Homeಕರ್ನಾಟಕಕರ್ನಾಟಕದಲ್ಲಿ ಉತ್ತರ ಭಾರತೀಯರ ಹೆಸರುಗಳ ವಿಜೃಂಭಣೆ: ಹೀಗಾದರೆ ಕನ್ನಡದ ಅಸ್ಮಿತೆಯ ಕತೆಯೇನು?

ಕರ್ನಾಟಕದಲ್ಲಿ ಉತ್ತರ ಭಾರತೀಯರ ಹೆಸರುಗಳ ವಿಜೃಂಭಣೆ: ಹೀಗಾದರೆ ಕನ್ನಡದ ಅಸ್ಮಿತೆಯ ಕತೆಯೇನು?

ಒಬ್ಬೇ ಒಬ್ಬ ಕನ್ನಡ ಸಾಧಕರ, ಹೋರಾಟಗಾರರ ಹೆಸರನ್ನು ಉತ್ತರ ಭಾರತದಲ್ಲಿನ ಯಾವುದಾದರೂ ರಾಜ್ಯಗಳಲ್ಲಿ ಯಾವುದಕ್ಕಾದರೂ ಇಟ್ಟಿರುವ ಉದಾಹರಣೆ ನಮಗೆ ಸಿಗಲು ಸಾಧ್ಯವೇ?

- Advertisement -
- Advertisement -

ಕರ್ನಾಟಕದಲ್ಲಿರುವ ಸಾರ್ವಜನಿಕ ಸ್ಥಳಗಳಿಗೆ ಕನ್ನಡೇತರ ವ್ಯಕ್ತಿಗಳ/ಸಾಧಕರ ಹೆಸರನ್ನು ನಾಮಕರಣ ಮಾಡುತ್ತಿರುವುದರ ವಿರುದ್ಧ, ಮೊದಲು ಕನ್ನಡದ ಅಸ್ಮಿತೆಗೆ ಪ್ರಾಧಾನ್ಯತೆ ಕೊಡಿ ರಾಜಕಾರಣಿಗಳೇ ಎಂಬ ಕೂಗು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ. ಕರ್ನಾಟಕದಲ್ಲಿ ಆಡಳಿತ ನಡೆಸುವ ಯಾವುದೇ ಪಕ್ಷಗಳೂ ಸಹ ಈ ನಡೆಯಿಂದ ಹೊರತಾಗಿಲ್ಲ. ಉತ್ತರ ಭಾರತದ ಸಂಸ್ಕೃತಿ, ಭಾಷೆ, ನಾಯಕರನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನ ಮೊದಲಿನಿಂದಲೂ ನಡೆಯುತ್ತಲೇ ಇದೆ. ಈಗ ಅದಕ್ಕೆ ನಾಗಾಲೋಟದ ವೇಗ ಸಿಕ್ಕಂತಾಗಿದೆ.

ಇತ್ತೀಚೆಗೆ ಬಿಜೆಪಿ ಸರ್ಕಾರವು ಯಲಹಂಕ ಮೇಲ್‌ಸೇತುವೆಗೆ ವಿ.ಡಿ.ಸಾವರ್ಕರ್ ಹೆಸರಿಡುವ ಮೂಲಕ ರಾಜ್ಯದ ಹಲವು ಸಾಧಕರಿಗೆ, ನಾಯಕರಿಗೆ ಅನ್ಯಾಯ ಮಾಡಿದೆ ಎಂದು ಹೋರಾಟಗಾರರು, ಪ್ರಗತಿಪರರು ದನಿಯೆತ್ತಿ ವಿರೋಧಿಸಿದ್ದಾರೆ.

