Homeಮುಖಪುಟವಿರೋಧಿಗಳ ದಮನಕ್ಕೆ ರಾಷ್ಟ್ರದ್ರೋಹ ಕಾಯಿದೆ ದುರ್ಬಳಕೆಯಾಗುತ್ತಿದೆ: ಮಾಜಿ ಐಪಿಎಸ್ ಎನ್.ಸಿ.ಅಸ್ತಾನ

ವಿರೋಧಿಗಳ ದಮನಕ್ಕೆ ರಾಷ್ಟ್ರದ್ರೋಹ ಕಾಯಿದೆ ದುರ್ಬಳಕೆಯಾಗುತ್ತಿದೆ: ಮಾಜಿ ಐಪಿಎಸ್ ಎನ್.ಸಿ.ಅಸ್ತಾನ

"ಆಜಾದಿ"ಯಂತಹ ಘೋಷಣೆ ಕೂಗುವವರನ್ನು ರಾಷ್ಟ್ರದ್ರೋಹದ ಕಾನೂನಿನ ಮೂಲಕ ಬೆದರಿಸುವುದು ಅಸಂಬದ್ಧ.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ, 2018ರಲ್ಲಿ ಪೊಲೀಸರು ದೇಶಾದ್ಯಂತ 70ರಷ್ಟು ರಾಷ್ಟ್ರದ್ರೋಹದ ಪ್ರಕರಣಗಳನ್ನು ದಾಖಲಿಸಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ದಾಖಲೆಗಳನ್ನು ಜನವರಿ 2019ರಲ್ಲಿ ವಿಶ್ಲೇಷಿಸಿದಾಗ 2014ರ ಬಳಿಕ ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧನಗಳು ಏಕಾಏಕಿಯಾಗಿ ಏರಿರುವುದು ಕಂಡುಬಂದಿದೆ.

ನಿಜವಾಗಿಯೂ ನಮ್ಮಲ್ಲಿ ದೇಶಪ್ರೇಮವಿಲ್ಲದ, ದೇಶಕ್ಕೆ ಹಾನಿಮಾಡಲು ಬಯಸುವ ಅಥವಾ ಸಾರಾಸಗಟು ದೇಶದ್ರೋಹಿಗಳಾಗಿರುವ ದೊಡ್ಡ ಸಂಖ್ಯೆಯ ಸುಶಿಕ್ಷಿತ ಜನರು ಇದ್ದಾರೆಯೇ? ಅವರು ಹಿಂದೆಯೂ ಇದ್ದರು ಮತ್ತು ಇತ್ತೀಚೆಗೆ ಇಂತಹಾ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿರುವುದು ಪೊಲೀಸರು ಹೆಚ್ಚು ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವುದರಿಂದ ಎಂದು ಇಂತಹಾ ಏರಿಕೆಯನ್ನು ಮುಚ್ಚಿಡಲು ಯತ್ನಿಸುತ್ತಿರುವವರು ವಾದಿಸಬಹುದು.

ಪ್ರಶ್ನೆಯೆಂದರೆ, ಮೊತ್ತಮೊದಲಾಗಿ ನಮ್ಮಂತಹ ಮಹಾನ್ ರಾಷ್ಟ್ರದಲ್ಲಿ ದೊಡ್ಡಸಂಖ್ಯೆಯ ದ್ರೋಹಿಗಳು ಏಕಿರಬೇಕು? ದೇಶ ಕಟ್ಟುವ ಪ್ರಯೋಗದಲ್ಲಿ ನಾವೆಲ್ಲೋ ವಿಫಲರಾಗಿದ್ದೇವೆಯೆ? ಒಂದು ವೇಳೆ ಹೌದೆಂದಾದಲ್ಲಿ, ಕೇವಲ ಜನರ ಮೇಲೆ ಕೇಸು ಹಾಕುವುದನ್ನು ಬಿಟ್ಟು ಮೂಲ ಕಾರಣಗಳನ್ನು ಪರಿಹರಿಸಬೇಕು. ಆದರೆ, ಕಳೆದ ಮೂರು ವರ್ಷಗಳಲ್ಲಿ ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂಬ ವಾಸ್ತವವು, ಪೋಲೀಸರು ನಿರಂಕುಶವಾಗಿ ತಮ್ಮ ಅಧಿಕಾರಗಳನ್ನು ದುರುಪಯೋಗಪಡಿಸುತ್ತಿದ್ದಾರೆ ಎಂದು ನಂಬಲು ಕಾರಣಗಳನ್ನು ಒದಗಿಸುತ್ತದೆ.

