ಅಸ್ಸಾಂನಲ್ಲಿ NRC (ರಾಷ್ಟ್ರೀಯ ನಾಗರಿಕ ನೊಂದಣಿ ಕಾಯ್ದೆ) ಜಾರಿಯಾದಾಗಿನಿಂದ ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಧರಿಸಿದ ಮೊದಲ ಬಾಲಿವುಡ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ನೈಜ ಘಟನೆಗಳಿಂದ ಪ್ರೇರಿತವಾದ ಚಿತ್ರಕ್ಕೆ ನಿರ್ದೇಶಕ ಸೈಫ್ ಬೈದ್ಯಾ “ನಾಯ್ಸ್ ಆಫ್ ಸೈಲೆನ್ಸ್” ಎಂದು ಹೆಸರಿಟ್ಟಿದ್ದಾರೆ.
2019 ರಲ್ಲಿ ಅಸ್ಸಾಂನಲ್ಲಿ ಜಾರಿಯಾದ ಅಂತಿಮ ಎನ್‌ಆರ್‌ಸಿ ಪಟ್ಟಿಯಿಂದ ಆದಿತ್ಯ ಭಟ್ಟಾಚಾರ್ಜಿಯವರ ಹೆಸರನ್ನು ಕೈಬಿಟ್ಟ ನಂತರ ಅವರು ತನ್ನ ಸ್ನೇಹಿತರಾಗಿದ್ದ ಚಲನಚಿತ್ರ ನಿರ್ದೇಶಕ ಸೈಫ್ ಬೈದ್ಯಾ ಬಳಿ ತಮ್ಮ ನೋವು ಹಂಚಿಕೊಳ್ಳುತ್ತಾರೆ. ನಂತರ ಬೈದ್ಯಾ ಆದಿತ್ಯ ಭಟ್ಟಾಚಾರ್ಜಿ ಕುಟುಂಬದ ನೋವಿನ ಕತೆಯನ್ನು ಚಿತ್ರದ ಮೂಲಕ ದೇಶದ ಜನರಿಗೆ ತಿಳಿಸಲು ನಿರ್ಧರಿಸಿದರು. ನಂತರ ಬಾಲಿವುಡ್ ನಿರ್ಮಾಪಕ ವಿನಯ್ ಜಿ ರೈ ಚಿತ್ರಕ್ಕೆ ಬಂಡವಾಳ ಹೂಡಲು ಒಪ್ಪಿಕೊಂಡರು, ಅದೀಗ ಡಿಟಿಎಚ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಇದನ್ನೂ ಓದಿ: ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೆ ಮಾರ್ಗಸೂಚಿ ಬಿಡುಗಡೆ
“ನಾಯ್ಸ್ ಆಫ್ ಸೈಲೆನ್ಸ್” ಚಿತ್ರವನ್ನು ತ್ರಿಪುರದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಅಸ್ಸಾಂ ಬಾಂಗ್ಲಾದೇಶದೊಂದಿಗೆ ತನ್ನ ಗಡಿ ಹಂಚಿಕೊಂಡಿದ್ದು, ಆ ಗಡಿಯುದ್ದಕ್ಕೂ ನಡೆಯುವ ಅಕ್ರಮ ವಲಸೆಯ ಚರ್ಚೆಯು ಚಿತ್ರದಲ್ಲಿದೆ ಎನ್ನಲಾಗಿದೆ.
ಹಿಂದಿ ಭಾಷೆಯಲ್ಲಿರುವ ಈ ಚಿತ್ರದ ಅವಧಿ 1 ಗಂಟೆ 50 ನಿಮಿಷಗಳು. ಚಿತ್ರವೂ ಸುಜೋಯ್ ಘೋಷ್ ಮತ್ತು ಕನಿಕಾ ಘೋಷ್ ಎಂಬ ದಂಪತಿಗಳು NRCಯಿಂದ ಕೈಬಿಟ್ಟ ತಮ್ಮ ಹೆಸರುಗಳನ್ನು ಮತ್ತೆ ಸೇರಿಸಲು, ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ನ್ಯಾಯಾಲಯಗಳಲ್ಲಿ ಹೇಗೆ ಹೋರಾಡುತ್ತಾರೆ ಎಂಬುದನ್ನು ಬಿಚ್ಚಿಡಲಿದೆ.
“ಎನ್‌ಆರ್‌ಸಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ನಂತರ ಅವರನ್ನು ಸಮಾಜವು ಹೇಗೆ ಅಪಹಾಸ್ಯ ಮಾಡುತ್ತದೆ ಮತ್ತು ಅಂತವರನ್ನು ಬಾಂಗ್ಲಾದೇಶಿ ಎಂದು ಕರೆಯುವುದನ್ನು ನಾವು ಚಿತ್ರಿಸಲು ಪ್ರಯತ್ನಿಸಿದ್ದೇವೆ. ನಮ್ಮ ಸಹ-ನಿರ್ಮಾಪಕರು ಮತ್ತು ಕೆಲವು ನಟರು ತ್ರಿಪುರದಿಂದ ಬಂದಿರುವ ಕಾರಣ ಚಿತ್ರವನ್ನು ಈ ಹಿನ್ನೆಲೆಯಾಗಿ ಮಾಡಲು ನಾವು ನಿರ್ಧರಿಸಿದ್ದೇವೆ” ಎಂದು ಚಿತ್ರದ ನಿರ್ದೇಶಕ ಸೈಫ್ ಬೈದ್ಯ ತಿಳಿಸಿದ್ದಾರೆ.

