ಕನ್ನಡ ಸಾಹಿತ್ಯದ ಕೆಲವೇ ಕೆಲವು ಖ್ಯಾತ ಮುಸ್ಲಿಂ ಲೇಖಕಿಯರಲ್ಲಿ ಮುಮ್ತಾಜ್ ಬೇಗಂ (73) ಕೂಡ ಒಬ್ಬರು. ದುರದೃಷ್ಟವಶಾತ್ ಕಳೆದ ಏಪ್ರಿಲ್ 06 ರಂದು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿರುವಾಗಲೇ ಅವರು ಕೋವಿಡ್ ಸೋಂಕಿನ ಕಾರಣದಿಂದ ಮೃತಪಟ್ಟಿದ್ದರು. ಅವರ ಮರಣದ ನಂತರ ಈಗ ಅವರ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಮುಮ್ತಾಜ್ ಬೇಗಂ ಅವರ ‘ಸ್ವಾತಂತ್ರ್ಯ ಕಹಳೆ’ ಕೃತಿಯನ್ನು ‘2019 ನೇ ಸಾಲಿನ ಮುಸ್ಲಿಂ ಸಾಹಿತ್ಯ ಪ್ರಶಸ್ತಿಗೆ’ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಾಗಿ 36 ಕೃತಿಗಳು ಬಂದಿದ್ದು ಅದರಲ್ಲಿ ಬೇಗಂ ಅವರ ಸ್ವಾತಂತ್ರ್ಯದ ಕಹಳೆ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.

ಮುಮ್ತಾಜ್ ಬೇಗಂ ಅವರು ಕಳೆದ ಮೂರು ದಶಕಗಳಿಂದ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಹತ್ತಾರು ಸಾಹಿತ್ಯಿಕ ಕೃತಿಗಳನ್ನು ರಚಿಸಿದ್ದಾರೆ. ಕಥೆ, ಕಾದಂಬರಿ, ಕಾವ್ಯ, ಮಕ್ಕಳ ಸಾಹಿತ್ಯ ಹೀಗೆ ಮುಮ್ತಾಜ್ ಬೇಗಂ ವೈವಿಧ್ಯಮಯ ಸಾಹಿತ್ಯಿಕ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅವ್ಯಕ್ತ ಮತ್ತು ಅಂಕುರ, ಸರ್ವ ಋತುಗಳು ನಿನಗಾಗಿ ಎಂಬ ಕವನ ಸಂಕಲನಗಳನ್ನೂ, ವರ್ತುಲ, ಬಂದಳಿಕೆ ಎಂಬ ಕಾದಂಬರಿಗಳನ್ನು, ಚಿಂಪಿ ಎಂಬ ಮಕ್ಕಳ ಸಾಹಿತ್ಯದ ಕೃತಿಗಳನ್ನು ಹಾಗೂ ‘ಟು ದಿ ಅನ್‌ನೌನ್ ಡೆಸ್ಟಿನೇಶನ್’ ಎಂಬ ಇಂಗ್ಲೀಷ್ ಕಾದಂಬರಿಯನ್ನು ರಚಿಸಿದ್ದಾರೆ.

2021 ರ ಮಾರ್ಚ್‌ ನಲ್ಲಿ ಮುಮ್ತಾಜ್ ಬೇಗಂ ಅವರ ‘ಸೂರ್ಯಾಸ್ತ’ ಕೃತಿ ಅನಾವರಣಗೊಂಡಿತ್ತು. ಇದೇ ಸಂದರ್ಭದಲ್ಲಿ ಅವರಿಗೆ ಕೊರೋನಾ ಸೊಂಕು ತಗುಲಿ ಅದರಿಂದ ಚೇತರಿಸಿಕೊಳ್ಳಲಾಗದೇ ತಮ್ಮ 73 ನೇ ವಯಸ್ಸಿನಲ್ಲಿ ಅವರು ಮೃತಪಟ್ಟಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ಬರವಣಿಗೆಯ ಹವ್ಯಾಸ ಮೈಗೂಡಿಸಿಕೊಂಡಿದ್ದು, ನಾಡಿನ ಅನೇಕ ಪ್ರಸಿದ್ಧ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ.