ನಾವು ನಮ್ಮೊಂದಿಗೆ ಹೋಲಿಸಿಕೊಳ್ಳುವ ಪ್ರಪಂಚದ ಇನ್ನೊಂದು ಮಹಾನ್ ಪ್ರಜಾಪ್ರಭುತ್ವವಾಗಿರುವ ಯುಎಸ್‌ಎಯಲ್ಲಿ ರಾಷ್ಟ್ರದ್ರೋಹವು ಸಾಮಾನ್ಯವಾಗಿ ಆರೋಪಿಸಲಾಗುವ ಅಪರಾಧವಲ್ಲ. ಅತ್ಯಂತ ಕುಖ್ಯಾತ ದೇಶದ್ರೋಹದ ಸಂಚಿನ ಪ್ರಕರಣಗಳು (1936-2010ರ ನಡುವೆ ಕೇವಲ ಐದರಲ್ಲಿ ಎರಡು ಪ್ರಕರಣಗಳು) ಯುಎಸ್‌ಎಯನ್ನು ಬುಡಮೇಲುಗೊಳಿಸಿ, ಸ್ವಾತಂತ್ರ್ಯವನ್ನು ಸ್ಥಾಪಿಸಬಯಸುವ ಪೋರ್ಟೊರಿಕನ್ ರಾಷ್ಟ್ರೀಯವಾದಿಗಳನ್ನು ಶಿಕ್ಷಿಸುವುದರಲ್ಲಿ ಕೊನೆಗೊಂಡಿದ್ದವು. ತನ್ನ ಪ್ರಜೆಗಳು ದೇಶವನ್ನು ಪ್ರೀತಿಸುವುದಿಲ್ಲ ಎಂದು ಅಮೇರಿಕನ್ ಸರಕಾರಗಳು ಭಾವಿಸುತ್ತಿಲ್ಲ ಎಂಬುದು ಸ್ಪಷ್ಟ.

ಆದರೆ, ಭಾರತದಲ್ಲಿ ಫೇಸ್‌ಬುಕ್‌ನಲ್ಲಿ ಯೋಗಗುರುವೊಬ್ಬನನ್ನು ಟೀಕಿಸಿದ ಪೋಸ್ಟ್ ಒಂದಕ್ಕೆ ಲೈಕ್ ಒತ್ತಿದ್ದಕ್ಕಾಗಿ, ಪ್ರತಿಸ್ಪರ್ಧಿ ಕ್ರಿಕೆಟ್ ತಂಡವನ್ನು ಬೆಂಬಲಿಸಿದ್ದಕ್ಕಾಗಿ, ವ್ಯಂಗ್ಯಚಿತ್ರಗಳನ್ನು ಬರೆದುದಕ್ಕಾಗಿ, ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಪ್ರಚೋದನಕಾರಿ ಪ್ರಶ್ನೆ ಕೇಳಿದ್ದಕ್ಕಾಗಿ ಅಥವಾ ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಬರುವಾಗ ಎದ್ದುನಿಲ್ಲದ್ದಕ್ಕಾಗಿ ರಾಷ್ಟ್ರದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ. “ಪಾಕಿಸ್ತಾನವು ನರಕವಲ್ಲ. ಅಲ್ಲಿನ ಜನರು ನಮ್ಮಂತೆಯೇ” ಎಂದು ಹೇಳಿದ್ದಕ್ಕಾಗಿ ವಕೀಲರೊಬ್ಬರು 2016ರಲ್ಲಿ ನಟಿ ದಿವ್ಯಸ್ಪಂದನಾ@ರಮ್ಯಾ ವಿರುದ್ಧ ಖಾಸಗಿಯಾಗಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿದ್ದರು. ಆದರೆ ಪಾಕಿಸ್ತಾನವು ಅಧಿಕೃತವಾಗಿ ಶತ್ರು ರಾಷ್ಟ್ರವಲ್ಲದಿರುವುದರಿಂದ ಅಲ್ಲಿನ ಪ್ರಜೆಗಳನ್ನು ಹೊಗಳುವುದು ದೇಶದ್ರೋಹವಾಗುವುದಿಲ್ಲ ಎಂದು ಮಡಿಕೇರಿಯ ಜೆಎಂಎಫ್‌ಸಿ ನ್ಯಾಯಾಲಯವು ತೀರ್ಪು ನೀಡಿತ್ತು.

