Homeಚಳವಳಿಕೋವಿಡ್‌ ಬಿಕ್ಕಟ್ಟಿನಿಂದ ಮಕ್ಕಳ ಕಲಿಕೆಗೆ ಅಡ್ಡಿ: ಪರಿಹಾರದ ಮಾರ್ಗಗಳು

ಕೋವಿಡ್‌ ಬಿಕ್ಕಟ್ಟಿನಿಂದ ಮಕ್ಕಳ ಕಲಿಕೆಗೆ ಅಡ್ಡಿ: ಪರಿಹಾರದ ಮಾರ್ಗಗಳು

ಲಾಕ್‌ಡೌನ್‌ನಿಂದ ಹಲವು ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಸೇರಿದ್ದಾರೆ, ಬಾಲ್ಯ ವಿವಾಹಗಳು ಹೆಚ್ಚಾಗಿವೆ, ಮಕ್ಕಳಲ್ಲಿ ಅಪೌಷ್ಟಿಕತೆ  ಹೆಚ್ಚಾಗುವ ಭೀತಿ ಎದುರಾಗಿದೆ.

- Advertisement -
- Advertisement -

ಕೋವಿಡ್ ಸಾಂಕ್ರಾಮಿಕ ರೋಗ ಎಂಥವರನ್ನೂ ತೀರಾ ಸಂಕಷ್ಟಕ್ಕೆ ದೂಡಿದೆ. ಕೋವಿಡ್ ಮೊದಲ ಅಲೆಯ ಸಂದಿಗ್ಧ ಪರಿಸ್ಥಿತಿಯ ಗಾಯ ಮಾಸುವ ಮುನ್ನವೇ ಕೋವಿಡ್ ಎರಡನೇ ಅಲೆಯ ತೀವ್ರತೆ ಜನರಿಗೆ ಮತ್ತಷ್ಟು ಕುಗ್ಗಿಸಿದೆ. ಕೋವಿಡ್ ಮೊದಲ ಅಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಇತ್ತು, ಆದರೆ ಎರಡನೇ ಅಲೆಯ ಅಬ್ಬರದಲ್ಲಿ ಕೋವಿಡ್ ಸೋಂಕಿತರ ಡೆತ್ ರೇಟ್ ಗಣನೀಯವಾಗಿ ಏರಿಕೆಯಾಗಿತ್ತು, ಅಷ್ಟೇ ಆತಂಕ ಸೃಷ್ಟಿಸಿತ್ತು. ಈ ಕಾರಣದಿಂದ ಮತ್ತೊಮ್ಮೆ ಗೃಹಬಂಧನಕ್ಕೆ ಒಳಗಾಗುವ ಅತಿ ಕೆಟ್ಟ ಕಾಲ ಬಂದೊದಗಿತ್ತು.

ಕೋವಿಡ್ 2ನೇ ಅಲೆಯಿಂದ ಕೂಲಿ ಕಾರ್ಮಿಕ ವರ್ಗ ಸೇರಿದಂತೆ ಇತರೆ ಅಸಂಘಟಿತ ಸಮುದಾಯದವರು ಅನಿವಾರ್ಯವಾಗಿ ಕೆಲಸ ಕಳೆದುಕೊಳ್ಳಬೇಕಾಯ್ತು, ಶಾಲೆಗಳಿಗೆ ಬೀಗ ಜಡೆದು ಮಕ್ಕಳಿಗೆ ಮನೆಯಲ್ಲಿ ಕೂಡಿಸಿ ಕಲಿಕೆಯಿಂದ ಒಂದಿಷ್ಟು ಅಂತರ ಕಾಪಾಡುವಂತೆ ಆರ್ಡರ್ ಮಾಡಿದ್ದೇವೆ. ಇದು ಅನಿವಾರ್ಯವೂ ಆಗಿತ್ತು. ಕೋವಿಡ್ ಲಾಕ್ ಡೌನ್ ದಿನಗಳಲ್ಲಿ ‘ಮನೆಯೇ ಪಾಠಶಾಲೆ’ ಯಾಗಿ ಪರಿವರ್ತಿಸಿಕೊಳ್ಳುವ ಅವಕಾಶ ಏನೋ ಇತ್ತು, ಆದರೆ ಆ ಸಂಕಟದ ದಿನಗಳಲ್ಲಿ ದುಗುಡ, ಮೌನ, ಆತಂಕ, ಎಲ್ಲೆಡೆ ಸೂತಕದ ಛಾಯೆ ಮನೆಮಾಡಿತ್ತು. ‘ನಮ್ಮ ಜೀವ ಉಳಿದರೆ ಸಾಕಪ್ಪಾ’ ಎನ್ನುವ ನಿರ್ಧಾರದ ಮಧ್ಯೆ ಎಲ್ಲಿಯ ಕಲಿಕೆ?

