ಶೇ.1 ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ಅಲೆಮಾರಿ ಸಮುದಾಯಗಳಿಂದ ಲೋಕಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ‘ಅಂತಿಮ ಭರವಸೆ ಪತ್ರ’ ಬರೆಯಲಾಗಿದ್ದು, ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ‘ದೆಹಲಿ ಚಲೋ’ ಹಮ್ಮಿಕೊಳ್ಳಲಾಗುವುದು ಎಂದು ಹೋರಾಟಗಾರರು ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ‘ಕರ್ನಾಟಕದಲ್ಲಿ ಕಳೆದ 35 ವರ್ಷಗಳಿಂದ ಒಳಮೀಸಲಾತಿಯ ಜಾರಿಗಾಗಿ ಒತ್ತಾಯಿಸಿ ಹೋರಾಟ ನಡೆಯುತ್ತಾ ಬಂದಿದೆ, ರಾಜಕೀಯ ಪಕ್ಷಗಳು ಒಳಮೀಸಲಾತಿಯ ಬಗ್ಗೆ ತಾತ್ವಿಕ ತೀರ್ಮಾನ ತೆಗೆದುಕೊಂಡರೂ ಅದನ್ನು ಜಾರಿಗೊಳಿಸುವಲ್ಲಿ ದಿಟ್ಟ ಹೆಜ್ಜೆ ಇಡದೇ ಹೋದವು. ಸರ್ವೋಚ್ಛ ನ್ಯಾಯಾಲಯವು ಮೀಸಲಾತಿಯ ಒಳವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗಿದೆ ಎಂದು ತೀರ್ಪು ನೀಡಿತು. ಈ ಆದೇಶದ ನಂತರ, ಕರ್ನಾಟಕ ಸರ್ಕಾರ ನಿವೃತ್ತ ನ್ಯಾಯಧೀಶರಾದ ಎಚ್.ಎನ್. ನಾಗಮೋಹನ್ ದಾಸ್ ಏಕಸದಸ್ಯ ಸಮಿತಿಯನ್ನು ನೇಮಿಸಿತು. ಈ ಆಯೋಗವು ಬಹಳ ವೈಜ್ಞಾನಿಕವಾಗಿ ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗಳ ದತ್ತಾಂಶಗಳನ್ನು ಸಂಗ್ರಹಿಸಿ, ಒಂದು ವಸ್ತುನಿಷ್ಠವಾದ ವರದಿಯನ್ನು ನೀಡಿತು. ಸಾಮಾಜಿಕ ನ್ಯಾಯ ಮತ್ತು ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಶಯಗಳನ್ನು ಇಟ್ಟುಕೊಂಡು ನಾಗಮೋಹನ್ ದಾಸ್ ಅವರು ವೈಜ್ಞಾನಿಕವಾದ ವರದಿಯನ್ನು ಸಿದ್ಧಪಡಿಸಿದ್ದರು. ಅದನ್ನಾಧರಿಸಿ 2025ರ ಆಗಸ್ಟ್ 19 ರಂದು ನಡೆದ ಮಂತ್ರಿಮಂಡಲದ ಸಭೆಯಲ್ಲಿ ಈ ವರದಿಯನ್ನು ಕರ್ನಾಟಕ ಸರಕಾರ ಅಂಗೀಕರಿಸಿತು. ಸರಕಾರ ಒಳಮೀಸಲಾತಿಗಾಗಿ ಒಪ್ಪಿಗೆ ಸೂಚಿಸಿದ್ದನ್ನು ನಾವು ಸ್ವಾಗತಿಸುತ್ತೇವೆ” ಎಂದರು.
“ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ದತ್ತಾಂಶಗಳನ್ನು ಸಂಗ್ರಹಿಸಿ ಮೀಸಲಾತಿಯನ್ನು ಹಂಚುವ ವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯ ಪ್ರಕಾರ, 1. ಪ್ರವರ್ಗ ‘ಎ’ ನಲ್ಲಿ ಆಡಿಯನ್, ಅಜಿಲಾ, ಬುಡ್ಗ ಜಂಗಮ, ಸುಡುಗಾಡು ಸಿದ್ದ, ಹಂದಿಜೋಗಿ/ಹಂಡಿಜೋಗಿ, ದಕ್ಕಲ, ಡೊಂಬರ, ಸಿಲ್ಲೇಕ್ಯಾತ, ಸಿಂಧೋಳ ಸೇರಿದಂತೆ 49 ಅಲೆಮಾರಿ ಸಮುದಾಯಗಳು ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳನ್ನು ಒಳಗೊಂಡಂತೆ 59 ಸಮುದಾಯಗಳಿಗೆ ಶೇ 1% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. ಪ್ರವರ್ಗ ‘ಬಿ’ನಲ್ಲಿ, ಮಾದಿಗರನ್ನೂ ಒಳಗೊಂಡಂತೆ ಭಾಂಬಿ, ಚಮಾರ, ಮೋಚಿಗಾರ್ ಸಮುದಾಯವನ್ನೂ ಒಳಗೊಂಡಂತೆ ಎಡಗೈ ಗುಂಪಿನ 18 ಸಮುದಾಯಗಳಿಗೆ ಶೇ 6% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. ಪ್ರವರ್ಗ ‘ಸಿ’ನಲ್ಲಿ ಹೊಲೆಯ ಸಮುದಾಯವನ್ನೂ ಒಳಗೊಂಡಂತೆ ಬಲಗೈ ಗುಂಪಿನ ಅನಮುಕ್, ಛಲವಾದಿ, ಮಹರ್ ಸಮುದಾಯಗಳನ್ನೂ ಒಳಗೊಂಡ 17 ಸಮುದಾಯಗಳಿಗೆ ಸಮುದಾಯಗಳಿಗೆ ಶೇ 5% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. ಪ್ರವರ್ಗ ‘ಡಿ’ನಲ್ಲಿ ಲಂಬಾಣಿ, ಭೋವಿ, ಕೊರಚ ಕೊರಮರನ್ನೂ ಒಳಗೊಂಡಂತೆ 4 ಸ್ಪೃಶ್ಯ ಸಮುದಾಯಗಳಿಗೆ ಶೇ 4% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. ಪ್ರವರ್ಗ ‘ಇ’ನಲ್ಲಿ ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯಗಳಿಗೆ ಶೇ 1% ರಷ್ಟು ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಿದೆ. ಆದರೆ, ಕರ್ನಾಟಕ ಸರ್ಕಾರವು ಹೊರಡಿಸಿದ ಆದೇಶವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಿದೆ. 101 ಪರಿಶಿಷ್ಟ ಜಾತಿಗಳನ್ನು ಎ. ಬಿ. ಸಿ ಎಂದು ಮೂರು ಗುಂಪುಗಳನ್ನಾಗಿಸಿ, ‘ಎ’ ಗುಂಪಿನಲ್ಲಿರುವ ಎಡಗೈ ಸಮುದಾಯಗಳ ಗುಂಪಿಗೆ ಶೇ 6%, ‘ಬಿ’ ಗುಂಪಿನಲ್ಲಿರುವ ಬಲಗೈ ಸಮುದಾಯಗಳ ಗುಂಪಿಗೆ ಶೇ 6%,
‘ಸಿ’ ಗುಂಪಿನಲ್ಲಿ ಸ್ಪೃಶ್ಯ ಸಮುದಾಯಗಳ ಗುಂಪಿಗೆ ಅಲೆಮಾರಿಗಳನ್ನು ಸೇರ್ಪಡೆ ಮಾಡಿದ್ದಲ್ಲದೆ, ಈ ಗುಂಪಿಗೆ ಶೇ 5% ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ” ಎಂದು ವಿವರಿಸಿದರು.