“ಪ್ರಧಾನಿ ಮತ್ತು ದೇಶದ ಪ್ರತಿಷ್ಟೆಗೆ ಧಕ್ಕೆ ತರಲು ಯತ್ನಿಸಿದ” ಆರೋಪದಲ್ಲಿ ಪತ್ರವೊಂದನ್ನು ಬಹಿರಂಗಪಡಿಸಿದ್ದಕ್ಕಾಗಿ ವಕೀಲರೊಬ್ಬರು ಮುಜಾಫರ್‌ಪುರ್‌ನ ನ್ಯಾಯಾಲಯವೊಂದರ ಮೂಲಕ 49 ಜನರ ಮೇಲೆ ರಾಷ್ಟ್ರದ್ರೋಹದ ಪ್ರಕರಣ ದಾಖಲಾಗುವಂತೆ ಮಾಡಿದ್ದರು. ಕೊನೆಯಲ್ಲಿ ಭಾರೀ ಸಾರ್ವಜನಿಕ ಪ್ರತಿಭಟನೆಯ ಬಳಿಕ ಪೊಲೀಸರು ಪ್ರಕರಣ ಮುಚ್ಚಿದ್ದರು.

ಪ್ರತ್ಯೇಕತೆ ಬಗ್ಗೆ ಮಾತನಾಡುವುದು, ಭಾರತವನ್ನು ಮೆಚ್ಚದಿರುವುದು ಅಥವಾ ಭಾರತ ವಿರೋಧಿಯಾಗಿರುವುದು ಅಪರಾಧವೆ?

ಪತ್ರಕರ್ತ ಕರಣ್ ಥಾಪರ್ ಅವರು ಸಿ.ಎನ್. ಅಣ್ಣಾದುರೈ ಪ್ರಕರಣವನ್ನು ನೆನಪಿಸಿದ್ದಾರೆ. ಮೇ 1,1962ರಲ್ಲಿ ಅವರು ರಾಜ್ಯಸಭೆಯಲ್ಲಿ ದ್ರಾವಿಡರ ಸ್ವಯಂನಿರ್ಧಾರ ಮತ್ತು ಪ್ರತ್ಯೇಕ ದಕ್ಷಿಣ ಭಾರತಕ್ಕೆ ಬೇಡಿಕೆ ಸಲ್ಲಿಸಿದ್ದರು. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಜನವರಿ 20, 1962ರ ಕೇದಾರನಾಥ ಸಿಂಗ್ ಪ್ರಕರಣದಲ್ಲಿ ನೀಡಲಾದ ಮೈಲಿಗಲ್ಲು ತೀರ್ಪನ್ನು ಅವರು ಸರಿಯಾಗಿಯೇ ಅರ್ಥ ಮಾಡಿಕೊಂಡಿರಬೇಕು.  ಸಾರ್ವಜನಿಕ ಅಶಾಂತಿಯನ್ನು ಸೃಷ್ಟಿಸಿ, ಹಿಂಸಾತ್ಮಕ ಮಾರ್ಗದಿಂದ ಸರಕಾರವನ್ನು ಬುಡಮೇಲು ಮಾಡುವ ಉದ್ದೇಶ, ಅರ್ಥವನ್ನು ಹೊಂದಿರುವ ಮಾತುಗಳು ಮತ್ತು ಎಷ್ಟೇ ಕಠಿಣವಾಗಿದ್ದರೂ ಸರಕಾರದ ಕೃತ್ಯಗಳನ್ನು ಟೀಕಿಸುವ ಮಾತುಗಳ ನಡುವಿನ ವ್ಯತ್ಯಾಸವನ್ನು ಈ ತೀರ್ಪು ಸ್ಪಷ್ಟವಾಗಿ ಗುರುತಿಸಿದೆ.

ಮತ್ತೊಮ್ಮೆ 2016ರಲ್ಲಿ ‘ಕಾಮನ್ ಕಾಸ್’ ಮತ್ತು ಇನ್ನೊಬ್ಬರ ವಿರುದ್ಧ ಭಾರತ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ತತ್ವಗಳನ್ನು ದೃಢಪಡಿಸಿದೆ.

ಇದರ ಅರ್ಥವೆಂದರೆ, ಕೆಲಜನರು ತಮಗೆ ಭಾರತ ಇಷ್ಟವಿಲ್ಲ ಮತ್ತು ತಾವು ಶಾಂತಿಯುತವಾಗಿ ಪ್ರತ್ಯೇಕವಾಗಲು ಬಯಸುತ್ತೇವೆ ಎಂದು ಹೇಳಿದರೆ ಅದು ರಾಷ್ಟ್ರದ್ರೋಹವಾಗುವುದಿಲ್ಲ. ಆದರೆ, ಈ ಪ್ರಕ್ರಿಯೆಯಲ್ಲಿ ತಾವು ಬಲಪ್ರಯೋಗದಿಂದ ಸರಕಾರವನ್ನು ಬುಡಮೇಲುಗೊಳಿಸಲು ಬಯಸುತ್ತೇವೆ ಎಂದು ಹೇಳಿದರೆ, ಅದು ರಾಷ್ಟ್ರದ್ರೋಹವಾಗುತ್ತದೆ.