ಕಳೆದ ವರ್ಷ ಅಂದರೆ 2020 ಮಾರ್ಚ್ 20 ರಿಂದ ಶಾಲೆಗಳು ಬಂದ್ ಆಗಿದ್ದು ಪುನಃ ಆರಂಭವಾಗಿದ್ದು 2021 ಜನವರಿ ಮೊದಲ ವಾರದಲ್ಲಿ, ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳು ಶಾಲೆಗೆ ಪ್ರವೇಶ ಮಾಡುವ ಹೊತ್ತಿಗೆ ಮತ್ತೆ ವಕ್ಕರಿಸಿದ ಎರಡನೇ ಅಲೆ, ಮೂರು ತಿಂಗಳೊಳಗೆ ಮತ್ತೆ ಶಾಲೆಗಳಿಗೆ ಬೀಗ ಹಾಕಲಾಯ್ತು, ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮಕ್ಕಳ ಕಲಿಕೆಗೆ ಬ್ರೇಕ್ ಹಾಕಿ, ಪರೀಕ್ಷೆಗಳು ಮುಂದೂಡಲಾಯಿತು. ಇಂಥ ದುರಂತ ಸನ್ನಿವೇಶದಲ್ಲಿ ಎಲ್ಲವೂ ಅನಿವಾರ್ಯ ಎನಿಸುತ್ತದೆ, ಹಣ, ಆಸ್ತಿ, ಸಂಬಂಧ, ಕರ್ತವ್ಯ, ಕಲಿಕೆಗಿಂತ ‘ತನ್ನ ಜೀವ – ಜೀವನ’ ಉಳಿಸುವಕೊಳ್ಳುವ ಸಾಹಸವೂ  ಮುಖ್ಯವಾಗಿರುತ್ತದೆ.

ಈ ಮಧ್ಯೆ ಮಕ್ಕಳ ಕಲಿಕೆಗೆ ತಾತ್ಕಾಲಿಕವಾಗಿ ‘ಆನ್ ಲೈನ್ ಶಿಕ್ಷಣ’ ಪದ್ಧತಿ ಜಾರಿಗೊಳಿಸಲು ಸರ್ಕಾರ ತೀರ್ಮಾನ ಕೈಗೊಂಡು, ಶೈಕ್ಷಣಿಕ ಕಲಿಕೆಗೆ ಆನ್ ಲೈನ್ ಶಿಕ್ಷಣ ಪರ್ಯಾಯ ಮಾರ್ಗ ಎಂದು ಪರಿಗಣಿಸಿ ಮುಂದುವರಿಸಿತ್ತು. ಆ ಕಠಿಣ ದಿನಗಳಲ್ಲಿ ಆನ್ ಲೈನ್ ತರಗತಿ ಅನಿವಾರ್ಯ ಎಂದು ಒಪ್ಪಬಹುದು. ಆದರೆ ‘ಆನ್ ಲೈನ್’ ಶಿಕ್ಷಣವೇ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡಿಪಾಯ ನಿರ್ಮಿಸಬಲ್ಲದು ಎಂದು ಹೇಳುವುದು ಅಷ್ಟು ಸೂಕ್ತವಲ್ಲ. ಆನ್ಲೈನ್ ತರಗತಿಗಳಿಂದ ‘ಗುಣಮಟ್ಟ ಶಿಕ್ಷಣ’ ನಿರೀಕ್ಷಿಸಲೂ ಅಸಾಧ್ಯ. ಆನ್ ಲೈನ್  ಶಿಕ್ಷಣ ಪದ್ಧತಿಯಿಂದ ಮಕ್ಕಳನ್ನು ಬರೀ ‘ರೋಬೋಟ್’ ಗಳಂತೆ ಸಿದ್ದ ಮಾಡಬಹುದೇ, ಹೊರತು ನಾವು ನಿರೀಕ್ಷಿಸಿದಂತೆ ಮಕ್ಕಳ ಬೌದ್ದಿಕ ಸಾಮರ್ಥ್ಯ ಹೆಚ್ಚಿಸಲು ಮಕ್ಕಳು ತಯಾರಿ ಮಾಡಲು ಎಂದಿಗೂ ಸಾಧ್ಯವಾಗದು. ಇನ್ನು ಎಲ್ಲರಿಗೂ ಆನ್‌ಲೈನ್ ಶಿಕ್ಷಣ ಸಿಗುವುದು ಕನಸಿನ ಮಾತೇ ಸರಿ..