ಅಲೆಮಾರಿ ಸಮುದಾಯಗಳ ಹಿತ ಬಲಿಕೊಟ್ಟ ದಲಿತ ಸಚಿವರು
“49 ಅಲೆಮಾರಿ ಸಮುದಾಯಗಳನ್ನು ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿ ಸಮುದಾಯಗಳನ್ನು ಒಳಗೊಂಡಂತೆ 59 ಸಮುದಾಯಗಳನ್ನು ‘ಸಿ’ ಗುಂಪಿನ ಬಲಾಢ್ಯ ಸ್ಪೃಶ್ಯ ಸಮುದಾಯಗಳ ಜೊತೆಗೆ ಸೇರಿಸಿದೆ. ಈ ಬಲಾಢ್ಯ ಜಾತಿಗಳ ಜೊತೆಗೆ ಈ ಚಿಕ್ಕಚಿಕ್ಕ ಸಮುದಾಯಗಳನ್ನು ಸೇರಿಸಿರುವುದು ಭಾರತದ ಸರ್ವೋಚ್ಛ ನ್ಯಾಯಾಲಯವು ಒಳಮೀಸಲಾತಿಗೆ ಸಂಬಂಧ ನೀಡಿದ ತೀರ್ಪಿಗೆ ವಿರುದ್ಧವಾಗಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲು ಅಲೆಮಾರಿ ಸಮುದಾಯದ ಮುಖಂಡರು ನಿಯೋಗದಲ್ಲಿ ತೆರಳಿದ್ದೆವು. ಆದರೆ, ಅವರು ಒಳಮೀಸಲಾತಿಯ ತಮ್ಮ ಸರ್ಕಾರದ ಆದೇಶವನ್ನು ಪರಿಪರಿಶೀಲನೆ ಮಾಡಲು ಒಪ್ಪಲಿಲ್ಲ. ಪರಿಶಿಷ್ಟ ಜಾತಿಯೊಳಗಿನ ಇತರೆಲ್ಲಾ ಸಮುದಾಯಗಳ ಸಚಿವರುಗಳಿಗಳಿಗೆಲ್ಲಾ ತಮ್ಮ ಸಮುದಾಯದ ಹಿತಾಸಕ್ತಿ ಕಾಪಾಡಿಕೊಳ್ಳಲು ಅಲೆಮಾರಿ ಸಮುದಾಯಗಳ ಹಿತವನ್ನು ಬಲಿಕೊಟ್ಟಿದ್ದಾರೆ. ಇದೊಂದು ರಾಜಕೀಯ ಅಪರಾಧವಾಗಿದೆ. ನಾಗಮೋಹನ್ ದಾಸ್ ಅವರು ಸಮುದಾಯಗಳ ಸ್ಥಿತಿಗತಿಯನ್ನು ಆಧರಿಸಿ ಸಮುದಾಯಗಳನ್ನು ವರ್ಗೀಕರಿಸಿದ್ದು ನ್ಯಾಯಸಮ್ಮತವಾಗಿತ್ತು. ಆದರೆ, ರಾಜ್ಯ ಸರ್ಕಾರವು ಕೇವಲ ಓಟ್ ಬ್ಯಾಂಕ್‌ನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಒಳಮೀಸಲಾತಿಯ ಸಾಮಾಜಿಕ ನ್ಯಾಯದ ಆಶಯವನ್ನೇ ನುಚ್ಚುನೂರು ಮಾಡಿದ್ದಾರೆ” ಎಂದು ಬೇಸರ ಹೊರಹಾಕಿದರು.
“ನಾಗಮೋಹನ್ ದಾಸ್ ಅವರ ವರದಿಯ ಪ್ರಕಾರ ಪ್ರವರ್ಗ 1ರಲ್ಲಿ ಪ್ರತ್ಯೇಕವಾಗಿ ಇರಬೇಕಿದ್ದ ಅಸ್ಪೃಶ್ಯ ಅಲೆಮಾರಿಗಳ ಮೀಸಲಾತಿಯನ್ನು ಪರಿಶಿಷ್ಟ ಸಮುದಾಯಗಳ ಒಳಗೇ ಸಾಪೇಕ್ಷ ರೀತಿಯಲ್ಲಿ ಮುಂದುವರೆದಿರುವ ಲಂಬಾಣಿ, ಬೋವಿ, ಕೊರಚ, ಕೊರಮ ಇತರೆ ಸ್ಪೃಶ್ಯ ಜಾತಿಗಳ ಗುಂಪಿನಲ್ಲಿ ಸೇರಿಸಲಾಗಿದೆ. ಅಂದರೆ, ಯಾರ ಜೊತೆಯೂ ಸ್ಪರ್ಧಿಸುವ ಸಾಮರ್ಥ್ಯ ಇಲ್ಲದಿರುವ ಅಸ್ಪೃಶ್ಯ ಅಲೆಮಾರಿ ಸಮುದಾಯಗಳನ್ನು, ಮುಂದುವರೆದಿರುವ ಸ್ಪೃಶ್ಯ ಸಮುದಾಯಗಳ ಜೊತೆ ಸೇರಿಸಿದೆ. ಇದು ಬಲಾಢ್ಯ ಸಮುದಾಯಗಳನ್ನು ತೃಪ್ತಿಪಡಿಸುವುದಕ್ಕಾಗಿ ಸರಕಾರ ಮಾಡಿರುವ ಘನಘೋರ ರಾಜಕೀಯ ನಿರ್ಧಾರವಾಗಿದೆ. ಇದರಲ್ಲಿ ಸಾಮಾಜಿಕ ನ್ಯಾಯವನ್ನು, ಸಂವಿಧಾನದ ಮೂಲ ಉದ್ದೇಶಗಳ ಪಾಲನೆಯನ್ನು ಮಾಡಲು ಸರಕಾರ ಮುಂದಾಗಿಲ್ಲ” ಎಂದು ಹೇಳಿದ್ದಾರೆ.
