Homeಮುಖಪುಟದೊರೆಸ್ವಾಮಿ ಮತ್ತು ಬಡಜನರ ಭೂಮಿ-ವಸತಿ ಹೋರಾಟ

ದೊರೆಸ್ವಾಮಿ ಮತ್ತು ಬಡಜನರ ಭೂಮಿ-ವಸತಿ ಹೋರಾಟ

- Advertisement -
- Advertisement -

2015ರ ಆಗಸ್ಟ್ 15 ಮತ್ತು 16ರಂದು ದಾವಣಗೆರೆಯಲ್ಲಿ ದೊರೆಸ್ವಾಮಿಯವರ ಮಾರ್ಗದರ್ಶನದಲ್ಲಿ ನಡೆದ ಚಿಂತನ-ಸಮಾಲೋಚನಾ ಸಮಾವೇಶದಲ್ಲಿ ದೊರೆಸ್ವಾಮಿಯವರಿಂದ “ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ಒಂದೊಂದಾಗಿ ಕೈಗೆತ್ತಿಕೊಂಡು ಅವು ಬಗೆಹರಿಯುವವರೆಗೂ ಎಲ್ಲ ಜನಪರ ಸಂಘಟನೆಗಳು ಒಗ್ಗೂಡಿ ನಿರಂತರ ಹೋರಾಟ ಮಾಡಬೇಕು” ಎಂಬ ಪ್ರಸ್ತಾಪವಾಯಿತು. ಬಡಜನರ ಬಗರ್‌ಹುಕುಂ ಸಾಗುವಳಿ ಭೂಮಿಗೆ ಹಾಗೂ ಅನಧಿಕೃತ ಮನೆಗಳಿಗೆ ಹಕ್ಕುಪತ್ರ ನೀಡದೆ ಸರ್ಕಾರಗಳು ನಾಲ್ಕು ದಶಕಗಳಿಂದ ಸತಾಯಿಸುತ್ತಿರುವ ಸಮಸ್ಯೆ ಎಲ್ಲಾ ಜಿಲ್ಲೆಗಳಲ್ಲೂ ಅವರನ್ನು ತೀವ್ರವಾಗಿ ಬಾಧಿಸುತ್ತಿರುವುದರ ವಿರುದ್ಧ ಹೋರಾಟ ರೂಪಿಸಲು 2016ರ ಜನವರಿಯಲ್ಲಿ ಮಾಡಿದ ತೀರ್ಮಾನ ಅದಾಗಿತ್ತು.

ಅದರ ಕುರಿತು ಮತ್ತಷ್ಟು ಅಧ್ಯಯನ, ವಿಚಾರ ಸಂಕಿರಣ, ಕಾರ್ಯಾಗಾರಗಳು, 2016ರ ಏಪ್ರಿಲ್‌ನಲ್ಲಿ ಈ ಸಮಸ್ಯೆಗಳ ಸುತ್ತ ಹೋರಾಟ ನಡೆಸುತ್ತಿರುವ ಹಲವಾರು ಸಂಘಟನೆಗಳ ಸಮಾಲೋಚನಾ ಸಭೆ ನಡದು “ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ” ರಚನೆಯಾಯಿತು. 10 ಪ್ರಮುಖ ಹಕ್ಕೊತ್ತಾಯಗಳನ್ನು ಪಟ್ಟಿ ಮಾಡಿ, 2016ರ ಜೂನ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪ ಅವರುಗಳನ್ನು ದೊರೆಸ್ವಾಮಿಯವರ ನೇತೃತ್ವದಲ್ಲಿ ಭೇಟಿ ಮಾಡಿ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು. ಈ ಬಗ್ಗೆ ರಾಜ್ಯದ ಎಲ್ಲ ಭಾಗಗಳ 23 ಜಿಲ್ಲೆಗಳಲ್ಲಿ ಪ್ರವಾಸ, ಪತ್ರಿಕಾಗೋಷ್ಠಿಗಳು, ಸಮಾಲೋಚನಾ ಸಭೆಗಳು ಹಾಗೂ ವ್ಯಾಪಕವಾಗಿ ಕರಪತ್ರ ವಿತರಿಸಲಾಯಿತು. ಸರ್ಕಾರದಿಂದ ಸಮರ್ಪಕ ಸ್ಪಂದನೆ ಸಿಗದ ಕಾರಣ, 2016ರ ಆಗಸ್ಟ್ 20ರಂದು ದೇವರಾಜ ಅರಸು ಜನ್ಮ ಶತಮಾನೋತ್ಸವದಂದು ಹತ್ತು ಸಾವಿರ ಜನರು ಭಾಗವಹಿಸಿದ್ದ ’ಬೆಂಗಳೂರು ಚಲೊ’ ಬೃಹತ್ ಪ್ರತಿಭಟನಾ ಸಮಾವೇಶ ಜರುಗಿತು.
ನಡುರಸ್ತೆಯಲ್ಲೇ ನಡೆದ ಧರಣಿಯಲ್ಲಿ ಮಂತ್ರಿ ಕಾಗೋಡು ಒಂದು ಗಂಟೆ ಪಾಲ್ಗೊಂಡು, ಹಕ್ಕೊತ್ತಾಯಗಳಿಗೆ ಒಪ್ಪಿ, ಶೀಘ್ರವೇ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಎಲ್ಲ ಸಂಘಟನೆಗಳ ಸಭೆ ಕರೆಯುವ ಆಶ್ವಾಸನೆ ನೀಡಿದರು.