ಇದನ್ನೂ ಓದಿ; ನೆಟ್‌ವರ್ಕ್ ಸಮಸ್ಯೆ: ಆನ್‌ಲೈನ್ ತರಗತಿಗಾಗಿ 5 ಕಿಮೀ ನಡೆಯುವ ವಿದ್ಯಾರ್ಥಿಗಳು!


ಕೊರೊನಾ ಎರಡನೇ ಅಲೆಯ ತೀವ್ರತೆ ಸದ್ಯಕ್ಕೆ ತಗ್ಗಿದರೂ ಸಾವಿನ ಪ್ರಮಾಣ ನಿರೀಕ್ಷೆಯಂತೆ ಇಳಿಕೆ ಕಂಡಿಲ್ಲ. ಆದರೆ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಕೋವಿಡ್ ಎರಡನೇ ಅಲೆಯ ಭೀತಿಯಿಂದ ಹೊರಬರುವ ಮುಂಚೆಯೇ ಮೂರನೇ ಅಲೆಯ ‘ಭಯಾನಕತೆ’ ಕುರಿತು ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಿವೆ. ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಕಂಟಕವಾಗಲಿದೆ ಎನ್ನುವ ವರದಿ ಎಷ್ಟು ಸತ್ಯವೋ ಅಷ್ಟೇ ಸುಳ್ಳು ಇರಬಹುದು ಎನ್ನುವುದು ತೀರಾ ಗೊಂದಲದ ಪ್ರಶ್ನೆ.

ರಾಜ್ಯದಲ್ಲಿ ಈಗಾಗಲೇ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ, ಎಂದಿನಂತೆ ಬಸ್ ಸಂಚಾರ ಶುರುವಾಗಿದೆ, ವ್ಯಾಪಾರ, ವಹಿವಾಟು, ಮಾರುಕಟ್ಟೆ, ಕೈಗಾರಿಕೆಗಳು ಕೋವಿಡ್ ಮಾರ್ಗಸೂಚಿಯಂತೆ ಓಪನ್ ಆಗಿವೆ. ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದ ಹಲವು ಸಂಘಟಿತ, ಅಸಂಘಟಿತ ವರ್ಗದ ಜನರು ಸಂಕಷ್ಟದ ದಿನಗಳಿಂದ ಪಾರಾಗಿ ಮತ್ತೆ ಬದುಕು ಕಟ್ಟಿಕೊಳ್ಳಲು ಹೊರಟಿದ್ದಾರೆ. ಆದರೆ ಬಡವರ ಆರ್ಥಿಕ ಪರಿಸ್ಥಿತಿ ಹಿಂದಿಗಿಂತ ಮತ್ತಷ್ಟು ಗಂಭೀರವಾಗಿದೆ, ಕೋವಿಡ್ ಸಂಕಟದಿಂದ ಬಡವರು ಇನ್ನಷ್ಟು ಬಡವರಾಗಿಯೇ ಉಳಿದುಕೊಳ್ಳಬೇಕಾದ ದಾರುಣ ಪರಿಸ್ಥಿತಿ ಎದುರಾಗಿದೆ. ಕೋವಿಡ್ ದಿಂದ ಮಧ್ಯಮ ವರ್ಗದವರು ಬಡತನದ ಕೂಪಕ್ಕೆ ಸಿಲುಕಿದ್ದಾರೆ. ಮತ್ತೊಮ್ಮೆ ಬಡವರ ಸಂಖ್ಯೆ ಏರಿಕೆಯಾಗಿದೆ. ನಿರುದ್ಯೋಗ, ಹಸಿವಿನಿಂದ ಬಳಲುತ್ತಿರುವರ ಸಂಖ್ಯೆಯೂ ಹೆಚ್ಚಾಗಿದೆ.