ಇಂತಹ ಅನೇಕ ಕೆಲಸಗಳು ಸದ್ದಿಲ್ಲದೇ ನಡೆಯುತ್ತಿರುವುದು ನಮ್ಮ ರಾಜಕಾರಣಿಗಳ ಅಸ್ಮಿತೆ ಮತ್ತು ಸಿದ್ಧಾಂತವನ್ನು ಅನುಮಾನಿಸುವಂತೆ ಮಾಡುತ್ತಿದೆ. ಯಲಹಂಕ ಸೇತುವೆಗೆ ಉತ್ತರ ಭಾರತದ ನಾಯಕನ ಹೆಸರಿಟ್ಟಿರುವುದು ನಮ್ಮ ನಾಡಿನ ನಾಯಕರಿಗೆ ಬೆಲೆಯಿಲ್ಲ ಎಂಬುದನ್ನು  ತೋರಿಸುವಂತಿದೆ. ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಯಶವಂತಪುರದ ಮತ್ತೊಂದು ಸೇತುವೆಗೆ ದೀನ್ ದಯಾಳ್ ಉಪಾದ್ಯಾಯ ಅವರ ಹೆಸರನ್ನು ಇಟ್ಟಿದೆ. ತುಮಕೂರಿನ ಸೇತುವೆಯೊಂದಕ್ಕೆ ಸಾವರ್ಕರ್ ಹೆಸರಿಡಲಾಗಿದೆ. ಬೆಂಗಳೂರಿನ ವಿಜಯನಗರದ ಪಾರ್ಕ್‌ಗೆ ಶ್ಯಾಂ ಪ್ರಕಾಶ್ ಮುಖರ್ಜಿ ಹೆಸರಿಡಲಾಗಿದೆ. ಇದೀಗ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಉತ್ತರ ಭಾರತೀಯರ ಹೆಸರಿಡಲು ಹುನ್ನಾರ ನಡೆಯುತ್ತಿದೆ.

ಒಬ್ಬೇ ಒಬ್ಬ ಕನ್ನಡ ಸಾಧಕರ, ಹೋರಾಟಗಾರರ ಹೆಸರನ್ನು ಉತ್ತರ ಭಾರತದಲ್ಲಿನ ಯಾವುದಾದರೂ ರಾಜ್ಯಗಳಲ್ಲಿ ಯಾವುದಕ್ಕಾದರೂ ಇಟ್ಟಿರುವ ಉದಾಹರಣೆ ನಮಗೆ ಸಿಗಲು ಸಾಧ್ಯವೇ? ಸಿಕ್ಕಿದರೂ ಅಲ್ಲಿ ನಮ್ಮವರೇ ಬಹುಸಂಖ್ಯಾತರಾಗಿದ್ದರೆ ಮಾತ್ರ ಸಾಧ್ಯ.

ಇದನ್ನೂ ಓದಿ: ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು: ಕನ್ನಡಿಗರನ್ನು ಬಂಧಿಸಿ ನಾಮಕರಣಕ್ಕೆ ಮುಂದಾದ ಸರ್ಕಾರ

ನಮ್ಮನ್ನಾಳುವ ಪಕ್ಷಗಳು ಬಹುತೇಕ ಉತ್ತರ ಭಾರತದ ಪ್ರಭಾವಿತ ಪಕ್ಷಗಳೇ ಆಗಿರುವುದೂ ಕೂಡ ಇದಕ್ಕೆ ಕಾರಣವಾಗಿರಬುಹುದು. ಏಕೆಂದರೆ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳಿರುವ ನಮ್ಮ ಪಕ್ಕದ ತಮಿಳುನಾಡಿನಲ್ಲಿ ಇಂತಹ ಹೇರಿಕೆಯೆ ಸಂಚುಗಳು ಫಲಿಸಲು ಸಾಧ್ಯವಿಲ್ಲ.

ಈ ಕುರಿತು ನಾನುಗೌರಿ.ಕಾಂ ಗೆ ಪ್ರತಿಕ್ರಿಯಿಸಿದ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷರಾದ ಹರೀಶ್ ಕುಮಾರ್, “ಈ ಹೇರಿಕೆಯ ವಿರುದ್ಧ ನಾವು ಮೊದಲಿನಿಂದಲೂ ದನಿಯೆತ್ತುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ನಮ್ಮ ನಾಯಕರ ಹೆಸರಿಡದೇ ಅನ್ಯ ನಾಯಕರ ಹೆಸರಿಡುವುದರಿಂದ ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ತಲುಪಿಸುವ ಸಂದೇಶ ಎಂಥದ್ದು? ಮುಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ರಾಜ್ಯದಲ್ಲಿ ಸಾಧನೆ ಮಾಡಿದ ಯಾವುದೇ ನಾಯಕರಿಲ್ಲ ಎಂದೆಸುವುದರಲ್ಲಿ ಸಂದೇಹವಿಲ್ಲ. ಹಾಗಂತ, ಸಂಪೂರ್ಣ ನಮ್ಮವರೇ ಇರಬೇಕು ಎಂಬುದೇನೂ ಇಲ್ಲ. 95% ನಮ್ಮವರೇ ಇರಲಿ. ಉಳಿದ 5%  ಅನ್ಯ ನಾಯಕರ ಹೆಸರಿಡಲು ಅವಕಾಶ ಕೊಡೋಣ” ಎಂದು ಹೇಳಿದರು.