“ಸ್ವಾತಂತ್ರ‍್ಯ ಬಂದು 79 ವರ್ಷಗಳಾದರೂ ಅಲೆಮಾರಿ ಸಮುದಾಯಗಳಿಗೆ ಬಡತನದ್ದೇ ಆಗಲಿ ಒಂದು ಘನತೆಯ ಬದುಕು ನಡೆಸಲು ಒಂದು ನೆಲೆ ಸಹ ಸಿಕ್ಕಿಲ್ಲದ ಸ್ಥಿತಿ ಇದೆ. ಈಗಲೂ ನಮ್ಮ ಸಮುದಾಯದ ಬಹುತೇಕ ಜನ ಬೀದಿಬದಿಗಳಲ್ಲಿ ಟೆಂಟುಗಳನ್ನು ಕಟ್ಟಿಕೊಂಡು ಬೀದಿ ನಾಯಿಗಳ ಜೊತೆ ಬದುಕುತ್ತಿದ್ದಾರೆ. ಸಮಾಜ ನಮ್ಮನ್ನು ಸ್ವೀಕರಿಸಿಲ್ಲ, ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ನಮ್ಮನ್ನು ದನಗಳಂತೆ ಓಡಿಸಲಾಗುತ್ತಿರುತ್ತದೆ. ನಮ್ಮ ಸಮುದಾಯಗಳಲ್ಲಿ ಒಬ್ಬ ರಾಜಕಾರಣಿ ಇಲ್ಲ, ಒಬ್ಬ ಉನ್ನತ ಅಧಿಕಾರಿ ಇಲ್ಲ, ಬೆರಳೆಣಿಕೆಯ ಪದವಿಧರರೂ ಸಹ ಇಲ್ಲ. ಕರ್ನಾಟಕದ ಅತ್ಯಂತ ಅವಕಾಶವಂಚಿತ ಕಟ್ಟಕಡೆಯ ಸಮುದಾಯಗಳಿವು. ಹಾಗಾಗಿ ಸರ್ಕಾರದ ಈ ತೀರ್ಮಾನವನ್ನು ಇಡೀ ಕರ್ನಾಟಕದ ಜನಸಮುದಾಯಗಳು ಖಂಡಿಸಿವೆ. ಅನ್ಯಾಯ ಸರಿಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಿವೆ. ಲಂಬಾಣಿ, ಬೋವಿ, ಕೊರಚ ಇತ್ಯಾದಿ ಸಮುದಾಯಗಳ ಮುಖಂಡರೂ ಸಹ ತಮ್ಮ ಸಮಾವೇಶದಲ್ಲಿ ಅಲೆಮಾರಿ ಸಮುದಾಯಗಳು ಬಯಸುತ್ತಿದ್ದಲ್ಲಿ ಅವರಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿವೆ. ಮುಖ್ಯಮಂತಿಗಳಿಗೂ ಸಹ ಸರ್ಕಾರದ ಈ ತೀರ್ಮಾನ ಸಾಮಾಜಿಕ ಅನ್ಯಾಯವೆಂದು ಗೊತ್ತಿದೆ. ಅವರು ನಮ್ಮೊಡನೆ ನಡೆದ ಸಭೆಯಲ್ಲೂ ಇದನ್ನು ಸ್ವಯಂ ಒಪ್ಪಿಕೊಂಡಿದ್ದಾರೆ. ಆದರೆ ರಾಜಕೀಯ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಎಲ್ಲ ಗೌರವವನ್ನು ಇಟ್ಟುಕೊಳ್ಳುತ್ತಲೇ ‘ಇದು ಅಸಹಾಯಕತೆಯ ಪ್ರಶ್ನೆಯಲ್ಲ ಇಚ್ಛಾಶಕ್ತಿಯ ಕೊರತೆ’ ಎಂಬುದನ್ನು ಹೇಳಬಯಸುತ್ತಿದ್ದೇವೆ. ರಾಜಕೀಯದಲ್ಲಿ ಈಗಾಗಲೇ ಪ್ರಬಲರಾಗಿರುವ ಇತರೆ ಸಮುದಾಯಗಳ ಸಚಿವರುಗಳ ಒತ್ತಡಕ್ಕೆ ಮಣಿದು ಅವರು ಬಹುದೊಡ್ಡ ತಪ್ಪು ತೀರ್ಮಾನವನ್ನು ತೆಗೆದುಕೊಂಡಿದ್ದಾರೆ” ಎಂದು ಬೇಸರ ಹೊರಹಾಕಿದ್ದಾರೆ.