“ನಾವು ಎರಡು ಭಾಗಗಳಲ್ಲಿ ಪೌರತ್ವ ಬಿಕ್ಕಟ್ಟನ್ನು ಚಿತ್ರಿಸಲು ಪ್ರಯತ್ನಿಸಿದ್ದೇವೆ. ಎನ್‌ಆರ್‌ಸಿ ಅಪ್‌ಡೇಟ್ ನಡೆಯುತ್ತಿರುವ ಸಮಯದಲ್ಲಿ ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಂ ಹುಡುಗಿ ಕಳೆದುಹೋದ ತನ್ನ ಹೆತ್ತವರನ್ನು ಹುಡುಕಿಕೊಂಡು ಭಾರತಕ್ಕೆ (ತ್ರಿಪುರ) ಬರುವುದು ಒಂದು. ಎರಡನೆಯ ಕಥಾವಸ್ತು, ಒಂದು ದಂಪತಿಯ ಕುರಿತು. ಅಂತಿಮ ಪಟ್ಟಿಯಲ್ಲಿ ಅವರ ತಂದೆಯ ಹೆಸರು ಕಾಣಿಸಿಕೊಂಡಿದ್ದರೂ ಸಹ, NRCಯಿಂದ ಹೊರಗುಳಿದ ದಂಪತಿಗಳ ದುಃಸ್ಥಿತಿಯನ್ನು ನಾವು ಎತ್ತಿ ಹಿಡಿಯಲು ಪ್ರಯತ್ನಿಸಿದ್ದೇವೆ “ಎಂದು ಸೈಫ್ ಹೇಳಿದರು.
ಇದನ್ನೂ ಓದಿ: ಎನ್‌ಆರ್‌ಸಿ: ಮೋದಿ ಸರಕಾರವನ್ನು ಮಣಿಸಲು ರಾಜ್ಯಗಳಿಗಿರುವ ಮೂರು ಸುಲಭ ಹೆಜ್ಜೆಗಳು
ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು ಫಿರ್ದೌಸ್ ಹಸನ್, ನಟಿ ಪೂಜಾ ಜಾ, ತ್ರಿಪುರದ ರಿಷಿ ರಾಜ್ ನಿರ್ವಹಿಸಿದ್ದಾರೆ. ನಾಯ್ಸ್ ಆಫ್ ಸೈಲೆನ್ಸ್‌ನ ಸಹ-ನಿರ್ಮಾಪಕ ಸತದೀಪ್ ಮಾತನಾಡಿ, ಈ ಚಿತ್ರವು ದೇಶದ ಇತರ ಭಾಗಗಳಲ್ಲಿನ ವೀಕ್ಷಕರಿಗೆ ಎನ್‌ಆರ್‌ಸಿಯ ನೋವುಗಳನ್ನು ತೋರಿಸುವುದಲ್ಲದೆ, ತ್ರಿಪುರದ ನಟರಿಗೆ ಉತ್ತೇಜನ ನೀಡಿದೆ ಎಂದಿದ್ದಾರೆ.

ಅಸ್ಸಾಂನ ಒಟ್ಟು 3.29 ಕೋಟಿ ಅರ್ಜಿದಾರರಲ್ಲಿ 19.06 ಲಕ್ಷಕ್ಕೂ ಹೆಚ್ಚು ಜನರು ಎನ್‌ಆರ್‌ಸಿಯ ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದಾರೆ. ನ್ಯಾಯಾಲಯದಲ್ಲಿ ತಮ್ಮ ಭಾರತೀಯ ಪೌರತ್ವವನ್ನು ಸಾಬೀತು ಮಾಡಲಾಗದವರನ್ನು ವಿದೇಶಿಯರು ಎಂದು ಘೋಷಿಸಲಾಗುತ್ತದೆ ಮತ್ತು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲು ಬಂಧನ ಶಿಬಿರಗಳಲ್ಲಿ ದಾಖಲಿಸಲಾಗುತ್ತದೆ. ಈ ಭಯವು ಜನರಲ್ಲಿ ತುಂಬಾ ಆತಂಕವನ್ನುಂಟುಮಾಡಿದ್ದು, ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎನ್‌ಆರ್‌ಸಿ, ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದವರನ್ನೇ ಬಂಧಿಸಿದ್ದ ಸರ್ಕಾರ ಈ ಬಗ್ಗೆ ಚಿತ್ರ ಮಾಡಿ ಬಿಡುಗಡೆ ಮಾಡಲು ಹೊರಟಿರುವವರಿಗೆ ಅದೆಷ್ಟು ಅಡೆತಡೆ ನೀಡುತ್ತದೋ ಎಂಬ ಆತಂಕ ಜನರಲ್ಲಿರುವುದು ಸುಳ್ಳಲ್ಲ.