ಈ ಮಧ್ಯೆ ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಶಾಲೆಯ ಸಹವಾಸವೇ ಬೇಡವೆಂದು ಕೂಲಿ ಕೆಲಸಕ್ಕೆ ಸೇರಿಕೊಂಡರೆ, ಇನ್ನು ಕೆಲವರು ತಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲದೇ ಕಲಿಕೆಯಿಂದ ಬಹುದೂರ ಉಳಿದುಕೊಂಡಿದ್ದಾರೆ. ಕೊರೊನಾ ಲಾಕ್ ಡೌನ್ ಬಿಕ್ಕಟ್ಟಿನಲ್ಲಿ ಕಳೆದ ಒಂದುವರೆ ವರ್ಷದಿಂದ ಹೆಚ್ಚಿನ ಆದಾಯ ಇಲ್ಲದೆ, ಸರಿಯಾಗಿ ಕೆಲಸ ಸಿಗದ ಕಾರಣಕ್ಕೆ ಮನೆಯಲ್ಲಿರುವ ಪೋಷಕರು ಇಂಥ ಸಂಕಷ್ಟದ ಕಾಲದಲ್ಲಿ ಸ್ಮಾರ್ಟ್ ಫೋನ್ ಖರೀದಿಸಲು  ದುಡ್ಡು ಎಲ್ಲಿಂದ ತರಬೇಕು? ಜೀವನ ನಿರ್ವಹಣೆ ಹೇಗೆ ಎನ್ನುವ ಚಿಂತೆಯ ನಡುವೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ! ಎನ್ನುವ ಕೊರಗು ಗಾಢವಾಗಿ ಕಾಡುತ್ತಿದೆ. ಇನ್ನೂ ಪೋಷಕರಿಗೆ ಖಾಸಗಿ ಶಾಲೆಗಳ ‘ಫೀಸ್’ ವಸೂಲಿಯ ಕಿರಿಕಿರಿ ಬೇರೆ ತಲೆನೋವಾಗಿ ಪರಿಣಮಿಸಿದೆ.

ತಕ್ಷಣವೇ ಸರ್ಕಾರ ಹಂತ ಹಂತವಾಗಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭಿಸಬೇಕಾಗಿದೆ. ಆನ್ ಲೈನ್ ಪಾಠ ಬರೀ ಪರೀಕ್ಷೆಗೆ ಸೀಮಿತ ಎನ್ನಲಾಗುತ್ತಿದೆ. ಮಕ್ಕಳಿಗೆ ಹೆಚ್ಚಿನ ಜ್ಞಾನಾರ್ಜನೆಗೆ ಶಾಲೆಯ ಪಾಠವೇ ಅತ್ಯಂತ ಸೂಕ್ತ ವಾತಾವರಣ. ಒಂದು ಗಂಟೆಯ ಆನ್ ಲೈನ್  ಪಾಠದ ಜೊತೆಗೆ ಇತರೆ ಎಲ್ಲ ಕೆಲಸಗಳನ್ನೂ ಮಕ್ಕಳ ತಲೆಗೆ ಕಟ್ಟಲಾಗುತ್ತಿದೆ. ಕ್ಲಾಸ್ ಅಟೆಂಡ್ ಮಾಡುವ ಬಹುತೇಕ ಮಕ್ಕಳು ಆನ್ ಲೈನ್ ಕ್ಲಾಸ್ ನೆಪವೊಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಲಕಳೆಯುತ್ತಿದ್ದಾರೆ. ಇದರಿಂದ ಮಕ್ಕಳ ಅಮೂಲ್ಯವಾದ ಕಲಿಕೆಯ ಸಮಯ ವ್ಯರ್ಥವಾಗುತ್ತಿದೆ. ಆನ್ ಲೈನ್ ತರಗತಿಗಳಿಗಾಗಿ ಇಡೀ ದಿನ ಮೊಬೈಲ್, ಲ್ಯಾಪ್ ಟಾಪ್ ಗಳಲ್ಲೇ ಮಗ್ನರಾಗಿ ಕಾಲಕಳೆಯುವಂತಾಗಿದೆ. ಇದು ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡಬಲ್ಲದು. ಮತ್ತೆ ವರ್ಷದಿಂದ ಶಾಲೆ ತೊರೆದು ಮನೆಯಲ್ಲಿಯೇ ಬಂಧಿತರಾದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.

