ಸಿಎಎ ಪರ ಪ್ರತಿಭಟನಾಕಾರರಿಂದ ಆರಂಭವಾದ ಹಿಂಸಾಚಾರ ಮಂಗಳವಾರ ಬೆಳಿಗ್ಗೆಯೂ ಮುಂದುವರೆದಿದ್ದು, ಒಬ್ಬ ಪೊಲೀಸ್ ಪೇದೆ ಸೇರಿದಂತೆ ಒಟ್ಟು ಏಳು ಜನ ಸಾವನಪ್ಪಿದ್ದು ನೂರಾರು ಜನ ಗಾಯಗೊಂಡಿದ್ದಾರೆ. ಜೊತೆಗೆ 48 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಇಂದು ಮಧ್ಯಾಹ್ನ ಭೇಟಿಯಾಗಲಿದ್ದಾರೆ.
ಜನರ ಗುಂಪೊಂದು ಅಗ್ನಿಶಾಮಕ ಯಂತ್ರಕ್ಕೆ ಬೆಂಕಿ ಹಚ್ಚಿ ಮತ್ತೊಬ್ಬರಿಗೆ ಕಲ್ಲು ಎಸೆದ ನಂತರ ಮೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಹಿಂಸಾಚಾರ ಪೀಡಿತ ಪ್ರದೇಶಗಳ ಶಾಸಕರು ಮತ್ತು ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. “ದೆಹಲಿಯ ಕೆಲವು ಭಾಗಗಳಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ನನಗೆ ತುಂಬಾ ಚಿಂತೆ ಇದೆ. ನಮ್ಮ ನಗರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ನಾವೆಲ್ಲರೂ ಒಟ್ಟಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಹಿಂಸಾಚಾರವನ್ನು ದೂರವಿಡುವಂತೆ ನಾನು ಮತ್ತೆ ಎಲ್ಲರನ್ನೂ ಒತ್ತಾಯಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
Am v worried abt prevailing situation in certain parts of Del. All of us together shud make all efforts to restore peace in our city. I again urge everyone to shun violence
Am meeting all MLAs (of all parties) of affected areas along wid senior officials in a while
— Arvind Kejriwal (@ArvindKejriwal) February 25, 2020
ದೆಹಲಿ ಮಂತ್ರಿಗಳಾದ ಗೋಪಾಲ್ ರೈ, ಇಮ್ರಾನ್ ಹುಸೇನ್ ಮತ್ತು ಇತರ ಆಮ್ ಆದ್ಮಿ ಪಕ್ಷದ ಶಾಸಕರು ಕಳೆದ ರಾತ್ರಿ ತಡರಾತ್ರಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿವಾಸದ ಹೊರಗೆ ಪ್ರತಿಭಟನೆ ಆರಂಭಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಈಶಾನ್ಯ ದೆಹಲಿ ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳನ್ನು ಇಂದು ಮುಚ್ಚುವಂತೆ ದೆಹಲಿ ಸರ್ಕಾರ ಆದೇಶಿಸಿದೆ.
ದೆಹಲಿ ಮೆಟ್ರೋ ಜಾಫ್ರಾಬಾದ್, ಮೌಜ್ಪುರ್-ಬಾಬರ್ಪುರ್, ಗೋಕುಲ್ಪುರಿ, ಜೊಹ್ರಿ ಎನ್ಕ್ಲೇವ್ ಮತ್ತು ಶಿವ ವಿಹಾರ್ ನಿಲ್ದಾಣಗಳನ್ನು ಮುಚ್ಚಿದೆ.
ಈಶಾನ್ಯ ದೆಹಲಿಯಲ್ಲಿ ದೊಡ್ಡಮಟ್ಟದಲ್ಲಿ ಜನರು ಸೇರದಂತೆ 144 ಸೆಕ್ಷನ್ ಹೇರಲಾಗಿದೆ. ಜೆಎನ್‌ಯು ವಿದ್ಯಾರ್ಥಿ ಸಂಘವು ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ ನಂತರ ಅಲ್ಲಿಯೂ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.