“ಹಿಂದಿ ಮತ್ತು ಉತ್ತರ ಭಾರತದ ನಾಯಕರ ಶ್ರೇಷ್ಟತೆಯ ಹೇರಿಕೆಯು ಒಂದು ರೀತಿಯ Slow Poison ಇದ್ದಂತೆ. ಈಗ ಒಂದೊಂದಾಗಿ ಆರಂಭಿಸಿ ಇನ್ನು 20 ವರ್ಷಗಳಲ್ಲಿ ಎಲ್ಲಿ ನೋಡಿದರೂ ಉತ್ತರ ಭಾರತದವರ ಹೆಸರು ಮತ್ತು ಹಿಂದಿಯೇ ಕಾಣಿಸುತ್ತದೆ. ಈಗ ನೋಡಿ ಯಲಹಂಕ ಸೇತುವೆಗೆ ಸಾವರ್ಕರ್ ಹೆಸರಿಟ್ಟಿದ್ದಾರೆ. ಆದರೆ ‘ಯಲಹಂಕ ನಾಡಪ್ರಭು ಎಂದೇ ಪ್ರಸಿದ್ಧಯಾಗಿದ್ದ ಕೆಂಪೇಗೌಡರ’ ಹೆಸರು ಇಡಲು ಸಾದ್ಯವಾಗಿಲ್ಲ. ಅದೂ ಹೋಗಲಿ, ಕುವೆಂಪು, ಬಸವಣ್ಣನಂತಹ ಎಷ್ಟು ಉನ್ನತ ಸಾಧಕರು ನಮ್ಮಲ್ಲಿಲ್ಲ? ಅವರನ್ನೆಲ್ಲ ಬಿಟ್ಟು ಇವರ ಹೆಸರನ್ನೇಕೆ ಇಟ್ಟಿದ್ದಾರೆ? ಉದ್ದೇಶ ಸ್ವಷ್ಟವಾಗಿದೆ, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದಂತಹ ನಾಯಕರನ್ನು ಇಡೀ ದೇಶಕ್ಕೇ ಮಹಾನ್ ನಾಯಕರು ಎಂದು ಬಿಂಬಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷವೂ ಮಾಡಿಕೊಂಡೇ ಬಂದಿದೆ” ಎಂದು ಹೇಳಿದರು.

ಇದನ್ನೂ ಓದಿ: ಶಿವಾಜಿ ಮಾತ್ರ ರಾಷ್ಟ್ರನಾಯಕರೆ, ಸಂಗೊಳ್ಳಿ ರಾಯಣ್ಣ ರಾಷ್ಟ್ರನಾಯಕರಲ್ಲವೇ?: ಕನ್ನಡಿಗರ ಆಕ್ರೋಶ

“ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ ನಮಗೆ ಇನ್ನೊಂದು ಭಾಷೆಯ ಮೇಲೆ ಅಭಿಮಾನ ಇಲ್ಲವೆಂದು ಅರ್ಥವಲ್ಲ. ಕರ್ನಾಟಕದಲ್ಲಿ ಕನ್ನಡ, ಮಹಾರಾಷ್ಟ್ರದಲ್ಲಿ ಮರಾಠಿ, ತಮಿಳುನಾಡಿನಲ್ಲಿ ತಮಿಳು, ಹೀಗೆ ಆಯಾ ರಾಜ್ಯಗಳಲ್ಲಿ ಅದರದ್ದೇ ಆದ ಸ್ಥಳೀಯತೆಯೇ ಬೆಳೆಯಬೇಕು. ಆ ಮೂಲಕ ಭಾರತೀಯ ಒಕ್ಕೂಟ ವ್ಯವಸ್ಥೆಗೆ ಬದ್ಧವಾಗಿರುಬೇಕು. ಆದರೆ, ಇಂದು ಆಗುತ್ತಿರುವುದೇ ಬೇರೆ. ಇದರ ಹಿಂದೆ ದೊಡ್ಡ ರಾಜಕೀಯವೇ ಇದೆ. ಉತ್ತರ ಭಾರತದವರು ದಕ್ಷಿಣದವರಿಗಿಂತಲೂ ಶ್ರೇಷ್ಠರು ಎನ್ನುವ ಮೇಲರಿಮೆಯ ಭಾವವನ್ನು ಬಿತ್ತುತ್ತಾ ನಮ್ಮ ಬಗ್ಗೆ ಕೀಳರಿಮೆಯನ್ನು ರೂಢಿಸಿಕೊಂಡಿದ್ದಾರೆ” ಎಂದು ಆರೋಪಿಸಿದರು.