ಇದನ್ನೂ ಓದಿ; ‘ಆನ್‌ಲೈನ್ ತರಗತಿ ಮತ್ತು ಆನ್‌ಲೈನ್ ಶಿಕ್ಷಣ ಬೇಡ’ – ಸಾಮಾನ್ಯ ಖಾಸಗಿ ಶಾಲೆಗಳ ಮನವಿ!

ಈಗಾಗಲೇ ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ, ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ ಆರಂಭಿಸಬೇಕು. ಮಕ್ಕಳ ಸಂಪೂರ್ಣ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ತಪ್ಪು ಮಾಡಿದರೆ ಕಮರಲೂಬಹದು. ನಗರ ಪ್ರದೇಶದ ಮಕ್ಕಳ ಶೈಕ್ಷಣಿಕ ಗುಣಮಟ್ಟದ  ಕುರಿತು ಚರ್ಚಿಸಿ ಅದನ್ನೇ ಗಮನದಲ್ಲಿಟ್ಟುಕೊಂಡು ಆನ್ ಲೈನ್ ಶಿಕ್ಷಣ ಮುಂದುವರೆಸಲು ಹೊರಟಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರಾಗುವುದು ಗ್ಯಾರಂಟಿ.

ಶಾಲೆ ಆರಂಭಿಸುವ ಮುನ್ನ ಸರ್ಕಾರ ಕೋವಿಡ್ ಮಾರ್ಗಸೂಚಿ ಕಡ್ಡಾಯಗೊಳಿಸಬೇಕು‌.
ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಬೇಕು. ಮೊದಲಿಗೆ ಪ್ರೌಢ, ಹಿರಿಯ ಪ್ರಾಥಮಿಕ ನಂತರ ಪ್ರಾಥಮಿಕ ಶಾಲೆಗಳು ತೆರೆಯಲು ಸಿದ್ಧತೆ ಮಾಡಿಕೊಳ್ಳಬೇಕು. ತರಗತಿಗಳು ನಡೆಸಲು ಪಾಳಿ ಪದ್ಧತಿ ಅನುಸರಿಸುವುದು ಸೂಕ್ತ, ಅನುಮತಿ ಇಲ್ಲದೆ ಯಾವುದೇ ಪೋಷಕರಿಗೆ ಶಾಲಾ ಪ್ರವೇಶ ನಿಷೇಧ, ಅದರಲ್ಲೂ 60 ವರ್ಷ ಮೇಲ್ಪಟ್ಟವರಿಗೆ ಮಕ್ಕಳಿಂದ ದೂರ ಇರುವಂತೆ ಕ್ರಮ ಕೈಗೊಳ್ಳಬೇಕು. ತರಗತಿ ಕೋಣೆ, ಶಾಲಾ ವಾಹನದಲ್ಲಿ ವೈಯಕ್ತಿಕ ಅಂತರ ಕಾಪಾಡುವುದು, ಕೋವಿಡ್ ಮಾರ್ಗಸೂಚಿ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು. ಇಂಥ ಅಗತ್ಯ ನಿಯಮಗಳನ್ನು ಜಾರಿಗೊಳಿಸಿ ಶಾಲೆ ಆರಂಭಿಸುವುದು ತುಂಬಾ ಅನಿವಾರ್ಯತೆ ಇದೆ.