ರಾಜ್ಯಾದ್ಯಂತ ಬಡವರ ಬಗರ್‌ಹುಕುಂ ಜಮೀನಿಗೆ ಹಕ್ಕುಪತ್ರ, ಜಮೀನಿಲ್ಲದವರಿಗೆ ಕನಿಷ್ಠ 2 ಎಕರೆ ಭೂಮಿ, ಬಡವರ ಅಕ್ರಮ ಮನೆಗಳ ಸಕ್ರಮ, ಹಾಗೂ ಮನೆಯಿಲ್ಲದವರಿಗೆ ಮನೆ/ನಿವೇಶನ ನೀಡಿಕೆ – ಈ ಕನಿಷ್ಠ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹೋರಾಟ ಮುಂದುವರೆಯಿತು. 2016ರ ನವೆಂಬರ್‌ನಲ್ಲಿ ವಿಧಾನ ಮಂಡಲ ಅಧಿವೇಶನದ ವೇಳೆ ಬೆಳಗಾವಿಯಲ್ಲಿ ದೊರೆಸ್ವಾಮಿಯವರಿಂದ ಅಹೋರಾತ್ರಿ ಸತ್ಯಾಗ್ರಹ. ಮುಖ್ಯಮಂತ್ರಿಗಳಿಂದ ಅಧಿವೇಶನದಲ್ಲಿ ವಿಚಾರದ ಪ್ರಸ್ತಾಪ: ಆದ್ಯತೆ ಮೇಲೆ ಬಡಜನರಿಗೆ ಭೂಮಿ-ಮನೆ ನೀಡಿ ಈ ಸಮಸ್ಯೆಯ ಶಾಶ್ವತ ಪರಿಹಾರದ ಭರವಸೆ ನೀಡಲಾಯಿತು.