“ಗೊತ್ತಿದ್ದೂ ಈ ಅನ್ಯಾಯವನ್ನು ಸರಿಪಡಿಸಲು ಯಾವ ಇಚ್ಛಾಶಕ್ತಿಯನ್ನೂ ತೋರುತ್ತಿಲ್ಲ. ಸೆಪ್ಟೆಂಬರ್ 3 ರಂದು ರಾಜ್ಯದ 10 ಸಾವಿರ ಅಲೆಮಾರಿಗಳು ಸೇರಿ ಪ್ರತಿಭಟನಾ ಸಮಾವೇಶ ಮಾಡಿದರೆ, ಅದರಲ್ಲಿ ಕನಿಷ್ಟ ಮನವಿ ಸ್ವೀಕರಿಸಲೂ ಯಾರನ್ನೂ ಕಳುಹಿಸಲಿಲ್ಲ. ಇದರ ಅರ್ಥ, ‘ನೀವೇನೇ ಮಾಡಿದರೂ ಸರ್ಕಾರ ಈಗ ಬದಲಾವಣೆಗೆ ಒಪ್ಪುವುದಿಲ್ಲ’ ಎಂಬ ಸಂದೇಶವನ್ನು ನಮಗೆ ರವಾನಿಸುತ್ತಿದ್ದಾರೆ. ಆದರೆ ನಾವೂ ಸರ್ಕಾರಕ್ಕೆ ನಮ್ಮ ಸ್ಪಷ್ಟ ಸಂದೇಶವನ್ನು ನೀಡಬಯಸುತ್ತೇವೆ; ‘ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಾವು ಹೆಚ್ಚು ಕಡಿಮೆ ಗುಲಾಮರಂತೆ ಬದುಕಿದ್ದೇವೆ, ಬಣ್ಣಕಟ್ಟಿ ಕುಣಿದಿದ್ದೇವೆ, ಯಾರೂ ಮಾಡಲು ಸಿದ್ಧರಿಲ್ಲದ ಕೆಲಸಗಳನ್ನು ಮಾಡಿದ್ದೇವೆ. ಸಾಲದಿದ್ದಾಗ ಭಿಕ್ಷೆ ಬೇಡಿ ಮಕ್ಕಳ ಹೊಟ್ಟೆ ತುಂಬಿಸಿದ್ದೇವೆ. ಸರ್ಕಾರ ಮತ್ತು ಸಮಾಜ ಮಾಡುತ್ತಾ ಬಂದಿರುವ ಅನ್ಯಾಯವನ್ನೆಲ್ಲಾ ಸಹಿಸಿಕೊಂಡಿದ್ದೇವೆ. ಆದರೆ ಇಂದು ನಾವು ಎಚ್ಚೆತ್ತಿದ್ದೇವೆ. ಮತ್ತೆ ಮಲಗಲು, ಜಡವಾಗಿರಲು ನಾವು ಸಿದ್ಧರಿಲ್ಲ. ನಮಗೆ ನಮ್ಮ ಅತಂತ್ಯ ನ್ಯಾಯಸಮ್ಮತ ಪಾಲು ಸಿಗುವ ತನಕ ನಾವು ಈ ಹೋರಾಟವನ್ನು ಕೈಬಿಡುವ ಮಾತೇ ಇಲ್ಲ. ಮತ್ತೊಮ್ಮೆ ತುಳಿಸಿಕೊಳ್ಳಲು ನಾವು ಸಿದ್ಧರಿಲ್ಲ. ಕಳೆದ 23 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟ ಹೋರಾಟ ನಡೆಯುತ್ತಿದೆ. ನ್ಯಾಯ ಪಡೆಯದೆ ನಾವು ಮನೆಗೆ ಮರಳುವ ಮಾತೇ ಇಲ್ಲ” ಎಂದು ಘೋಷಿಸಿದರು.