ಕನ್ನಡಪರ ಹೋರಾಟಗಾರರಾದ ಸಾ.ರಾ.ಸುದರ್ಶನ್ ಅವರನ್ನು ನಾನುಗೌರಿ.ಕಾಂ ಸಂಪರ್ಕಿಸಿದಾಗ, “ಬಿಜೆಪಿ ಪಕ್ಷದ ನಾಯಕರು ಸಂಪೂರ್ಣ ಅಧಿಕಾರ ಕಳೆದುಕೊಂಡು, ಕೇಂದ್ರದ ಮತ್ತು ಆರ್.ಎಸ್.ಎಸ್‌ನ ಕೈಗೊಂಬೆಗಳಾಗಿದ್ದಾರೆ. ಹಾಗಾಗಿ ನಾವು ಎಷ್ಟೇ ಪ್ರಯತ್ನಿಸಿದರೂ ಕನ್ನಡಪರ ಅಸ್ಮಿತೆಯನ್ನು ಉಳಿಸಲು ಇವರಿಂದ ಸಾಧ್ಯವಿಲ್ಲ. ಈಗ ವಿರೋಧಪಕ್ಷದಲ್ಲಿರುವವರು ತಾವು ಅಧಿಕಾರದಲ್ಲಿದ್ದಾಗಲೂ ಇಂತಹದ್ದೇ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ ಈಗ ಅವರೇ ವಿರೋಧಿಸುತ್ತಿದ್ದಾರೆ. ಇದು ನಮ್ಮಲ್ಲಿರುವ ದೊಡ್ಡ ವಿಪರ್ಯಾಸ” ಎಂದು ಹೇಳಿದರು.

ಬನವಾಸಿ ಬಳಗದ ಮುಖಂಡರಾದ ಆನಂದ್ ರವರನ್ನು ಮಾತನಾಡಿಸಿದಾಗ “ಊಟಕ್ಕೆ ಉಪ್ಪಿನಕಾಯಿ ಇದ್ದರೆ ಚೆನ್ನ. ಆದರೆ ಉಪ್ಪಿನಕಾಯಿಯೇ ಊಟವಾದರೆ? ಈಗ ಆಗುತ್ತಿರುವುದೂ ಅದೇ. ನಾಡು ಸಂಸ್ಕೃತಿಗೆ ಕೊಡುಗೆ ಕೊಟ್ಟ ಯಾರದೇ ಹೆಸರನ್ನಾದರೂ ಇಡಿ. ಆದರೆ ಅದೂ ಕೂಡ ನಿಯಮಿತವಾಗಿರಲಿ ಅಷ್ಟೆ. ಅದುಬಿಟ್ಟು ನಮ್ಮ ನಾಡಿಗೂ ಅವರಿಗೂ ಸಂಬಂಧವೇ ಇರದ ವ್ಯಕ್ತಿಯ ಹೆಸರಿಟ್ಟರೆ ಉಪಯೋಗವೇನು? ಪ್ರತಿಯೊಂದು ಪಕ್ಷವೂ ತನ್ನ ಸಿದ್ಧಾಂತಕ್ಕೆ ಅನುಗುಣವಾಗಿಯೇ ಹೆಸರಿಟ್ಟರೆ, ನಮ್ಮ ಕನ್ನಡದ ಅಸ್ಮಿತೆ ಉಳಿಯುವುದು ಯಾವಾಗ? ಕಾಂಗ್ರೆಸ್ ನವರು ಬಂದು ರಾಜೀವ್ ಗಾಂಧಿಯ ಹೆಸರೋ ಅಥವಾ ಇಂದಿರಾಗಾಂಧಿಯ ಹೆಸರನ್ನು ಇಟ್ಟರೂ ವಿರೋಧಿಸುತ್ತೇವೆ. ಬಿಜೆಪಿಯವರು ಬಂದು ವಾಜಪೇಯಿಯವರ ಹೆಸರು ಅಥವಾ ನಮ್ಮ ನಾಡಿನವರಲ್ಲದ ಯಾರದೇ ಹೆಸರಿಟ್ಟರೂ ವಿರೋಧಿಸುತ್ತೇವೆ” ಎಂದರು.


ಇದನ್ನೂ ಓದಿ: ಸ್ವಾತಂತ್ರ ಬಂತು ಸ್ವಾಯತ್ತತೆ ಹೋಯ್ತು : ಇದು ಕನ್ನಡಿಗರ ಕೂಗು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...