ದಿಡ್ಡಳ್ಳಿಯ ಯಶಸ್ವಿ ಹೋರಾಟ

ಕೊಡಗಿನಲ್ಲಿ ಕಾಫಿ ತೋಟಗಳ ’ಲೈನ್ ಮನೆ’ಗಳ ಜೀತದಿಂದ ತಪ್ಪಿಸಿಕೊಂಡು, ವೀರಾಜಪೇಟೆ ತಾಲೂಕಿನ ದಿಡ್ಡಳ್ಳಿಯ ಸರ್ಕಾರಿ ಭೂಮಿಯಲ್ಲಿ ಶೆಡ್ ಹಾಕಿಕೊಂಡಿದ್ದ ಸುಮಾರು 600ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳ ಮೇಲೆ 2016ರ ಡಿಸೆಂಬರ್ 7ರಂದು ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಗಳ ಅಮಾನುಷ ದೌರ್ಜನ್ಯ – ಶೆಡ್‌ಗಳ ನೆಲಸಮ, ಸುರಿವ ಧಾರಾಕಾರ ಮಳೆಯಲ್ಲಿ ಆದಿವಾಸಿ ಕುಟುಂಬಗಳು ಕಾಡುಪಾಲು. ಸಮಸ್ಯೆಯನ್ನು ಪೂರ್ಣವಾಗಿ ಅಧ್ಯಯನ ಮಾಡಿ, ಡಿಸೆಂಬರ್ 13ರಂದು ಭೂಮಿ-ವಸತಿ ಕೇಂದ್ರ ಸಮಿತಿ ಸಭೆ ನಡೆಸಿ, ಕೂಡಲೇ ಈ ಸಮಸ್ಯೆ ಕೈಗೆತ್ತಿಕೊಳ್ಳುವ ತೀರ್ಮಾನ, ಕೇಂದ್ರ ಸಮಿತಿಯಿಂದ 4 ಸದಸ್ಯರ ನಿಯೋಜನೆ. ಎ.ಕೆ.ಸುಬ್ಬಯ್ಯನವರಿಂದ ದೃಢವಾದ ಬೆಂಬಲ. ಆದಿವಾಸಿಗಳೊಂದಿಗೆ ಸ್ಥಳದಲ್ಲೇ ಉಳಿದು, ರಾಜ್ಯದ ಎಲ್ಲೆಡೆಯ ಹೋರಾಟನಿರತ ಸಂಘಟನೆಗಳಿಂದ ಕಾಡಿನಲ್ಲೇ ಬೃಹತ್ ’ಸಂಕಲ್ಪ ಸಮಾವೇಶ’, 23ರಂದು “ಮಡಿಕೇರಿ ಚಲೊ”. ಸಮಾಜ ಕಲ್ಯಾಣ ಮಂತ್ರಿ ಆಂಜನೇಯ ಸ್ಥಳಕ್ಕೆ ಭೇಟಿ, ಮನವರಿಕೆ. ಕೂಡಲೇ ತಾತ್ಕಾಲಿಕ ಶೆಡ್‌ಗಾಗಿ ಟಾರ್ಪಾಲಿನ್, ಆಹಾರ, ನೀರು, ಬೀದಿದೀಪ, ಚಿಕಿತ್ಸೆಗೆ ಏರ್ಪಾಡು.

ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ 2017ರಲ್ಲೂ ಎಡೆಬಿಡದ ಹೋರಾಟ. ಏಪ್ರಿಲ್‌ನಲ್ಲಿ ಆದಿವಾಸಿಗಳ ’ಬೆಂಗಳೂರು ಕಾಲ್ನಡಿಗೆ ಜಾಥಾ’ಕ್ಕೆ ಜಿಗ್ನೇಶ್ ಮೇವಾನಿ, ಗೌರಿ ಲಂಕೇಶ್‌ರಿಂದ ಚಾಲನೆ. ಸರ್ಕಾರದಿಂದ ಉನ್ನತ ಮಟ್ಟದ ಸಭೆಗೆ ತಾರೀಕು ನಿಗದಿಪಡಿಸಿ ಫ್ಯಾಕ್ಸ್ ಸಂದೇಶ. ಜಾಥಾ ಅರ್ಧ ದಾರಿಯಲ್ಲಿ ನಿಲುಗಡೆ. 2017ರ ಏಪ್ರಿಲ್ 13ರಂದು ಮುಖ್ಯಮಂತ್ರಿ, ಕಂದಾಯ ಮತ್ತಿತರ ಮಂತ್ರಿಗಳ ಹಾಗೂ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳ ಸಹಿತ ಉನ್ನತ ಮಟ್ಟದ ಸಭೆ. ದಿಡ್ಡಳ್ಳಿಗೆ ಕಾಗೋಡು ಭೇಟಿ, ಮನವರಿಕೆ. ಕುಶಾಲನಗರದ ಬಳಿ ಎರಡು ಕಾಲೊನಿ ನಿರ್ಮಿಸಿ, 528 ಅರ್ಹ ಕುಟುಂಬಗಳಿಗೆ ವ್ಯವಸ್ಥಿತ ಮನೆಗಳ ನಿರ್ಮಾಣ. ಯಶಸ್ಸು ಕಂಡ ಹೋರಾಟ.

ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಕೊಟ್ಟ ಆಶ್ವಾಸನೆ ಈಡೇರಿಕೆಗಾಗಿ ಹೋರಾಟ ಮುಂದುವರಿಕೆ. ಸರ್ಕಾರದ ಮೇಲೆ ವಿವಿಧ ರೀತಿಗಳಲ್ಲಿ ನಿರಂತರ ಒತ್ತಡದ ಪ್ರಯತ್ನ. 2017ರ ಜುಲೈಯಲ್ಲಿ ಬೆಂಗಳೂರಿನಲ್ಲಿ 9 ದಿನಗಳ ಸತ್ಯಾಗ್ರಹ, ಜೈಲ್ ಭರೋ. ಹೋರಾಟ ಸಮಿತಿ ನಿಯೋಗ 15 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜಮೀನು-ಮನೆಗಾಗಿ ಫಾರಂ ನಂ. 50-53ರಲ್ಲಿ ಮತ್ತು 94ಸಿ/94ಸಿಸಿ ಅಡಿ ಅರ್ಜಿ ಸಲ್ಲಿಸಿರುವವರಿಂದ ಮಾಹಿತಿ ಸಂಗ್ರಹ. ಅದನ್ನೆಲ್ಲ ಜಿಲ್ಲಾ-ತಾಲೂಕುವಾರು ವಿಂಗಡಿಸಿ, ಅರ್ಹವಾದ 284 ಪ್ರಕರಣಗಳನ್ನು ದಾಖಲೆಸಹಿತ ಪಟ್ಟಿ ಮಾಡಿ ಮಂತ್ರಿ ಕಾಗೋಡರಿಗೆ ಸಲ್ಲಿಕೆ. ಅರ್ಧ ದಿನ ಸಮಿತಿ ನಿಯೋಗದೊಂದಿಗೆ ಮಂತ್ರಿಗಳ ಸಭೆ, ಮನವರಿಕೆ. ಶೀಘ್ರ ಸಭೆ ಕರೆದು ಸಮಗ್ರ ಪರಿಹಾರದ ಭರವಸೆ. ಭರವಸೆ ಮತ್ತೆ ಹುಸಿ.