“ಕರ್ನಾಟಕ ಸರ್ಕಾರ ಅಷ್ಟು ಸುಲಭವಾಗಿ ನಮ್ಮ ಮಾತನ್ನು ಕೇಳುತ್ತದೆ ಎನಿಸುತ್ತಿಲ್ಲ. ಹೀಗಾಗಿ ಕೊನೆಯ ಭರವಸೆಯಾಗಿ ತಮ್ಮನ್ನು ನಾವು ಖುದ್ದು ಕಾಣಬಯಸುತ್ತಿದ್ದೇವೆ. ನೀವು ಮಧ್ಯಪ್ರವೇಶ ಮಾಡಿದಲ್ಲಿ ಈ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಅರ್ಥ ಮಾಡಿಕೊಂಡು ಖಂಡಿತ ಬಗೆಹರಿಸಬಲ್ಲಿರಿ ಎಂಬ ವಿಶ್ವಾಸವನ್ನು ಹೊಂದಿದ್ದೇವೆ. ನಮ್ಮ ಪರವಾಗಿ ಯಾವ ರಾಜಕೀಯ ಲಾಬಿಯೂ ಇಲ್ಲ. ಕರ್ನಾಟಕದ ಮಾನವಂತ ಜನರ ಪ್ರೀತಿ ಮಾತ್ರ ನಮ್ಮೊಡನಿದೆ. ತಮ್ಮನ್ನು ಕಾಣುವುದೂ ನಮ್ಮಂಥ ನಿರ್ಲಕ್ಷಿತ ಸಮುದಾಯಕ್ಕೆ ಸುಲಭವಲ್ಲ ಎಂಬ ಅರಿವೂ ನಮಗಿದೆ. ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ನೀವು, ನಿಮ್ಮ ತಾಯಿಯವರಾದ ಸೋನಿಯಾಗಾಂಧಿಯವರು, ಎಲ್ಲಾ ಕಾಂಗ್ರೆಸ್ ಹೈಕಮಾಂಡಿನ ಮುಖ್ಯರು ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಲು ಬರುವುದನ್ನು ನಾವು ಗಮನಿಸಿದ್ದೇವೆ. ಈ ಬಾರಿಯೂ ನೀವು ಬರುತ್ತೀರಿ. ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದು ತೀರ್ಮಾನಿಸಿದ್ದೇವೆ. ಅಕ್ಟೋಬರ್ 2 ರಂದು ತಮ್ಮನ್ನು ಕಾಣಲು 1000 ಅಲೆಮಾರಿ ಬಂಧುಗಳು ದೆಹಲಿಗೆ ಬರುತ್ತಿದ್ದೇವೆ. ಅಲ್ಲಿಯ ತನಕ ಬರುವ ನಮ್ಮನ್ನು ನೀವೂ ನಿರ್ಲಕ್ಷ್ಯ ಮಾಡುವುದಿಲ್ಲ ಎಂಬ ಆಶಾಭಾವನೆ ಇಟ್ಟುಕೊಂಡಿದ್ದೇವೆ. ನಮ್ಮ ನೋವನ್ನು ಆಲಿಸಿ, ನ್ಯಾಯವನ್ನು ಕೊಡಿಸಿ ಕೊಡಬೇಕೆಂದು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಬೀದಿಯಲ್ಲಿ ಮತ್ತು ಬೆಂಗಳೂರಿನಲ್ಲಿ ಸಿಗದ ನ್ಯಾಯವನ್ನು ಅರಸುತ್ತಾ ದೆಹಲಿಗೆ ಬರುತ್ತಿದ್ದೇವೆ. ನಿರಾಶೆಗೊಳಿಸುವುದಿಲ್ಲ ಎಂಬ ಭರವಸೆಯೂ ಇದೆ, ನಿರಾಶೆಗೊಳಿಸಬೇಡಿ ಎಂಬ ಕೋರಿಕೆಯೂ ಇದೆ” ಎಂದು ಅಲೆಮಾರಿ ಮುಖಂಡರು ‘ದೆಹಲಿ ಚಲೋ’ ಘೋಷಿಸಿದರು.
‘ಎಕೆ, ಎಡಿ, ಎಎ’ಗಳನ್ನು ಎಸ್‌ಸಿ ಪಟ್ಟಿಯಿಂದ ಕೈಬಿಡುವಂತೆ ಒಳಮೀಸಲಾತಿ ಹೋರಾಟ ಸಮಿತಿ ಆಗ್ರಹ