ಮುಮ್ತಾಜ್ ಅವರ 5 ದಶಕಗಳ ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿಗಳು ಹುಡಕಿಕೊಂಡು ಬಂದಿವೆ.ಇವರ ಸಾಹಿತ್ಯ, ಬರಹ ಕ್ಷೇತ್ರದ ಗಣನೀಯ ಸಾಧನೆಗಾಗಿ ಹಲವು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರತಿಷ್ಠಿತ ಗೌರವ ಮತ್ತು ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಅತ್ತಿಮಬ್ಬೆ, ಚೆನ್ನಶ್ರೀ, ಜಿಲ್ಲಾ ರಾಜ್ಯೋತ್ಸವ, ಕಿತ್ತೂರ ರಾಣಿ ಚೆನ್ನಮ್ಮ, ಬಸವ ಜ್ಯೋತಿ, ಹಿರಿಯ ನಾಗರಿಕರ ಸಾಹಿತ್ಯ ಸಾಧಕಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳಿಂದ ಪುರಸ್ಕೃತರಾದ ಇವರಿಗೆ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ ಮತ್ತು ಮೇವುಂಡಿ ಮಲ್ಲಾರಿ ಮಕ್ಕಳ ಕಥಾ ಪುರಸ್ಕಾರ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿಗಳು ಪ್ರಾಪ್ತವಾಗಿವೆ.

ಮುಮ್ತಾಜ್ ಬೇಗಂ ಅವರು ಸಾಹಿತ್ಯ ಮಾತ್ರವಲ್ಲದೇ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಂಘ ಸಂಸ್ಥೆಗಳಲ್ಲಿ ವಿವಿಧ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಕತಾರ್‌ನಲ್ಲಿರುವ ಯುನೆಸ್ಕೋ ಸಂಸ್ಥೆಯ ಆರ್ಥಿಕ ಮತ್ತು ಆಡಳಿತ ಸಹಾಯಕರಾಗಿ ಅನೇಕ ವರ್ಷ ಕಾರ್ಯ ನಿರ್ವಹಿಸಿದ್ದ ಮುಮ್ತಾಜ್ ಬೇಗಂ ಅವರು ದುಬೈನ ಅಲ್ ಮೀರ್ ಸಂಸ್ಥೆ ಮತ್ತು ‘ಫ್ಯೂಜಿ ಗಾರ್ಮೆಂಟ್ಸ್’ನ ಕಾರ್ಯದರ್ಶಿಯಾಗಿ ಕೂಡ ಕೆಲವು ವರ್ಷ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಸಕ್ರಿಯ ಸದಸ್ಯರಾಗಿಯೂ ಅವರು ಕನ್ನಡ ಸಾಹಿತ್ಯವನ್ನು ಕಟ್ಟುವ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತಮ್ಮ ಇಳಿವಯಸ್ಸಿನಲ್ಲಿ ಗುಜರಾತ್‌ನಲ್ಲಿ ವೈದ್ಯೆಯಾಗಿರುವ ಪುತ್ರಿಯ ಮನೆಯಲ್ಲಿ ವಾಸವಾಗಿದ್ದ ಮುಮ್ತಾಜ್ ಬೇಗಂ ಕಳೆದ ಏಪ್ರಿಲ್‌ನಲ್ಲಿ ಇಹಲೋಕವನ್ನು ತ್ಯಜಿಸಿದ್ದರು.

ಮುಸ್ಲಿಂ ಸಾಹಿತ್ಯ ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಲಾಕ್‌ಡೌನ್ ಸಂಪೂರ್ಣ ತೆರವು ಬಳಿಕ ಮಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ 36 ಕೃತಿಗಳು ಬಂದಿದ್ದು, ಸಾಹಿತಿಗಳಾದ ಡಾ. ಹಸೀನಾ ಖಾದ್ರಿ, ಅಬ್ದುಲ್ ರಹಮಾನ್ ಕುತ್ತೆತ್ತೂರು ಮತ್ತು ಪ್ರಾಧ್ಯಾಪಕ ಅಬ್ದುಲ್ ರಝಾಕ್ ಅನಂತಾಡಿ ತೀರ್ಪುಗಾರರಾಗಿ ಸಹಕರಿಸಿದ್ದರು ಎಂದು ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


ಇದನ್ನೂ ಓದಿ; ಡಾ. ಹಫೀಜ್ ಕರ್ನಾಟಕಿ: ಸೌಹಾರ್ದತೆಯ ಸಂತನಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here