ಅನಿರ್ದಿಷ್ಟಾವಧಿ ಸತ್ಯಾಗ್ರಹ: ’ಹೈಲೆವೆಲ್ ಸಮಿತಿ’ ರಚನೆ

ಪುನಃ ಬೆಳಗಾವಿ ಅಧಿವೇಶನದ ವೇಳೆ ನಗಾರಿ, ತಮಟೆ, ಕೊಂಬುಕಹಳೆಗಳ ಸಹಿತ ಬೃಹತ್ ಪ್ರತಿಭಟನೆ. ಉನ್ನತ ಮಟ್ಟದ ಸಭೆಗಾಗಿ ಸರ್ಕಾರದಿಂದ ತಾರೀಖು ನಿಗದಿ. ಪುನಃ ವಂಚನೆ. 2018ರ ಜನವರಿ 10ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ. ಸಭೆ ನಡೆಸಿ ತೀರ್ಮಾನ ಕೈಗೊಳ್ಳುವವರೆಗೂ ಸತ್ಯಾಗ್ರಹ ನಿಲ್ಲಿಸದಿರುವ ನಿರ್ಧಾರ. 18 ದಿನಗಳ ಸತ್ಯಾಗ್ರಹದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಾಲ್ವರು ಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಂಬಂಧಪಟ್ಟ 7 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಸಹಿತ ಹೋರಾಟ ಸಮಿತಿ ನಿಯೋಗದ ಜೊತೆ ಸಭೆ. ಬಗರ್‌ಹುಕುಂ ಅರ್ಜಿ ಸಲ್ಲಿಸಲು ಈ ಹಿಂದೆ ಅವಕಾಶ ಸಿಗದಿದ್ದವರಿಗೆ ಪುನಃ ಮತ್ತೊಂದು ವರ್ಷ ಅವಧಿ ವಿಸ್ತರಣೆ ಹಾಗೂ ಹೋರಾಟ ಸಮಿತಿಯ ಇಬ್ಬರು ಸದಸ್ಯರನ್ನೊಳಗೊಂಡು ’ಉನ್ನತ ಮಟ್ಟದ ಸಮಿತಿ’ ರಚನೆಗೆ ತೀರ್ಮಾನ. ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ, ಜಿಲ್ಲೆ-ತಾಲೂಕು ಮಟ್ಟದಲ್ಲಿ ಭೂಮಿ-ನಿವೇಶನ ನೀಡಿಕೆಯ ಉಸ್ತುವಾರಿ ಮತ್ತು ಮಾರ್ಗದರ್ಶನ ಈ ಸಮಿತಿಯ ಜವಾಬ್ದಾರಿ. ತ್ವರಿತವಾಗಿ ಹಕ್ಕುಪತ್ರ ನೀಡಿಕೆ ಕುರಿತು ಸರ್ಕಾರದಿಂದ ಜಿಲ್ಲಾಧಿಕಾರಿಗಳಿಗೆ ಸೂಕ್ತ ಆದೇಶ. ಸಮಿತಿ ಕಾರ್ಯ ನಿರ್ವಹಣೆ ಆರಂಭ.

’ನಡುರಾತ್ರಿ ಸ್ವಾತಂತ್ರ್ಯೋತ್ಸವ’

2018ರ ಮೇ ತಿಂಗಳಲ್ಲಿ ವಿಧಾನ ಸಭೆ ಚುನಾವಣೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ, ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ. ’ಉನ್ನತ ಮಟ್ಟದ ಸಮಿತಿ’ ಕಾರ್ಯ ನಿರ್ವಹಣೆ ಸ್ಥಗಿತ. ದೊರೆಸ್ವಾಮಿಯವರ ನಿಯೋಗದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ-ಭರವಸೆ-ಹುಸಿ. 2019ರ ಆಗಸ್ಟ್ 14-15 “ನಡುರಾತ್ರಿ ಸ್ವಾತಂತ್ರ್ಯೋತ್ಸವ”; ’ಭೀಮ್ ಆರ್ಮಿ’ ಸ್ಥಾಪಕ ಚಂದ್ರಶೇಖರ ಆಜಾದ್ ’ರಾವಣ’ ಅತಿಥಿ. “ಹೊಸ ಸ್ವಾತಂತ್ರ್ಯ ಹೋರಾಟಕ್ಕಾಗಿ” ನಡುರಾತ್ರಿ ರಾಷ್ಟ್ರ ಧ್ವಜಾರೋಹಣ. ಎರಡು ಬಾರಿ ಸಮಿತಿ ನಿಯೋಗದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ. ಹುಸಿಯಾದ ಆಶ್ವಾಸನೆಗಳ ಸರಮಾಲೆ. 2019ರ ನವೆಂಬರ್‌ನಿಂದ ಸಿಎಎ-ಎನ್‌ಆರ್‌ಸಿ ಹೋರಾಟಗಳು ಮತ್ತು 2020ರ ಮಾರ್ಚ್‌ನಿಂದ ಕೊರೊನಾ ಹಾವಳಿ ಭರಾಟೆಯಲ್ಲಿ ನೆನೆಗುದಿಗೆ ಬಿದ್ದ ಬಡಜನರ ಭೂಮಿ-ವಸತಿ ಸಮಸ್ಯೆ.

