ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಯ ಸಮಯದಲ್ಲಿ, ವಾಹನಗಳು ಮತ್ತು ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಗಿದ್ದು, ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದಾಗಿ ಪ್ರದೇಶದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಭಾರೀ ಬಲಪ್ರಯೋಗ ಮಾಡಿದ್ದಾರೆ. ಗುಂಪನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಲಾಗಿದೆ.
ಕಾರ್ಮಿಕರು ಏಕೆ ಪ್ರತಿಭಟಿಸಿದರು?
ವರದಿಯ ಪ್ರಕಾರ, ಭಾನುವಾರ, ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಕೈಗಾರಿಕಾ ಶಾಂತಿಯನ್ನು ಕಾಪಾಡಿಕೊಳ್ಳಲು ನೋಯ್ಡಾ ಪ್ರಾಧಿಕಾರದಲ್ಲಿ ಮಹತ್ವದ ಸಭೆ ನಡೆಸಿದರು.
ಬೋನಸ್ ಪಾವತಿ, ವಾರದ ರಜೆ, ಅಧಿಕಾವಧಿ ವೇತನ ಮತ್ತು ಸಕಾಲಿಕ ವೇತನ ಸೇರಿದಂತೆ ಹಲವಾರು ಬೇಡಿಕೆಗಳನ್ನು ಕಾರ್ಮಿಕರು ಎತ್ತಿದ್ದರು ಎಂದು ವರದಿಯಾಗಿದೆ. ಲೈಂಗಿಕ ಕಿರುಕುಳ ಸಮಿತಿ, ದೂರು ಸಮಿತಿ ರಚನೆ ಮತ್ತು ಸಂಬಳ ಚೀಟಿಗಳನ್ನು ನೀಡಬೇಕೆಂದು ಅವರು ಒತ್ತಾಯಿಸಿದರು.
ಹರಿಯಾಣದಲ್ಲಿ ಇತ್ತೀಚೆಗೆ ಕನಿಷ್ಠ ವೇತನ ಪಡೆಯುವ ಕಾರ್ಮಿಕರಿಗೆ ಶೇ. 35 ರಷ್ಟು ವೇತನ ಹೆಚ್ಚಳವಾಗಿದ್ದು, ನೋಯ್ಡಾ ಕಾರ್ಮಿಕರು ಈಗ ಅದೇ ಬೇಡಿಕೆ ಇಡುತ್ತಿದ್ದಾರೆ.
ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ (ಕಾರ್ಮಿಕ) ಮತ್ತು ಉತ್ತರ ಪ್ರದೇಶದ ಕಾರ್ಮಿಕ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿಭಟನೆಗೂ ಮುನ್ನ, ಜಿಲ್ಲಾಧಿಕಾರಿ ಕಾರ್ಮಿಕರು ಶಾಂತವಾಗಿರಲು ಮತ್ತು ವದಂತಿಗಳನ್ನು ನಂಬದಂತೆ ಮನವಿ ಮಾಡಿದರು. ಕೈಗಾರಿಕಾ ವಲಯದಲ್ಲಿ ಕಡಿಮೆ ಕನಿಷ್ಠ ವೇತನದ ವಿರುದ್ಧ ಕಾರ್ಖಾನೆಯ ಕಾರ್ಮಿಕರು ನಡೆಸಿದ ಪ್ರತಿಭಟನೆಯ ಎರಡು ದಿನಗಳ ನಂತರ ಈ ಪ್ರತಿಭಟನೆ ನಡೆದಿದೆ.