ಪ್ರಖ್ಯಾತ ವಕೀಲ ಫಾಲಿ ಎಸ್. ನಾರಿಮನ್ ಏನು ಹೇಳುತ್ತಾರೆಂದರೆ, ಭಾರತ ವಿರೋಧಿಯಾಗಿರುವುದು ಹೆಚ್ಚಿನ ಪ್ರಜೆಗಳಿಗೆ ರುಚಿಸದಿರಬಹುದು; ಆದರೆ ಅದು ಕ್ರಿಮಿನಲ್ ಅಪರಾಧವಲ್ಲ ಮತ್ತು ಖಂಡಿತವಾಗಿಯೂ ರಾಷ್ಟ್ರದ್ರೋಹವಲ್ಲ. ಮುಕ್ತ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಂವಿಧಾನದ ವಿಧಿಯ ವಿನಾಯಿತಿ ನಿಯಮಗಳಲ್ಲಿ ಸಂವಿಧಾನ ನಿರ್ಮಾತೃಗಳು ದೇಶದ್ರೋಹವನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟಿದ್ದಾರೆ ಎಂದು ನಾರಿಮನ್ ಸ್ಪಷ್ಟಪಡಿಸಿದ್ದಾರೆ. “ದೇಶದ್ರೋಹವನ್ನು ಅಪರಾಧವನ್ನಾಗಿ ಮಾಡಲಾಗಿರುವುದು ಸರಕಾರಗಳ ಗಾಯಗೊಂಡ ಪ್ರತಿಷ್ಟೆಯನ್ನು ಶಮನ ಮಾಡುವುದಕ್ಕಾಗಿ ಅಲ್ಲ” ಎಂದು ಸಂವಿಧಾನ ನಿರ್ಮಾತೃಗಳು ಹೇಳಿದ್ದರು. “ಪಾಕಿಸ್ತಾನ್ ಜಿಂದಾಬಾದ್” ಮುಂತಾದ ಘೋಷಣೆಗಳನ್ನು ಕೂಗುವುದು ಕೂಡಾ ಕಾನೂನು ಪ್ರಕಾರ ರಾಷ್ಟ್ರದ್ರೋಹವಾಗುವುದಿಲ್ಲ ಎಂದು ಪ್ರಖ್ಯಾತ ವಕೀಲ ಸೋಲಿ ಸೊರಾಬ್ಜಿ ಹೇಳುತ್ತಾರೆ. ಅವರ ಅಭಿಪ್ರಾಯಗಳು ಕಾನೂನು ಆಗಿಲ್ಲದೇ ಇರಬಹುದು. ಆದರೆ ಅವರುಗಳು ಚೆನ್ನಾಗಿ ಕಾನೂನು ತಿಳಿದವರಾಗಿದ್ದಾರೆ.

ಅದೇ ರೀತಿಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಸರಕಾರದ ನಿರ್ಧಾರವನ್ನಾಗಲೀ, ಈಗಾಗಲೇ ನಡೆಯುತ್ತಿರುವ ಯುದ್ಧವನ್ನಾಗಲೀ ಕೆಲಜನರು ಶಾಂತಿಯುತವಾಗಿ ವಿರೋಧಿಸಿದರೆ, ಅವರನ್ನು ದೇಶಪ್ರೇಮಿಗಳಲ್ಲ ಎಂದು ಕರೆಯಬಹುದಾದರೂ, ಅದು ರಾಷ್ಟ್ರದ್ರೋಹವಾಗುವುದಿಲ್ಲ. ಆದಲ್ಲದೆ, ಸರಕಾರ ಯುದ್ಧ ಸಂದರ್ಭಕ್ಕೆಂದೇ ಕಾನೂನು ತಂದಿದ್ದು, ಯಾರಾದರೂ ಉದ್ದೇಶಪೂರ್ವಕವಾಗಿ ಅದನ್ನು ಉಲ್ಲಂಘಿಸಿದರೆ, ಅದು ಕಾನೂನು ಉಲ್ಲಂಘನೆಯಾಗುತ್ತದೆಯಾದರೂ, ಆಗಲೂ ಅದು ರಾಷ್ಟ್ರದ್ರೋಹವಾಗುವುದಿಲ್ಲ.

ಆದುದರಿಂದ “ಆಜಾದಿ”ಯಂತಹ ಘೋಷಣೆ ಕೂಗುವವರನ್ನು ರಾಷ್ಟ್ರದ್ರೋಹದ ಕಾನೂನಿನ ಮೂಲಕ ಬೆದರಿಸುವುದು ಅಸಂಬದ್ಧ.

(ಲೇಖಕರಾದ ಎನ್.ಸಿ.ಅಸ್ತಾನ ಅವರು ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದು, ಕೇರಳ ಡಿಜಿಪಿ ಮತ್ತು ದೀರ್ಘಕಾಲ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನ ಹೆಚ್ಚುವರಿ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...