2020ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ರೈತ ಆಂದೋಲನದ ಜೊತೆಯಲ್ಲೇ ಮತ್ತೆ ಮುನ್ನೆಲೆಗೆ ತರುವ ಶತಪ್ರಯತ್ನ; ರಾಜ್ಯಾದ್ಯಂತ ವಾಹನ ಜಾಥಾ, ವ್ಯಾಪಕ ಪ್ರಚಾರ. 2021ರ ಜನವರಿ 26ರ “ರೈತ ಗಣರಾಜ್ಯೋತ್ಸವ”ದ ಬೆನ್ನಿಗೆ ಪುನಃ ಧರಣಿ; ಕಂದಾಯ ಮಂತ್ರಿ ಆರ್. ಅಶೋಕ್ ಭೇಟಿ. ಪುನಃ ಸಮಸ್ಯೆ ಪರಿಹಾರದ ಭರವಸೆ, ವಂಚನೆ. ಕೊರೊನಾ ಎರಡನೇ ಅಲೆಯಲ್ಲಿ ಮತ್ತೊಮ್ಮೆ ತೇಲಿಹೋದ ಭೂಮಿ-ವಸತಿ ಸಮಸ್ಯೆ.

2021ರ ಮೇ ತಿಂಗಳಲ್ಲಿ ದೊರೆಸ್ವಾಮಿಯವರ ತೀವ್ರ ಅನಾರೋಗ್ಯ, ಆಸ್ಪತ್ರೆ ವಾಸ. ಅಂತಿಮ ವಿದಾಯದ ಹಿಂದಿನ ದಿನವೂ ಅವರಿಂದ ಈ ಹೋರಾಟ ಮುಂದುವರಿಸುವ ನಿರ್ಧಾರದ ಮಾತು. ದೊರೆಸ್ವಾಮಿಯವರು ಬದುಕಿದ್ದಾಗ ಹುಸಿ ಭರವಸೆಗಳಲ್ಲೇ ಕಳೆದ ಸರ್ಕಾರ ಅವರ ನಿಧನದ ನಂತರವಾದರೂ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮುಂದಾಗುವಂತೆ ಒತ್ತಾಯಿಸಲು ಭೂಮಿ-ವಸತಿ ವಂಚಿತರ ಹೋರಾಟ ಸಮಿತಿಯಿಂದ ಮತ್ತೊಮ್ಮೆ ಹೋರಾಟಗಳ ಸರಣಿ ತೀವ್ರಗೊಳಿಸುವ ನಿರ್ಧಾರ.

ಭೂಮಿ-ವಸತಿ ಹೋರಾಟ ಸಾಧಿಸಿದ್ದೇನು?

* ಜಾಗತೀಕರಣ-ಉದಾರೀಕರಣ-ಖಾಸಗೀಕರಣದ ಶಕೆ ಆರಂಭವಾದ 1990ರ ದಶಕದಿಂದ ಬಹುತೇಕ ಮೂಲೆಗುಂಪಾಗಿದ್ದ ಬಡಜನರ ಭೂಮಿ-ವಸತಿ ಸಮಸ್ಯೆಯನ್ನು ಮತ್ತೊಮ್ಮೆ ದೃಢವಾಗಿ ಸರ್ಕಾರ ಮತ್ತು ಸಮಾಜದ ಗಮನಕ್ಕೆ ಬರುವಂತೆ, ಸರ್ಕಾರಗಳು ಕಡೆಗಣಿಸಲಾಗದಂತೆ ಮುನ್ನೆಲೆಗೆ ತಂದಿದ್ದು. ಸಮಸ್ಯೆಯ ಅಗಾಧತೆ ಮತ್ತು ವ್ಯಾಪಕತೆಯನ್ನು ಮನಗಾಣಿಸಿದ್ದು. ಸಂತ್ರಸ್ತ ಬಡಜನರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಭರವಸೆ, ಆಶಾಕಿರಣ ಮೂಡಿಸಿದ್ದು.

* ರಾಜ್ಯಾದ್ಯಂತ ಹತ್ತಾರು ಸಂಘಟನೆಗಳ ನೇತೃತ್ವದಲ್ಲಿ ಬಿಡಿಬಿಡಿಯಾಗಿ ನಡೆಯುತ್ತಿದ್ದ ಹೋರಾಟಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿದ ಹೋರಾಟವಾಗಿಸಲು ಪ್ರಯತ್ನಿಸಿ, ಬಹುಮಟ್ಟಿಗೆ ಯಶಸ್ವಿಯಾದದ್ದು.