ಕೋವಿಡ್ ಎಂದಿಗೂ ಸಂಪೂರ್ಣವಾಗಿ ತೊಲಗಿ ಹೋಗಲು ಸಾಧ್ಯ ಇಲ್ಲ. ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾದಂತೆ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತದೆ, ಹಾಗೂ ಜನರಲ್ಲಿ ಅಡಗಿರುವ ರೋಗದ ಭೀತಿಯೂ ಕಡಿಮೆ ಆಗುತ್ತದೆ. ಕೋವಿಡ್ ಎರಡನೇ ಅಲೆಯ ಕರಾಳ ದಿನಗಳು, ಮೂರನೇ ಅಲೆಯ ಮುನ್ಸೂಚನೆ ಗಮನದಲ್ಲಿಟ್ಟುಕೊಂಡು ಶಾಲೆ ತೆರೆಯಲು ಮೀನಾಮೇಷ ಎಣಿಸುತ್ತಾ ಹಿಂದೇಟು ಹಾಕಿದರೆ ಮಕ್ಕಳಲ್ಲಿ ಶೈಕ್ಷಣಿಕ ಸಾಮರ್ಥ್ಯ ಊಹಿಸಲು ಸಾಧ್ಯವಾಗದಷ್ಟು ಕುಂಠಿತಗೊಳ್ಳುತ್ತದೆ.

ಮಕ್ಕಳು ಓದು – ಬರೆಯದೇ ಪರೀಕ್ಷೆ ಪಾಸ್ ಮಾಡುವುದು ಮಕ್ಕಳ  ಆರೋಗ್ಯ ಹಿತದೃಷ್ಟಿಯಿಂದ ಮಾಡುವ ಮೌಲ್ಯಮಾಪನವೇ ಹೊರತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮಾನದಂಡವಲ್ಲ. ತರಗತಿ , ಪರೀಕ್ಷೆ ಇಲ್ಲದಿದ್ದರೆ ಮಕ್ಕಳ ಕಲಿಕೆಯ ಗುಣಮಟ್ಟ ಪ್ರಗತಿ ಹೊಂದಲು ಸಾಧ್ಯವಿಲ್ಲ. ಇದು ಶಿಕ್ಷಣ ವ್ಯವಸ್ಥೆಯ ನಿಯಮವೂ ಅಲ್ಲ. ಈಗಾಗಲೇ ವರ್ಷದಿಂದ ಮನೆಯಲ್ಲಿದ್ದು ಮುಂದಿನ ತರಗತಿಗೆ ಬಡ್ತಿ ಪಡೆದ ಮಕ್ಕಳಿಗೆ ‘ನಾನೀಗ ಎಷ್ಟು ತರಗತಿಯಲ್ಲಿದ್ದೇನೆ’ ಎನ್ನುವುದು ಮರೆತು ಬಿಟ್ಟಿದ್ದಾರೆ. ಹಲವಾರು ಮಕ್ಕಳ ‘ಟಿಸಿ’ ಮನೆಯಲ್ಲಿಯೇ ಉಳಿದಿವೆ. ಮಕ್ಕಳಿಗೆ ಚನ್ನಾಗಿ ಓದಿಸಬೇಕೆಂಬ ಉಲ್ಲಾಸದಲ್ಲಿದ್ದ ಪೋಷಕರು ನಿರುತ್ಸಾಹ ತೋರುತ್ತಿದ್ದಾರೆ. ಹಲವು ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಸೇರಿದ್ದಾರೆ, ಬಾಲ್ಯ ವಿವಾಹಗಳು ಹೆಚ್ಚಾಗಿವೆ, ಮಕ್ಕಳಲ್ಲಿ ಅಪೌಷ್ಟಿಕತೆ  ಹೆಚ್ಚಾಗುವ ಭೀತಿ ಎದುರಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಲು ತಕ್ಷಣವೇ ಚಿಂತನೆ ನಡೆಸುವುದು ತೀರಾ ಅಗತ್ಯ.

  • ಬಾಲಾಜಿ ಕುಂಬಾರ, ಚಟ್ನಾಳ

(ಬೀದರ್‌ನಲ್ಲಿ ವಾಸವಿರುವ ಬಾಲಾಜಿ ಕುಂಬಾರ ಚಟ್ನಾಳರವರು ಶಿಕ್ಷಕರು ಮತ್ತು ಯುವಬರಹಗಾರರು.)


ಇದನ್ನೂ ಓದಿ: ಆನ್‌ಲೈನ್‌ ಕ್ಲಾಸ್‌ಗಳ ಭಾರ ಕಡಿಮೆ ಮಾಡುವಂತೆ ಪ್ರಧಾನಿಗೆ ಪುಟ್ಟ ಹುಡುಗಿಯ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...