ ರಿತಿಯ ಭಾವನೆಯನ್ನು ವ್ಯಕ್ತಪಡಿಸಿದೆ.
ಇದನ್ನೂ ಓದಿ : ಕೋವಿಡ್ ಬಿಕ್ಕಟ್ಟಿನಿಂದ ಮಕ್ಕಳ ಕಲಿಕೆಗೆ ಅಡ್ಡಿ: ಪರಿಹಾರದ ಮಾರ್ಗಗಳು



ಶರದ್ ಪವಾರ್ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.