* ಭೂಮಿ ಮತ್ತು ವಸತಿ ಸಮಸ್ಯೆಗಳೆರಡನ್ನೂ ಒಂದೇ ಡಿಮ್ಯಾಂಡ್‌ನ ಭಾಗವಾಗಿ ಮಾಡಿ, ಹೋರಾಟಕ್ಕೆ ವಿಸ್ತೃತ ತಳಹದಿ ದೊರೆಯುವಂತೆ ಮಾಡಿದ್ದು. ದಲಿತ, ಆದಿವಾಸಿ, ಅಲೆಮಾರಿ, ಅತಿ ಹಿಂದುಳಿದ ಸಮುದಾಯಗಳನ್ನೂ ಹೋರಾಟದೊಳಗೆ ಅಣಿ ನೆರೆಸಿ, ಸಮಸ್ಯೆಗಳ ಸಮಗ್ರ ಮತ್ತು ಶಾಶ್ವತ ಪರಿಹಾರದ ಅಗತ್ಯವನ್ನು ಮನಗಾಣಿಸಿದ್ದು.

* ಆದಿವಾಸಿ ಮತ್ತು ಅಲೆಮಾರಿಗಳ ವಿಶಿಷ್ಟ ಭೂಮಿ-ಮನೆ ಸಮಸ್ಯೆ ಬಗ್ಗೆ, ಪಾರಂಪರಿಕ ಅರಣ್ಯವಾಸಿಗಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ, ಆ ಸಮಸ್ಯೆಗಳನ್ನು ಮುನ್ನೆಲೆಗೆ ತಂದಿದ್ದು.

* ಬಗರ್‌ಹುಕುಂ ಸಾಗುವಳಿಗೆ ಹಕ್ಕುಪತ್ರ ನೀಡುವುದಲ್ಲದೆ, ಭೂಮಿಯಿಲ್ಲದವರಿಗೂ ಭೂಮಿ ನೀಡಬೇಕೆಂಬ ಬೇಡಿಕೆ ಹಾಗೂ, ಈ ಹಿಂದಿನ ಅವಧಿಗಳಲ್ಲಿ ಫಾರಂ ನಂ. 50-53ರಲ್ಲಿ ಅರ್ಜಿ ಸಲ್ಲಿಸಲು ಆಗದಿದ್ದವರಿಗೂ ಅರ್ಜಿ ಸಲ್ಲಿಸಲು ಪುನಃ ಅವಕಾಶ ಒದಗಿಸಿ ಅವಧಿ ವಿಸ್ತರಿಸಿದ್ದು.

* ಜಿಲ್ಲೆ, ತಾಲೂಕು ಮಟ್ಟಗಳಲ್ಲಿ ಭೂಮಿ-ನಿವೇಶನ ಮಂಜೂರಾತಿಗೆ ಮಾರ್ಗದರ್ಶನ, ಉಸ್ತುವಾರಿ ದೊರೆಯುವಂತೆ, ಹೋರಾಟ ಸಮಿತಿಯ ಸದಸ್ಯರನ್ನೂ ಒಳಗೊಂಡ ’ಉನ್ನತ ಮಟ್ಟದ ಸಮಿತಿ’ ರಚನೆ. ಹಲವೆಡೆ ಸಮಸ್ಯೆಗಳ ಇತ್ಯರ್ಥ.

* ಪರ್ಯಾಯ ಒದಗಿಸದೆ ಬಡವರನ್ನು ಅವರ ಜಮೀನು-ಮನೆಗಳಿಂದ ಒಕ್ಕಲೆಬ್ಬಿಸಬಾರದು ಎಂಬ ಆಗ್ರಹಕ್ಕೆ ಮನ್ನಣೆ ದೊರಕಿದ್ದು. (ಹೃದಯಹೀನ ಅಧಿಕಾರಶಾಹಿಯಿಂದ ಇದರ ಉಲ್ಲಂಘನೆ ನಡೆಯುತ್ತಲೇ ಇದೆ.)
ಒಟ್ಟಿನಲ್ಲಿ, ದೊರೆಸ್ವಾಮಿ ಅವರ ನೇತೃತ್ವದಲ್ಲಿ ಐದು ವರ್ಷಗಳಿಂದ ನಡೆಯುತ್ತಿರುವ ದೀರ್ಘ ಹೋರಾಟದಿಂದಾಗಿ, ಬಡಜನರ ದಶಕಗಟ್ಟಲೆಯ ನಿರೀಕ್ಷೆಯನ್ನು ಈಡೇರಿಸುವುದಕ್ಕೆ ಬೇಕಾದ ಸಿದ್ಧತೆಯೆಲ್ಲವೂ ಮುಗಿದಿತ್ತು, ಅನುಷ್ಠಾನ ಮಾತ್ರ ಬಾಕಿಯಿತ್ತು. ಆ ಹಂತದಲ್ಲಿ ಸರ್ಕಾರ ಬದಲಾಯಿತು. ಈಗ ಆಳುತ್ತಿರುವ ಸರ್ಕಾರ ಬಡಜನರಿಂದ ಸರ್ವಸ್ವವನ್ನೂ ಕಿತ್ತುಕೊಳ್ಳುವುದಷ್ಟೇ ಮಾಡುತ್ತಿದೆ; ಕೊಡುವುದೆಲ್ಲ ಹಿಂಸೆ, ಕಣ್ಣೀರು ಮಾತ್ರ ಎಂಬಂತಾಗಿದೆ.

ಸಿರಿಮನೆ ನಾಗರಾಜ್

ಸಿರಿಮನೆ ನಾಗರಾಜ್
ಸಿರಿಮನೆ ನಾಗರಾಜ್‌ರವರು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮುಖಂಡರು. ನಕ್ಸಲ್ ಬೆಂಬಲಿಗನೆಂಬ ಆರೋಪದಿಂದ ಹತ್ತಾರು ಕೇಸುಗಳಿದ್ದ ಕಾರಣ 2014ರವರೆಗೂ ಅಜ್ಞಾತವಾಗಿದ್ದ ಇವರು ನಂತರ ಮುಖ್ಯವಾಹಿನಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಚ್.ಎಸ್ ದೊರೆಸ್ವಾಮಿಯವರ ನಿಕಟವರ್ತಿಗಳಲ್ಲಿ ಒಬ್ಬರು.


ಇದನ್ನೂ ಓದಿ: ‘ಕೆಎಸ್‌ಆರ್‌‌ಟಿಸಿ’ ಬ್ರಾಂಡ್‌ ನೇಮ್‌ ಕಳೆದುಕೊಂಡ ಕರ್ನಾಟಕ! ಸಾರಿಗೆ ಸಚಿವ ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರಧ್ವಜ ಹಾರಿಸದ ಮನೆಗಳ ಫೋಟೋ ತೆಗೆದುಕೊಳ್ಳಿ: ಉತ್ತರಾಖಾಂಡ್‌ ಬಿಜೆಪಿ ರಾಜ್ಯಾಧ್ಯಕ್ಷ ಹೇಳಿಕೆ

0
“75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯಾರ ಮನೆಯ ಮೇಲೆ ತಿರಂಗ ಧ್ವಜಗಳಿರುವುದಿಲ್ಲವೋ ಆ ಮನೆಯ ಫೋಟೋಗಳನ್ನು ತೆಗೆದುಕೊಳ್ಳಿ” ಎಂದು ಉತ್ತರಾಖಂಡ ಬಿಜೆಪಿ ಘಟಕದ ಮುಖ್ಯಸ್ಥ ತನ್ನ ಬೆಂಬಲಿಗರಿಗೆ ಸೂಚನೆ ನೀಡಿರುವುದಾಗಿ ‘ಟೈಮ್ಸ್ ಆಫ್...